ಅರಣ್ಯ, ಭೂಮಿ, ಸಮುದಾಯದ ಹಕ್ಕುಗಳ ರಕ್ಷಣೆಗೆ ಒತ್ತು; ರಾಜ್ಯದ ವಿವಿಧ ಭಾಗಗಳ ಆದಿವಾಸಿಗಳು ಭಾಗಿ
ಯಲ್ಲಾಪುರ: ಆದಿವಾಸಿ ಸಮುದಾಯಗಳ ಅಸ್ತಿತ್ವ, ಹಕ್ಕುಗಳು ಮತ್ತು ಬದುಕಿನ ಸವಾಲುಗಳ ಕುರಿತು ಚರ್ಚಿಸಿ, ಹಕ್ಕುಗಳ ರಕ್ಷಣೆಗೆ ಹೋರಾಟ ರೂಪಿಸುವ ಉದ್ದೇಶದಿಂದ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಅಕ್ಟೋಬರ್ 25 ಮತ್ತು 26ರಂದು ನಾಲ್ಕನೇ ಆದಿವಾಸಿಗಳ ರಾಜ್ಯ ಸಮ್ಮೇಳನ ನಡೆಯಲಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ. ಗುರುಶಾಂತ್ ತಿಳಿಸಿದ್ದಾರೆ. ಯಲ್ಲಾಪುರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು, ಭೂಮಿ, ನೀರು ಹಾಗೂ ಪ್ರಕೃತಿಯೊಂದಿಗೆ ನಿಕಟ ಸಂಬಂಧ ಹೊಂದಿ ಶತಮಾನಗಳಿಂದ ಬದುಕುತ್ತಿರುವ ಆದಿವಾಸಿ ಸಮುದಾಯಗಳು ಇಂದು ತಮ್ಮ ಅಸ್ತಿತ್ವ ಮತ್ತು ಜೀವನೋಪಾಯವನ್ನು ಉಳಿಸಿಕೊಳ್ಳಲು ಅನೇಕ ಸವಾಲುಗಳನ್ನು ಎದುರಿಸುತ್ತಿವೆ ಎಂದರು.
ಅರಣ್ಯ ಹಕ್ಕುಗಳನ್ನು ನಿರಾಕರಿಸುವುದು, ಭೂಮಿ ಕಬಳಿಕೆ, ಬಲವಂತದ ಸ್ಥಳಾಂತರ, ಉದ್ಯೋಗಾವಕಾಶಗಳ ಕೊರತೆ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಅಭಾವ ಆದಿವಾಸಿಗಳ ಬದುಕನ್ನು ಸಂಕಷ್ಟಕ್ಕೆ ದೂಡಿವೆ. ಇದರೊಂದಿಗೆ ಅವರ ಭಾಷೆ, ಸಂಸ್ಕೃತಿ ಮತ್ತು ಸಂವಿಧಾನ ನೀಡಿರುವ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ಕೂಡ ಆತಂಕಕ್ಕೆ ಕಾರಣವಾಗಿವೆ ಎಂದು ಹೇಳಿದರು.
ಇದನ್ನೂ ಓದಿ : ತ್ರಿವರ್ಣ ಧ್ವಜ ಸಮಾವೇಶಕ್ಕೂ ಮುನ್ನ ಸಿಜೆಪಿ ಮುಖಂಡ ಅಭಿಜೀತ್ ದೀಪ್ಕೆ ವಶಕ್ಕೆ
ಉತ್ತರ ಕನ್ನಡ ಜಿಲ್ಲೆಯ ಆದಿವಾಸಿ ಸಮುದಾಯಗಳಿಗೆ ಪೌಷ್ಟಿಕ ಆಹಾರ ಮತ್ತು ಪಡಿತರ ಸಮರ್ಪಕವಾಗಿ ದೊರೆಯುತ್ತಿಲ್ಲ. ಜಿಲ್ಲೆಯ ಆದಿವಾಸಿಗಳು ಹಾಗೂ ಅರಣ್ಯವಾಸಿಗಳ ಅಸ್ತಿತ್ವಕ್ಕೆ ಅಪಾಯ ತಂದೊಡ್ಡುವ ಕಸ್ತೂರಿ ರಂಗನ್ ವರದಿಯನ್ನೂ ವಿರೋಧಿಸಲಾಗುತ್ತಿದೆ ಎಂದು ಗುರುಶಾಂತ್ ತಿಳಿಸಿದರು.
ಸಮ್ಮೇಳನದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಿ, ಗೊಂಡ, ಕುಣಬಿ, ಹಾಲಕ್ಕಿ, ಹಸ್ಲರ್, ಕುಂಬ್ರಿ ಮರಾಠಿ ಮತ್ತು ಗೌಳಿ ಸಮುದಾಯಗಳ ಪ್ರತಿನಿಧಿಗಳೊಂದಿಗೆ ರಾಜ್ಯದ ವಿವಿಧ ಭಾಗಗಳ ಆದಿವಾಸಿಗಳು ಭಾಗವಹಿಸಲಿದ್ದಾರೆ. ಆದಿವಾಸಿಗಳ ಜೀವನೋಪಾಯ, ಅರಣ್ಯ ಮತ್ತು ಸಮುದಾಯದ ಹಕ್ಕುಗಳು, ಪರಿಶಿಷ್ಟ ಪಂಗಡದ ಮಾನ್ಯತೆ, ಮಾನವ–ವನ್ಯಜೀವಿ ಸಂಘರ್ಷದಿಂದ ಉಂಟಾಗುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳ ಕುರಿತು ಚರ್ಚೆ ನಡೆಯಲಿದೆ. ವಿವಿಧ ಆದಿವಾಸಿ ಸಮುದಾಯಗಳ ನಡುವೆ ಐಕ್ಯತೆ ಬಲಪಡಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಶಾಂತಾರಾಮ ನಾಯಕ, ಕಾರ್ಮಿಕ ನಾಯಕಿ ಯಮುನಾ ಗಾಂವ್ಕರ್, ಸಿದ್ದಿ ಸಮುದಾಯದ ಹೋರಾಟಗಾರ್ತಿಯರಾದ ಲಕ್ಷ್ಮೀ ಸಿದ್ದಿ ಮತ್ತು ಲಿಲ್ಲಿ ಸಿದ್ದಿ, ಕುಣಬಿ ಸಮಾಜದ ಮುಖಂಡ ಪ್ರೇಮಾನಂದ ವೇಳಿಪ ಹಾಗೂ ಸಿದ್ದಿ ಸಮಾಜದ ಹಿರಿಯರಾದ ಜಾನ್ ಬಿಳ್ಕಿಕರ್ ಉಪಸ್ಥಿತರಿದ್ದರು.
ಇದನ್ನೂ ನೋಡಿ : ಅಂಕಿತಾ ಭಂಡಾರಿ ಪ್ರಕರಣದ ‘VIP’ ಯಾರು? | ದುಷ್ಯಂತ್ ಗೌತಮ್ ನೇಮಕಕ್ಕೆ ವಿರೋಧವೇಕೆ? | ಗುರುರಾಜ ದೇಸಾಯಿ
