ಗ್ರಾಮೀಣ ಉದ್ಯೋಗ ಖಾತ್ರಿ : ಸರಕಾರ ಜನರಿಂದ ಕಸಿದುಕೊಂಡ ಒಂದು ಹಕ್ಕು- ಪ್ರೊ. ಪ್ರಭಾತ್‌ ಪಟ್ನಾಯಕ್‌

ವಿಬಿಜಿರಾಮ್‌ಜಿ ಜಾರಿಗೆ ಬಂದ ನಂತರದ ಮೊದಲ ತಿಂಗಳ, ಅಂದರೆ ಜುಲೈ 2026ರಲ್ಲಿ ಸೃಷ್ಟಿಯಾದ ಉದ್ಯೋಗದ ಅಂಕಿಅಂಶಗಳ ಪ್ರಕಾರ, ಜುಲೈ 2025 ಮತ್ತು ಜುಲೈ 2026ರ ನಡುವೆ ಸೃಷ್ಟಿಯಾದ ಉದ್ಯೋಗಗಳಲ್ಲಿ ಶೇ. 50 ರಷ್ಟು ಕುಸಿತ ಕಂಡುಬಂದಿದೆ. ಕೆಲಸ ಲಭ್ಯವಾದ ಕುಟುಂಬಗಳ ಸಂಖ್ಯೆಯು ಶೇ. 51.45ರಷ್ಟು ಕುಸಿದಿದೆ. ದೇಶದ ಹೆಚ್ಚಿನ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಸರಳ ಸಂಗತಿಯನ್ನು ಸ್ಪಷ್ಟವಾಗಿ ಕಾಣಬಹುದು. ಮನರೆಗ ಯೋಜನೆಯ ಬದಲಿಗೆ  ವಿಬಿಜಿರಾಮ್‌ಜಿ ಯನ್ನು ತಂದಿರುವ ಕ್ರಮವು ಉದ್ಯೋಗದ ಹಕ್ಕನ್ನು ಜನರಿಂದ ಎಗರಿಸಿದೆ ಮಾತ್ರವಲ್ಲ, ಅದು ಉದ್ಯೋಗ ಸೃಷ್ಟಿಯ ಭಾರೀ ಇಳಿಕೆಗೂ ಕಾರಣವಾಗಿದೆ. ಗ್ರಾಮೀಣ ಭಾರತದಲ್ಲಿ ಕೌಶಲ್ಯರಹಿತ ಉದ್ಯೋಗವನ್ನು ಒದಗಿಸುವುದೂ ಸಹ ಒಂದು ಅಸಾಧಾರಣ ದಾಳಿಗೆ ಒಳಗಾಗಿದೆ.ಆದರೂ, ನವ-ಉದಾರವಾದದ ಆರ್ಥಿಕ ತರ್ಕ ಹೇಗಿದೆ ಎಂದರೆ, ತೀವ್ರಗೊಂಡಿರುವ ನಿರುದ್ಯೋಗದ ಸಾಮಾಜಿಕ ಬಿಕ್ಕಟ್ಟೂ ಸಹ, ಆಳುವವರ ಅಚ್ಚುಮೆಚ್ಚಿನ ಬಂಡವಾಳಗಾರ ಬಂಟರಿಗೆ ಬೃಹತ್‌ ವರ್ಗಾವಣೆಗಳನ್ನು ಮಾಡುವ ಒಂದು ಸಂದರ್ಭವೇ ಆಗುತ್ತದೆ. ನಿರುದ್ಯೋಗ ನಿವಾರಣೆಯನ್ನು ಗಂಭೀರವಾಗಿ ಬಯಸುವ ಎಲ್ಲರೂ, ನವ-ಉದಾರವಾದಿ ವಿಚಾರಗಳ ಪ್ರಾಬಲ್ಯದಿಂದ ಪಾರಾಗಬೇಕು.
ಅನು:ಕೆ.ಎಂ.ನಾಗರಾಜ್

ಆಗಸ್ಟ್ 23, 2005 ರಂದು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಬಹುಶಃ ಅತ್ಯಂತ ಪರಿಣಾಮಕಾರಿಯಾದ ಒಂದು ಶಾಸನವನ್ನು ಸಂಸತ್ತು ಅಂಗೀಕರಿಸಿತು ಮತ್ತು ಅದು ಫೆಬ್ರವರಿ 2, 2006 ರಂದು ಜಾರಿಗೆ ಬಂದಿತು. ಇದುವೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ. ಇದನ್ನು ಆನಂತರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಎಂದು ಮರುನಾಮಕರಣ ಮಾಡಲಾಯಿತು. ಈ ಕಾಯ್ದೆಯನ್ನು ಯುಪಿಎ-1 ಸರ್ಕಾರವು ಎಡ ಪಕ್ಷಗಳ ಒತ್ತಡದ (ಸರ್ಕಾರವು ಎಡ ಪಕ್ಷಗಳ ಬೆಂಬಲವನ್ನು ಅವಲಂಬಿಸಿದ್ದರಿಂದ) ಮೇರೆಗೆ ಜಾರಿಗೆ ತಂದಿತು. ಈ ಕಾಯ್ದೆಯು ಕೆಲಸಕ್ಕಾಗಿ-ಆಹಾರ ಕಾರ್ಯಕ್ರಮದಂತಹ ಈ ಹಿಂದಿನ ಇಂತಹ ಎಲ್ಲ ಶಾಸನಗಳಿಗಿಂತಲೂ ಒಂದು ನಿರ್ಣಾಯಕವಾದ ವಿಷಯದಲ್ಲಿ ಭಿನ್ನವಾಗಿತ್ತು: ಗ್ರಾಮೀಣ ಭಾರತದಲ್ಲಿ ಬೇಡಿಕೆ ಇದ್ದಾಗಲೆಲ್ಲಾ ಉದ್ಯೋಗವನ್ನು ಸರ್ಕಾರ ಒದಗಿಸುವುದನ್ನು ಮತ್ತು ಉದ್ಯೋಗ ಒದಗಿಸುವಲ್ಲಿ ಸರ್ಕಾರವು ಒಂದು ವೇಳೆ ವಿಫಲವಾದಲ್ಲಿ ಉದ್ಯೋಗ ಕೋರಿದ ಅರ್ಜಿದಾರರಿಗೆ ಪರಿಹಾರ ಪಾವತಿಸುವುದನ್ನು ಈ ಕಾಯ್ದೆ ಕಡ್ಡಾಯಗೊಳಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಕಾಯ್ದೆಯು ಉದ್ಯೋಗದ ಹಕ್ಕನ್ನು ಜನರಿಗೆ ನೀಡಿತು.

ಕುಟುಂಬದ ಒಬ್ಬ ಸದಸ್ಯ ಮಾತ್ರ ವಾರ್ಷಿಕ ಗರಿಷ್ಠ 100 ದಿನಗಳವರೆಗಿನ ಉದ್ಯೋಗವನ್ನು ಕೇಳಬಹುದು ಎಂಬುದು ನಿಜ. ಆದರೂ, ಈ ಒಂದು ಸೀಮಿತವಾದ ಹಕ್ಕು ಸಹ, ಮೂಲಭೂತವಾಗಿ ಒಂದು ಹೊಸ ಮಾರ್ಗವನ್ನು ಅನ್ವೇಷಿಸಿತು. ಭಾರತದ ಸಂವಿಧಾನವು ಖಾತ್ರಿಪಡಿಸಿದ ನಾಗರಿಕ ಮತ್ತು ರಾಜಕೀಯ ಹಕ್ಕುಗಳಿಗೆ ಸರಿಸಮನಾದ ಯಾವುದೇ ಆರ್ಥಿಕ ಹಕ್ಕುಗಳನ್ನು ಪೌರರಿಗೆ ಅದು ನೀಡಿಲ್ಲ. ಈ ಲೋಪವನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯು ಭಾಗಶಃ ಸರಿಪಡಿಸಿತು. ಅದು ಗ್ರಾಮೀಣ ವರಮಾನಗಳನ್ನು ಹೆಚ್ಚಿಸಿತು ಮಾತ್ರವಲ್ಲ, ಉದ್ಯೋಗ ಒದಗಿಸುವುದನ್ನು ಸರ್ಕಾರದ ವಿವೇಚನೆಗೆ ಬಿಡದ ಕಾರಣ, ಉದ್ಯೋಗದ ಹಕ್ಕನ್ನು ಮತ್ತು ಅದರಿಂದ ಪೌರತ್ವದ ಘನತೆಯನ್ನು ಜನರಿಗೆ ನೀಡಿತು.

ಉದ್ಯೋಗ ಖಾತ್ರಿ ಯೋಜನೆ ಎಂದು ಕರೆಯಲ್ಪಡುವ ಈ ಕಾರ್ಯಕ್ರಮವು ಎಲ್ಲ ಪಟ್ಟಭದ್ರ ಹಿತಾಸಕ್ತಿಗಳ ಕೋಪವನ್ನು ಕೆರಳಿಸಿತು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಊಳಿಗಮಾನ್ಯ ವ್ಯವಸ್ಥೆಯ ಪಾಲಕರು, ಗ್ರಾಮೀಣ ಬಡವರ ವರಮಾನಗಳನ್ನು ಇದು ಹೆಚ್ಚಿಸುತ್ತದೆ ಎಂಬ ಕಾರಣಕ್ಕಾಗಿಯಷ್ಟೇ ಅಲ್ಲ, ಗ್ರಾಮೀಣ ಬಡವರಲ್ಲಿ ಬಹುಪಾಲು ದಲಿತರೇ ಅಗಿದ್ದು, ಅವರೆಲ್ಲ “ಅಪ್ಪಣೆ, ಸ್ವಾಮಿ” ಎಂಬ ಆಜ್ಞಾನುವರ್ತಿ ಸಂಬಂಧದಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಕಾರಣಕ್ಕೂ ಕೋಪಗೊಂಡರು. ಉದ್ಯೋಗ ಖಾತ್ರಿ ಯೋಜನೆಯಿಂದ ಶ್ರಮ ಮೀಸಲುಗಳ ಗಾತ್ರ ಸಾಪೇಕ್ಷವಾಗಿ ಇಳಿದ್ದರಿಂದಾಗಿ ಕಾರ್ಮಿಕರ ಚೌಕಾಶಿ ಶಕ್ತಿಯನ್ನು ಹೆಚ್ಚಿಸಿತು. ಇದರಿಂದ ಬಂಡವಾಳಶಾಹಿ ವ್ಯವಸ್ಥೆಯ ಪಾಲಕರು ಸಹ  ಕೋಪಾವಿಷ್ಟರಾದರು. ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಸರಕಾರ ಮಾಡುವ ವೆಚ್ಚ ಹಣದ ಪೋಲಷ್ಟೇ, ಬೇರೇನೂ ಅಲ್ಲ ಎಂಬ ವಾದವನ್ನು ಮುಂದಿಡುವಂತೆ ತಮ್ಮ “ಮಡಿಲ ಕುನ್ನಿ ಅರ್ಥಶಾಸ್ತ್ರಜ್ಞ”ರನ್ನು ಪ್ರಚೋದಿಸಿದರು.

ಇವರೆಲ್ಲರಿಗೂ ಈ ಉದ್ಯೋಗ ಖಾತ್ರಿ ಯೋಜನೆಯನ್ನು ಮೂಲೆಗೆ ತಳ್ಳುವ ಅವಕಾಶ 2014ರಲ್ಲಿ ಒಂದು ಪರಮ-ಪ್ರತಿಗಾಮಿ ಸರ್ಕಾರವು ಆಯ್ಕೆಯಾದಾಗ ಮತ್ತು ನರೇಂದ್ರ ಮೋದಿ ಪ್ರಧಾನಿಯಾದಾಗ ಒದಗಿ ಬಂತು.

ಜನರಿಗೆ ಅಗತ್ಯವಿದ್ದಾಗಲ್ಲ ಸರಕಾರಕ್ಕೆ ಅಗತ್ಯವಿದ್ದಾಗಷ್ಟೇ

ಕೋಮುವಾದಿ-ಫ್ಯಾಸಿಸ್ಟ್ ಕಡಾಯಿ ಕುದಿಯುತ್ತಲೇ ಇರುವಂತೆ ನೋಡಿಕೊಳ್ಳುವುದು ಹೊಸ ಸರ್ಕಾರದ ಪ್ರಧಾನ ಆದ್ಯತೆಯಾಗಿದ್ದುದರಿಂದ, ಅದು ತಕ್ಷಣವೇ ಆ “ಕಾರ್ಯಭಾರ”ದಲ್ಲಿ ಮುಳುಗಿತು. ಹಾಗಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ಸ್ವಲ್ಪ ತಡವಾಗಿ “ನಿಭಾಯಿಸಿತು”. ದರೆ ಕೊನೆಗೂ ಅದನ್ನು ಮಾಡದೇ ಬಿಡಲಿಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಮಟ್ಟ ಹಾಕುವ ಉದ್ದೇಶದಿಂದಲೇ ಮೋದಿ ಸರ್ಕಾರವು 2025 ರಲ್ಲಿ ಒಂದು ಹೊಸ ಕಾಯ್ದೆಯನ್ನು ನಿರೂಪಿಸಿತು. ಈ ಕಾಯ್ದೆಯ ಪ್ರಕಾರ,  ಜುಲೈ 1, 2026 ರಿಂದ ಒಂದು ಹೊಸ ಕಾರ್ಯಕ್ರಮವು ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ ಜಾರಿಗೆ ಬರುತ್ತದೆ ಮತ್ತು ಅದು ಒಂದು ಹಕ್ಕು-ಆಧಾರಿತ ಕಾರ್ಯಕ್ರಮವಲ್ಲ ಎಂಬುದೇ ಅದರ ಪ್ರಾಥಮಿಕ ಲಕ್ಷಣವಾಗಿರುತ್ತದೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಒದಗಿಸುತ್ತಿದ್ದ 100 ದಿನಗಳ ಉದ್ಯೋಗದ ಬದಲಿಗೆ, ಹೊಸ ವಿಬಿಜಿರಾಮ್‌ಜಿ ಕಾರ್ಯಕ್ರಮವು 125 ದಿನಗಳ ಉದ್ಯೋಗ ಒದಗಿಸುವ ಸೋಗು ಹಾಕುತ್ತದೆ. ಹಿಂದಿನದಕ್ಕಿಂತಲೂ ಹೆಚ್ಚು ಉದ್ಯೋಗವನ್ನು ಒದಗಿಸುತ್ತದೆ ಎಂದು ಈ ಹೊಸ ಕಾರ್ಯಕ್ರಮವನ್ನು ಪ್ರಚಾರ ಮಾಡಲಾಯಿತು. ಆದರೆ, ಅದು ಒಂದು ಬೇಡಿಕೆ-ಚಾಲಿತ ಕಾರ್ಯಕ್ರಮವೇ ಅಲ್ಲ.

ಹಿಂದಿನ ಯೋಜನೆಯ ಪ್ರಕಾರ, ಜನರು ಎಲ್ಲೆಲ್ಲಿ ಮತ್ತು ಯಾವಾಗ ಕೆಲಸ ಕೇಳುತ್ತಾರೋ ಅಲ್ಲಲ್ಲಿ 100 ದಿನಗಳ ಉದ್ಯೋಗವನ್ನು ಒದಗಿಸಬೇಕಾಗಿತ್ತು. ಈಗಿನ ಯೋಜನೆಯ ಪ್ರಕಾರ, ಅಂತಹ ಉದ್ಯೋಗವನ್ನು ಕೇಂದ್ರ ಸರ್ಕಾರವು ಆಯ್ಕೆ ಮಾಡಿಕೊಂಡಲ್ಲಿ ಮತ್ತು ಅದು ಬಯಸಿದರೆ 125 ದಿನಗಳ ಉದ್ಯೋಗವನ್ನು ಒದಗಿಸಬಹುದು. ಇದರ ಅರ್ಥವೆಂದರೆ, ನಿರುದ್ಯೋಗದಿಂದ ಜನರು ತೀವ್ರವಾಗಿ ಬಳಲುತ್ತಿರುವ ಮತ್ತು ಕೆಲಸದ ಅಗತ್ಯವು ತೀವ್ರವಾಗಿರುವ ಪ್ರದೇಶಗಳಲ್ಲಿ ಉದ್ಯೋಗವನ್ನು ಒದಗಿಸಬೇಕಾಗಿಲ್ಲ ಎಂಬುದು. ಈ ಹೊಸ ಯೋಜನೆಯ ಪ್ರಕಾರ, ಕೇಂದ್ರ ಸರ್ಕಾರವು ಕಾರ್ಯಗತಗೊಳಿಸುತ್ತಿರುವ ಕೆಲವು ಯೋಜನೆಗಳಲ್ಲಿ ಕಾರ್ಮಿಕರ ಅಗತ್ಯವಿರುವಾಗ ಮಾತ್ರ ಉದ್ಯೋಗವನ್ನು ಒದಗಿಸಲಾಗುವುದು.

ಈ ಹೊಸ ಯೋಜನೆಯ ಪ್ರಕಾರ, ನಿರುದ್ಯೋಗದಿಂದ ಜನರು ತೀವ್ರವಾಗಿ ಬಳಲುತ್ತಿರುವ ಮತ್ತು ಕೆಲಸದ ಅಗತ್ಯವು ತೀವ್ರವಾಗಿರುವ ಪ್ರದೇಶಗಳಲ್ಲಿ ಉದ್ಯೋಗವನ್ನು ಒದಗಿಸಬೇಕಾಗಿಲ್ಲ ಕೇಂದ್ರ ಸರ್ಕಾರವು ಕಾರ್ಯಗತಗೊಳಿಸುತ್ತಿರುವ ಕೆಲವು ಯೋಜನೆಗಳಲ್ಲಿ ಕಾರ್ಮಿಕರ ಅಗತ್ಯವಿರುವಾಗ ಮಾತ್ರ ಉದ್ಯೋಗವನ್ನು ಒದಗಿಸಲಾಗುವುದು.

ಜನರಿಗೆ ನೀಡಿದ್ದ ಉದ್ಯೋಗದ ಹಕ್ಕನ್ನು ಈ ಹೊಸ ಯೋಜನೆಯ ಮೂಲಕ ಎಗರಿಸಿದ ಹೊತ್ತಿನಲ್ಲೇ, ಕೇಂದ್ರ ಸರ್ಕಾರವು ಪೂರಾ ಏಕಪಕ್ಷೀಯವಾಗಿ, ಹೊಸ ಉದ್ಯೋಗ ಕಾರ್ಯಕ್ರಮದ ಹಣಕಾಸು ಮಾದರಿಯನ್ನು ಕೂಡ ಬದಲಾಯಿಸಿದೆ. ಹಿಂದಿನ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೂಲಿಯ ಇಡೀ ಹೊರೆಯನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ರಾಜ್ಯ ಸರ್ಕಾರಗಳು ಸಾಮಗ್ರಿ-ಸಲಕರಣೆಗಳ ವೆಚ್ಚದ ಒಂದು ಭಾಗವನ್ನು (ಶೇ. 25 ರಷ್ಟನ್ನು) ಮಾತ್ರ ಭರಿಸುತ್ತಿದ್ದವು. ಹಾಗಾಗಿ, ಕೇಂದ್ರ ಮತ್ತು ರಾಜ್ಯಗಳ ನಡುವೆ ಯೋಜನೆಯ ವೆಚ್ಚದ ಹಂಚಿಕೆಯು ಸರಿಸುಮಾರು 90:10 ಅನುಪಾತದಲ್ಲಿತ್ತು. ಈಗ, ವಿಬಿಜಿರಾಮ್‌ಜಿ ಅಡಿಯಲ್ಲಿ, ಈ ಹಂಚಿಕೆಯು 60:40 ಅನುಪಾತದಲ್ಲಿದೆ ಮತ್ತು ಈ ಬದಲಾವಣೆಯನ್ನು ರಾಜ್ಯಗಳ ಸರ್ಕಾರಗಳೊಂದಿಗೆ ಹೆಸರಿಗಾದರೂ ಒಂದು ಸಮಾಲೋಚನೆಯನ್ನೂ ಮಾಡದೆ ಜಾರಿಗೊಳಿಸಲಾಗಿದೆ. ದೇಶದಲ್ಲಿ ರಾಜ್ಯ ಸರ್ಕಾರಗಳ ಹಣಕಾಸಿನ ಪರಿಸ್ಥಿತಿ ಶೋಚನೀಯವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ (ಇಲ್ಲದಿದ್ದರೆ ರಾಜ್ಯಗಳಿಗೆ ಕೇಂದ್ರದಿಂದ ಸಲ್ಲುವ ಸಂಪನ್ಮೂಲಗಳ ವಿಕೇಂದ್ರೀಕರಣದ ಬಗ್ಗೆ ನಿರ್ಧರಿಸಲು ಪ್ರತಿ ಐದು ವರ್ಷಗಳಿಗೊಮ್ಮೆ ಹಣಕಾಸು ಆಯೋಗವನ್ನು ನಿಯೋಜಿಸುವ ಅಗತ್ಯವೇ ಇರುವುದಿಲ್ಲ). ಗ್ರಾಮೀಣ ಉದ್ಯೋಗದ ಮೇಲಿನ ಖರ್ಚಿನ ಗಣನೀಯ ಭಾಗವನ್ನು ರಾಜ್ಯ ಸರ್ಕಾರಗಳ ಹೆಗಲಿಗೆ ಸುಲಭವಾಗಿ ವರ್ಗಾಯಿಸುವ ಮೂಲಕ, ವಿಬಿಜಿರಾಮ್‌ಜಿ ಕಾಯ್ದೆ ಈ ಕಾರ್ಯಕ್ರಮದ ಗಾತ್ರವನ್ನು ಕಡಿತಗೊಳಿಸುವ ಅವಕಾಶವನ್ನು ಕೂಡ ಕಲ್ಪಿಸಿದೆ. ಅದಕ್ಕಿಂತಲೂ ಮಿಗಿಲಾಗಿ, ಮೊಸರನ್ನ ತಿಂದ ಕೋತಿ ಮೇಕೆ ಬಾಯಿಗೆ ಒರಸಿದಂತೆ, ಈ ಕಡಿತದ ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸುವ ಅನುಕೂಲವನ್ನೂ ಕೇಂದ್ರ ಸರಕಾರ ಈಗ ಪಡೆದಿದೆ.

ಇದನ್ನೂ ಓದಿ : ನೇಪಾಳದ ಭೂಸುನಾಮಿ: ಬಗೆದಷ್ಟೂ ಕೆಸರು! | ನಾಗೇಶ ಹೆಗಡೆ

ಕೇಂದ್ರ ಸರ್ಕಾರದ ಒಂದು ಪಿತೂರಿ

ವಿಷಯವನ್ನು ಇನ್ನೊಂದು ರೀತಿಯಲ್ಲಿ ನೋಡುವುದಾದರೆ,  ಉದ್ಯೋಗವನ್ನು ಇನ್ನು ಮುಂದೆ ಜನರಿಗೆ ಬಹಳವಾಗಿ ಅಗತ್ಯವಿರುವ ಕಡೆಯಲ್ಲಿ ಒದಗಿಸಲಾಗುವುದಿಲ್ಲ, ಬದಲಿಗೆ ಕೇಂದ್ರವು ಆಯ್ಕೆ ಮಾಡಿದ ಸ್ಥಳದಲ್ಲಿ ಅಂದರೆ ಕೇಂದ್ರ ಸರ್ಕಾರವು ಕೈಗೊಂಡ ಯೋಜನೆಗಳಲ್ಲಿ ಒದಗಿಸಲಾಗುವುದು. ವಿಬಿಜಿರಾಮ್‌ಜಿ ಯೋಜನೆಯ ವೆಚ್ಚದ ಶೇ. 40 ರಷ್ಟನ್ನು ರಾಜ್ಯ ಸರ್ಕಾರಗಳು ಭರಿಸಬೇಕಾಗಿರುವುದರಿಂದ, ಉಂಡೂ ಹೋದ ಕೊಂಡೂ ಹೋದ ಎಂಬಂತೆ, ಕೇಂದ್ರವು ವಾಸ್ತವವಾಗಿ ತನ್ನ ಕೆಲವು ಯೋಜನೆಗಳ ಆರ್ಥಿಕ ಹೊರೆಯನ್ನು ರಾಜ್ಯ ಸರ್ಕಾರಗಳು ಹೊರುವಂತೆ ಮಾಡುತ್ತದೆ. ಈ ರೀತಿಯಲ್ಲಿ, ವಿಬಿಜಿರಾಮ್‌ಜಿ ಯೋಜನೆಯು, ಉದ್ಯೋಗದ ಹಕ್ಕನ್ನು ಜನರಿಂದ ಎಗರಿಸುವ, ಉದ್ಯೋಗದ ಮೇಲಿನ ಒಟ್ಟಾರೆ ವೆಚ್ಚವನ್ನು ತಗ್ಗಿಸುವ, ತನ್ನ ಕೆಲವು ಯೋಜನೆಗಳಿಗೆ ಸುಲಭವಾಗಿ ಹಣ ಒದಗಿಸಿಕೊಳ್ಳುವ ಮತ್ತು ಹೊರೆಯನ್ನು ರಾಜ್ಯ ಸರ್ಕಾರಗಳ ಹೆಗಲ ಮೇಲೆ ಹೊರಿಸುವ, ಕೇಂದ್ರ ಸರ್ಕಾರದ ಒಂದು ಪಿತೂರಿಯಾಗುತ್ತದೆ. ಉದ್ಯೋಗ ಒದಗಿಸುವ ಕಾರ್ಯಕ್ರಮದ ಗಾತ್ರವನ್ನು ಇಳಿಕೆ ಮಾಡಲಾಗುತ್ತಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ಗೋಚರಿಸುತ್ತದೆಯಾದರೂ ಅದನ್ನು ಕೇಂದ್ರ ಸರ್ಕಾರವು ಪಟ್ಟುಬಿಡದೆ ನಿರಾಕರಿಸುತ್ತಿದೆ. ಹಾಗೆ ನೋಡಿದರೆ, ಉದ್ಯೋಗದ ಹಕ್ಕನ್ನು ಜನರಿಂದ ಎಗರಿಸಿದ ತಕ್ಷಣದ ಕಾರಣವೆಂದರೆ, ಕಾರ್ಯಕ್ರಮದ ಉದ್ದೇಶವನ್ನು ಮತ್ತು ವ್ಯಾಪ್ತಿಯನ್ನು ಮೊಟಕುಗೊಳಿಸುವುದೇ ಆಗಿದೆ.

ವಿಬಿಜಿರಾಮ್‌ಜಿ ಜಾರಿಗೆ ಬಂದ ನಂತರದ ಮೊದಲ ತಿಂಗಳ, ಅಂದರೆ ಜುಲೈ 2026ರಲ್ಲಿ ಸೃಷ್ಟಿಯಾದ ಉದ್ಯೋಗದ ಅಂಕಿಅಂಶಗಳು ಈಗ ಲಭ್ಯ ಇವೆ. ಜುಲೈ 2025 ಮತ್ತು ಜುಲೈ 2026ರ ನಡುವೆ ಸೃಷ್ಟಿಯಾದ ಉದ್ಯೋಗಗಳಲ್ಲಿ ಶೇ. 50 ರಷ್ಟು ಕುಸಿತ ಕಂಡುಬಂದಿದೆ. ಜುಲೈ 2025ರಲ್ಲಿ 153.3 ಮಿಲಿಯನ್ ವ್ಯಕ್ತಿ-ದಿನಗಳಿದ್ದದ್ದು, ಜುಲೈ 2026ರಲ್ಲಿ 76.7 ಮಿಲಿಯನ್ ವ್ಯಕ್ತಿ-ದಿನಗಳಿಗೆ ಕುಸಿದಿದೆ. ಈ ಎರಡು ದಿನಾಂಕಗಳ ನಡುವೆ ಕೆಲಸ ಲಭ್ಯವಾದ ಕುಟುಂಬಗಳ ಸಂಖ್ಯೆಯು 6.894 ಮಿಲಿಯನ್‌ಗೆ ಇಳಿದಿದೆ, ಅಂದರೆ ಇನ್ನೂ ಹೆಚ್ಚಿನ ಅನುಪಾತದಲ್ಲಿ, ಶೇ. 51.45ರಷ್ಟು ಕುಸಿದಿದೆ.

ನಾವು ಒಂದು ವರ್ಷದ ಜುಲೈ ತಿಂಗಳಿನ ಅಂಕಿ-ಸಂಖ್ಯೆಗಳನ್ನು ಮತ್ತೊಂದು ವರ್ಷದ ಜುಲೈ ತಿಂಗಳಿನ ಅಂಕಿ-ಸಂಖ್ಯೆಗಳೊಂದಿಗೆ ಹೋಲಿಕೆ ಮಾಡುತ್ತಿರುವುದರಿಂದ, ದೇಶದ ಹೆಚ್ಚಿನ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗುತ್ತಿದೆ ಎಂಬ ಸರಳ ಸಂಗತಿಯನ್ನು ಸ್ಪಷ್ಟವಾಗಿ ಕಾಣಬಹುದು. ಈ ಕುಸಿತವನ್ನು ಸರ್ಕಾರದ ಕಡೆಯಿಂದ ಬಳಸುವ ಯಾವುದೇ ಮಿಥ್ಯೆಯಿಂದ ವಿವರಿಸುವುದು ಸಾಧ್ಯವಿಲ್ಲ. ಕೆಲವು ವಿಶೇಷ ಕಾರಣಗಳಿಂದಾಗಿ ಈ ವರ್ಷ ಉದ್ಯೋಗದ ಮೇಲಿನ ಬೇಡಿಕೆ ಇಳಿಕೆಯಾಗಿದೆ ಎಂಬಂತಹ ವಿವರಣೆಗಳಂತೂ ಬಿದ್ದುಹೋಗುತ್ತವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಿಗೆ  ವಿಬಿಜಿರಾಮ್‌ಜಿ ಯನ್ನು ತಂದಿರುವ ಕ್ರಮವು ಉದ್ಯೋಗದ ಹಕ್ಕನ್ನು ಜನರಿಂದ ಎಗರಿಸಿದೆ ಎಂಬುದು ಮಾತ್ರವಲ್ಲ; ಅದು ಉದ್ಯೋಗ ಸೃಷ್ಟಿಯ ಭಾರೀ ಇಳಿಕೆಗೂ ಕಾರಣವಾಗಿದೆ. ನಿರುದ್ಯೋಗವು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ, ಶಿಕ್ಷಿತರ ನಿರುದ್ಯೋಗದ ಮೇಲಿನ ಕೋಪವು ಜಂತರ್ ಮಂತರ್‌ನಂತಹ ಬೃಹತ್‌ ಪ್ರತಿಭಟನೆಗಳತ್ತ ತಿರುಗಿರುವ ಸಮಯದಲ್ಲಿ, ಗ್ರಾಮೀಣ ಭಾರತದಲ್ಲಿ ಕೌಶಲ್ಯರಹಿತ ಉದ್ಯೋಗವನ್ನು ಒದಗಿಸುವುದೂ ಸಹ ಒಂದು ಅಸಾಧಾರಣ ದಾಳಿಗೆ ಒಳಗಾಗಿದೆ..

ವಿಬಿಜಿರಾಮ್‌ಜಿ ಯನ್ನು ತಂದಿರುವ ಕ್ರಮವು ಉದ್ಯೋಗದ ಹಕ್ಕನ್ನು ಜನರಿಂದ ಎಗರಿಸಿದೆ ಎಂಬುದು ಮಾತ್ರವಲ್ಲ; ಅದು ಉದ್ಯೋಗ ಸೃಷ್ಟಿಯ ಭಾರೀ ಇಳಿಕೆಗೂ ಕಾರಣವಾಗಿದೆ. ನಿರುದ್ಯೋಗವು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ, ಶಿಕ್ಷಿತರ ನಿರುದ್ಯೋಗದ ಮೇಲಿನ ಕೋಪವು ಜಂತರ್ ಮಂತರ್‌ನಂತಹ ಬೃಹತ್‌ ಪ್ರತಿಭಟನೆಗಳತ್ತ ತಿರುಗಿರುವ ಸಮಯದಲ್ಲಿ, ಗ್ರಾಮೀಣ ಭಾರತದಲ್ಲಿ ಕೌಶಲ್ಯರಹಿತ ಉದ್ಯೋಗವನ್ನು ಒದಗಿಸುವುದೂ ಸಹ ಒಂದು ಅಸಾಧಾರಣ ದಾಳಿಗೆ ಒಳಗಾಗಿದೆ.

ಆದರೂ, ನವ-ಉದಾರವಾದದ ಆರ್ಥಿಕ ತರ್ಕ ಹೇಗಿದೆ ಎಂದರೆ, ತೀವ್ರಗೊಂಡಿರುವ ಈ ಸಾಮಾಜಿಕ ಬಿಕ್ಕಟ್ಟೂ ಸಹ, ಅಚ್ಚುಮೆಚ್ಚಿನ ಬಂಡವಾಳಗಾರ ಬಂಟರಿಗೆ ಬೃಹತ್‌ ವರ್ಗಾವಣೆಗಳನ್ನು ಮಾಡುವ ಒಂದು ಸಂದರ್ಭವೇ ಆಗುತ್ತದೆ. ನಿರುದ್ಯೋಗ ನಿವಾರಣೆಗಾಗಿ ಕಾರ್ಖಾನೆಗಳು ಮುಂತಾದವುಗಳಿಗಾಗಿ ಬೃಹತ್‌ ಪ್ರಮಾಣದ ಹೂಡಿಕೆಗಳನ್ನು ಮಾಡಬೇಕಾಗುತ್ತದೆ; ಅದಕ್ಕಾಗಿ ಬಂಡವಾಳಗಾರರಿಗೆ ಎಲ್ಲ ರೀತಿಯ ವರ್ಗಾವಣೆಗಳ ಮೂಲಕ ಉತ್ತೇಜಿಸಬೇಕಾಗುತ್ತದೆ ಎಂಬ ವಾದವನ್ನು ಮುಂದಿಡಲಾಗುತ್ತದೆ. ಈ ರೀತಿಯಲ್ಲಿ ಬಂಡವಾಳಗಾರರಿಗೆ ವರ್ಗಾವಣೆಗಳನ್ನು ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರದ ಸಂಪನ್ಮೂಲಗಳನ್ನು ಪೋಲು ಮಾಡಲಾಗುತ್ತದೆ ಮತ್ತು ಬೊಕ್ಕಸದಲ್ಲಿ ಹಣವಿಲ್ಲ ಎಂಬ ನೆಪದ ಮೇಲೆ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು, ವಿಶೇಷವಾಗಿ ಶಾಲಾ ಮತ್ತು ಕಾಲೇಜು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಆರ್ಥವ್ಯವಸ್ಥೆಯಲ್ಲಿ ಉದ್ಯೋಗಗಳನ್ನು ನೇರವಾಗಿ ಹೆಚ್ಚಿಸುವ ಕ್ರಮಗಳನ್ನು ಕೈಗೊಳ್ಳದೆ ತಪ್ಪಿಸಿಕೊಳ್ಳುತ್ತದೆ!

ಇಂತಹ ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನ ರೀತಿಯ ನಾಟಕವು ಬಹಳ ದಿನಗಳಿಂದಲೂ ನಡೆಯುತ್ತಿದೆ, ಇದು ನಿರುದ್ಯೋಗದ ಒಟ್ಟಾರೆ ಸಮಸ್ಯೆಯನ್ನು ಉಲ್ಬಣಗೊಳಿಸುತ್ತಿದೆ.

ಪರಿಹಾರವಿದೆ- ಆದರೆ ಈ ಸರಕಾರ ಮಾಡುವುದಿಲ್ಲ

ಭಾರತದಾದ್ಯಂತವೂ ಸರ್ಕಾರವೇ ನಡೆಸುತ್ತಿರುವ ಮತ್ತು ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಶಾಲೆಗಳಲ್ಲಿ ಇಂದು ಸುಮಾರು 11 ಲಕ್ಷ ಖಾಲಿ ಹುದ್ದೆಗಳಿವೆ. ಈ ಹುದ್ದೆಗಳನ್ನು ಭರ್ತಿ ಮಾಡುವುದರಿಂದ (ಭರ್ತಿ ಮಾಡುವುದಕ್ಕಾಗಿ ಹಣಕಾಸಿನ ಕೊರತೆಯಿಂದ ಬಳಲುತ್ತಿರುವ ರಾಜ್ಯ ಸರ್ಕಾರಗಳಿಗೆ ಆರ್ಥಿಕವಾಗಿ ಕೇಂದ್ರ ಸರ್ಕಾರವು ಸಹಾಯ ಮಾಡಬೇಕಾಗುತ್ತದೆ) ತಕ್ಷಣವೇ ೧೦ ಲಕ್ಷ ಉದ್ಯೋಗಗಳು ಸೃಷ್ಟಿಯಾಗುವುದಲ್ಲದೆ, ಅಂತಹ ಖರ್ಚಿನ ಗುಣಕ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡಾಗ ಉದ್ಯೋಗ ಸೃಷ್ಟಿಯು ಹಲವು ಪಟ್ಟು ಹೆಚ್ಚುತ್ತದೆ. ಒಂದೆಡೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಮತ್ತು ಮತ್ತೊಂದೆಡೆಯಲ್ಲಿ ಹಕ್ಕು ಆಧಾರಿತ ಉದ್ಯೋಗ ಕಾರ್ಯಕ್ರಮವನ್ನು ಮೊಟಕುಗೊಳಿಸುವುದರ ಬದಲು ವಿಸ್ತರಿಸುವ ಮೂಲಕ – ಉದಾಹರಣೆಗೆ ಅದರ ವ್ಯಾಪ್ತಿಯನ್ನು ಗ್ರಾಮೀಣ ಭಾರತದಿಂದ ನಗರ ಭಾರತಕ್ಕೆ ವಿಸ್ತರಿಸುವುದು, ವಾರ್ಷಿಕ 100 ದಿನಗಳ ಮಿತಿಯನ್ನು ವರ್ಷವಿಡೀ ಎಂದು ವಿಸ್ತರಿಸುವುದು ಮತ್ತು ಕೆಲಸ ಕೇಳುವುದನ್ನು ಪ್ರತಿ ಕುಟುಂಬದ ಒಬ್ಬ ಸದಸ್ಯನಿಂದ ಕೆಲಸ ಕೇಳುವ ಎಲ್ಲರಿಗೂ ವಿಸ್ತರಿಸುವ ಮೂಲಕ – ದೇಶವು ಎದುರಿಸುತ್ತಿರುವ ನಿರುದ್ಯೋಗದ ತೀವ್ರ ಬಿಕ್ಕಟ್ಟಿಗೆ ಇರುವ ಸ್ಪಷ್ಟ ಪರಿಹಾರ.

ನಿರುದ್ಯೋಗದ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆ ಸಂಪನ್ಮೂಲಗಳು ಎಲ್ಲಿವೆ? ಎಂಬ ಪ್ರಶ್ನೆಯನ್ನು ತಕ್ಷಣವೇ ಎತ್ತಬಹುದು. ಬಂಡವಾಳಗಾರರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹಣ ವರ್ಗಾವಣೆ ಮಾಡುವ ಅಸಂಬದ್ಧ ನೀತಿಯನ್ನು ತಿರುಗುಮುರುಗು ಮಾಡುವ ಮೂಲಕ ಮತ್ತು ಅದರ ಜೊತೆಗೆ ಅವರ ಮೇಲೆ (ಮತ್ತು ಸರ್ವಸಾಮಾನ್ಯವಾಗಿ ಶ್ರೀಮಂತರ ಮೇಲೆ) ಸಂಪತ್ತು ತೆರಿಗೆಯನ್ನು ಮತ್ತು ಉತ್ತರಾಧಿಕಾರ ತೆರಿಗೆಯನ್ನು ವಿಧಿಸುವ ಮೂಲಕ ಸಂಪನ್ಮೂಲಗಳನ್ನು ಒದಗಿಸಿಕೊಳ್ಳಬಹುದು. ಖಚಿತವಾಗಿ ಹೇಳುವುದಾದರೆ, ಪರಮ-ಪ್ರತಿಗಾಮಿ ಎನ್‌ಡಿಎ ಸರ್ಕಾರವು ಇದನ್ನು ಮಾಡುತ್ತದೆ ಎಂದು ನಿರೀಕ್ಷಿಸಲಾಗದು. ಆದರೆ, ಎಲ್ಲಕ್ಕಿಂತಲೂ ಮಿಗಿಲಾಗಿ,  ನಿರುದ್ಯೋಗ ನಿವಾರಣೆಯನ್ನು ಗಂಭೀರವಾಗಿ ಬಯಸುವ ಎಲ್ಲರೂ, ನವ-ಉದಾರವಾದಿ ವಿಚಾರಗಳ ಪ್ರಾಬಲ್ಯದಿಂದ ಪಾರಾಗಬೇಕು.

ಕಡ್ಡಾಯ ಮರು-ಅರಣ್ಯೀಕರಣ!

ವ್ಯಂಗ್ಯಚಿತ್ರ ಕೃಪೆ: ಸೊರಿತ್‌, ಡೌನ್‌ ಟು ಅರ್ಥ್

ಇದನ್ನೂ ನೋಡಿ : ಬೈಕ್–ಆಟೊ ನೋ ಎಂಟ್ರಿ | ಫ್ಲೈಓವರ್ ಯಾರಿಗಾಗಿ? ವೇಗದ ಕಾರುಗಳಿಗೆ ಮಾತ್ರವಾ?ವಿಶ್ಲೇಷಣೆ: ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *