ಡಬಲ್‌ ಎಂಜಿನ್‌ ಸರ್ಕಾರ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ: ಎಂ.ಎ. ಬೇಬಿ

ಅಗರ್ತಲಾ: ಕೇಂದ್ರ ಮತ್ತು ತ್ರಿಪುರದಲ್ಲಿ ಅಧಿಕಾರದಲ್ಲಿರುವ ಡಬಲ್‌ ಎಂಜಿನ್‌ ಸರ್ಕಾರ ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಜನರ ಸುರಕ್ಷತೆಯನ್ನು ದುರ್ಬಲಗೊಳಿಸುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಆರೋಪಿಸಿದ್ದಾರೆ. ಡಬಲ್‌

ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎನ್ನಲಾದ ಡಿವೈಎಫ್‌ಐ ತ್ರಿಪುರ ರಾಜ್ಯ ಕಾರ್ಯದರ್ಶಿ ನಬರುಣ್‌ ದೇಬ್‌ ಅವರ ನಿವಾಸಕ್ಕೆ ಗುರುವಾರ ಎಂ.ಎ. ಬೇಬಿ ಭೇಟಿ ನೀಡಿ, ನಬರುಣ್‌ ದೇಬ್‌ ಹಾಗೂ ಅವರ ಕುಟುಂಬದವರೊಂದಿಗೆ ಘಟನೆ ಕುರಿತು ಮಾಹಿತಿ ಪಡೆದರು. ಅವರೊಂದಿಗೆ ಸಿಪಿಐ(ಎಂ) ಪೊಲಿಟ್‌ಬ್ಯೂರೊ ಸದಸ್ಯ ಹಾಗೂ ತ್ರಿಪುರ ರಾಜ್ಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಇದ್ದರು.

ಸ್ವಾತಂತ್ರ್ಯ ದಿನಾಚರಣೆಯಂದು ನಬರುಣ್‌ ದೇಬ್‌ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಸಿಪಿಐ(ಎಂ) ಆರೋಪಿಸಿದೆ. ಅದೇ ದಿನ ಸೆಪಾಹಿಜಾಲಾ ಜಿಲ್ಲೆಯ ಕಲಂಚೌರದಲ್ಲಿ ಸಿಪಿಐ(ಎಂ) ಬೆಂಬಲಿಗರ ಮೇಲೂ ದಾಳಿ ನಡೆಸಲಾಗಿದ್ದು, ರಾಷ್ಟ್ರಧ್ವಜ ಹಾರಿಸುವುದನ್ನು ತಡೆಯಲಾಗಿದೆ ಎಂದು ಬೇಬಿ ಹೇಳಿದರು.

ಜನಸೇವಾ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಹಾಗೂ ರಾಜಕೀಯ ಕಾರ್ಯಕರ್ತರ ಮೇಲೆ ದಾಳಿ ನಡೆಸುವುದು ಪ್ರಜಾಪ್ರಭುತ್ವದ ವಾತಾವರಣಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ತ್ರಿಪುರದಲ್ಲಿ ಸಿಪಿಐ(ಎಂ) ಕಚೇರಿಗಳ ಮೇಲೂ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಶಿಕ್ಷಣವನ್ನು ರಾಜಕೀಯಗೊಳಿಸಬೇಡಿ’: ಮಲಾಲಾ, ಆನ್‌ ಫ್ರಾಂಕ್‌ ಪುಸ್ತಕಗಳ ಪರ ಅಹಮದಾಬಾದ್‌ನಲ್ಲಿ ಧ್ವನಿ

ಕಾನೂನು ವೃತ್ತಿಯಲ್ಲಿರುವ ಮಹಿಳಾ ಕಾರ್ಯಕರ್ತೆಯೊಬ್ಬರು ಸ್ಥಾಪಿಸಿದ್ದ ಸಿಪಿಐ(ಎಂ) ಕಚೇರಿಯ ಮೇಲೂ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ ಎಂದು ಬೇಬಿ ಆರೋಪಿಸಿದರು. ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸಲಾಗಿದೆ. ಆದರೆ ಘಟನೆಯ ದೃಶ್ಯಾವಳಿಗಳು ಲಭ್ಯವಿವೆ ಎಂದು ಅವರು ತಿಳಿಸಿದರು.

ಸುಮಾರು 20 ನಿಮಿಷಗಳ ಕಾಲ ದಾಳಿ ನಡೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಂತೆ ನಿಂತಿದ್ದರು ಎಂದು ಬೇಬಿ ಆರೋಪಿಸಿದರು. ಕಳೆದ ಎಂಟು ವರ್ಷಗಳಲ್ಲಿ ಈ ರೀತಿಯ ಹತ್ತುಕ್ಕೂ ಹೆಚ್ಚು ಘಟನೆಗಳು ನಡೆದಿದ್ದು, ಪ್ರಕರಣಗಳೂ ದಾಖಲಾಗಿವೆ ಎಂದು ಅವರು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದ ಆಡಳಿತದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ ಎಂದು ಆರೋಪಿಸಿದ ಬೇಬಿ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದರು.

ತ್ರಿಪುರದಲ್ಲಿ ವಿದ್ಯುತ್‌ ದರಗಳನ್ನು ಶೇ.300ರಷ್ಟು ಹೆಚ್ಚಿಸಲಾಗಿದ್ದು, ಬಳಿಕ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಿ ದೊಡ್ಡ ಸಾಧನೆಯಂತೆ ಬಿಂಬಿಸಲಾಗುತ್ತಿದೆ ಎಂದು ಅವರು ಟೀಕಿಸಿದರು. ಬೆಲೆ ಏರಿಕೆ, ನಿರುದ್ಯೋಗ ಹಾಗೂ ಜನರ ಜೀವನೋಪಾಯದ ಮೇಲಿನ ಒತ್ತಡ ಹೆಚ್ಚಿದೆ. ಉದ್ಯೋಗದ ಕೊರತೆಯಿಂದ ಅನೇಕ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬೇಬಿ ಹೇಳಿದರು.

ರಾಜ್ಯದಲ್ಲಿ ಅಪಹರಣ, ಅತ್ಯಾಚಾರ ಸೇರಿದಂತೆ ಅಪರಾಧಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು. ಅಧಿಕಾರದಲ್ಲಿರುವ ಸರ್ಕಾರವೇ ಅಪರಾಧಿಗಳ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಟೀಕಿಸಿದ ಅವರು, ಈ ರಾಜಕೀಯ ಅಧಃಪತನವನ್ನು ಎದುರಿಸಲು ಜನರು ಒಗ್ಗಟ್ಟಾಗಿ ಮುಂದೆ ಬರಬೇಕು ಎಂದು ಕರೆ ನೀಡಿದರು.

ಇದನ್ನೂ ನೋಡಿ:ಬೀದಿ ವ್ಯಾಪಾರಿಗಳ ಬದುಕು ಕಟ್ಟಿಕೊಡುವವರು ಯಾರು? ಸುಪ್ರೀಂ ಕೋರ್ಟ್‌ ಹೇಳಿರುವುದು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *