ಝೀ ಸಮೂಹದ ಒಡೆಯರ ಸಾಲ ಇತ್ಯರ್ಥದ ಆದೇಶ ನ್ಯಾಯತತ್ವದ ಅಣಕ -ಸಿಪಿಐ(ಎಂ) ಪೊಲಿಟ್‌ಬ್ಯುರೊ

೨೨೦೦೦ ಕೋಟಿ ರೂ.ಗಳ ಸಾಲವನ್ನು ೬.೫ ಕೋಟಿರೂ.ಗೆ ಇತ್ಯರ್ಥ ಮಾಡಿರುವ ಎನ್.ಸಿ.ಎಲ್‌.ಟಿ. ಆದೇಶವನ್ನು ಹಿಂದಕ್ಕೆ ಪಡೆಯಲು ಆಗ್ರಹ

ಝೀ ಸಮೂಹದ ಸಂಸ್ಥಾಪಕ ಮತ್ತು ಅಧ್ಯಕ್ಷ ಸುಭಾಷ್ ಚಂದ್ರ ರವರ 22,006.57 ಕೋಟಿ ರೂ.ಗಳ ಸಾಲಗಳಿಗೆ ಪ್ರತಿಯಾಗಿ ಕೇವಲ  6.5 ಕೋಟಿ ರೂ.ಗಳ ಮರುಪಾವತಿ ಯೋಜನೆಗೆ ʼರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿʼ (ಎನ್‌ಸಿಎಲ್‌ಟಿ) ಮಂಜೂರಾತಿ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು  ಪತ್ರಿಕಾ ಹೇಳಿಕೆಯೊಂದರಲ್ಲಿ  ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.

ಸುಭಾಷ್ ಚಂದ್ರರವರು ಬಿಜೆಪಿ ಮತ್ತು ಸಂಘ ಪರಿವಾರದೊಂದಿಗೆ ನಿಕಟ ಸಂಬಂಧ ಹೊಂದಿರುವವರು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಆದೇಶವು ವರ್ಗ ಪಕ್ಷಪಾತದ ಒಂದು ಸ್ಪಷ್ಟ ಪ್ರದರ್ಶನವಾಗಿದೆ ಮತ್ತು ಪಕ್ಷಪಾತದ ವಿರುದ್ಧ ನಿಯಮದ ಆಧಾರಭೂತ ನ್ಯಾಯಾಂಗ ತತ್ವವನ್ನು ಉಲ್ಲಂಘಿಸುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ. ಈ ವಿವೇಚನಾಶೂನ್ಯ ಉದಾಹರಣೆಯಲ್ಲಿ, ಸಾಲನೀಡಿದ ಸಂಸ್ಥೆಗಳು  ಶೇಕಡಾ 99.97 ರಷ್ಟು ನಷ್ಟವನ್ನು ಅನುಭವಿಸುತ್ತವೆ. ಉದಾ: ಎಲ್‌ಐಸಿ ಹೌಸಿಂಗ್ ಫೈನಾನ್ಸ್‌ಗೆ ಮರುಪಾವತಿ ಮಾಡಬೇಕಾಗಿದ್ದ ಸಾಲದ ಮೊತ್ತ 1,322.39 ಕೋಟಿ ರೂ. ಆದರೆ ಅದನ್ನು  ಕೇವಲ 38 ಲಕ್ಷ ರೂ.ಗಳ ಪಾವತಿಯೊಂದಿಗೆ , ಅಂದರೆ ಶೇಕಡಾ 0.028 ಮಾತ್ರ ಪಾವತಿ ಮಾಡಿ ಇತ್ಯರ್ಥಗೊಳಿಸುವುದಕ್ಕೆ ಮಂಜೂರಾತಿ ನೀಡಲಾಗಿದೆ.

ದೊಡ್ಡ ಕಾರ್ಪೊರೇಟ್‌ ಸಮೂಹಗಳು ಸಾರ್ವಜನಿಕ ಹಣವನ್ನು ಬೃಹತ್ ಪ್ರಮಾಣದಲ್ಲಿ ಲೂಟಿ ಮಾಡಲು ಪದೇ ಪದೇ ಅವಕಾಶ ನೀಡುತ್ತಿರುವುದು ಸತತವಾಗಿ ಕಾಣಬರುತ್ತಿದೆ. ಇದು  ತೀವ್ರ ಕಳವಳಕಾರಿ ಸಂಗತಿ ಎಂದಿರುವ  ಸಿಪಿಐ(ಎಂ) ಪೊಲಿಟ್‌ಬ್ಯುರೊ, ಉದ್ದೇಶಪೂರ್ವಕವಾಗಿಯೇ ಸಾಲ ಮರುಪಾವತಿ ಮಾಡದೆ ಸುಸ್ತಿದಾರರಾಗುವವವರಿಗೆ ಒಂದು ವಿಧೇಯ ಸರ್ಕಾರ ಅಪಾರ ಪ್ರಮಾಣದ ಅನಿರೀಕ್ಷಿತ ಲಾಭಗಳನ್ನು ಗಿಟ್ಟಿಸಲು ಅವಕಾಶ ನೀಡುತ್ತದೆ, ಅವರು ಭಾರೀ ಸಾಲಗಳನ್ನು ಪಡೆಯಲು ಅವಕಾಶ ನೀಡುತ್ತದೆ ಮತ್ತು ಕೆಲವು ವರ್ಷಗಳ ನಂತರ, ಪ್ರಸ್ತುತ ಪ್ರಕರಣದಂತೆ ಎನ್‌ಸಿಎಲ್‌ಟಿ ಅವರ ಸಾಲವನ್ನು ಬೃಹತ್ ರಿಯಾಯಿತಿಗಳೊಂದಿಗೆ ʼಇತ್ಯರ್ಥʼಪಡಿಸುತ್ತದೆ.

ಇಂತಹ ಔದಾರ್ಯಕ್ಕೆ ಬೆಲೆ ತೆರಬೇಕಾದವರು ತೆರಿಗೆದಾರರು ಮತ್ತು ಸಣ್ಣ ಠೇವಣಿದಾರರು. ದೊಡ್ಡ ಕಾರ್ಪೊರೇಟ್‌ಗಳು ಉದ್ದೇಪೂರ್ವಕವಾಗಿಯೇ ಸಾಲ ಮರುಪಾವತಿ ಮಾಡದೆ  ಸುಸ್ತಿದಾರರಾದರೆ, ಅದಕ್ಕೆ   ಸಾಮಾನ್ಯ ತೆರಿಗೆದಾರರು ಏಕೆ ಬೆಲೆ ತೆರಬೇಕು? ರಾಜಕೀಯವಾಗಿ ಪ್ರಭಾವಿಗಳಾದ ಬಂಟ ಬಂಡವಾಳಶಾಹಿಗಳಿಗೆ ಬೃಹತ್ ಸಾಲಗಳನ್ನು ನೀಡಲಾಗುತ್ತದೆ ಮತ್ತು ನಂತರ ‘ಚೌರʼ(ಹೇರ್‌ ಕಟ್)’ದ ಹೆಸರಿನಲ್ಲಿ ಅವರನ್ನು ಪಾರುಮಾಡಲಾಗುತ್ತದೆ. ಇದು ವಿವೇಕಯುತ ಆರ್ಥಿಕ ಆಯ್ಕೆಯಂತೂ ಖಂಡಿತಾ ಅಲ್ಲ, ಇಂತಹ ಔದಾರ್ಯವು ಅವರು ಆಳುವ ಪಕ್ಷಕ್ಕೆ ಸಲ್ಲಿಸಿದ ಸೇವೆಗಳಿಗೆ ಪ್ರತಿಯಾಗಿ ನೀಡುವ ಉದಾರ ಪ್ರತಿಫಲದಂತೆ ತೋರುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಇದನ್ನೂ ಓದಿ :ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ

ಭಾರತದಲ್ಲಿ, ಸಾಲಗಾರರಾದ ಸಾವಿರಾರು ರೈತರು, ಕೃಷಿ ಕಾರ್ಮಿಕರು, ಮಹಿಳೆಯರು ಮತ್ತು ದಿನಗೂಲಿ ಕಾರ್ಮಿಕರು ಸಾಲಗಳನ್ನು ಮರುಪಾವತಿಸಲು ಅಸಮರ್ಥರಾಗಿ ಆತ್ಮಹತ್ಯೆಗಿಳಿಯುವುದು ಕಂಡುಬಂದಿದೆ. ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟವರು ಸಣ್ಣ ಮೊತ್ತದ ಮರುಪಾವತಿಯನ್ನು ಮಾಡಲಾರದೇ ಹೋದಾಗ, ಹೆದರಿಕೆ-ಬೆದರಿಕೆಗಳು, ಅವಮಾನ ಮತ್ತು ಎತ್ತಂಗಡಿಯಾಗುವ ಅಪಾಯವನ್ನು ಎದುರಿಸುತ್ತಾರೆ. ಆರ್‌ಬಿಐ ಪ್ರಕಾರ, ಕುಟುಂಬ ಸಾಲವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ. 45.5 ರಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ರೈತರ ಸಾಲ ಮನ್ನಾವನ್ನು ಸಾಮಾನ್ಯವಾಗಿ ವಿವೇಚನಾರಹಿತ ನೀತಿ ಎಂದು ಪ್ರಶ್ನಿಸಲಾಗಿದೆ, ಆದರೆ ಕಾರ್ಪೊರೇಟ್ ಬಂಟರಿಗೆ ಸಾವಿರಾರು ಕೋಟಿ ಮನ್ನಾ ಮಾಡಲಾಗುತ್ತಿದೆ. ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯ ನೀಡಿರುವ ಒಂದು ಆರ್‌ಟಿಐ ಉತ್ತರವು, ಸಣ್ಣ ಸಾಲಗಾರರಿಗೆ (ರೂ. 1 ಕೋಟಿ ಮತ್ತು ಅದಕ್ಕಿಂತ ಕಡಿಮೆ) ಸಾಲ ವಸೂಲಾತಿ ದರವು ಶೇ. 74 ರಷ್ಟಿದೆ ಮತ್ತು ದೊಡ್ಡ ಸಾಲಗಾರರಿಗೆ (ರೂ. 100 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ) ಕೇವಲ ಶೇ. 14.5 ರಷ್ಟಿದೆ ಎಂಬ ಕಟು ಸಂಗತಿಯನ್ನು ಬಯಲಿಗೆ ತಂದಿದೆ.

ಎನ್‌ಸಿಎಲ್‌ಟಿ ಆದೇಶವನ್ನು ಹಿಂಪಡೆಯಬೇಕು ಮತ್ತು ಸಾಮಾನ್ಯ ತೆರಿಗೆದಾರರ ಖರ್ಚಿನಲ್ಲಿ ಉದ್ದೇಶಪೂರ್ವಕ ಸುಸ್ತಿದಾರರಾಗುವವರಿಗೆ ಬಕ್ಷೀಸು ನೀಡುವ ನೀತಿಯನ್ನು ಕೇಂದ್ರ ಸರ್ಕಾರ ನಿಲ್ಲಿಸಬೇಕೆಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಒತ್ತಾಯಿಸಿದೆ

ತೆರಿಗೆದಾರರಿಂದ…… ಮತ್ತೆ.. ತೆರಿಗೆದಾರಿಂದಲೇ

 

ತೆರಿಗೆದಾರರಿಂದ ಬ್ಯಾಂಕಿಗೆ ಹಣಕಾಸು

 

 

ಬ್ಯಾಂಕಿನಿಂದ ಪ್ರಭಾವೀ ಕುಳಗಳಿಗೆ ಹಣಕಾಸು

 

ಬ್ಯಾಂಕ್‌ ವಸೂಲಿ ತೆರಿಗೆದಾರರಿಂದ

 

ವ್ಯಂಗ್ಯಚಿತ್ರ ಕೃಪೆ: ಸಂದೀಪ ಅಧ್ವರ್ಯು, ಫೇಸ್‌ಬುಕ್

ಇದನ್ನೂ ನೋಡಿ :ಟ್ಯಾಕ್ಸ್‌ ಕಟ್ಟಿದರೂ ಕಸ ಹೊರುವ ಹೊಣೆ ಜನರಿಗೇ? ಕಸದ ಮಾಫಿಯಾಗೆ ದಾರಿ ಮಾಡಿಕೊಟ್ಟಿತೇ ಜಿಬಿಎ? Janashakthi Media

Donate Janashakthi Media

Leave a Reply

Your email address will not be published. Required fields are marked *