ಕೆಪಿಎಸ್‌ಸಿ ನೇಮಕಾತಿ ಅಕ್ರಮ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

ಕೊಪ್ಪಳ: ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮವನ್ನು ಖಂಡಿಸಿ ಹಾಗೂ ಪ್ರಕರಣದ ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಿ ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಕೆಪಿಎಸ್‌ಸಿ 

ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಬಳಿಕ ಉಪ ತಹಸೀಲ್ದಾರ್ ಪರಶುರಾಮ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ಪರಿಶ್ರಮಪಟ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಪಿಎಸ್‌ಸಿಯ ಪಶುವೈದ್ಯಾಧಿಕಾರಿ ನೇಮಕಾತಿಗೆ ಸಂಬಂಧಿಸಿದಂತೆ ಹಣದ ವ್ಯವಹಾರ, ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಅಕ್ರಮಗಳ ಆರೋಪಗಳು ಕೇಳಿಬಂದಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು. ಕೆಪಿಎಸ್‌ಸಿ 

“ಇದು ಕೇವಲ ಒಂದು ನೇಮಕಾತಿಗೆ ಸೀಮಿತವಾದ ವಿಚಾರವಲ್ಲ. ಸರ್ಕಾರಿ ನೇಮಕಾತಿ ವ್ಯವಸ್ಥೆಯ ಮೇಲಿನ ಯುವಜನರ ವಿಶ್ವಾಸದ ಪ್ರಶ್ನೆಯಾಗಿದೆ. ಹಣ ಅಥವಾ ಪ್ರಭಾವದ ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಬಡ ರೈತರು, ಕಾರ್ಮಿಕರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ವರ್ಷಗಟ್ಟಲೆ ಓದಿ ನಡೆಸಿದ ಪರಿಶ್ರಮ ವ್ಯರ್ಥವಾಗಬಾರದು” ಎಂದು ಅವರು ಆಗ್ರಹಿಸಿದರು. ಕೆಪಿಎಸ್‌ಸಿ 

ಇದನ್ನೂ ಓದಿ : ಪರಿಷ್ಕೃತ ಕನಿಷ್ಠ ವೇತನ ಆದೇಶ ಜಾರಿಗೊಳಿಸಿ ; ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ

ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ನಾಗರಾಜ್ ಯು ಮಾತನಾಡಿ, 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸುತ್ತಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಹಣಕಾಸಿನ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ ಎಂಬುದನ್ನು ಉಲ್ಲೇಖಿಸಿದ ಅವರು, ತನಿಖೆ ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡಕ್ಕೆ ಒಳಗಾಗದೆ ನಡೆಯಬೇಕು ಎಂದು ಒತ್ತಾಯಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಓಎಂಆರ್‌ ಉತ್ತರ ಪತ್ರಿಕೆಗಳ ತಿದ್ದುಪಡಿ ಸೇರಿದಂತೆ ಕೇಳಿಬಂದಿರುವ ಎಲ್ಲ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ವಿಧಿಸಬೇಕು. ಅಕ್ರಮದಿಂದ ಅನ್ಯಾಯಕ್ಕೊಳಗಾದ ಅರ್ಹ ಅಭ್ಯರ್ಥಿಗಳಿಗೆ ಕಾನೂನುಬದ್ಧವಾಗಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲವಾದರೆ ಮುಂದಿನ ದಿನಗಳಲ್ಲಿ ಎಸ್‌ಎಫ್‌ಐ ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಸಂಬಂಧಪಟ್ಟ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಮುಖಂಡರಾದ ಬಾಲಾಜಿ ಚಳ್ಳಾರಿ, ನಾಗರಾಜ್ ಯು, ಎಐಎಡಬ್ಲ್ಯುಯು ಮುಖಂಡ ಸುಂಕಪ್ಪ ಗದಗ ಹಾಗೂ ವಿದ್ಯಾರ್ಥಿಗಳಾದ ಅಕ್ಷಯ್, ಆಕಾಶ್, ಸೌಮ್ಯ, ನಿರಂಜನ, ಮಂಜುಳಾ, ಅನಿತಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೆಪಿಎಸ್‌ಸಿ 

ಇದನ್ನೂ ನೋಡಿ : ‘ನಾವು ಕಳ್ಳರಲ್ಲ… ಈ ದೇಶದ ನಾಗರಿಕರು; ನಮ್ಮ ಮತದ ಹಕ್ಕು ಕಸಿಯಲು ಬಿಡಲ್ಲ’ Janashakthi Media

Donate Janashakthi Media