ಹಾಸನ: “ವ್ಯವಸ್ಥೆ ಮತ್ತು ಆಡಳಿತಾರೂಢ ಅಧಿಕಾರವನ್ನು ಪ್ರಶ್ನಿಸುವುದೇ ಎಡಪಂಥ. ಪ್ರಶ್ನಿಸುವ ಹಕ್ಕೇ ಪ್ರಜಾಪ್ರಭುತ್ವದ ಜೀವಾಳವಾಗಿರುವಾಗ, ಎಡಪಂಥೀಯ ಚಿಂತನೆಗಳನ್ನು ‘ಅಪಾಯಕಾರಿ’ ಎಂದು ಬಿಂಬಿಸುವುದು ವಾಸ್ತವವಾಗಿ ಪ್ರಜಾಪ್ರಭುತ್ವವನ್ನೇ ನಾಶಮಾಡುವ ವ್ಯವಸ್ಥಿತ ಹುನ್ನಾರ” ಎಂಬ ಅಭಿಪ್ರಾಯ ಇತ್ತೀಚೆಗೆ ಹಾಸನ ನಗರದ ಶ್ರಮ ಕಚೇರಿಯಲ್ಲಿ ಆಯೋಜಿಸಿದ್ದ ‘ಎಡಪಂಥೀಯರು ಡೇಂಜರಸ್ಸಾ..? ಎಡಪಂಥೀಯರು ಯಾರು?’ ಎಂಬ ವಿಶೇಷ ಸಂವಾದ ಹಾಗೂ ಮಾತುಕತೆ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಸಾರ್ವಜನಿಕರಲ್ಲಿ ಎಡಪಂಥ ಮತ್ತು ಬಲಪಂಥದ ಬಗ್ಗೆ ಸ್ಪಷ್ಟತೆಯ ಕೊರತೆಯಿದೆ. ಕಮ್ಯುನಿಸ್ಟರು ಮಾತ್ರವೇ ಎಡಪಂಥೀಯರಲ್ಲ. ಕಮ್ಯುನಿಸ್ಟರು ಎಡಪಂಥೀಯರೇ ಆದರೂ, ಎಡಪಂಥ ಕೇವಲ ಕಮ್ಯುನಿಸಂಗೆ ಸೀಮಿತವಲ್ಲ. ಸಮಾಜವಾದಿಗಳು, ಪ್ರಜಾಪ್ರಭುತ್ವವಾದಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು, ಅಂಬೇಡ್ಕರ್ವಾದಿಗಳು, ಗಾಂಧಿವಾದಿಗಳು, ಪತ್ರಕರ್ತರು, ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ಬಡವರ ಪರ ಧ್ವನಿ ಎತ್ತುವವರು ಸೇರಿದಂತೆ ವ್ಯವಸ್ಥೆಯ ಲೋಪಗಳನ್ನು ಪ್ರಶ್ನಿಸುವ ಪ್ರತಿಯೊಬ್ಬರೂ ವಿಶಾಲ ಅರ್ಥದಲ್ಲಿ ಎಡಪಂಥೀಯ ಚೌಕಟ್ಟಿನಲ್ಲೇ ಬರುತ್ತಾರೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಭಾರತದ ಸ್ವಾತಂತ್ರ್ಯ ಹೋರಾಟ ಆರಂಭವಾಗಿದ್ದೇ ಬ್ರಿಟಿಷ್ ಸಾಮ್ರಾಜ್ಯಶಾಹಿ ಅಧಿಕಾರವನ್ನು ಪ್ರಶ್ನಿಸುವ ಪ್ರಜ್ಞೆಯಿಂದ. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ನೆಹರೂ, ಗಾಂಧೀಜಿ ಅವರ ಹೋರಾಟದ ಮೂಲದಲ್ಲಿದ್ದದ್ದು ಇದೇ ಪ್ರಶ್ನಿಸುವ ಗುಣ ಎಂದು ಸಭೆಯಲ್ಲಿ ಪ್ರತಿಪಾದಿಸಲಾಯಿತು. ಪ್ರಾಚೀನ ರೋಮ್ನಲ್ಲಿ ಗುಲಾಮಗಿರಿ ವಿರುದ್ಧ ಸಿಡಿದೆದ್ದ ಸ್ಪಾರ್ಟಕಸ್ನಿಂದ ಹಿಡಿದು ಬುದ್ಧ, ಜಾತಿ-ಮತ ಪದ್ಧತಿಯ ಶ್ರೇಣೀಕರಣವನ್ನು ಧಿಕ್ಕರಿಸಿದ ಬಸವಣ್ಣ ಹಾಗೂ ಧಾರ್ಮಿಕ ಮೌಢ್ಯ ಮತ್ತು ಬ್ರಾಹ್ಮಣ್ಯದ ಅನಿಷ್ಟಗಳನ್ನು ವಿರೋಧಿಸಿದ ಸ್ವಾಮಿ ವಿವೇಕಾನಂದರವರೆಗೆ, ಅಂದಿನ ಶೋಷಕ ವ್ಯವಸ್ಥೆಯನ್ನು ಪ್ರಶ್ನಿಸಿದವರನ್ನು ಎಡಪಂಥೀಯ ಧಾರೆಯೊಂದಿಗೆ ಗುರುತಿಸಲಾಯಿತು.
2014ರ ನಂತರ ದೇಶದಲ್ಲಿ ಅಪಾಯಕಾರಿ ಪ್ರವೃತ್ತಿಯೊಂದು ಶುರುವಾಗಿದೆ ಎಂದು ಸಭೆಯಲ್ಲಿ ಆರೋಪಿಸಲಾಯಿತು. ಜನಪರ ನಿಲುವು ತಳೆದು ಸರ್ಕಾರವನ್ನು ಪ್ರಶ್ನಿಸುವ ಸಾಹಿತಿಗಳು, ಪತ್ರಕರ್ತರು, ಯೂಟ್ಯೂಬರ್ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಧ್ವನಿ ಎತ್ತುವವರನ್ನು ‘ದಿಮಾಗಿ ನಕ್ಸಲರು’ ಅಥವಾ ‘ನಗರ ನಕ್ಸಲರು’ ಎಂದು ಕರೆಯುವ ಮೂಲಕ ದೇಶದ್ರೋಹದ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಆಕ್ಷೇಪಿಸಲಾಯಿತು.
ಬಲಪಂಥವೆಂಬುದು ಕೇವಲ ಆರ್ಎಸ್ಎಸ್ನಂತಹ ಸಂಘಟನೆಗಳಿಗೆ ಸೀಮಿತವಾದ ಧಾರ್ಮಿಕ ಪರಿಕಲ್ಪನೆಯಲ್ಲ; ಅದೊಂದು ಬಂಡವಾಳಶಾಹಿ ಆರ್ಥಿಕ ಸಿದ್ಧಾಂತವೂ ಹೌದು ಎಂದು ಸಭೆಯಲ್ಲಿ ಪ್ರತಿಪಾದಿಸಲಾಯಿತು. ಕಾರ್ಪೊರೇಟ್ ಪರ ನಿಲುವು, ಆಸ್ತಿ ಮತ್ತು ಅಧಿಕಾರವನ್ನು ರಕ್ಷಿಸಿಕೊಳ್ಳುವ ಶಕ್ತಿಗಳನ್ನು ಬಲಪಂಥೀಯ ವ್ಯವಸ್ಥೆಯ ಭಾಗವಾಗಿ ವಿವರಿಸಲಾಯಿತು. ಉದಾಹರಣೆಗೆ ಡೊನಾಲ್ಡ್ ಟ್ರಂಪ್ ಅವರ ನಿಲುವುಗಳು ಹಾಗೂ ಅದಾನಿ-ಅಂಬಾನಿ ಪರ ಆರ್ಥಿಕ ನೀತಿಗಳನ್ನು ಉಲ್ಲೇಖಿಸಲಾಯಿತು. ಆರ್ಎಸ್ಎಸ್ನಂತಹ ಮತೀಯ ಸಂಘಟನೆಗಳು ಅಧಿಕಾರ ಮತ್ತು ಬಂಡವಾಳದ ಜೊತೆ ಕೈಜೋಡಿಸುವುದರಿಂದ ಅವು ಬಲಪಂಥೀಯ ಆಡಳಿತವನ್ನು ಬೆಂಬಲಿಸುತ್ತವೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇದನ್ನೂ ಓದಿ : ಮೂರು ದಶಕಗಳಿಂದ ಸಂಕಷ್ಟದಲ್ಲಿರುವ ನೈಸ್ ಭೂ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರಗಳು ಪರಿಹರಿಸಿಲ್ಲ: ಡಾ. ಕೆ. ಪ್ರಕಾಶ್
ಜರ್ಮನಿಯಲ್ಲಿ ಹಿಟ್ಲರ್ ಅಧಿಕಾರಕ್ಕೆ ಬಂದ ತಕ್ಷಣ ಟ್ರೇಡ್ ಯೂನಿಯನ್ಗಳನ್ನು ಹತ್ತಿಕ್ಕಿದ ಘಟನೆಯನ್ನು ನೆನಪಿಸಿದ ಅವರು, ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯು ಪ್ರಜಾಪ್ರಭುತ್ವದ ನಾಶದ ಮುನ್ಸೂಚನೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇಂದಿನ ರಷ್ಯಾ ಕಮ್ಯುನಿಸ್ಟ್ ರಾಷ್ಟ್ರವಲ್ಲ; ಅದು ವ್ಲಾದಿಮಿರ್ ಪುಟಿನ್ ನೇತೃತ್ವದ ಬಲಪಂಥೀಯ-ಬಂಡವಾಳಶಾಹಿ ದೇಶ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಮಾಧ್ಯಮಗಳು ಬಿಂಬಿಸುವ ಅಂತರರಾಷ್ಟ್ರೀಯ ನಿರೂಪಣೆಗಳನ್ನು ಕುರುಡಾಗಿ ನಂಬಬಾರದು. 1984ರ ನಂತರ ಚೀನಾ ಯಾವುದೇ ದೇಶದ ಮೇಲೆ ಯುದ್ಧ ಸಾರಿಲ್ಲ, ವಿದೇಶಗಳಲ್ಲಿ ಮಿಲಿಟರಿ ನೆಲೆಗಳನ್ನು ಸ್ಥಾಪಿಸಿಲ್ಲ ಎಂದು ಹೇಳಲಾಯಿತು. ಆದರೆ, ಜಗತ್ತಿನಾದ್ಯಂತ ದೇಶಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿ, ಯುದ್ಧಗಳನ್ನು ಹುಟ್ಟುಹಾಕುವ ಅಮೆರಿಕವನ್ನು ‘ಮಹಾನ್ ಪ್ರಜಾಪ್ರಭುತ್ವ’ ಎಂದು ಕರೆಯುವ ದ್ವಂದ್ವ ನೀತಿಯನ್ನು ಪ್ರಶ್ನಿಸಬೇಕಿದೆ ಎಂದು ಪ್ರತಿಪಾದಿಸಲಾಯಿತು.
ಕಮ್ಯುನಿಸ್ಟ್ ಪಕ್ಷಗಳು ಹಿಂಸಾತ್ಮಕ ನಕ್ಸಲ್ ಮಾರ್ಗವನ್ನು ಎಂದಿಗೂ ಒಪ್ಪಿಲ್ಲ. ದೇಶದಲ್ಲಿ ನಕ್ಸಲರಿಂದ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರೂ ಹತ್ಯೆಗೀಡಾಗಿದ್ದಾರೆ. ಆದಾಗ್ಯೂ, ಮಾನವ ಹಕ್ಕುಗಳ ಉಲ್ಲಂಘನೆಯಾದಾಗಲೆಲ್ಲ ಕಮ್ಯುನಿಸ್ಟರು ನಿರ್ಭೀತಿಯಿಂದ ವಿರೋಧಿಸಿದ್ದಾರೆ ಎಂದು ಸಭೆಯಲ್ಲಿ ಹೇಳಲಾಯಿತು.
ಪರಿಸರವಾದವು ಕೇವಲ ಗಿಡ ನೆಡುವುದಕ್ಕೆ ಸೀಮಿತವಲ್ಲ; ಅದು ಬಂಡವಾಳಶಾಹಿ ವಿರೋಧಿ ರಾಜಕೀಯವೂ ಹೌದು. ಪರಿಸರ ಉಳಿಯಬೇಕಾದರೆ ಪ್ರಕೃತಿಯನ್ನು ಲೂಟಿ ಮಾಡುವ ಬಂಡವಾಳಶಾಹಿ ನೀತಿಗಳು ನಾಶವಾಗಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. ಅಂಡಮಾನ್-ನಿಕೋಬಾರ್ನಂತಹ ಸೂಕ್ಷ್ಮ ದ್ವೀಪ ಸಮೂಹಗಳನ್ನು ಅದಾನಿಯಂತಹ ಕಾರ್ಪೊರೇಟ್ಗಳ ರೆಸಾರ್ಟ್ ಮತ್ತು ವಾಣಿಜ್ಯ ಲಾಭಕ್ಕಾಗಿ ನಾಶಮಾಡಲು ಹೊರಟಿರುವ ಸರ್ಕಾರದ ನೀತಿಗಳನ್ನು ವಿರೋಧಿಸುವುದು ಪರಿಸರ ರಾಜಕೀಯದ ಭಾಗವಾಗಬೇಕು ಎಂದು ಹೇಳಲಾಯಿತು.
ಜಾತಿ ಪದ್ಧತಿಯನ್ನು ಪ್ರಶ್ನಿಸಿದ ದಲಿತ ಸಂಘರ್ಷ ಸಮಿತಿಗಳು, ರೈತ-ಕಾರ್ಮಿಕ ಚಳವಳಿಗಳು ಮತ್ತು ಮಹಿಳಾ ಪರ ಹೋರಾಟಗಳೇ ಎಡಪಂಥದ ನೈಜ ಪ್ರತೀಕ. ಇಂದಿನ ‘ಜನ್ಝಿ’ (ಯುವಪೀಳಿಗೆ) ನಡೆಸುತ್ತಿರುವ ಸರ್ವಾಧಿಕಾರ ವಿರೋಧಿ ಆಂದೋಲನಗಳು ಸಹ ವಿಶಾಲ ಅರ್ಥದಲ್ಲಿ ಎಡಪಂಥೀಯ ಮತ್ತು ಮಾನವಪರ ಹೋರಾಟಗಳೇ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಇತ್ತೀಚೆಗೆ ನಗರದ ಕಾಲೇಜು ಕಾರ್ಯಕ್ರಮವೊಂದರಲ್ಲಿ ಜನಸಂಖ್ಯಾ ಸಮಸ್ಯೆಯ ನೆಪವೊಡ್ಡಿ ಎಡಪಂಥೀಯರನ್ನು ‘ಮೋಸ್ಟ್ ಡೇಂಜರಸ್’ ಎಂದು ಕರೆದಿದ್ದ ನಿಶ್ಚಲಾನಂದ ಸ್ವಾಮೀಜಿ (ಡಾ. ಎಚ್.ಎಲ್. ನಾಗರಾಜ್) ಅವರ ಹೇಳಿಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು. ಸಾರ್ವಜನಿಕವಾಗಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿ, ಖಾಸಗಿಯಾಗಿ ವಿಷಾದ ವ್ಯಕ್ತಪಡಿಸುವುದರಿಂದ ಪ್ರಯೋಜನವಿಲ್ಲ. ಸಾರ್ವಜನಿಕವಾಗಿಯೇ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಲಾಯಿತು. ಅಲ್ಲದೆ, ಕುವೆಂಪು ಅವರು ಅಂದು ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ನೀಡಿದ ‘ಅನಿಕೇತನ’ದ ವಿಶ್ವಮಾನವ ಸಂದೇಶವನ್ನು ಇಂದಿನ ಮಠಾಧೀಶರು ನೆನಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದವರ ನಿಲುವುಗಳನ್ನು ಸಭೆಯು ಖಂಡಿಸಿತು.
“ಎಡಪಂಥವೆಂದರೆ ಶೋಷಿತರ, ಅಸ್ಪೃಶ್ಯರ, ಮಹಿಳೆಯರ, ಬಡವರ, ಪರಿಸರದ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಜೀವಪರವಾದ ಧ್ವನಿ. ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳು ಉಳಿಯಬೇಕಾದರೆ ಎಡಪಂಥೀಯ ಪ್ರಜ್ಞೆ ಸಮಾಜದಲ್ಲಿ ಜೀವಂತವಾಗಿರಲೇಬೇಕು” ಎಂದು ಸಭೆ ಅಭಿಪ್ರಾಯಪಟ್ಟಿತು.
ಈ ಸಂವಾದ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಆರ್.ಪಿ. ವೆಂಕಟೇಶ್ ಮೂರ್ತಿ, ವೆಂಕಟೇಶ್, ಕಲಾವಿದರಾದ ದೇಸಾಯಿ, ಸಾಹಿತಿಗಳಾದ ಹರೀಶ್ ಕಟ್ಟೆಬಳಗುಲಿ, ಚಿಂತಕರಾದ ಚಲಂ ಹಾಡ್ಲಳ್ಳಿ, ದಲಿತ ಮುಖಂಡರಾದ ಟಿ.ಆರ್. ವಿಜಯ್ ಕುಮಾರ್, ಬರಹಗಾರರಾದ ಅಹ್ಮದ್, ರಾಜ್ಕುಮಾರ್, ಕಾರ್ಮಿಕ ಮುಖಂಡರಾದ ಪುಷ್ಪ, ಅರವಿಂದ, ವಿದ್ಯಾರ್ಥಿ ಮುಖಂಡರಾದ ರಮೇಶ್ ಸೇರಿದಂತೆ ಹಲವು ಪ್ರಮುಖ ಚಿಂತಕರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಆರಂಭದಲ್ಲಿ ಪೃಥ್ವಿ ಎಂ.ಜಿ. ಎಲ್ಲರನ್ನು ಸ್ವಾಗತಿಸಿದರು. ಎಚ್.ಆರ್. ನವೀನ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮೇಶ್ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ
