SIR ಹೋರಾಟಕ್ಕೆ ತಡೆ: ದೆಹಲಿಯಲ್ಲಿ ವ್ಯಾಪಕಗೊಂಡ ಆಕ್ರೋಶ

ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ಅಕ್ಟೋಬರ್‌ 10ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ CJP, SFI ಸೇರಿದಂತೆ ಎಡ ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆ ಹಾಗೂ ಎಡಪಕ್ಷಗಳು ಆಯೋಜಿಸಿದ್ದ ಪ್ರತಿಭಟನೆಗೆ ಮುನ್ನವೇ ದೆಹಲಿ ಪೊಲೀಸರು ಹಲವು ರಾಜಕೀಯ ನಾಯಕರು, ಯುವ ಹೋರಾಟಗಾರರು ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಸಿಪಿಐ(ಎಂ) ಹಿರಿಯ ನಾಯಕರಾದ ಪಿಣರಾಯಿ ವಿಜಯನ್‌, ಎಂ.ಎ. ಬೇಬಿ, ಬೃಂದಾ ಕಾರಟ್‌ ಸೇರಿದಂತೆ ಹಲವು ಎಡಪಕ್ಷಗಳ ಮುಖಂಡರನ್ನು ವಶಕ್ಕೆ ಪಡೆದಿರುವುದಕ್ಕೆ ರಾಜಕೀಯ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮುಂಬೈನಿಂದ ದೆಹಲಿಗೆ ಬಂದ ಸಿಜೆಪಿ ಮುಖಂಡರಾದ ಅಭಿಜೀತ್‌ ದೀಪ್ಕೆ, ಸೌರವ್‌ ದಾಸ್‌ ಮತ್ತು ಆಶುತೋಷ್‌ ರಂಕಾ ಅವರನ್ನು ವಿಮಾನ ನಿಲ್ದಾಣದಲ್ಲಿ ವಿಮಾನದಿಂದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ, ವಶಕ್ಕೆ ಪಡೆದ ಪ್ರತಿಭಟನಾಕಾರರಿಗೆ ಕಾನೂನು ನೆರವು ಒದಗಿಸಲು ಕಾಂಗ್ರೆಸ್‌ ಕಾನೂನು ತಂಡವನ್ನು ನಿಯೋಜಿಸಿದೆ.

ವಿಮಾನದಲ್ಲೇ ಸಿಜೆಪಿ ನಾಯಕರ ವಶಕ್ಕೆ

ಮುಂಬೈನಿಂದ ದೆಹಲಿಗೆ ಬಂದಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್‌ ದೀಪ್ಕೆ, ಸಹಸಂಯೋಜಕ ಸೌರವ್‌ ದಾಸ್‌ ಮತ್ತು ವಕ್ತಾರ ಆಶುತೋಷ್‌ ರಂಕಾ ಅವರನ್ನು ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗಿಳಿಯುವ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಎಲ್ಲಿದ್ದಾರೆ ಎಂಬುದನ್ನು ಆರಂಭದಲ್ಲಿ ಬಹಿರಂಗಪಡಿಸಿರಲಿಲ್ಲ. ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್‌ ಗಾವಾಂಡೆ ಅವರ ಪ್ರಕಾರ, ಮೂವರನ್ನು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-3 ಒಳಗಿನ ಬಹಿರಂಗಪಡಿಸದ ಸ್ಥಳದಲ್ಲಿ ಇರಿಸಲಾಗಿತ್ತು. ಪೊಲೀಸರ ಕ್ರಮವನ್ನು ಸಿಜೆಪಿ ಖಂಡಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ತಮ್ಮ ನಾಯಕರನ್ನು ತಡೆಯಲು ಪೂರ್ವಯೋಜಿತವಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿದೆ.

ಪಿಣರಾಯಿ ವಿಜಯನ್‌, ಎಂ.ಎ. ಬೇಬಿ, ಬೃಂದಾ ಕಾರಟ್‌ ಸೇರಿದಂತೆ ಎಡಪಕ್ಷಗಳ ನಾಯಕರ ವಶ

ಸಿಪಿಐ(ಎಂ)ನ ಹಿರಿಯ ನಾಯಕರಾದ ಪಿಣರಾಯಿ ವಿಜಯನ್‌, ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಬೃಂದಾ ಕಾರಟ್‌, ಕೇರಳದ ಸಿಪಿಐ(ಎಂ) ನಾಯಕ ಎಂ.ವಿ. ಗೋವಿಂದನ್‌ ಮಾಸ್ಟರ್‌, ಎ. ವಿಜಯರಾಘವನ್‌, ಕೆ.ಕೆ. ಶೈಲಜಾ, ರಾಜ್ಯಸಭಾ ಸದಸ್ಯ ಜಾನ್‌ ಬ್ರಿಟ್ಟಾಸ್‌, ಕೆ.ಎನ್‌. ಬಾಲಗೋಪಾಲ್‌ ಮತ್ತು ಪಿ.ಕೆ. ಶ್ರೀಮತಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ನಾಯಕರನ್ನು ಜಂತರ್‌ ಮಂತರ್‌ ಸಮೀಪ ತಡೆದು ವಶಕ್ಕೆ ಪಡೆದ ಬಳಿಕ, ಹಲವರನ್ನು ಛತ್ರಸಾಲ್‌ ಕ್ರೀಡಾಂಗಣಕ್ಕೆ ಕರೆದೊಯ್ಯಲಾಗಿದೆ.

ಈ ಬೆಳವಣಿಗೆಯನ್ನು ಸಿಪಿಐ(ಎಂ) ಖಂಡಿಸಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರು, ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ವಶಕ್ಕೆ ಪಡೆದ ಕ್ರಮವು ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸುತ್ತದೆ ಎಂದು ಟೀಕಿಸಿದ್ದಾರೆ.

ಧ್ರುವ್‌ ರಾಠಿ, ರತ್ನಾ ಸಿಂಗ್‌ ಸೇರಿದಂತೆ ಇತರರೂ ವಶಕ್ಕೆ

ಸಿಜೆಪಿಯ ಕಾನೂನು ಘಟಕದ ಮುಖ್ಯಸ್ಥೆ ರತ್ನಾ ಸಿಂಗ್‌ ಮತ್ತು ಯೂಟ್ಯೂಬರ್‌ ಧ್ರುವ್‌ ರಾಠಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ರತ್ನಾ ಸಿಂಗ್‌ ಅವರೊಂದಿಗೆ ಇತರ ಮೂವರು ವಕೀಲರನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಸಿಜೆಪಿ ಆರೋಪಿಸಿದೆ. ತಮ್ಮನ್ನು ತಡೆಯಲು ಪೊಲೀಸರು ಯಾವುದೇ ಅಧಿಕೃತ ನೋಟಿಸ್‌ ತೋರಿಸಿಲ್ಲ ಎಂದು ರತ್ನಾ ಸಿಂಗ್‌ ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಇದೇ ವೇಳೆ, ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಡಿಜಿಟಲ್‌ ಮಾಧ್ಯಮಗಳ ಪತ್ರಕರ್ತರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ವರದಿಗಳಿವೆ. ಸುಪ್ರೀಂ ಕೋರ್ಟ್‌ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ಕೆಲವು ವಕೀಲರನ್ನು ವಶಕ್ಕೆ ಪಡೆದಿರುವುದಕ್ಕೆ ಸುಪ್ರೀಂ ಕೋರ್ಟ್‌ ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ಮಧ್ಯಪ್ರವೇಶಕ್ಕೆ ಮನವಿ ಮಾಡಿದೆ.

ಜಂತರ್‌ ಮಂತರ್‌ ಸುತ್ತ ಬಿಗಿ ಭದ್ರತೆ

ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಅಕ್ಟೋಬರ್‌ 10ರಂದು ಪ್ರತಿಭಟನಾಕಾರರು ಜಂತರ್‌ ಮಂತರ್‌ಗೆ ತಲುಪದಂತೆ ಕೇಂದ್ರ ದೆಹಲಿಯ ಹಲವು ಪ್ರದೇಶಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ, ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೆಟ್ರೊ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಮುಚ್ಚುವುದು, ರೈಲು ಸಂಚಾರದಲ್ಲಿ ವ್ಯತ್ಯಯ ಮತ್ತು ಕೇಂದ್ರ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್‌ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವ ಕ್ರಮಗಳೂ ವರದಿಯಾಗಿವೆ. ಪ್ರತಿಭಟನೆಯನ್ನು ತಡೆಯಲು ಸಾವಿರಾರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಸಂದರ್ಭದಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳು ಹಾಗೂ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಹಾಕಿರುವ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ರಾಜೀನಾಮೆ ನೀಡಬೇಕು ಎಂಬುದು ಪ್ರತಿಭಟನೆಕಾರರ ಪ್ರಮುಖ ಬೇಡಿಕೆಯಾಗಿದೆ. ಮತದಾರರ ಹಕ್ಕುಗಳ ರಕ್ಷಣೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *