ಎಸ್‌ಐಆರ್‌: 43.81 ಲಕ್ಷ ಮತದಾರರಿಗೆ ನೋಟಿಸ್‌, ಅ.27ರಂದು ಅಂತಿಮ ಪಟ್ಟಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ಮುಂದಿನ ಹಂತ ಆರಂಭವಾಗಿದ್ದು, ಮತದಾರರ ಪಟ್ಟಿಯಲ್ಲಿ ವಿವರಗಳ ವ್ಯತ್ಯಾಸ ಕಂಡುಬಂದಿರುವ ಹಾಗೂ ಹಳೆಯ ಮತದಾರರ ಮಾಹಿತಿಯೊಂದಿಗೆ ಹೊಂದಾಣಿಕೆ ಸಾಧ್ಯವಾಗದ 43,81,006 ಮತದಾರರಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಲು ಆರಂಭಿಸಿದೆ. ಶುಕ್ರವಾರದಿಂದಲೇ ನೋಟಿಸ್‌ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗಿದೆ.

ಎಸ್‌ಐಆರ್‌ ಕರಡು ಮತದಾರರ ಪಟ್ಟಿಯಲ್ಲಿ ರಾಜ್ಯದ ಸುಮಾರು 1.08 ಕೋಟಿ ಮತದಾರರನ್ನು ಎಎಸ್‌ಡಿಡಿಒ ವರ್ಗಕ್ಕೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಗೈರುಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಅಥವಾ ಇತರ ಕಾರಣಗಳಿಂದ ಹೊಂದಾಣಿಕೆಯಾಗದ ಮತದಾರರು ಸೇರಿದ್ದಾರೆ. ಇದೇ ಪ್ರಕ್ರಿಯೆಯಲ್ಲಿ ಕೆಲವು ಮತದಾರರ ವಿವರಗಳಲ್ಲಿ ತಾರ್ಕಿಕ ವ್ಯತ್ಯಾಸಗಳು ಕಂಡುಬಂದಿದ್ದು, ಮತ್ತೊಂದು ವರ್ಗದ ಮತದಾರರಿಗೆ 2002ರ ಹಳೆಯ ಮತದಾರರ ಪಟ್ಟಿಯೊಂದಿಗೆ ಮಾಹಿತಿ ಹೊಂದಿಸಲು ಸಾಧ್ಯವಾಗಿಲ್ಲ.

ನೋಟಿಸ್‌ಗಳನ್ನು ಮತದಾರರ ಮನೆಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ನೀಡಲಾಗಿದೆ. ನೋಟಿಸ್‌ ಪಡೆದವರು ಸಂಬಂಧಪಟ್ಟ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳ ಮುಂದೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ತಮ್ಮ ಮತದಾರರ ಪಟ್ಟಿಯಲ್ಲಿನ ಸ್ಥಾನವನ್ನು ದೃಢಪಡಿಸಿಕೊಳ್ಳಬೇಕಾಗಿದೆ. ಪರಿಶೀಲನಾ ಪ್ರಕ್ರಿಯೆಯಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ, ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಫಾರ್ಮ್‌-6 ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ನೋಟಿಸ್‌ ನೀಡುವ ಸಂಖ್ಯೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 9,45,798, ಬೆಂಗಳೂರು ಉತ್ತರದಲ್ಲಿ 6,12,963, ಬೆಂಗಳೂರು ದಕ್ಷಿಣದಲ್ಲಿ 4,17,611 ಹಾಗೂ ಬೆಂಗಳೂರು ಕೇಂದ್ರದಲ್ಲಿ 4,29,345 ಮತದಾರರಿಗೆ ನೋಟಿಸ್‌ ನೀಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರದಲ್ಲಿ 56,359 ಮಂದಿಗೆ ನೋಟಿಸ್‌ ನೀಡುವ ಪ್ರಕ್ರಿಯೆ ನಡೆಯಲಿದ್ದು, ದಾವಣಗೆರೆಯಲ್ಲಿ 7,085 ಮಂದಿ ಈ ಪಟ್ಟಿಯಲ್ಲಿದ್ದಾರೆ. ಎಸ್‌ಐಆರ್‌

ಇದನ್ನೂ ಓದಿ :ಪಂಜಾಬ್‌ನಲ್ಲಿ ಮತ್ತೆ ಬಿಜೆಪಿ–ಅಕಾಲಿದಳ ಮೈತ್ರಿ? ‘ಪುನರ್‌ಸುರಜಿತ್’ ಬಣಕ್ಕೂ ಆಹ್ವಾನದ ಸುಳಿವು

ಮತದಾರರಿಗೆ ತಮ್ಮ ಹೆಸರು ಹಾಗೂ ವಿವರಗಳನ್ನು ಸರಿಪಡಿಸಿಕೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಆಗಸ್ಟ್‌ 24ರಿಂದ ಸೆಪ್ಟೆಂಬರ್‌ 23ರವರೆಗೆ ಮತದಾರರ ವಿವರಗಳಿಗೆ ಸಂಬಂಧಿಸಿದ ತಿದ್ದುಪಡಿಗಳು ಮತ್ತು ಹಕ್ಕುಗಳನ್ನು ಸಲ್ಲಿಸಬಹುದಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ಪರಿಶೀಲನಾ ಪ್ರಕ್ರಿಯೆ ಅಕ್ಟೋಬರ್‌ 22ರವರೆಗೆ ನಡೆಯಲಿದ್ದು, ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್‌ 27ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.

ಇದರ ಜೊತೆಗೆ ಮತದಾರರಿಗೆ ನೆರವಾಗಲು ಚುನಾವಣಾ ಆಯೋಗ ವಿಶೇಷ ಅಭಿಯಾನವನ್ನೂ ಹಮ್ಮಿಕೊಂಡಿದೆ. ಆಗಸ್ಟ್‌ 29-30 ಹಾಗೂ ಸೆಪ್ಟೆಂಬರ್‌ 19-20ರಂದು ಮತಗಟ್ಟೆಗಳಲ್ಲಿ ಬಿಎಲ್‌ಒ, ಇಆರ್‌ಒ ಮತ್ತು ಎಇಆರ್‌ಒಗಳು ಲಭ್ಯವಿದ್ದು, ಹೊಸ ಮತದಾರರ ನೋಂದಣಿ, ಹೆಸರು ಮತ್ತು ಇತರ ವಿವರಗಳ ತಿದ್ದುಪಡಿಗೆ ನೆರವು ನೀಡಲಿದ್ದಾರೆ. ಹೊಸ ನೋಂದಣಿಗೆ ಫಾರ್ಮ್‌-6 ಹಾಗೂ ಮತದಾರರ ವಿವರಗಳ ತಿದ್ದುಪಡಿಗೆ ಫಾರ್ಮ್‌-8 ಬಳಸಬಹುದಾಗಿದೆ.

ಕರ್ನಾಟಕದ ಎಎಸ್‌ಡಿಡಿಒ ವರ್ಗದಲ್ಲಿರುವ 1,07,96,415 ಮತದಾರರ ಪೈಕಿ 46,88,744 ಮಂದಿ ಬೆಂಗಳೂರು ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿದ್ದಾರೆ. ಹೀಗಾಗಿ ರಾಜಧಾನಿ ಸೇರಿದಂತೆ ನಗರ ಪ್ರದೇಶಗಳಲ್ಲಿ ನಡೆಯಲಿರುವ ಪರಿಶೀಲನಾ ಪ್ರಕ್ರಿಯೆ ಎಸ್‌ಐಆರ್‌ನ ಪ್ರಮುಖ ಹಂತವಾಗಿ ಪರಿಣಮಿಸಿದೆ.

ಮತದಾರರ ಪಟ್ಟಿಯನ್ನು ನಿಖರಗೊಳಿಸುವುದು ಎಸ್‌ಐಆರ್‌ನ ಉದ್ದೇಶವಾಗಿದ್ದರೂ, ನೋಟಿಸ್‌ ಪಡೆಯುತ್ತಿರುವ ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಹೆಸರು ಮತ್ತು ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಮರ್ಪಕ ಅವಕಾಶ ಸಿಗುವುದು ಈ ಪ್ರಕ್ರಿಯೆಯಲ್ಲಿ ನಿರ್ಣಾಯಕವಾಗಲಿದೆ. ಎಸ್‌ಐಆರ್‌

ಇದನ್ನೂ ನೋಡಿ : ‘ಮನೆ ಮುಂದೆ ವಾಹನ ನಿಲ್ಲಿಸೋಕೆ ದುಡ್ಡಾ?’ | ಪಾರ್ಕಿಂಗ್‌ ಶುಲ್ಕದ ವಿರುದ್ಧ ಜನಾಕ್ರೋಶ Janashakthi Media

Donate Janashakthi Media

Leave a Reply

Your email address will not be published. Required fields are marked *