ಕರ್ನಾಟಕ ಎಸ್‌ಐಆರ್‌: 1.08 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಹೊರಗೆ; ಬೆಂಗಳೂರಿನಲ್ಲಿ ಅತಿ ಹೆಚ್ಚು ಕಡಿತ

ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ರಾಜ್ಯದ ಒಟ್ಟು 5,54,32,314 ಮತದಾರರ ಪೈಕಿ 1,07,96,339 ಮಂದಿಯನ್ನು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಒಟ್ಟು ಮತದಾರರ ಶೇ.19.48ರಷ್ಟಾಗಿದೆ. ಎಸ್‌ಐಆರ್‌

ಆದರೆ ಈ ಹೆಸರುಗಳನ್ನು ಅಂತಿಮವಾಗಿ ಶಾಶ್ವತವಾಗಿ ಅಳಿಸಲಾಗಿದೆ ಎಂದರ್ಥವಲ್ಲ. ಕರಡು ಪಟ್ಟಿಯಿಂದ ಹೊರಗುಳಿದವರು ನಿಗದಿತ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಿ ತಮ್ಮ ಹೆಸರನ್ನು ಮರು ಸೇರ್ಪಡೆ ಮಾಡಿಸಿಕೊಳ್ಳಲು ಅವಕಾಶವಿದೆ. ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದೆ.

ಸ್ಥಳಾಂತರವೇ ಪ್ರಮುಖ ಕಾರಣ

ಎಸ್‌ಐಆರ್‌ನಲ್ಲಿ ಕರಡು ಪಟ್ಟಿಯಿಂದ ಹೊರಗಿಡಲಾದ 1,07,96,339 ಮತದಾರರಲ್ಲಿ 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಇದು ಒಟ್ಟು ಮತದಾರರ ಶೇ.11.81ರಷ್ಟಿದ್ದು, ಕಡಿತಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನು 16,39,864 ಮಂದಿ ಮೃತಪಟ್ಟವರು, 15,17,042 ಮಂದಿ ಗೈರುಹಾಜರಾಗಿದ್ದವರು, 7,09,870 ಮಂದಿ ನಕಲು ಮತದಾರರು ಹಾಗೂ 3,83,884 ಮಂದಿಯನ್ನು ಇತರೆ ವರ್ಗದಲ್ಲಿ ಗುರುತಿಸಲಾಗಿದೆ. ಎಸ್‌ಐಆರ್‌

ಕಾರಣ ಕೈಬಿಟ್ಟ ಮತದಾರರು
ಶಾಶ್ವತವಾಗಿ ಸ್ಥಳಾಂತರ 65,45,679
ಮೃತಪಟ್ಟವರು 16,39,864
ಗೈರುಹಾಜರಿ 15,17,042
ನಕಲು 7,09,870
ಇತರೆ 3,83,884
ಒಟ್ಟು 1,07,96,339

ಇದನ್ನೂ ಓದಿ : ಎಸ್‌ಐಆರ್‌ ಕರಡು ಪಟ್ಟಿ ಪ್ರಕಟ | 1 ಕೋಟಿ ಮತದಾರರ ಮುಂದಿನ ಚಿತ್ರವೇನು?

ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ಕಡಿತ

ಕರ್ನಾಟಕದ ಒಟ್ಟಾರೆ ಪ್ರಮಾಣ ಶೇ.19.48 ಆಗಿದ್ದರೆ, ಬೆಂಗಳೂರಿನ ವಿವಿಧ ಚುನಾವಣಾ ವಿಭಾಗಗಳಲ್ಲಿ ಇದು ಶೇ.40ಕ್ಕಿಂತಲೂ ಹೆಚ್ಚಾಗಿದೆ.

ಬೆಂಗಳೂರು ನಗರದಲ್ಲಿ 40,21,039 ಮತದಾರರ ಪೈಕಿ 17,17,416 ಹೆಸರುಗಳು ಹೊರಗುಳಿದಿದ್ದು, ಪ್ರಮಾಣ ಶೇ.42.71 ಆಗಿದೆ.

ಬಿಬಿಎಂಪಿ ಉತ್ತರ ವಿಭಾಗದಲ್ಲಿ 23,32,621 ಮತದಾರರ ಪೈಕಿ 10,52,536 ಹೆಸರುಗಳು, ಅಂದರೆ ಶೇ.45.12 ಕಡಿತಗೊಂಡಿವೆ. ಬಿಬಿಎಂಪಿ ಮಧ್ಯದಲ್ಲಿ 8,60,723 ಹಾಗೂ ಬಿಬಿಎಂಪಿ ದಕ್ಷಿಣದಲ್ಲಿ 10,58,028 ಹೆಸರುಗಳನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ದಕ್ಷಿಣ ವಿಭಾಗದಲ್ಲಿ ಕಡಿತದ ಪ್ರಮಾಣ ಶೇ.49.33ಕ್ಕೆ ತಲುಪಿದೆ.

ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿಯಲ್ಲಿ ಶೇ.22.01, ಮೈಸೂರಿನಲ್ಲಿ ಶೇ.19.90, ರಾಯಚೂರಿನಲ್ಲಿ ಶೇ.18.75 ಹಾಗೂ ಬಳ್ಳಾರಿಯಲ್ಲಿ ಶೇ.18.16 ಮತದಾರರು ಕರಡು ಪಟ್ಟಿಯಿಂದ ಹೊರಗಿದ್ದಾರೆ. ಇದಕ್ಕೆ ವಿರುದ್ಧವಾಗಿ ಉಡುಪಿಯಲ್ಲಿ ಈ ಪ್ರಮಾಣ ಶೇ.5.95ರಷ್ಟಿದೆ. ಎಸ್‌ಐಆರ್‌

ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಮೊದಲು ತಮ್ಮ ಹೆಸರು ಏಕೆ ಕೈಬಿಡಲಾಗಿದೆ ಎಂಬುದನ್ನು ಪರಿಶೀಲಿಸಬೇಕು. ಚುನಾವಣಾ ಆಯೋಗದ ಮತದಾರರ ಸೇವಾ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡು ಜಿಲ್ಲೆ, ವಿಧಾನಸಭಾ ಕ್ಷೇತ್ರ ಹಾಗೂ ಮತಗಟ್ಟೆ ಆಧಾರದಲ್ಲಿ ಕರಡು ಪಟ್ಟಿಯನ್ನು ಪರಿಶೀಲಿಸಬಹುದು. ಎಸ್‌ಐಆರ್‌

ಹೆಸರು ಕೈಬಿಟ್ಟಿರುವ ಅರ್ಹ ಮತದಾರರು ಸೆಪ್ಟೆಂಬರ್ 23ರೊಳಗೆ ಹಕ್ಕು ಅಥವಾ ಆಕ್ಷೇಪಣೆ ಸಲ್ಲಿಸಬಹುದು. ಅಗತ್ಯಕ್ಕೆ ಅನುಗುಣವಾಗಿ ಫಾರಂ-6 ಅಥವಾ ಫಾರಂ-8 ಬಳಸಲು ಅವಕಾಶವಿದೆ. ಹೊಸದಾಗಿ ಹೆಸರು ಸೇರ್ಪಡೆಗೆ ಫಾರಂ-6 ಮತ್ತು ಮತದಾರರ ವಿವರಗಳ ತಿದ್ದುಪಡಿಗೆ ಫಾರಂ-8 ಬಳಸಬಹುದು.

ಹೀಗಾಗಿ ಎಸ್‌ಐಆರ್‌ನ ಕರಡು ಪಟ್ಟಿಯಲ್ಲಿ 1.08 ಕೋಟಿಯಷ್ಟು ಹೆಸರುಗಳು ಹೊರಗುಳಿದಿರುವುದು ಚುನಾವಣಾ ಪ್ರಕ್ರಿಯೆಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯಾಗಿದೆ. ಆದರೆ ಇದು ಅಂತಿಮ ಪಟ್ಟಿ ಅಲ್ಲ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸಲ್ಲಿಕೆಯಾಗುವ ಹಕ್ಕು, ಆಕ್ಷೇಪಣೆ ಮತ್ತು ದಾಖಲೆಗಳ ಪರಿಶೀಲನೆಯ ಬಳಿಕವೇ ಅಂತಿಮ ಮತದಾರರ ಪಟ್ಟಿಯ ಸ್ವರೂಪ ಸ್ಪಷ್ಟವಾಗಲಿದೆ. ಎಸ್‌ಐಆರ್‌

ಇದನ್ನೂ ಓದಿ : RSS ಕಚೇರಿಯಲ್ಲಿ ‘ನಮಸ್ತೆ ಸದಾ ವತ್ಸಲೆ’ ಬದಲು ‘ವಂದೇ ಮಾತರಂ’ ಹಾಡಿ! ಪ್ರಿಯಾಂಕ್ ಖರ್ಗೆ ಸವಾಲು Janashakthi Media

Donate Janashakthi Media

Leave a Reply

Your email address will not be published. Required fields are marked *