ಎಸ್‌ಐಆರ್‌ ವಿರುದ್ಧದ ಹೋರಾಟಕ್ಕೆ ರೈತ–ದಲಿತ ಸಂಘಟನೆಗಳ ಬೆಂಬಲ; ಅ. 23ರಂದು ರಾಜ್ಯಾದ್ಯಂತ ಪ್ರತಿಭಟನೆ

ಗ್ಯಾನೇಶ್‌ ಕುಮಾರ್‌ ವಜಾ, ಎಸ್‌ಐಆರ್‌ ರದ್ದುಪಡಿಸಲು ಆಗ್ರಹ | ಪ್ರಜಾಪ್ರಭುತ್ವದ ಉಳಿವಿಗಾಗಿ ಜನಾಂದೋಲನಕ್ಕೆ ಕರೆ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ರೈತ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಅಕ್ಟೋಬರ್‌ 23ರಂದು ರಾಜ್ಯಾದ್ಯಂತ ಜನತಾ ಮೆರವಣಿಗೆಗಳು ಹಾಗೂ ಜಂತರ್‌ ಮಂತರ್‌ ಮಾದರಿಯ ಪ್ರತಿಭಟನೆಗಳನ್ನು ಆಯೋಜಿಸಲು ನಿರ್ಧರಿಸಿರುವುದಾಗಿ ‘ಸಂಯುಕ್ತ ಹೋರಾಟ ಕರ್ನಾಟಕ’ ತಿಳಿಸಿದೆ. ಎಸ್‌ಐಆರ್‌ 

ಅಕ್ಟೋಬರ್‌ 19ರಂದು ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿರುವ ಸಂಘಟನೆ, ರೈತರು, ದಲಿತರು, ಯುವಜನರು ಸೇರಿದಂತೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಎಲ್ಲ ಜನವರ್ಗಗಳು ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದೆ.

ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಆಡಳಿತ ಪಕ್ಷದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಸಂಘಟನೆ ಮಾಡಿದೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವರದಿಗಳು ಬಹಿರಂಗವಾದ ನಂತರ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ ಎಂದು ಹೇಳಿದೆ.

ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರನ್ನು ಬಂಧಿಸಿ, ಪ್ರಕರಣಗಳನ್ನು ದಾಖಲಿಸುವ ಮೂಲಕ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ. ಪ್ರತಿಭಟನೆಗಳ ಕೇಂದ್ರವಾಗಿದ್ದ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆಗಳಿಗೆ ನಿರ್ಬಂಧ ವಿಧಿಸಿರುವುದನ್ನೂ ಖಂಡಿಸಿದೆ. ಮಹಿಳಾ ಪತ್ರಕರ್ತೆಯರು ಮತ್ತು ಮಹಿಳಾ ಹೋರಾಟಗಾರರೊಂದಿಗೆ ಅಸಭ್ಯವಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಅವರನ್ನು ರಕ್ಷಿಸಲಾಗುತ್ತಿದೆ ಎಂಬ ಆರೋಪವನ್ನೂ ಮುಂದಿಟ್ಟಿದೆ.

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಸಂಘಟನೆ, ಈ ಬೆಳವಣಿಗೆಗಳನ್ನು ಮೌನವಾಗಿ ನೋಡುತ್ತಾ ಕೂರಲು ಸಾಧ್ಯವಿಲ್ಲ. ಹೀಗಾಗಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ರೈತರ ಹೋರಾಟಕ್ಕೂ ಎಸ್‌ಐಆರ್‌ಗೂ ನಂಟು

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳು ಮತ್ತು ಎಸ್‌ಐಆರ್‌ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ಎಂದು ಸಂಘಟನೆ ಪ್ರತಿಪಾದಿಸಿದೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ದೀರ್ಘಕಾಲದ ರೈತ ಹೋರಾಟದ ಸಂದರ್ಭದಲ್ಲಿ 727 ರೈತರು ಮೃತಪಟ್ಟಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಹೋರಾಟದ ವೇಳೆ ನೀಡಿದ್ದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಿಕ್ಕಟ್ಟಿಗೂ ಕೇಂದ್ರ ಸರ್ಕಾರದ ನೀತಿಗಳೇ ಪ್ರಮುಖ ಕಾರಣ ಎಂದು ಸಂಘಟನೆ ದೂರಿದೆ. ರಾಜ್ಯ ಸರ್ಕಾರ ಕನಿಷ್ಠ ಸ್ಪಂದಿಸುತ್ತಿದ್ದರೆ, ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂಬುದು ಸಂಘಟನೆಯ ಆರೋಪವಾಗಿದೆ.

ಇದೇ ವೇಳೆ, ಖಾಸಗೀಕರಣದ ಪರಿಣಾಮವಾಗಿ ಮೀಸಲಾತಿಯ ಉದ್ದೇಶ ದುರ್ಬಲಗೊಳ್ಳುತ್ತಿದೆ ಎಂದು ಹೇಳಿರುವ ಸಂಘಟನೆ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಲೆಮಾರಿ ಸಮುದಾಯಗಳು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಜನರ ಮತದಾರರ ಹೆಸರುಗಳು ಹೆಚ್ಚಿನ ಸಂಖ್ಯೆಯಲ್ಲಿ ಅಳಿಸಲ್ಪಟ್ಟಿವೆ ಎಂದು ಆರೋಪಿಸಿದೆ. ಇದು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಬೆಳವಣಿಗೆಯಾಗಿದ್ದು, ದಲಿತ ಸಮುದಾಯಗಳು ಇದನ್ನು ಅಳಿವು–ಉಳಿವಿನ ಹೋರಾಟವಾಗಿ ಪರಿಗಣಿಸಬೇಕು ಎಂದು ಕರೆ ನೀಡಿದೆ. ಎಸ್‌ಐಆರ್‌

ಇದನ್ನೂ ಓದಿ : ಎಸ್ಸಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದಲ್ಲೂ ಅಕ್ರಮದ ಆರೋಪ: 6 ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಂಸದೀಯ ಸಮಿತಿ ತರಾಟೆ

ಪ್ರಮುಖ ಹಕ್ಕೊತ್ತಾಯಗಳೇನು?

ಸಂಯುಕ್ತ ಹೋರಾಟ ಕರ್ನಾಟಕ ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರನ್ನು ತಕ್ಷಣ ವಜಾಗೊಳಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸುವುದು, ಚುನಾವಣಾ ಆಯೋಗದ ಆಯ್ಕೆ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಮತ್ತು ಪ್ರಜಾಸತ್ತಾತ್ಮಕಗೊಳಿಸುವುದು ಹಾಗೂ ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ಸೇರಿವೆ.

ಹೊಸ ಚುನಾವಣಾ ಆಯೋಗದ ನೇತೃತ್ವದಲ್ಲಿ ಜನಸ್ನೇಹಿ ಪ್ರಕ್ರಿಯೆಯ ಮೂಲಕ ಮತದಾರರ ಪಟ್ಟಿಯನ್ನು ಮರುಪರಿಷ್ಕರಿಸಬೇಕು. ಎಸ್‌ಐಆರ್‌ ಜಾರಿಯಾದ ನಂತರ ನಡೆದಿರುವ ಎಲ್ಲ ಚುನಾವಣೆಗಳನ್ನು ರದ್ದುಗೊಳಿಸಿ ಮರುಚುನಾವಣೆ ನಡೆಸಬೇಕು ಮತ್ತು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಯುವಜನರ ವಿರುದ್ಧ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಬೇಡಿಕೆಗಳನ್ನೂ ಸಂಘಟನೆ ಮುಂದಿಟ್ಟಿದೆ.

ಈ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ಸಂಘಟನೆ, ಎಲ್ಲರೂ ಸ್ವಯಂಪ್ರೇರಿತವಾಗಿ ಒಗ್ಗೂಡಿ ಹೋರಾಟದ ಸಿದ್ಧತೆಗಳನ್ನು ಚುರುಕುಗೊಳಿಸಬೇಕು ಹಾಗೂ ಯುವಜನರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದೆ.

ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್‌ ರಾಜ್‌, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಎಚ್‌.ಆರ್‌. ಬಸವರಾಜಪ್ಪ, ದರ್ಶನ್‌ ಪುಟ್ಟಣ್ಣಯ್ಯ, ಟಿ. ಯಶವಂತ್‌, ಶಿವಪ್ರಕಾಶ್‌ ಮತ್ತು ಕುಮಾರ್‌ ಸಮತಳ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

ದಲಿತ ಮುಖಂಡರಾದ ಇಂದುಧರ ಹೊನ್ನಾಪುರ, ಗುರುಪ್ರಸಾದ್‌ ಕೆರಗೋಡು, ಎನ್‌. ವೆಂಕಟೇಶ್‌, ವಿ. ನಾಗರಾಜ್‌, ಅಂಬಣ್ಣ ಆರೋಲಿಕರ್‌, ಬಸವರಾಜ್‌ ಕೌತಾಳ್‌ ಮತ್ತು ಕರಿಯಪ್ಪ ಗುಡಿಮನಿ ಉಪಸ್ಥಿತರಿದ್ದರು.

ಅಕ್ಟೋಬರ್‌ 23ರಂದು ರಾಜ್ಯದ ವಿವಿಧೆಡೆ ಜನತಾ ಮೆರವಣಿಗೆಗಳು ಮತ್ತು ಪ್ರತಿಭಟನೆಗಳನ್ನು ಸಂಘಟಿಸುವ ಮೂಲಕ ಎಸ್‌ಐಆರ್‌ ವಿರುದ್ಧದ ಹೋರಾಟವನ್ನು ಜನಾಂದೋಲನವನ್ನಾಗಿ ರೂಪಿಸುವುದು ಸಂಘಟನೆಯ ಉದ್ದೇಶವಾಗಿದೆ. ಎಸ್‌ಐಆರ್‌

ಇದನ್ನೂ ನೋಡಿ : 19 ವರ್ಷ ದುಡಿದರೂ ಖಾಯಂ ಇಲ್ಲ! ನ್ಯಾಯ ಕೇಳಿದ ವಿಶೇಷಚೇತನರ ಮೇಲೆ ಪೊಲೀಸರ ದಬ್ಬಾಳಿಕೆ? Janashakthi Media

Donate Janashakthi Media

Leave a Reply

Your email address will not be published. Required fields are marked *