ಪಿಎಂ ಕೇರ್ಸ್‌: ಮೂರು ವರ್ಷ ಲೆಕ್ಕವೇ ಇಲ್ಲ! ₹6,283 ಕೋಟಿಯ ಬಳಿಕ ಏನಾಯಿತು?

ನವದೆಹಲಿ: ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ (ಪಿಎಂ ಕೇರ್ಸ್‌)ಗೆ ಸಂಬಂಧಿಸಿದ 2022–23ರ ನಂತರದ ಮೂರು ಹಣಕಾಸು ವರ್ಷಗಳ ಲೆಕ್ಕಪರಿಶೋಧಿತ ಹಣಕಾಸು ವರದಿಗಳು ಸಾರ್ವಜನಿಕವಾಗಿ ಲಭ್ಯವಿಲ್ಲ ಎಂಬುದು ನಿಧಿಯ ಪಾರದರ್ಶಕತೆ ಕುರಿತು ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. ದಿ ಹಿಂದೂ ವರದಿ

ಕೋವಿಡ್‌-19 ಸಾಂಕ್ರಾಮಿಕದ ಸಂದರ್ಭದಲ್ಲಿ 2020ರ ಮಾರ್ಚ್‌ನಲ್ಲಿ ಸ್ಥಾಪಿಸಲಾದ ಪಿಎಂ ಕೇರ್ಸ್‌ ನಿಧಿಯ ಅಧ್ಯಕ್ಷತೆಯನ್ನು ಪ್ರಧಾನಮಂತ್ರಿ ವಹಿಸಿದ್ದಾರೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು ಹಾಗೂ ಇತರ ವಿಪತ್ತುಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಿಗೆ ನೆರವು ನೀಡುವುದು ನಿಧಿಯ ಉದ್ದೇಶವಾಗಿದೆ. ನಿಧಿಗೆ ಮುಖ್ಯವಾಗಿ ಸ್ವಯಂಪ್ರೇರಿತ ದೇಣಿಗೆಗಳ ಮೂಲಕ ಹಣ ಸಂಗ್ರಹಿಸಲಾಗುತ್ತದೆ.

2022–23ರಲ್ಲಿ ₹6,283.68 ಕೋಟಿ ಶಿಲ್ಕು

ಸಾರ್ವಜನಿಕವಾಗಿ ಲಭ್ಯವಿರುವ ಕೊನೆಯ ಲೆಕ್ಕಪರಿಶೋಧಿತ ಹಣಕಾಸು ವರದಿ 2022–23ನೇ ಸಾಲಿನದ್ದಾಗಿದೆ. ಅದರ ಪ್ರಕಾರ, ಆ ಹಣಕಾಸು ವರ್ಷದ ಆರಂಭದಲ್ಲಿ ನಿಧಿಯಲ್ಲಿ ₹5,415.65 ಕೋಟಿ ಇತ್ತು. ಆ ವರ್ಷ ₹909.64 ಕೋಟಿ ಸ್ವಯಂಪ್ರೇರಿತ ದೇಣಿಗೆ ಸೇರಿದಂತೆ ಒಟ್ಟು ₹6,723.07 ಕೋಟಿ ಆದಾಯ ದಾಖಲಾಗಿತ್ತು.

ಇದನ್ನೂ ಓದಿ: ‘ಬಿಜೆಪಿಗೆ ಸೇರಿ, ಇಲ್ಲವಾದರೆ ಪರಿಣಾಮ’: ಸಿಜೆಪಿ ಸ್ಥಾಪಕರಿಗೆ ಬೆದರಿಕೆ ಆರೋಪ

ಇದೇ ಅವಧಿಯಲ್ಲಿ ₹439.38 ಕೋಟಿ ವೆಚ್ಚ ಮಾಡಲಾಗಿದ್ದು, 2023ರ ಮಾರ್ಚ್‌ 31ರಂದು ಪಿಎಂ ಕೇರ್ಸ್‌ ನಿಧಿಯಲ್ಲಿದ್ದ ಮುಕ್ತಾಯ ಶಿಲ್ಕು ₹6,283.68 ಕೋಟಿ ಎಂದು ಲೆಕ್ಕಪತ್ರಗಳು ತೋರಿಸುತ್ತವೆ.

2019–20ರಿಂದ 2022–23ರವರೆಗಿನ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳು ನಿಧಿಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಆದರೆ 2023–24, 2024–25 ಮತ್ತು 2025–26ನೇ ಸಾಲುಗಳ ಲೆಕ್ಕಪರಿಶೋಧಿತ ವಿವರಗಳು ಸಾರ್ವಜನಿಕವಾಗಿ ಪ್ರಕಟವಾಗಿಲ್ಲ ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ.

‘ಹಣದ ಸಂಗ್ರಹ ಮತ್ತು ವೆಚ್ಚದ ವಿವರ ಬಹಿರಂಗವಾಗಬೇಕು’

ರಾಷ್ಟ್ರೀಯ ಜನರ ಮಾಹಿತಿ ಹಕ್ಕು ಅಭಿಯಾನದ ಸಹ ಸಂಚಾಲಕಿ ಅಂಜಲಿ ಭಾರದ್ವಾಜ್‌, ಪಿಎಂ ಕೇರ್ಸ್‌ ನಿಧಿಯನ್ನು ಕೇಂದ್ರ ಸರ್ಕಾರ ಸ್ಥಾಪಿಸಿದ್ದು, ಸರ್ಕಾರಿ ನೌಕರರಿಂದಲೂ ದೇಣಿಗೆ ಸಂಗ್ರಹಿಸಲಾಗಿದೆ. ಹೀಗಿರುವಾಗ ನಿಧಿಗೆ ಬಂದ ಹಣ ಮತ್ತು ಅದನ್ನು ಯಾವ ಉದ್ದೇಶಕ್ಕೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವುದು ಅಗತ್ಯ ಎಂದು ಹೇಳಿದ್ದಾರೆ.

ಮಾಜಿ ಕೇಂದ್ರ ಮಾಹಿತಿ ಆಯುಕ್ತ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಶೈಲೇಶ್‌ ಗಾಂಧಿ ಕೂಡ ನಿಧಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಆರ್‌ಟಿಐ ವ್ಯಾಪ್ತಿಯಿಂದ ಹೊರಗಿರುವ ಪಿಎಂ ಕೇರ್ಸ್‌

ಪಿಎಂ ಕೇರ್ಸ್‌ ನಿಧಿಯು ಮಾಹಿತಿ ಹಕ್ಕು ಕಾಯ್ದೆಯಡಿ ‘ಸಾರ್ವಜನಿಕ ಪ್ರಾಧಿಕಾರ’ವಲ್ಲ ಎಂಬ ನಿಲುವನ್ನು ಕೇಂದ್ರ ಸರ್ಕಾರ ಈ ಹಿಂದೆ ತೆಗೆದುಕೊಂಡಿತ್ತು. ಇದೇ ಕಾರಣದಿಂದ ನಿಧಿಗೆ ಸಂಬಂಧಿಸಿದ ಮಾಹಿತಿ ಆರ್‌ಟಿಐ ಕಾಯ್ದೆಯಡಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಇದರ ಜೊತೆಗೆ, ಪಿಎಂ ಕೇರ್ಸ್‌ ನಿಧಿಯು ಸಂಸದೀಯ ಪರಿಶೀಲನೆ ಮತ್ತು ಭಾರತದ ನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರ (ಸಿಎಜಿ) ಲೆಕ್ಕಪರಿಶೋಧನೆಯ ವ್ಯಾಪ್ತಿಗೂ ಒಳಪಟ್ಟಿಲ್ಲ ಎಂಬುದು ಕಾರ್ಯಕರ್ತರ ಆಕ್ಷೇಪವಾಗಿದೆ.

ಸಾವಿರಾರು ಕೋಟಿ ರೂಪಾಯಿ ಹೊಂದಿರುವ ನಿಧಿಯ ಮೂರು ವರ್ಷಗಳ ಲೆಕ್ಕಪರಿಶೋಧಿತ ಹಣಕಾಸು ಹೇಳಿಕೆಗಳು ಏಕೆ ಸಾರ್ವಜನಿಕವಾಗಿಲ್ಲ? ನಿಧಿಗೆ ಎಷ್ಟು ಹಣ ಬಂದಿದೆ, ಎಷ್ಟು ಖರ್ಚಾಗಿದೆ ಮತ್ತು ಎಷ್ಟು ಹಣ ಉಳಿದಿದೆ ಎಂಬ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವ ಅಗತ್ಯವೇನು? ಎಂಬ ಪ್ರಶ್ನೆಗಳು ಇದೀಗ ಮತ್ತೆ ಮುನ್ನೆಲೆಗೆ ಬಂದಿವೆ.

ಇದನ್ನೂ ನೋಡಿ: NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್‌ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ

Donate Janashakthi Media

Leave a Reply

Your email address will not be published. Required fields are marked *