ಹನೂರು‌ ಎನ್‌ಕೌಂಟರ್ ನಗ್ನ ಕಗ್ಗೊಲೆ : ಸಿ.ಹೆಚ್.ಹನುಮಂತರಾಯ ಅಭಿಮತ

ಮರಣೋತ್ತರ ಪರೀಕ್ಷೆ, ಪಂಚನಾಮೆಗಳಲ್ಲಿ ಗಂಭೀರ ಲೋಪ; ಸಾಕ್ಷ್ಯ ನಾಶಕ್ಕೆ ಯತ್ನದ ಶಂಕೆ – ಮೃತ ರೈತರ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹ
ಬೆಂಗಳೂರು: ಸುಮಾರು ಎರಡು ತಿಂಗಳ ಹಿಂದೆ ಮರಿಯಮಂಗಲ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ರೈತರು ಮೃತಪಟ್ಟಿರುವ ಪ್ರಕರಣವು ನಗ್ನ ಕೊಲೆ (Full-fledged murder) ಎಂದು ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಆರೋಪಿಸಿದ್ದಾರೆ. ಹನೂರು‌

ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಅಖಿಲ ಭಾರತ ವಕೀಲರ ಒಕ್ಕೂಟದ (ಎಐಎಲ್‌ಯು) ಕರ್ನಾಟಕ ರಾಜ್ಯ ಸಮಿತಿಗಳು ಜಂಟಿಯಾಗಿ ಆಯೋಜಿಸಿದ್ದ ನ್ಯಾಯಾಗ್ರಹ ಸಭೆ ಮತ್ತು ನೊಂದ ಕುಟುಂಬಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮೂವರು ರೈತರ ಮರಣೋತ್ತರ ಪರೀಕ್ಷೆಯ ವರದಿಗಳು, ಶವಪಂಚನಾಮೆ, ನಿರೀಕ್ಷಣಾ ಜಾಮೀನು ಅರ್ಜಿ, ಅದನ್ನು ಪುರಸ್ಕರಿಸಿದ ನ್ಯಾಯಾಲಯದ ತೀರ್ಪು ಹಾಗೂ ಅರಣ್ಯ ಸಿಬ್ಬಂದಿ ದಾಖಲಿಸಿರುವ ದೂರನ್ನು ಸೂಕ್ಷ್ಮವಾಗಿ ತುಲನಾತ್ಮಕವಾಗಿ ಅಧ್ಯಯನ ಮಾಡಿದರೆ, ಮೃತರು ಬೇಟೆಗಾರರಾಗಿದ್ದು, ಅರಣ್ಯ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂಬ ವಾದವು ಕಟ್ಟುಕಥೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಹನುಮಂತರಾಯ ಹೇಳಿದರು.

ಅರಣ್ಯ ಸಿಬ್ಬಂದಿ ನೀಡಿರುವ ದೂರಿನಲ್ಲಿ ಮೃತರು ತಮ್ಮನ್ನು ಕೊಲ್ಲಲು ಪ್ರಯತ್ನಿಸಿದ್ದರು ಎಂದು ಉಲ್ಲೇಖಿಸಿದ್ದರೂ, ಈ ಆರೋಪಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಪ್ರತ್ಯೇಕ ಎಫ್‌ಐಆರ್‌ ದಾಖಲಿಸದಿರುವುದು ಗಂಭೀರ ಲೋಪವಾಗಿದೆ. ತನಿಖೆಯ ನಿಯಂತ್ರಣವನ್ನು ಅರಣ್ಯ ಇಲಾಖೆಯ ಸುಪರ್ದಿಯಲ್ಲೇ ಉಳಿಸಿಕೊಳ್ಳುವ ಉದ್ದೇಶ ಇದರ ಹಿಂದೆ ಇರಬಹುದೆಂಬ ಅನುಮಾನ ವ್ಯಕ್ತವಾಗುತ್ತದೆ. ಇಂತಹ ಗಂಭೀರ ಲೋಪವನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಗಮನಿಸದಿರುವುದು ಆಶ್ಚರ್ಯಕರ ಎಂದು ಅವರು ವಿಶ್ಲೇಷಿಸಿದರು.

ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೂ, ಶವಪಂಚನಾಮೆಯನ್ನು ಮೃತರ ರಕ್ತಸಂಬಂಧಿಗಳ ಸಮ್ಮುಖದಲ್ಲಿ ತಾಲೂಕು ದಂಡಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳ ಮೂಲಕ ನಡೆಸಲು ಅವಕಾಶ ನೀಡದೆ, ಶವಗಳನ್ನು ಘಟನಾ ಸ್ಥಳದಿಂದ ಸಾಗಿಸಲಾಗಿದೆ ಎಂದು ಅವರು ಆರೋಪಿಸಿದರು. ಘಟನೆಯ ದಿನ ಬೆಳಿಗ್ಗೆ ಮತ್ತು ಸಂಜೆ ನಡೆಸಿದ ಮಹಜರುಗಳಲ್ಲಿಯೂ ಗಂಭೀರ ಲೋಪಗಳಿವೆ. ಈ ಎಲ್ಲ ಅಂಶಗಳು ಸಾಕ್ಷ್ಯ ನಾಶಕ್ಕೆ ಅರಣ್ಯ ಅಧಿಕಾರಿಗಳು ಯತ್ನಿಸಿರುವ ಶಂಕೆಯನ್ನು ಮೂಡಿಸುತ್ತವೆ ಎಂದು ಹನುಮಂತರಾಯ ಹೇಳಿದರು. ಹನೂರು‌

ಇದನ್ನೂ ಓದಿ : SIR ಹೋರಾಟಕ್ಕೆ ತಡೆ: ದೆಹಲಿಯಲ್ಲಿ ವ್ಯಾಪಕಗೊಂಡ ಆಕ್ರೋಶ

ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಹಿರಿಯ ವಕೀಲ ಎಸ್. ಬಾಲನ್ ಮಾತನಾಡಿ, ಕಾನೂನನ್ನು ರಕ್ಷಿಸಬೇಕಾದ ಅಧಿಕಾರಿಗಳೇ ಕಾನೂನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿದ್ದರೂ, ಶಾಸಕರು, ಸಚಿವರು ಮತ್ತು ಸರ್ಕಾರ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು. ಮೂವರು ರೈತರ ಸಾವನ್ನು ಸಮರ್ಥಿಸಿಕೊಳ್ಳುವ ನಿಲುವು ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದರು.

ಇದು ಸರ್ಕಾರವೇ ನಡೆಸಿದ ಕೊಲೆಯಂತಿದೆ ಎಂದು ಆರೋಪಿಸಿದ ಬಾಲನ್, ಬಡ ರೈತರ ಕುಟುಂಬಗಳಿಗೆ ಕೇವಲ ಐದು ಲಕ್ಷ ರೂಪಾಯಿ ಪರಿಹಾರ ನೀಡಿರುವುದು ಅವರ ಸಾವಿಗೆ ಮಾಡಿದ ಅವಮಾನವಾಗಿದೆ ಎಂದರು. ಅರಣ್ಯ ಅಧಿಕಾರಿಗಳ ಅಹಂಕಾರ ಮತ್ತು ದೌರ್ಜನ್ಯದ ಮನೋಭಾವದಿಂದ ಈ ಕಗ್ಗೊಲೆ ನಡೆದಿದೆ ಎಂದು ಆರೋಪಿಸಿದ ಅವರು, ಮೃತರಿಗೆ ಅತಿ ಸಮೀಪದಿಂದ ಗುಂಡು ಹಾರಿಸಿರುವುದನ್ನು ಮರಣೋತ್ತರ ಪರೀಕ್ಷೆಯ ವರದಿಗಳು ದೃಢಪಡಿಸಿವೆ ಎಂದು ತಿಳಿಸಿದರು.

ಪ್ರಕರಣದಲ್ಲಿ ನ್ಯಾಯ ದೊರಕಿಸಲು ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದು. ಚಾಮರಾಜನಗರ ಜಿಲ್ಲಾ ಅರಣ್ಯಾಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಿ, ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಾಲನ್ ಒತ್ತಾಯಿಸಿದರು.

ನೊಂದ ಕುಟುಂಬಗಳ ನೋವಿಗೆ ನ್ಯಾಯ ದೊರಕಿಸಲು ಹೋರಾಟ

ಕಾರ್ಯಕ್ರಮದಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ರೈತರ ಪತ್ನಿಯರಾದ ಲೂರ್ದ್ ಮೇರಿ, ಪೆರಿಯನಾಯಗಮ್ಮಾಳ್ ಮತ್ತು ಡೋಮಿನೋ ಮೇರಿ ಭಾಗವಹಿಸಿದ್ದರು. ಎನ್‌ಕೌಂಟರ್‌ನಲ್ಲಿ ಬದುಕುಳಿದ ಮಹಿಮಾದಾಸ್ ಕೂಡ ಉಪಸ್ಥಿತರಿದ್ದರು.

ವಿವಿಧ ಸಂಘಟನೆಗಳ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಯು. ಬಸವರಾಜ್, ಎಸ್. ವರಲಕ್ಷ್ಮಿ, ಹರೀಂದ್ರ, ಎಂ. ಪುಟ್ಟಮಾದು, ಸುಶೀಲ, ಯಶವಂತ್ ಹಾಗೂ ಟಿ. ಶ್ರೀನಿವಾಸ್ ಕುಮಾರ್ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಮೂವರು ರೈತರ ಸಾವಿನ ಪ್ರಕರಣದಲ್ಲಿ ಎತ್ತಲಾಗಿರುವ ಕಾನೂನು ಮತ್ತು ತನಿಖಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಿ, ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂಬುದು ಸಭೆಯಲ್ಲಿ ವ್ಯಕ್ತವಾದ ಪ್ರಮುಖ ಆಗ್ರಹವಾಗಿತ್ತು. ಹನೂರು‌

ಇದನ್ನೂ ನೋಡಿ : ಎಸ್‌ಐಆರ್‌ ವಿರುದ್ಧದ ಹೋರಾಟಕ್ಕೆ ತಡೆ ಏಕೆ? | ಬಿಜೆಪಿಯ ಅಸಲಿ ಉದ್ದೇಶವೇನು? Janashakthi Media

Donate Janashakthi Media

Leave a Reply

Your email address will not be published. Required fields are marked *