ಬೆಂಗಳೂರು: ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟ ನೆಲಮಟ್ಟದಲ್ಲೂ ಹಾಗೂ ನ್ಯಾಯಾಲಯದಲ್ಲೂ ಮುಂದುವರಿದಿದೆ. ನೈಸ್ ಯೋಜನೆಯನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕಿದೆ ಎಂದು ಚಿಂತಕ ಡಾ. ಕೆ. ಪ್ರಕಾಶ್ ಹೇಳಿದರು. ಮೂರು
ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಗುರುವಾರ ನಡೆದ ನೈಸ್ ಭೂ ಸಂತ್ರಸ್ತ ರೈತರ ರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೈಸ್ ಯೋಜನೆಯ ವ್ಯಾಪ್ತಿಗೆ ಒಳಪಟ್ಟ ರೈತರು ಸುಮಾರು ಮೂರು ದಶಕಗಳಿಂದ ಸಂಕಷ್ಟ ಅನುಭವಿಸುತ್ತಿದ್ದರೂ, ಅವರ ಸಮಸ್ಯೆಗಳಿಗೆ ಇದುವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
1996ರಿಂದ ಇಲ್ಲಿಯವರೆಗೆ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಿವೆ. ಆದರೆ ಯಾವುದೇ ಸರ್ಕಾರವೂ ನೈಸ್ ಭೂ ಸಂತ್ರಸ್ತರ ಸಂಕಟಗಳನ್ನು ಗಂಭೀರವಾಗಿ ಆಲಿಸಿ, ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿಲ್ಲ ಎಂದು ಡಾ. ಕೆ. ಪ್ರಕಾಶ್ ಆರೋಪಿಸಿದರು.
“ನೈಸ್ ಯೋಜನೆಯಿಂದ ಭೂಮಿ ಕಳೆದುಕೊಂಡ ರೈತರು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ನೆಲದಲ್ಲಿನ ಹೋರಾಟದ ಜತೆಗೆ ಕೋರ್ಟ್‌ನಲ್ಲೂ ಹೋರಾಟ ನಡೆದಿದೆ. ಈ ಯೋಜನೆಯನ್ನು ರದ್ದುಪಡಿಸಬೇಕು ಎಂಬ ನಿಲುವನ್ನು ನ್ಯಾಯಾಲಯದ ಮುಂದೆ ಸ್ಪಷ್ಟವಾಗಿ ಪ್ರತಿಪಾದಿಸಲಾಗಿದೆ. ರೈತರ ಭೂಮಿಯನ್ನು ಮರಳಿ ನೀಡುವುದು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ” ಎಂದು ಅವರು ಹೇಳಿದರು.
ಹೈಕೋರ್ಟ್ ತೀರ್ಪಿನಂತೆ ನೈಸ್ ಕಂಪನಿಯ ಅಕ್ರಮಗಳ ಕುರಿತು ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತಜ್ಞರ ಸ್ವತಂತ್ರ ತನಿಖೆ ಹಾಗೂ ವಿಧಿವಿಜ್ಞಾನ ಲೆಕ್ಕಪರಿಶೋಧನೆ ನಡೆಸಬೇಕು ಎಂದು ಸಮಾವೇಶ ಆಗ್ರಹಿಸಿತು. ನೈಸ್ ಯೋಜನೆಯನ್ನು ರದ್ದುಪಡಿಸಿ ರೈತರಿಗೆ ಭೂಮಿ ವಾಪಸ್ ನೀಡಬೇಕು, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡಬೇಕು, ಅಕ್ರಮ ಟೋಲ್ ಸಂಗ್ರಹ ರದ್ದುಪಡಿಸಬೇಕು ಹಾಗೂ ಇದರಿಂದ ಬಾಧಿತರಾದ ಕಾರ್ಮಿಕರಿಗೆ ಪರಿಹಾರ ಒದಗಿಸಬೇಕು ಎಂದು ಡಾ. ಕೆ. ಪ್ರಕಾಶ್ ಸರ್ಕಾರವನ್ನು ಆಗ್ರಹಿಸಿದರು. ಮೂರು
ಇದನ್ನೂ ಓದಿ : ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ
ಸರ್ಕಾರಗಳು ಬದಲಾಗಿವೆ, ರೈತರ ಸಂಕಷ್ಟ ಮಾತ್ರ ಬದಲಾಗಿಲ್ಲ : ನೈಸ್ ಯೋಜನೆ ಜಾರಿಯಾದಾಗಿನಿಂದ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಹಲವು ರೈತರು ನ್ಯಾಯಾಲಯಗಳ ಮೊರೆ ಹೋಗಿದ್ದು, ಅಪಾರ ಪ್ರಮಾಣದ ಹಣ ಮತ್ತು ಸಮಯವನ್ನು ಕಳೆದುಕೊಂಡಿದ್ದಾರೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಯು. ಬಸವರಾಜ ಆಕ್ರೋಶ ವ್ಯಕ್ತಪಡಿಸಿದರು.
ನೈಸ್ ಯೋಜನೆಯ ಮೂಲ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿರುವ ಆರೋಪಗಳ ಕುರಿತು ಕ್ರಮ ಕೈಗೊಳ್ಳಬೇಕು, ಅಕ್ರಮ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಹಾಗೂ ಯೋಜನೆಗಾಗಿ ಪಡೆದಿರುವ ಸರ್ಕಾರಿ ಭೂಮಿಯನ್ನು ವಾಪಸ್ ಪಡೆದು ನಿವೇಶನ ರಹಿತರಿಗೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೈಸ್ ಭೂಸಂತ್ರಸ್ತ ಹೋರಾಟ ಸಮಿತಿಯ ಅಧ್ಯಕ್ಷ ಎನ್. ವೆಂಕಟಾಚಲಯ್ಯ ಮಾತನಾಡಿ, ನೈಸ್ ಭೂ ಸಂತ್ರಸ್ತ ರೈತರು, ನಿವೇಶನ ರಹಿತರು ಹಾಗೂ ನೈಸ್ ಟೋಲ್ ಕಾರ್ಮಿಕರನ್ನು ಒಳಗೊಂಡು ರಾಜ್ಯಮಟ್ಟದ ಹೋರಾಟವನ್ನು ಮುಂದುವರಿಸುವ ನಿರ್ಧಾರವನ್ನು ಸಮಾವೇಶ ಕೈಗೊಳ್ಳುತ್ತಿದೆ ಎಂದರು.
ಸೆಪ್ಟೆಂಬರ್ 19ರಂದು ‘ನೈಸ್ ಟೋಲ್ ಚಲೋ’, ಅಕ್ಟೋಬರ್‌ನಲ್ಲಿ ಜಿಲ್ಲಾಧಿಕಾರಿ ಕಚೇರಿ ಚಲೋ ಹಾಗೂ ಜಾಥಾ ನಡೆಸಲು ಮತ್ತು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ರೂಪಿಸಲು ಸಮಾವೇಶ ಕರೆ ನೀಡಿತು. ಇದೇ ವೇಳೆ ನೈಸ್ ಭೂ ಸಂತ್ರಸ್ತ ರೈತರು ಹಾಗೂ ಇತರರ ಹೋರಾಟ ಸಮಿತಿಯನ್ನು ಪುನರ್ ರಚಿಸಲಾಯಿತು.
ಪ್ರಾಸ್ತಾವಿಕವಾಗಿ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್ ಮಾತನಾಡಿದರು. ವೇದಿಕೆಯ ಮೇಲೆ ಪ್ರಾಂತ ಕೃಷಿಕೂಲಿಕಾರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪುಟ್ಟಮಾದು, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಿ.ಎನ್. ಮಂಜುನಾಥ್, ಮುಖಂಡರಾದ ಬಾಲರಾಜು, ವೆಂಕಟಾಚಲಪ್ಪ, ಸಣ್ಣ ರಂಗಯ್ಯ, ಚಂದ್ರಶೇಖರ್, ಪ್ರಸಾದ್ ಹಾಗೂ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಂತ ರೈತ ಸಂಘದ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಎಲ್. ಭರತ್‌ರಾಜ್ ನಿರ್ವಹಿಸಿದರು. ಸಿಐಟಿಯು ಮುಖಂಡ ಮಹಾಂತೇಶ್ ಎನ್.ಡಿ. ವಂದನಾರ್ಪಣೆ ಮಾಡಿದರು.
ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ
