MRPL ಸ್ಫೋಟಕ್ಕೆ ಮತ್ತೊಂದು ಬಲಿ: ರಾಜೇಶ್ ಡಿ ಸಿಲ್ವ ಸಾವು; ₹1.20 ಕೋಟಿ ಪರಿಹಾರಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

ಸುರಕ್ಷತಾ ವೈಫಲ್ಯಕ್ಕೆ ಯುವ ಕಾರ್ಮಿಕ ಬಲಿ; ಸ್ಫೋಟದ ತನಿಖಾ ವರದಿ ಬಹಿರಂಗಪಡಿಸಲು, ಕುಟುಂಬದ ಸದಸ್ಯರಿಗೆ ನೇರ ಉದ್ಯೋಗ ನೀಡಲು ಸಿಪಿಐ(ಎಂ) ಒತ್ತಾಯ
ಮಂಗಳೂರು: ಸುರತ್ಕಲ್‌ನ ಎಂಆರ್‌ಪಿಎಲ್‌ (MRPL) ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಗುತ್ತಿಗೆ ಕಾರ್ಮಿಕ ರಾಜೇಶ್ ಡಿ ಸಿಲ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಸ್ಫೋಟ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. MRPL

ರಾಜೇಶ್ ಡಿ ಸಿಲ್ವ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಮೃತ ಕಾರ್ಮಿಕನ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ಸಿಗಲಿ ಎಂದು ಹಾರೈಸಿದ್ದಾರೆ. ಎಂಆರ್‌ಪಿಎಲ್ ಆಡಳಿತದ ಹೊಣೆಗೇಡಿತನ ಮತ್ತು ಸುರಕ್ಷತಾ ವೈಫಲ್ಯಕ್ಕೆ ಯುವ ಕಾರ್ಮಿಕ ರಾಜೇಶ್ ಬಲಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮೃತ ಕಾರ್ಮಿಕನ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಲು ಆಗ್ರಹ

ಸ್ಫೋಟದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ನೀಡಿದಂತೆ ರಾಜೇಶ್ ಡಿ ಸಿಲ್ವ ಅವರ ಕುಟುಂಬಕ್ಕೂ ₹1.20 ಕೋಟಿ ಪರಿಹಾರಧನವನ್ನು ಎಂಆರ್‌ಪಿಎಲ್ ಆಡಳಿತ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ದುರಂತಕ್ಕೆ ಕಾರಣವಾದ ಅಂಶಗಳ ಪ್ರಾಥಮಿಕ ತನಿಖಾ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಸ್ಫೋಟದ ಕುರಿತು ನಾಗರಿಕ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೃತರಾದ ರಾಜೇಶ್ ಡಿ ಸಿಲ್ವ ಮತ್ತು ಮನೀಶ್ ಕರ್ಕಡ ಅವರ ಕುಟುಂಬದ ಸದಸ್ಯರಿಗೆ ಎಂಆರ್‌ಪಿಎಲ್‌ನಲ್ಲಿ ನೇರ ಉದ್ಯೋಗ ಕಲ್ಪಿಸಬೇಕು. ಸ್ಫೋಟದ ತೀವ್ರತೆಯಿಂದ ಹಾನಿಗೊಳಗಾದ ಸುತ್ತಮುತ್ತಲಿನ ಗ್ರಾಮಸ್ಥರ ಆಸ್ತಿಪಾಸ್ತಿಗಳಿಗೆ ನ್ಯಾಯಯುತ ಪರಿಹಾರವನ್ನು ಶೀಘ್ರವಾಗಿ ವಿತರಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ. MRPL

ಇದನ್ನೂ ಓದಿ : ತ್ರಿವರ್ಣ ಧ್ವಜ ಸಮಾವೇಶಕ್ಕೂ ಮುನ್ನ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ ವಶಕ್ಕೆ

MRPL ನಾಲ್ಕನೇ ಹಂತದ ವಿಸ್ತರಣೆ ಕೈಬಿಡಲು ಒತ್ತಾಯ

ಮಂಗಳೂರಿನ ಧಾರಣಾ ಸಾಮರ್ಥ್ಯ ಮತ್ತು ಎಂಆರ್‌ಪಿಎಲ್ ಸುತ್ತಮುತ್ತಲಿನ ದಟ್ಟ ಜನವಸತಿಯನ್ನು ಪರಿಗಣಿಸಿ, ಘಟಕದ ನಾಲ್ಕನೇ ಹಂತದ ವಿಸ್ತರಣಾ ಯೋಜನೆಯನ್ನು ಸರ್ಕಾರ ಕೈಬಿಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

ಕೈಗಾರಿಕಾ ಘಟಕಗಳ ಸುರಕ್ಷತಾ ವೈಫಲ್ಯದಿಂದ ಕಾರ್ಮಿಕರ ಜೀವಕ್ಕೆ ಅಪಾಯ ಎದುರಾಗುತ್ತಿರುವುದರ ಜೊತೆಗೆ ಸುತ್ತಮುತ್ತಲಿನ ಜನವಸತಿಯೂ ಅಪಾಯಕ್ಕೆ ಸಿಲುಕುತ್ತಿದೆ ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಮುನೀರ್ ಕಾಟಿಪಳ್ಳ, ಸ್ಫೋಟದ ಹೊಣೆಗಾರಿಕೆಯನ್ನು ನಿಗದಿಪಡಿಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ನೋಡಿ : ಅಂಕಿತಾ ಭಂಡಾರಿ ಪ್ರಕರಣದ ‘VIP’ ಯಾರು? | ದುಷ್ಯಂತ್ ಗೌತಮ್ ನೇಮಕಕ್ಕೆ ವಿರೋಧವೇಕೆ? | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *