ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಹಜವಾಗಿ ನಡೆಯಬೇಕಿದ್ದ ಆಡಳಿತಾತ್ಮಕ ಪ್ರಕ್ರಿಯೆಯಾಗಿದ್ದರೂ, ಇದೀಗ ಅದು ಹಗರಣದಂತೆ ಕಾಣುತ್ತಿದೆ. ಎಸ್‌ಐಆರ್‌ನ ಉದ್ದೇಶಗಳ ಬಗ್ಗೆ ಹಲವು ಅನುಮಾನಗಳು ಮೂಡಿವೆ ಎಂದು ನಟ ಕಿಶೋರ್ ಕುಮಾರ್ ಆರೋಪಿಸಿದರು. ಎಸ್‌ಐಆರ್
ನಗರದ ಗಾಂಧಿ ಭವನದಲ್ಲಿ ಗುರುವಾರ ನಾಗರಿಕ ಮತ ಕಾವಲು ಸಮಿತಿ ಆಯೋಜಿಸಿದ್ದ ‘ಮತಹರಣ ವಿರುದ್ಧ ಸಾಂಸ್ಕೃತಿಕ ಪ್ರತಿರೋಧ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಐಆರ್ ನಡೆಸುತ್ತಿರುವ ಚುನಾವಣಾ ಆಯೋಗದ ಪಾರದರ್ಶಕತೆ ಹಾಗೂ ಅದರ ಮೇಲಿನ ನಂಬಿಕೆಯೇ ಪ್ರಶ್ನಾರ್ಹವಾಗಿರುವ ಸಂದರ್ಭದಲ್ಲಿ ಈ ಪ್ರಕ್ರಿಯೆಯ ವಿಶ್ವಾಸಾರ್ಹತೆ ಬಗ್ಗೆ ಚರ್ಚೆ ನಡೆಯಬೇಕಿದೆ ಎಂದರು.
ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಇರಬೇಕಿತ್ತು. ಆದರೆ ಕಾನೂನು ತಂದು ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ಹೊರಗಿಡಲಾಯಿತು. ಅಲ್ಲಿಂದಲೇ ಚುನಾವಣಾ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಲಾಯಿತು. ಇದು ಸಂವಿಧಾನಕ್ಕೆ ಎಸಗಿದ ದೊಡ್ಡ ದ್ರೋಹ ಎಂದು ಕಿಶೋರ್ ಅಭಿಪ್ರಾಯಪಟ್ಟರು.
ನಂತರ ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತಗಳ್ಳತನದ ಆರೋಪಗಳು ಕೇಳಿಬಂದಿವೆ. ಇದೀಗ ಎಸ್‌ಐಆರ್ ಹೆಸರಿನಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಕಾರಣಕ್ಕೆ ಕೆಲವರನ್ನು ಮತದಾರರ ಪಟ್ಟಿಯಿಂದಲೇ ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
‘ಎಸ್‌ಐಆರ್ ಮೂಲಕ ಮನಸೋಇಚ್ಛೆ ಮತಗಳನ್ನು ಅಳಿಸಲಾಗುತ್ತಿದೆ. ಅದರ ಬೆನ್ನಿಗೆ ನ್ಯಾಯಾಂಗವೂ ನಿಂತಿರುವುದು ಪ್ರಜಾಪ್ರಭುತ್ವದ ದೊಡ್ಡ ದುರಂತ’ ಎಂದು ಕಿಶೋರ್ ಹೇಳಿದರು. ಎಸ್‌ಐಆರ್
ಇದನ್ನೂ ಓದಿ : ಬಳ್ಳಾರಿಯಲ್ಲಿ ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ; ಪಹಣಿಯಲ್ಲಿ ‘ಸರ್ಕಾರ’ ಎಂದು ನಮೂದು

ಎಸ್‌ಐಆರ್ ಕಾನೂನಿನ ಚೌಕಟ್ಟಿನಲ್ಲಿಯೇ ನಡೆಯುತ್ತಿರುವ ಪ್ರಕ್ರಿಯೆ ಎಂದು ನ್ಯಾಯಾಂಗ ಹೇಳಿರುವುದನ್ನು ಉಲ್ಲೇಖಿಸಿದ ಅವರು, ಇಂತಹ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗೆ ಯಾರಿಂದ ಏನನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆ ಎದುರಾಗುತ್ತದೆ ಎಂದರು.
‘ಎಸ್‌ಐಆರ್ ಯಾರು ಮಾಡುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಮತ್ತು ಏಕೆ ಮಾಡುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಿದೆ. ಒಂದು ಪಕ್ಷದ ಅಧಿಕಾರವನ್ನು ಉಳಿಸಿಕೊಳ್ಳಲು ಈ ಪ್ರಕ್ರಿಯೆ ಬಳಕೆಯಾಗುತ್ತಿದೆ ಎಂಬ ಅನುಮಾನವಿದೆ. ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಚುನಾವಣಾಧಿಕಾರಿಗಳಿಂದ ಎಷ್ಟು ಪಾರದರ್ಶಕವಾದ ಎಸ್‌ಐಆರ್ ನಿರೀಕ್ಷಿಸಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದರು.
ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾಗಿದ್ದು, ಯಾವುದೇ ಕಾರಣಕ್ಕೂ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡಬಾರದು. ಮತಹರಣದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಪ್ರಜಾಸತ್ತಾತ್ಮಕ ಪ್ರತಿರೋಧವನ್ನು ರೂಪಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ನಾಗರಿಕ ಮತ ಕಾವಲು ಸಮಿತಿಯ ಜೆ.ಎಂ. ವೀರಸಂಗಯ್ಯ, ಕಲಾವಿದೆ ಮಂಜುಳಾ, ಶಶಿರಾಜ್, ಗೌರಿ ಸಿರಿಮನೆ, ಚಂದ್ರಶೇಖರ್ ಸೊರಪಲ್ಲಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಎಸ್‌ಐಆರ್
ಇದನ್ನೂ ನೋಡಿ : LIVE : ಮತಹರಣ ವಿರುದ್ಧ ಸಾಂಸ್ಕೃತಿಕ ಪತ್ರಿರೋದ ಕಾರ್ಯಕ್ರಮ ನೇರಪ್ರಸಾರ
