ಪಿಎಂ ಕೇರ್ಸ್‌ನಲ್ಲಿ ೮೪೫೨ ಕೋಟಿ ರೂ.:ಯಾರಿಂದ – ಯಾರಿಗಾಗಿ ?

ವೇದರಾಜ ಎನ್‌ಕೆ
ಎರಡು ವರ್ಷಗಳ ನಂತರ, ಕೊನೆಗೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2023-24 ಮತ್ತು 2024-25PM CARES ನಿಧಿಯ ಪರಿಶೋಧಿತ(ಆಡಿಟೆಡ್) ಲೆಕ್ಕಪತ್ರಗಳನ್ನು ಬಿಡುಗಡೆ ಮಾಡಿದೆ. ಈ ಅಂಕೆ-ಸಂಖ್ಯೆಗಳೀಗ  ಭಾರಿ ಆಕ್ರೋಶಕ್ಕೆ ಕಾರಣವಾಗಿವೆ. ಪಿಎಂ ಕೇರ್ಸ್‌

೨೦೨೨-೨೩ರ ಲೆಕ್ಕಪತ್ರ ಪ್ರಕಟಿಸುವಾಗಲೂ ೬೩೮ ದಿನಗಳ ವಿಳಂಬವಾಗಿತ್ತು, ೨೦೨೩-೨೪ರ ಲೆಕ್ಕಪತ್ರದಲ್ಲಂತೂ ೮೬೯ ದಿನಗಳ ವಿಳಂಬವಾಗಿದೆ, ೨೦೨೪-೨೫ಕ್ಕೆ ಈ ವಿಳಂಬ ತುಸು ಇಳಿದಿದೆ( ೫೦೪ ದಿನಗಳು)- (ದಿ ಹಿಂದು, ಆಗಸ್ಟ್‌ ೧೯)

೨೦೨೨-೨೩ ರಿಂದ ೨೦೨೪-೨೫ರ ನಡುವೆ ನಿಧಿಯ ಮೊತ್ತ ೬೭೨೨ ಕೋಟಿಯಿಂದ ೮೪೫೩ ಕೋಟಿಗೆ, ಅಂದರೆ ೨೫.೮ಶೇ. ಏರಿಕೆಯಾಗಿದೆ. ಮಾರ್ಚ್ 2025 ರ ಹೊತ್ತಿಗೆ ನಿಧಿಯಲ್ಲಿರುವ ಮೊತ್ತ ₹8,452.06 ಕೋಟಿಗಳಷ್ಟಿದ್ದು, ಹಿಂದಿನ ವರ್ಷಕ್ಕಿಂತ ತೀವ್ರವಾಗಿ ಹೆಚ್ಚಾಗಿರುವುದು ಕಾಣುತ್ತಿದೆ. ಸರಿಸುಮಾರು ₹7,846 ಕೋಟಿ ನಿಗದಿತ ಅವಧಿಯ ಠೇವಣಿಗಳಲ್ಲಿ ಮತ್ತು ₹605 ಕೋಟಿ ಉಳಿತಾಯ ಖಾತೆಗಳಲ್ಲಿ ಇವೆ. ಆದರೆ ಅದೇ ವರ್ಷದಲ್ಲಿ, ಒಟ್ಟು ಖರ್ಚು ಕೇವಲ ₹87.85 ಲಕ್ಷ, ಬಹುತೇಕ ಸಂಪೂರ್ಣವಾಗಿ PM CARES for Children ಸ್ಕೀಮಿಗೆ, ಮತ್ತು ₹451 ಬ್ಯಾಂಕ್ ಮತ್ತು ಎಸ್‌ಎಂಎಸ್ ಶುಲ್ಕಗಳಿಗಾಗಿ.

             ವರ್ಷ              ದೇಣಿಗೆ        ಬಳಕೆ    ಹಿಂದಿರುಗಿದ್ದು   ವರ್ಷಾಂತ್ಯದಲ್ಲಿ ನಿಧಿ

          ೨೦೧೯-೨೦       ೩೦೭೭            –              –                ೩೦೭೭

          ೨೦೨೦-೨೧       ೭೯೧೪       ೩೯೭೬          –                ೭೦೧೪

          ೨೦೨೧-೨೨       ೨೧೧೮       ೩೭೧೬          –                ೫೪೧೬

          ೨೦೨೨-೨೩       ೧೩೦೬         ೪೩೮       ೨೨೫             ೬೨೮೪

          ೨೦೨೩-೨೪         ೯೦೫             ೧೬         ೮೪              ೭೧೭೩

          ೨೦೨೪-೨೫       ೧೨೮೦        ೦.೮೮      ೩೨೫              ೮೪೫೨

                                            (ಕೋಟಿ ರೂ.ಗಳಲ್ಲಿ)

               (ಮಾಹಿತಿ ಕೃಪೆ: ದಿ ಹಿಂದು ಡಾಟಾ ಪಾಯಿಂಟ್‌, ಅಗಸ್ಟ್‌ ೧೯, ೨೦೨೬)

ದೇಣಿಗೆಗಳು ಕಡಿಮೆಯಾಗುತ್ತಾ ಬರುತ್ತಿವೆ ಮತ್ತು ಬಳಕೆ ಅದಕ್ಕಿಂತ ಎಷ್ಟೋ ಹೆಚ್ಚಿನ ಪ್ರಮಾಣದಲ್ಲಿ ಇಳಿಯುತ್ತಿದೆ. ಬಳಕೆಗೆಗಿಂತ ಬಳಕೆಗೆಂದು ಕೊಟ್ಟಿದ್ದರಲ್ಲಿ ಬಳಕೆಯಾಗದೆ ಹಿಂದಿರುಗಿ ಬಂದ ಹಣದ ಮೊತ್ತವೇ ಕಳೆದೆರಡು ವರ್ಷಗಳಲ್ಲಿ ಹೆಚ್ಚಿದೆ. ಇದು ಯಾವ ಪರಿಹಾರಕ್ಕೆ ಯಾರಿಗೆ ಕೊಟ್ಟ ಹಣ, ಬಳಕೆಯಾಗದೆ ಹಿಂದಿರುಗಿದ್ದು ಯಾಕೆ ಎಂಬ ವಿವರಗಳು ಈ ನಿಧಿಯ ರಹಸ್ಯ ಸ್ವರೂಪದಿಂದಾಗಿ ಸಾರ್ವಜನಿಕ ಗಮನಕ್ಕೆ ಬರುವುದಿಲ್ಲ. ದೇಣಿಗೆಗಳನ್ನು ನಿಗದಿತ ಅವಧಿಯ ಠೇವಣಿಗಳಾಗಿ ಮಾಡಿ ಅದರ ಬಡ್ಡಿ ಆದಾಯಗಳಿಂದ ನಿಧಿ ಉಬ್ಬಿರುವುದು ಕಾಣುತ್ತದೆ. ಆದರೂ ಒಟ್ಟು ನಿಧಿಯ ೦.೦೧% ಮಾತ್ರವೇ  ಬಳಕೆಯಾಗಿದೆ.(ದಿ ಹಿಂದು, ಆಗಸ್ಟ್‌ ೧೯). ಪಿಎಂ ಕೇರ್ಸ್‌

ವ್ಯಂಗ್ಯಚಿತ್ರ ಕೃಪೆ: ಪಿ.ಮಹಮ್ಮದ್@ ಫೇಸ್‌ಬುಕ್‌

ಹೀಗೆ ತುರ್ತು ಸಂದರ್ಭಗಳಿಗೆ ಸ್ಪಂದಿಸಲೆಂದು ಕಲ್ಪಿಸಲಾದ ನಿಧಿಯು, ಬಹುಪಾಲು ನಿಷ್ಕ್ರಿಯ ಠೇವಣಿ  ಇಟ್ಟುಕೊಂಡಿರುವ  ಟ್ರಸ್ಟ್ ಆಗಿ ನಿಂತಿದೆ ಎಂದು ವಿಶ್ಲೇಷಕರು ಗಮನಿಸಿದ್ದಾರೆ.

ಕೊವಿಡ್‌ ಮಹಾಸಾಂಕ್ರಾಮಿಕದ ದುರಿತ ಕಾಲದಲ್ಲಿ ಮಾರ್ಚ್ 28, 2020 ರಂದು ಸರಕಾರ ʼಪ್ರಧಾನ ಮಂತ್ರಿಗಳ ತುರ್ತು ಸನ್ನಿವೇಶಗಳಲ್ಲಿ ನಾಗರಿಕ ನೆರವು ಮತ್ತು ಪರಿಹಾರ ನಿಧಿʼ( Prime Minister’s Citizen Assistance and Relief in Emergency Situations Fund )ಎಂದು ಪ್ರಧಾನ ಮಂತ್ರಿಗಳು ಕಾಳಜಿ ವಹಿಸುತ್ತಾರೆ ಎಂಬ ಅರ್ಥ ಬರುವಂತಹ ಹೆಸರು ಕೊಟ್ಟು ಈ ನಿಧಿಯನ್ನು ಪ್ರಕಟಿಸಿದಾಗ ಸಹಜವಾಗಿ ಎಲ್ಲರೂ ಕೇಳಿದ ಪ್ರಶ್ನೆ ಇಂತಹ ಸಂದರ್ಭಗಳಿಗಾಗಿ ಭಾರತದಲ್ಲಿ ʼಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿʼ (PMNRF)  ಇದೆ, ಅದು ರುವಾಗ ಈ ನಿಧಿಯ ಅಗತ್ಯವಾದರೂ ಏನಿತ್ತು?  ಇದು ಇದಕ್ಕೆ ಪ್ರಧಾನಿಗಳಿಂದ, ಅವರ ಸರಕಾರದಿಂದ ಎಂದೂ ಉತ್ತರ ಸಿಗಲಿಲ್ಲ. ಸಿಪಿಐ(ಎಂ)  ಮತ್ತು ಇತರ ಎಡಪಕ್ಷಗಳು ಇದು  “ಅನಗತ್ಯ” ಕ್ರಮ, ಅದರ ಅಡಿಯಲ್ಲಿ ಸಂಗ್ರಹಿಸಿದ ಹಣವನ್ನು ನೇರವಾಗಿ PMNRF ಗೆ ವರ್ಗಾಯಿಸಬೇಕೆಂದು ಆಗ್ರಹಿಸಿದವು.  ಇದಕ್ಕಿಂತ ಮೊದಲು ಪುಲ್ವಾಮಾ ದಾಳಿಯ ನಂತರ ಸ್ಥಾಪಿಸಲಾದ “ಭಾರತ್ ಕೆ ವೀರ್” ಎಂಬ ತಾತ್ಕಾಲಿಕ ನಿಧಿ ಕೂಡ ಹೀಗೇ ಅಪಾರದರ್ಶಕವಾಗಿತ್ತು  ಎಂದೂ ಸಿಪಿಐ(ಎಂ)  ನೆನಪಿಸಿತ್ತು. ಈ ನಿಧಿ ನಿಜವಾಗಿಯೂ ನಾಗರಿಕರಿಗಾಗಿ ಎಂದಿದ್ದರೆ, ಅದನ್ನು “ಪಿಎಂ-ಕೇರ್ಸ್” ಅಲ್ಲ, “ಇಂಡಿಯಾ ಕೇರ್ಸ್” ಎಂದು ಕರೆಯಬೇಕಾಗಿತ್ತು ಎಂದೂ ಸೂಚಿಸಲಾಗಿತ್ತು.

ಇದನ್ನೂ ಓದಿ : ಪಿಎಂ ಕೇರ್ಸ್‌: ಮೂರು ವರ್ಷ ಲೆಕ್ಕವೇ ಇಲ್ಲ! ₹6,283 ಕೋಟಿಯ ಬಳಿಕ ಏನಾಯಿತು?

ಪಿಎಂ ಪ್ರೈವೇಟ್‌ ಫಂಡ್‌?

PMNRF ಸಿಎಜಿ ಲೆಕ್ಕ ಪರಿಶೋಧನೆಗೆ ಮತ್ತು ಆರ್‌ಟಿಐಗೂ  ಒಳಪಟ್ಟಿದೆ. ಆದರೆ ಈ ಪಿಎಂಕೇರ್ಸ್‌ ನ್ನು ಆರಂಭದಿಂದಲೇ ಒಂದು  ಸಂಪೂರ್ಣ ಅಪಾರದರ್ಶಕ ರಹಸ್ಯ ನಿಧಿಯಾಗಿಯೇ ರೂಪಿಸಲಾಗಿತ್ತು. ಅದರ ನೋಂದಣಿಯಾಗಿರುವುದು ಒಂದು ಸಾರ್ವಜನಿಕ ಧರ್ಮಾರ್ಥ ದತ್ತಿ ಎಂದು. ಪ್ರಧಾನ ಮಂತ್ರಿಗಳು ಅದರ ಅಧ್ಯಕ್ಷರು ಮತ್ತು ಹಿರಿಯ ಮಂತ್ರಿಗಳು ಟ್ರಸ್ತಿಗಳು. ಆದರೆ ಇದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ “ ಸಾರ್ವಜನಿಕ ಪ್ರಾಧಿಕಾರ” ಅಲ್ಲ, ಆದ್ದರಿಂದ ಅದಕ್ಕೆ ಹಣ ಕೊಡುವ ದಾನಿಗಳ ಹೆಸರುಗಳು, ವ್ಯವಹಾರಗಳು, ಖರ್ಚು ಲೆಕ್ಕಗಳು ಇತ್ಯಾದಿಗಳನ್ನು ನಾಗರಿಕರಿಗೆ ತಿಳಿಸಬೇಕಾಗಿಲ್ಲ ಎಂದೇ ಸರಕಾರ ಹೇಳಿಕೊಂಡು ಬಂದಿದೆ.. ಸಂಸತ್ತಿನಲ್ಲಿ ಚುನಾಯಿತ ಜನಪ್ರತಿನಿಧಿಗಳು ಈ ಬಗ್ಗೆ ಪ್ರಶ್ನೆ ಕೇಳುವಂತೆಯೂ ಇಲ್ಲ. ಆದರೆ ಇನ್ನೊಂದೆಡೆಯಲ್ಲಿ ತದ್ವಿರುದ್ಧವಾಗಿ ಇದು “ಸರಕಾರ ಸ್ಥಾಪಿಸಿದ, ಅದರ ಒಡೆತನದಲ್ಲಿರುವ, ಮತ್ತು ಹತೋಟಿಯಲ್ಲಿರುವ”  ಸಂಸ್ಥೆ ಎಂದೂ ಹೇಳಲಾಯಿತು.

ಸರಕಾರೀ ನೌಕರರ ಒಂದು ದಿನದ ಸಂಬಳವನ್ನು, ಎರಡು ವರ್ಷಗಳ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಎಂಪಿಲಾಡ್)‌ ಹಣವನ್ನೂ ಇದಕ್ಕೆ ಜಮಾ ಮಾಡಲಾಯಿತು. ಕಂಪನಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಕಂಪನಿಗಳ ಸಿಎಸ್‌ಆರ್‌( ಸಾಮಾಜಿಕ ಹೊಣೆಗಾರಿಕೆ) ದೇಣಿಗೆಗಳನ್ನೂ ಪಾರದರ್ಶಕ ಸಾರ್ವಜನಿಕ ಕಾರ್ಯಗಳ ಬದಲು ಈ “ಖಾಸಗಿ ಟ್ರಸ್ಟಿಗೆʼ ಪಡೆಯಲಾಯಿತು.

ಆದರೂ, ಇದರ ಲೆಕ್ಕಪತ್ರಗಳ ಪರಿಶೋಧನೆ ಸಿಎಜಿ ವ್ಯಾಪ್ತಿಗೆ ಬರುವುದಿಲ್ಲ, ಅದನ್ನು ಖಾಸಗಿ ಲೆಕ್ಕಪರಿಶೋಧಕರು ಮಾಡುತ್ತಾರೆ ಎಂದೂ ಹೇಳಲಾಯಿತು. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನ್ಯಾಯಾಲಯ ಕೂಡ ಯಾರೂ ಕೂಡ ಟ್ರಸ್ಟಿಗಳ ವಿವೇಚನೆಯನ್ನು ಪ್ರಶ್ನಿಸುವಂತಿಲ್ಲ ಎಂದು ಇದನ್ನು ನ್ಯಾಯಾಂಗ ಪರೀಕ್ಷಣೆಯ ವ್ಯಾಪ್ತಿಯಿಂದಲೂ ಹೊರಗಿಟ್ಟಿತು.

ಅದರಿಂದಾಗಿ ಒಬ್ಬ ಪ್ರಸಿದ್ಧ ಪತ್ರಕರ್ತರು ಇದಕ್ಕೆ “ಪಿಎಂ ಪ್ರೈವೇಟ್‌ ಫಂಡ್”(ಪ್ರಧಾನ ಮಂತ್ರಿ ಖಾಸಗಿ ನಿಧಿ) ಎಂದು ಹೆಸರಿಡಬೇಕಾಗಿತ್ತು ಎಂದು ಟಿಪ್ಪಣಿ ಮಾಡಿದ್ದರು. ಪಿಎಂ ಕೇರ್ಸ್‌

ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ @ ಫೇಸ್‌ಬುಕ್

2021 ರ ಏಪ್ರಿಲ್-ಮೇ ಅವಧಿಯಲ್ಲಿ ಕೋವಿಡ್‌ನ ಎರಡನೇ ಅಲೆ ಅಪ್ಪಳಿಸಿದಾಗ ಇದು ಆಗಲೇ ಅಸ್ತಿತ್ವದಲ್ಲಿ ಇತ್ತು. ಆದರೆ ದಿಲ್ಲಿ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್‌ನಾದ್ಯಂತದ ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸುತ್ತಿದ್ದಾಗ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿದ ಈ ತುರ್ತು ಸಂದರ್ಭದ ನಿಧಿಯಿಂದ ಎಷ್ಟು ಸಹಾಯ ನೀಡಲಾಗಿದೆ ಎಂದು ತಿಳಿದಿಲ್ಲ. ಏಕೆಂದರೆ , ನೂರಾರು ಕೊವಿಡ್‌  ಸಾವುಗಳು ಆಮ್ಲಜನಕದ ಕೊರತೆಯಿಂದ ಉಂಟಾಗಿವೆ ಎಂದು ಅಂದಾಜಿಸಲಾಗಿದ್ದರೂ ಸರಕಾರ ಅದನ್ನು ಒಪ್ಪಿಕೊಂಡಿರಲಿಲ್ಲ.  ಕೊವಿಡ್‌ ನಂತರ ಕೇರಳ, ಅಸ್ಸಾಂ ಮತ್ತಿತರ ಕಡೆಗಳಲ್ಲಿ ಭೀಕರ ಪ್ರವಾಹದಂತಹ ನೈಸರ್ಗಿಕ ವಿಕೋಪಗಳು ದೇಶವನ್ನು ಬಾಧಿಸಿದವು. ಆಗಲೂ ಈ ಸಾವಿರ ಕೋಟಿಗಟ್ಟಲೇ ಹಣ ದೇಶದ ಉಪಯೋಗಕ್ಕೆ ಬರಲಿಲ್ಲ , ಆದರೆ ಈ ರೀತಿಯ ತುರ್ತು ಪರಿಸ್ಥಿತಿಗಳನ್ನು ಎದುರಿಸಲೆಂದೇ ಸ್ಥಾಪಿಸಿದ್ದ  ನಿಧಿ  ಬಡ್ಡಿ ಆದಾಯದ ಮೂಲಕ ಉಬ್ಬುತ್ತಲೇ ಇತ್ತು  ಎಂದು ಈಗ ಪ್ರಕಟಿತ ಪರಿಶೋಧಿತ ಲೆಕ್ಕಪತ್ರಗಳೇ ಹೇಳುತ್ತಿವೆ.

ಇಷ್ಟೊಂದು ಭಾರೀ ಮೊತ್ತದ ಸಾರ್ವಜನಿಕ ಹಣ ಒಂದು ಖಾಸಗಿ ನಿಧಿಯಲ್ಲಿ ಸರಿಯಾಗಿ ಉಪಯೋಗವಾಗದೆ ಏಕೆ ಬಿದ್ದುಕೊಂಡಿದೆ? ಇದು ಮೋದಿ ನಿವೃತ್ತಿ ನಿಧಿಯೇ ಎಂದು ಸಿಪಿಐ(ಎಂ) ಪ್ರಶ್ನಿಸಿದೆ.

ಎಡಪಕ್ಷಗಳು ಆಗಲೇ ಇದನ್ನು ʼಉತ್ತರದಾಯಿತ್ವʼ ಇಲ್ಲದ ಸರಕಾರದ ಕೃತ್ಯ ಎಂದು ಟೀಕಿಸಿದ್ದವು. ಈಗ ಪ್ರಕಟವಾಗಿರುವ ಪಿಎಂಕೇರ್ಸ್‌ನ ಅಂಕೆ-ಸಂಖ್ಯೆಗಳು ಅದನ್ನು ಎತ್ತಿ ತೋರಿವೆ.

ನೀಟ್‌ ಪರೀಕ್ಷೆಯ ಪ್ರಕರಣದಲ್ಲಿ ಅದೇ ʼಉತ್ತರದಾಯಿತ್ವʼದಿಂದ ಪಲಾಯನ ಮಾಡುವ ಸರಕಾರವನ್ನು ಕೊನೆಗೂ ಸ್ವಲ್ಪ ಮಟ್ಟಿಗಾದರೂ ʼಉತ್ತರದಾಯಿʼಯನ್ನಾಗಿ ಮಾಡಿರುವ  ಸಿಜೆಪಿ  ಮತ್ತು ಎಡ ವಿದ್ಯಾರ್ಥಿ ಸಂಘಟನೆಗಳ ಜಂತರ್‌ಮಂತರ್‌ ಪ್ರತಿಭಟನೆಯ ನೇತೃತ್ವದಲ್ಲಿದ್ದ ಅಭಿಜಿತ್‌ ದೀಪ್ಕೆ  ಒಂದೆಡೆ 8,500 ಕೋಟಿ ರೂ. ಬಳಕೆಯಾಗದೆ ಬಿದ್ದಿದೆ, ಇನ್ನೊಂದೆಡೆ, ಮಕ್ಕಳಿಗೆ ರಸ್ತೆಗಳು, ಬೆಂಚುಗಳು ಮತ್ತು ಕುಡಿಯುವ ನೀರಿನಂತಹ ಮೂಲಭೂತ ಶಾಲಾ ಸೌಲಭ್ಯಗಳ ಕೊರತೆಯಿದೆ. ಹೀಗಿರುವಾಗ, ಈ ಹಣವನ್ನು ನಮ್ಮ ಮಕ್ಕಳ ಶಾಲೆಗಳಿಗೆ ಏಕೆ ಬಳಸಬಾರದು?” ಎಂದು ಪ್ರಶ್ನಿಸಿದ್ದಾರೆ. ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ಉತ್ತಮ ಶಾಲೆ, ಮಾದರಿ ಶಾಲೆಯನ್ನು ನಿರ್ಮಿಸಲು ಅಂದಾಜು ವೆಚ್ಚವನ್ನು 8 ಕೋಟಿ ರೂ. ಎಂದು ತೆಗೆದುಕೊಂಡರೆ, 1,000 ಕ್ಕೂ ಹೆಚ್ಚು ಹೊಸ ಶಾಲೆಗಳನ್ನು 8,500 ಕೋಟಿ ರೂ.ಗಳೊಂದಿಗೆ ನಿರ್ಮಿಸಬಹುದು  ಎಂದು ಅವರು ಹೇಳಿದ್ದಾರೆ. ಜೆನ್‌ ಝೀಯನ್ನು ಒಲಿಸಿಕೊಳ್ಳಲೇಬೇಕೆಂದು ನಿರ್ಧರಿಸಿದಂತಿರುವ ಸರಕಾರ ಈ ಸೂಚನೆಯನ್ನು ಗಮನಿಸಬಹುದೇ?ಅಥವ ಸುಮಾರು ಒಂದು ಲಕ್ಷ ಶಾಲೆಗಳನ್ನು ಮುಚ್ಚಿರುವಾಗ ದುಸ್ಥಿತಿಯಲ್ಲಿರುವ ಶಾಲೆಗಳನ್ನು ಸರಿಪಡಿಸುವುದು ʼತುರ್ತು ಸನ್ನಿವೇಶʼದ ವ್ಯಾಖ್ಯೆಗೆ ಬರುವುದಿಲ್ಲ ಎಂದು ಹೇಳಬಹುದೇ? ಪಿಎಂ ಕೇರ್ಸ್‌

“ಸ್ಕೂಲ್‌ ಸರಿಪಡಿಸಿ”

” ಇಲ್ಲ ನಮ್ಮಲ್ಲಿ ʼಕೊಕ್ರೋಚಸ್‌ ಕೇರ್‌ ಫಂಡ್‌ʼ ಎಂಬುದೇನಿಲ್ಲ!”

ವ್ಯಂಗ್ಯಚಿತ್ರ ಕೃಪೆ: ಸಜಿತ್‌ ಕುಮಾರ್‌, ಡೆಕ್ಕನ್‌ ಹೆರಾಲ್ಡ್‌

ಇದನ್ನೂ ನೋಡಿ : SIR ಕರಡು ಪಟ್ಟಿ ಪ್ರಕಟ: ಹೆಚ್ಚಲಿದೆಯೇ ಜನರ ಸಂಕಟ? Janashakthi Media ಪಿಎಂ ಕೇರ್ಸ್‌

Donate Janashakthi Media

Leave a Reply

Your email address will not be published. Required fields are marked *