ರಾಜಸ್ಥಾನದಲ್ಲಿ ಸಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಆರೋಪ: ಬಿಜೆಪಿ ವಿರುದ್ಧ ಕೇಜ್ರಿವಾಲ್ ಕಿಡಿ

ನವದೆಹಲಿ: ರಾಜಸ್ಥಾನದಲ್ಲಿ ಸರ್ಕಾರಿ ಶಾಲೆಯ ಪರಿಶೀಲನೆಗೆ ತೆರಳಿದ್ದ ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ರಾಜಸ್ಥಾನದ ರಾಂಪುರ-ಕನ್ವರ್ಪುರ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ಸಿಜೆಪಿ ಕಾರ್ಯಕರ್ತರು ಭೇಟಿ ನೀಡಿದ್ದ ವೇಳೆ ಕಲ್ಲು ತೂರಾಟ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದಿಪ್ಕೆ ಆರೋಪಿಸಿದ್ದಾರೆ. ಪಕ್ಷದ ಸಹ ಸಂಚಾಲಕ ಆಶುತೋಷ್ ರಾಂಕಾ ಸೇರಿದಂತೆ ಹಲವು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಘಟನೆಯನ್ನು ಖಂಡಿಸಿರುವ ಕೇಜ್ರಿವಾಲ್, “ದೇಶದಲ್ಲಿ ಏನು ನಡೆಯುತ್ತಿದೆ?” ಎಂದು ಪ್ರಶ್ನಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕು ಎಂದು ಧ್ವನಿ ಎತ್ತಿದ್ದಕ್ಕಾಗಿ ಸಿಜೆಪಿ ಕಾರ್ಯಕರ್ತರ ಮೇಲೆ ದಾಳಿ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ಕಾರ್ಯಕರ್ತರನ್ನು ಥಳಿಸಿ, ಬಟ್ಟೆ ಹರಿದು, ಕಾರಿನ ಗಾಜುಗಳನ್ನು ಒಡೆದಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉತ್ತರ ಕೀ ಪ್ರಶ್ನೆಗೆ ₹200 ಶುಲ್ಕ ದುಬಾರಿ ಅಲ್ಲ’: ಆರೋಪ ತಳ್ಳಿಹಾಕಿದ ಎನ್‌ಟಿಎ

ಘಟನೆ ಕುರಿತು ಮಾತನಾಡಿರುವ ಆಶುತೋಷ್ ರಾಂಕಾ, ಗ್ರಾಮಕ್ಕೆ ಪ್ರವೇಶಿಸಿದ ಕೂಡಲೇ ದಾಳಿ ಆರಂಭವಾಯಿತು ಎಂದು ಆರೋಪಿಸಿದ್ದಾರೆ. ಗ್ರಾಮಸ್ಥರು ಕಲ್ಲು ತೂರಿದ್ದು, ಪೊಲೀಸರು ಮೂಕ ಪ್ರೇಕ್ಷಕರಾಗಿ ಉಳಿದಿದ್ದರು ಎಂದು ಅವರು ದೂರಿದ್ದಾರೆ. ತಮ್ಮ ತಂಡದ ಕೆಲವರ ಕೈಗಳಿಗೆ ಗಾಯವಾಗಿದ್ದು, ವಾಹನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಶಾಲೆಯ ಕಟ್ಟಡದ ಸ್ಥಿತಿಯನ್ನೂ ರಾಂಕಾ ಪ್ರಶ್ನಿಸಿದ್ದಾರೆ. ಕಳೆದ ಒಂದು ವರ್ಷದಿಂದ ಶಾಲೆ ಎಮ್ಮೆ ಕೊಟ್ಟಿಗೆಯೊಂದರಲ್ಲಿ ನಡೆಯುತ್ತಿದೆ ಎಂದು ಆರೋಪಿಸಿರುವ ಅವರು, ಶಾಲಾ ಕಟ್ಟಡವನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿದ್ದಾರೆ. ದಾಳಿಯ ಹಿಂದೆ ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರ ಕೈವಾಡವಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಆರೋಪಿಗಳು 48 ಗಂಟೆಗಳೊಳಗೆ ಬಂಧನವಾಗದಿದ್ದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಆದರೆ ಗ್ರಾಮಸ್ಥರು ಸಿಜೆಪಿಯ ಆರೋಪವನ್ನು ತಳ್ಳಿಹಾಕಿದ್ದು, ಶಾಲಾ ವಿಚಾರವನ್ನು ರಾಜಕೀಯಗೊಳಿಸಲು ತಾವು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಶಾಲೆಯ ಅಭಿವೃದ್ಧಿಗೆ ₹12 ಲಕ್ಷ ಮಂಜೂರಾಗಿದ್ದು, ಗ್ರಾಮಸ್ಥರೇ ಶಾಲಾ ಕಟ್ಟಡ ನಿರ್ಮಿಸಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ರಾಜಸ್ಥಾನದಲ್ಲಿ ಶಿಕ್ಷಣ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪ ಮತ್ತು ಪ್ರತಿಭಟನಾಕಾರರ ಮೇಲಿನ ದಾಳಿ ಕುರಿತು ರಾಜಕೀಯ ಚರ್ಚೆ ತೀವ್ರಗೊಂಡಿದೆ. ಸಿಜೆಪಿ ಕಾರ್ಯಕರ್ತರ ಮೇಲಿನ ದಾಳಿ ಆರೋಪದ ಕುರಿತು ಪೊಲೀಸರು ಕೈಗೊಳ್ಳುವ ಕ್ರಮ ಇದೀಗ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ನೋಡಿ : ಹಳೇ ಕ್ಯಾಮರಾ ಹೇಗಿತ್ತು ನೋಡಿ! ಆಗಿನ ತಂತ್ರಜ್ಞಾನ ಕಂಡರೆ ಅಚ್ಚರಿಯಾಗುತ್ತೆ! Janashakthi Media

Donate Janashakthi Media

Leave a Reply

Your email address will not be published. Required fields are marked *