ಹಾಸನ: ಪ್ರತಿಯೊಂದು ವಿಷಯವನ್ನೂ ಕಣ್ಣುಮುಚ್ಚಿ ಒಪ್ಪಿಕೊಳ್ಳದೆ, ‘ಯಾಕೆ, ಏನು, ಹೇಗೆ’ ಎಂದು ಪ್ರಶ್ನಿಸುವ ವೈಜ್ಞಾನಿಕ ಮನೋಭಾವನೆಯೇ ಮನುಷ್ಯನ ನಿಜವಾದ ಬದುಕನ್ನು ಸುಧಾರಿಸಿದೆ. ವಿಜ್ಞಾನ ಎಂದರೆ ಯಾವುದೋ ದೊಡ್ಡ ಅರಿವಲ್ಲ; ಕಣ್ಣಮುಂದಿನ ಸತ್ಯಗಳನ್ನು ಪ್ರಶ್ನಿಸುವುದೇ ವಿಜ್ಞಾನ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ (ಬಿಜಿವಿಎಸ್) ರಾಜ್ಯ ಸಮಿತಿ ಸದಸ್ಯ ಎಚ್.ಟಿ. ಗುರುರಾಜು ಹೇಳಿದರು. ವೈಜ್ಞಾನಿಕ
ನಗರದ ಕುವೆಂಪು ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ‘ಸಂಭ್ರಮದ ಶನಿವಾರ’ದ ಅಂಗವಾಗಿ ಬಿಜಿವಿಎಸ್ ಜಿಲ್ಲಾದ್ಯಂತ ಆಯೋಜಿಸುತ್ತಿರುವ ‘ಓದಿನ ಮಜಾ’ ಆಂದೋಲನವನ್ನು ಉದ್ಘಾಟಿಸಿ ಅವರು ಮುಖ್ಯ ಭಾಷಣ ಮಾಡಿದರು.
ಬದುಕನ್ನು ಹಸನಾಗಿಸಿದ್ದು ವಿಜ್ಞಾನ: ಎಚ್.ಟಿ. ಗುರುರಾಜು
“ನಾವು ತೊಡುವ ಉಡುಪು, ಚಲಾಯಿಸುವ ಬೈಕ್, ಕಾರು, ಮನೆಯಲ್ಲಿರುವ ಎಲ್.ಪಿ.ಜಿ. ಗ್ಯಾಸ್, ವಿದ್ಯುತ್ ಹಾಗೂ ಯಂತ್ರೋಪಕರಣಗಳು—ಇವೆಲ್ಲವೂ ವಿಜ್ಞಾನದ ಕೊಡುಗೆ. ವಿಜ್ಞಾನವು ದಿನನಿತ್ಯದ ಕೆಲಸದ ಶ್ರಮವನ್ನು ಕಡಿಮೆ ಮಾಡಿ, ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ ಇಂದು ಧಾರ್ಮಿಕ ಆಚರಣೆಗಳು ಆಡಂಬರವಾಗುತ್ತಿದ್ದು, ಅವುಗಳಿಗಿಂತ ಹೆಚ್ಚಾಗಿ ನಾವು ಸರ್ಕಾರಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಹಾಗೂ ಬದುಕನ್ನು ಹಸನಾಗಿಸುವ ವೈಜ್ಞಾನಿಕ ಚಿಂತನೆಗಳಿಗೆ ಆದ್ಯತೆ ನೀಡಬೇಕಿದೆ,” ಎಂದು ಗುರುರಾಜು ಕರೆ ನೀಡಿದರು.
ಇಂದಿನ ಡಿಜಿಟಲ್ ಯುಗವನ್ನು ಉಲ್ಲೇಖಿಸಿದ ಅವರು, “ಪ್ರತಿಯೊಬ್ಬರ ಕೈಯಲ್ಲೂ ಆಂಡ್ರಾಯ್ಡ್ ಫೋನ್‌ಗಳಿದ್ದು, ಪುಸ್ತಕ ಓದುವ ಮಹತ್ವ ಕಡಿಮೆಯಾಗಿದೆ. ಮೊಬೈಲ್‌ಗಿಂತ ಪುಸ್ತಕಗಳು ನಮಗೆ ಹೊಸ ಪ್ರಪಂಚವನ್ನು ತೆರೆದುಕೊಟ್ಟು ವಿಶಾಲ ಜ್ಞಾನ ನೀಡುತ್ತವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 25 ಶಾಲೆಗಳಲ್ಲಿ ನಿರಂತರವಾಗಿ ಪುಸ್ತಕ ಓದುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ,” ಎಂದು ಆಶಯ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳ ಗುಲಾಮಗಿರಿಯಿಂದ ದೂರವಿರಿ: ಅಹಮದ್ ಹಗರೆ
ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ, ಆಂದೋಲನದ ರೂಪುರೇಷೆ ಹಂಚಿಕೊಂಡ ಬಿಜಿವಿಎಸ್ ರಾಜ್ಯ ಜಂಟಿ ಕಾರ್ಯದರ್ಶಿ ಅಹಮದ್ ಹಗರೆ, “ಓದುವ ಹವ್ಯಾಸವು ಬಹುಮುಖಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ಪುಸ್ತಕದೊಳಗೆ ಹುದುಗಿದ ಮನಸ್ಸು ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ಶಿಕ್ಷಣದ ಜೊತೆಗೆ ಬದುಕುವ ಸರಿಯಾದ ದಾರಿಯನ್ನು ತೋರಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ವಿಶ್ಲೇಷಣೆ ಮಾಡುವ ಗುಣ ಬೆಳೆಸುವುದರ ಜೊತೆಗೆ, ವಿದ್ಯಾರ್ಥಿಗಳನ್ನು ಮೊಬೈಲ್ ಗುಲಾಮಗಿರಿಯಿಂದ ದೂರವಿರಿಸಿ ಪರೀಕ್ಷೆ ಎದುರಿಸುವ ಎದೆಗಾರಿಕೆ ನೀಡುತ್ತದೆ,” ಎಂದರು. ವೈಜ್ಞಾನಿಕ
ಇದನ್ನೂ ಓದಿ : ಜೈಪುರ ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ: 49 ಅಭ್ಯರ್ಥಿಗಳಿಗೆ ಮರುಪರೀಕ್ಷೆ
ಪುಸ್ತಕಗಳು ಮಸ್ತಕವನ್ನು ತೆರೆಯುತ್ತವೆ: ಚಿನ್ನೇನಹಳ್ಳಿ ಸ್ವಾಮಿ
ಸಮಾರೋಪ ನುಡಿಗಳನ್ನಾಡಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, “ಪುಸ್ತಕಗಳು ಮಸ್ತಕವನ್ನು ತೆರೆಯುತ್ತವೆ. ಶಾಲಾ ಪಠ್ಯಪುಸ್ತಕಗಳಿಗೆ ಗಡಿರೇಖೆಗಳಿರುತ್ತವೆ. ಆದರೆ ಸಾಹಿತ್ಯದ ಓದು ವಿಶಾಲ ಕಣ್ಣೋಟ ನೀಡಿ, ಶಾಲಾ ಅಭ್ಯಾಸವನ್ನು ಸುಲಭ ಹಾಗೂ ಆನಂದದಾಯಕವಾಗಿಸುತ್ತದೆ,” ಎಂದರು.
‘ಓದಿನ ಮಜಾ’ ಕಾರ್ಯಕ್ರಮಕ್ಕೆ ಮೆಚ್ಚುಗೆ
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಎನ್.ಎಸ್. ರಾಧಾ, “ಮಕ್ಕಳನ್ನು ಏಕತಾನತೆಯಿಂದ ಹೊರತಂದು ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಪ್ರತಿ ನಾಲ್ಕನೇ ಶನಿವಾರ ‘ಸಂಭ್ರಮದ ಶನಿವಾರ’ (ಬ್ಯಾಗ್ ರಹಿತ ದಿನ) ಆಚರಿಸಲಾಗುತ್ತಿದೆ. ಈ ದಿನದಂದು ಬಿಜಿವಿಎಸ್ ‘ಓದಿನ ಮಜಾ’ ಹಮ್ಮಿಕೊಂಡು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುತ್ತಿರುವುದು ಅಭಿನಂದನೀಯ,” ಎಂದರು.
ಸುಮಾರು 60 ವಿದ್ಯಾರ್ಥಿಗಳಿಂದ ಪುಸ್ತಕ ಓದು
ಕಾರ್ಯಕ್ರಮದಲ್ಲಿ ಸುಮಾರು 60 ವಿದ್ಯಾರ್ಥಿಗಳು ಬಿಜಿವಿಎಸ್ ಪ್ರಕಟಿತ ಹಾಗೂ ಸಂಗ್ರಹಿಸಿದ ಪುಸ್ತಕಗಳನ್ನು ಒಂದು ಗಂಟೆಯ ಕಾಲ ಓದಿ, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ತಾವು ಓದಿದ ಪುಸ್ತಕದ ಕುರಿತು ಅತ್ಯುತ್ತಮವಾಗಿ ಅಭಿಪ್ರಾಯ ಹಂಚಿಕೊಂಡ ಕವಿತಾ (ಪ್ರಥಮ), ಇಂಪನ (ದ್ವಿತೀಯ) ಹಾಗೂ ಚಿರಂತ್ (ತೃತೀಯ) ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮೀನಾ, ಮೀನಾಕ್ಷಿ, ಮೀನಾಕ್ಷಿ ಡಿ.ಎನ್., ರಶ್ಮಿ ಆರ್., ವಸಂತಮ್ಮ ಎಲ್.ಎಚ್. ಹಾಗೂ ಪಾಲಕ್ಷ ಅವರು ಗ್ರೂಪ್ ಲೀಡರ್‌ಗಳಾಗಿ ಮಾರ್ಗದರ್ಶನ ನೀಡಿದರು. ಶಿಕ್ಷಕ ರವೀಂದ್ರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ನೋಡಿ : ಇಸ್ರೋ ವಿಜ್ಞಾನಿಗಳ ರಾಜೀನಾಮೆ: ಭವಿಷ್ಯದ ಬಾಹ್ಯಾಕಾಶ ಕನಸುಗಳಿಗೆ ಎಚ್ಚರಿಕೆಯ ಗಂಟೆ? Janashakthi Media
