ನವದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಕಾರ್ಯಕ್ರಮದ ಸ್ಥಳದಲ್ಲಿ ನಡೆದ ‘ಶುದ್ಧೀಕರಣ’ ವಿಧಿ ಕುರಿತು ಹೇಳಿಕೆ ನೀಡಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಎಫ್ಐಆರ್ಗಳಿಗೆ ಹೆದರುವುದಿಲ್ಲ, ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಮಾರ್ಗದಲ್ಲಿ ಹೋರಾಟ ಮುಂದುವರಿಸುವುದಾಗಿ ಪಕ್ಷ ಹೇಳಿದೆ. ರಾಹುಲ್
ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಆಗಸ್ಟ್ 8ರಂದು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು. ಬಳಿಕ ಆಗಸ್ಟ್ 11ರಂದು ಅಲ್ಲಿ ‘ಶುದ್ಧೀಕರಣ’ ವಿಧಿ ನಡೆಸಲಾಗಿತ್ತು. ಈ ಕ್ರಮವನ್ನು ಕಾಂಗ್ರೆಸ್ ದಲಿತ ವಿರೋಧಿ ಹಾಗೂ ಅಸ್ಪೃಶ್ಯತೆಯ ಮನೋಭಾವದ ಪ್ರತೀಕ ಎಂದು ಆರೋಪಿಸಿತ್ತು.
ಈ ಕುರಿತು ಆಗಸ್ಟ್ 29ರಂದು ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಘಟನೆಗೆ ಕಾರಣರಾದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ‘ಶುದ್ಧೀಕರಣ’ ಹೆಸರಿನಲ್ಲಿ ನಡೆದಿರುವುದು ಅಸ್ಪೃಶ್ಯತೆಯ ಮತ್ತೊಂದು ರೂಪ ಎಂದು ಅವರು ಆರೋಪಿಸಿದ್ದರು.
ಆದರೆ, ರಾಹುಲ್ ಗಾಂಧಿ ವಿರುದ್ಧವೇ ಎಫ್ಐಆರ್ ದಾಖಲಾಗಿದೆ. ವಾಲ್ಮೀಕಿ ಸಮುದಾಯಕ್ಕೆ ಸೇರಿದ ಅಮಿತ್ ಕುಮಾರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾಹುಲ್ ಗಾಂಧಿ ಧಾರ್ಮಿಕ ವಿಧಿಗೆ ಜಾತಿಯ ಬಣ್ಣ ನೀಡಿದ್ದು, ತಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಹುಲ್
ಇದನ್ನೂ ಓದಿ : ನಾಗೇಂದ್ರ ರಾಜೀನಾಮೆ ಅಂಗೀಕಾರ; ಎರಡು ಸಚಿವ ಸ್ಥಾನ ಭರ್ತಿಗೆ ಡಿಕೆಶಿ ದೆಹಲಿ ಪ್ರಯಾಣ
ರಾಹುಲ್ ಗಾಂಧಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ಗಳನ್ನೂ ಅನ್ವಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕುಮಾರಿ ಸೆಲ್ಜಾ, ಈ ಕ್ರಮವನ್ನು ಪ್ರಶ್ನಿಸಿದ್ದಾರೆ. ಖರ್ಗೆ ಅವರ ಕಾರ್ಯಕ್ರಮದ ಬಳಿಕ ಶುದ್ಧೀಕರಣ ವಿಧಿ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಅದನ್ನು ಪ್ರಶ್ನಿಸಿದ ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಯಾವ ರೀತಿಯ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅನ್ನು ಎಫ್ಐಆರ್ಗಳ ಮೂಲಕ ಬೆದರಿಸಿ ಮೌನಗೊಳಿಸಲು ಸಾಧ್ಯವಿಲ್ಲ ಎಂದು ಸೆಲ್ಜಾ ಹೇಳಿದ್ದಾರೆ. ಬಿಜೆಪಿ-ಆರ್ಎಸ್ಎಸ್ನ ‘ಜಾತಿವಾದಿ ಮನೋಭಾವ’ದ ವಿರುದ್ಧ ಹಾಗೂ ದಲಿತರ ಘನತೆ ಮತ್ತು ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ತನ್ನ ಹೋರಾಟವನ್ನು ಮತ್ತಷ್ಟು ಬಲವಾಗಿ ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಬೆಳವಣಿಗೆಯಿಂದ ಹಲ್ದ್ವಾನಿ ‘ಶುದ್ಧೀಕರಣ’ ವಿವಾದ ಮತ್ತಷ್ಟು ರಾಜಕೀಯ ತಿರುವು ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ತೀವ್ರಗೊಂಡಿದೆ. ಬಿಜೆಪಿ, ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದು, ಶುದ್ಧೀಕರಣ ವಿಧಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಹೇಳಿದೆ.ರಾಹುಲ್
ಇದನ್ನೂ ನೋಡಿ : “ನೂರರ ನಮನ – ಇಂದಿಗೆ ಋತ್ವಿಕ್ ಘಟಕ್”| ಅಜಾಂತ್ರಿಕ್, ಬರಿಯ ಯಂತ್ರವಲ್ಲ, ಒಂದು ಪಾತ್ರ, ಸಂಗಾತಿ
