ಪ್ರೌಢಶಾಲೆ ಹಂತಕ್ಕೆ ಮುನ್ನವೇ ಶೇ.73 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ: ಸಂಸದೀಯ ಸಮಿತಿ

ನವದೆಹಲಿ: ದೇಶದಲ್ಲಿ ಶಿಕ್ಷಣದ ಹಂತ ಮೇಲೇರಿದಂತೆ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಸುಮಾರು ಶೇ.73ರಷ್ಟು ವಿದ್ಯಾರ್ಥಿಗಳು ಉನ್ನತ ಪ್ರೌಢಶಾಲಾ ಶಿಕ್ಷಣ ಪೂರ್ಣಗೊಳಿಸುವ ಮೊದಲೇ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ ಎಂದು ಸಂಸದೀಯ ಅಂದಾಜು ಸಮಿತಿ ಕಳವಳ ವ್ಯಕ್ತಪಡಿಸಿದೆ. ಪ್ರೌಢಶಾಲೆ

ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯ ಕಾರ್ಯವೈಖರಿ ಹಾಗೂ ದೇಶದಲ್ಲಿ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣ ಒದಗಿಸುವ ಕುರಿತು ಪರಿಶೀಲನೆ ನಡೆಸಿದ ಸಮಿತಿಯ 2026-27ನೇ ಸಾಲಿನ ವರದಿ ಲೋಕಸಭೆಯಲ್ಲಿ ಮಂಡನೆಯಾಗಿದೆ. ವರದಿಯಲ್ಲಿ ಶಾಲಾ ಶಿಕ್ಷಣದ ಹಲವು ಪ್ರಮುಖ ಸಮಸ್ಯೆಗಳನ್ನು ಗುರುತಿಸಲಾಗಿದೆ.

ಮೇಲಿನ ತರಗತಿಗಳಿಗೆ ಹೋದಂತೆ ಶಾಲೆಗಳ ಸಂಖ್ಯೆ ಇಳಿಕೆ

ಯುಡಿಐಎಸ್‌ಇ 2024-25ರ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಸಮಿತಿ, ದೇಶದಲ್ಲಿರುವ 10.92 ಲಕ್ಷಕ್ಕೂ ಅಧಿಕ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಸುಮಾರು 9.11 ಲಕ್ಷ ಶಾಲೆಗಳು ಪ್ರಾಥಮಿಕ ಹಂತದಲ್ಲಿವೆ ಎಂದು ತಿಳಿಸಿದೆ. ಉನ್ನತ ಪ್ರಾಥಮಿಕ ಹಂತದಲ್ಲಿ 4.12 ಲಕ್ಷ, ಮಾಧ್ಯಮಿಕ ಹಂತದಲ್ಲಿ 1.61 ಲಕ್ಷ ಹಾಗೂ ಉನ್ನತ ಮಾಧ್ಯಮಿಕ ಹಂತದಲ್ಲಿ ಕೇವಲ 90,866 ಶಾಲೆಗಳಿವೆ.

ವಿದ್ಯಾರ್ಥಿಗಳ ದಾಖಲಾತಿಯಲ್ಲಿಯೂ ಇದೇ ರೀತಿಯ ಕುಸಿತ ಕಂಡುಬಂದಿದೆ. ಪ್ರಾಥಮಿಕ ಹಂತದಲ್ಲಿ 6.18 ಕೋಟಿಗೂ ಅಧಿಕ ವಿದ್ಯಾರ್ಥಿಗಳಿದ್ದರೆ, 6ರಿಂದ 8ನೇ ತರಗತಿಗಳಲ್ಲಿ ಈ ಸಂಖ್ಯೆ 4.08 ಕೋಟಿಗೆ ಇಳಿಯುತ್ತದೆ. ಮಾಧ್ಯಮಿಕ ಹಂತದಲ್ಲಿ 2.36 ಕೋಟಿ ಹಾಗೂ ಉನ್ನತ ಮಾಧ್ಯಮಿಕ ಹಂತದಲ್ಲಿ 1.64 ಕೋಟಿ ವಿದ್ಯಾರ್ಥಿಗಳಿದ್ದಾರೆ.

ಈ ಅಂಕಿಅಂಶಗಳು ಶಿಕ್ಷಣದ ಹಂತ ಹೆಚ್ಚಾದಂತೆ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿರುವುದನ್ನು ತೋರಿಸುತ್ತವೆ ಎಂದು ಸಮಿತಿ ಹೇಳಿದೆ.

ಶಾಲೆಗಳ ಮೇಲ್ದರ್ಜೆಗೆ ಒತ್ತಾಯ

ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಹಂತದಲ್ಲಿ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರದೇಶದಲ್ಲೇ ಪ್ರೌಢಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲು ಪ್ರಸ್ತುತ ಇರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ಮೇಲ್ದರ್ಜೆಗೇರಿಸುವಂತೆ ಅದು ಶಿಕ್ಷಣ ಸಚಿವಾಲಯಕ್ಕೆ ಸೂಚಿಸಿದೆ.

ಹೆಚ್ಚಿನ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೇಲೆ ಒತ್ತಡ ಹೇರುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಪ್ರೌಢಶಾಲೆ

ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆ ಅಕ್ರಮದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ 20ನೇ ದಿನಕ್ಕೆ

ಪಠ್ಯಪುಸ್ತಕಗಳ ಕೊರತೆ, ಪರೀಕ್ಷಾ ಒತ್ತಡ

9ರಿಂದ 12ನೇ ತರಗತಿಯ ಪಠ್ಯಕ್ರಮದಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದ್ದರೂ, ಅದಕ್ಕೆ ಅನುಗುಣವಾಗಿ ಹೊಸ ಪಠ್ಯಪುಸ್ತಕಗಳು ಎಲ್ಲೆಡೆ ಸಮಯಕ್ಕೆ ಸರಿಯಾಗಿ ಲಭ್ಯವಾಗದಿರುವುದು ಸಮಸ್ಯೆಯಾಗಿದೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಹಾಗೂ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2023ಕ್ಕೆ ಅನುಗುಣವಾಗಿ ಪಠ್ಯಕ್ರಮ ಬದಲಾಗುತ್ತಿದೆ. ಆದರೆ ಹೊಸ ಪಠ್ಯಪುಸ್ತಕಗಳ ಅಭಿವೃದ್ಧಿ, ಮುದ್ರಣ ಮತ್ತು ವಿತರಣೆಯಲ್ಲಿ ವಿಳಂಬವಾಗುತ್ತಿರುವುದರಿಂದ ಕೆಲವು ಶಾಲೆಗಳಲ್ಲಿ ಹಳೆಯ ಪಠ್ಯಸಾಮಗ್ರಿಗಳನ್ನೇ ಬಳಸಿಕೊಂಡು ಹೊಸ ಮಾದರಿಯ ಪಠ್ಯಕ್ರಮವನ್ನು ಬೋಧಿಸುವ ಪರಿಸ್ಥಿತಿ ಇದೆ ಎಂದು ಸಮಿತಿ ಗಮನಿಸಿದೆ. ಪ್ರೌಢಶಾಲೆ

ಇದರ ಜತೆಗೆ ಹೊಸ ಮಾದರಿಯ, ಅನ್ವಯಾಧಾರಿತ ಮಂಡಳಿ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ, ವಿಶೇಷವಾಗಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಒತ್ತಡ ಮತ್ತು ಗೊಂದಲವನ್ನು ಹೆಚ್ಚಿಸುತ್ತಿವೆ ಎಂದು ಅದು ಹೇಳಿದೆ.

ಉಳಿದ ಹೊಸ ಪಠ್ಯಪುಸ್ತಕಗಳ ಮುದ್ರಣ ಮತ್ತು ವಿತರಣೆಯನ್ನು ತ್ವರಿತಗೊಳಿಸುವಂತೆ ಹಾಗೂ ಶಿಕ್ಷಕರಿಗೆ ಹೊಸ ಬೋಧನಾ ವಿಧಾನಗಳ ಕುರಿತು ದೇಶವ್ಯಾಪಿ ತರಬೇತಿ ನೀಡುವಂತೆ ಸಮಿತಿ ಶಿಫಾರಸು ಮಾಡಿದೆ.

ಶಿಕ್ಷಕರ ತರಬೇತಿಯಲ್ಲಿ ಕುಸಿತ

ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರಿಗೆ ಪ್ರತಿ ವರ್ಷ ಕನಿಷ್ಠ 50 ಗಂಟೆಗಳ ತರಬೇತಿ ನೀಡುವ ವ್ಯವಸ್ಥೆ ಹೊಂದಿದೆ. ಕಳೆದ ಐದು ವರ್ಷಗಳಲ್ಲಿ ಆನ್‌ಲೈನ್ ಮತ್ತು ನೇರ ತರಬೇತಿ ಕಾರ್ಯಕ್ರಮಗಳ ಮೂಲಕ ಒಂದು ಕೋಟಿಗೂ ಹೆಚ್ಚು ಭಾಗವಹಿಸುವವರಿಗೆ ತರಬೇತಿ ನೀಡಿರುವುದನ್ನು ಸಮಿತಿ ಪ್ರಶಂಸಿಸಿದೆ.

ಆದರೆ ಆನ್‌ಲೈನ್ ಶಿಕ್ಷಕರ ತರಬೇತಿಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. 2022ರಲ್ಲಿ 53 ಲಕ್ಷಕ್ಕೂ ಅಧಿಕ ಭಾಗವಹಿಸುವವರಿದ್ದರೆ, 2025ರಲ್ಲಿ ಈ ಸಂಖ್ಯೆ ಸುಮಾರು 1.63 ಲಕ್ಷಕ್ಕೆ ಕುಸಿದಿದೆ ಎಂದು ವರದಿ ತಿಳಿಸಿದೆ.

ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿನ ಸಣ್ಣ ಖಾಸಗಿ ಶಾಲೆಗಳಿಗೆ ಶಿಕ್ಷಕರ ತರಬೇತಿಯ ವೆಚ್ಚವೂ ಹೊರೆಯಾಗಿದೆ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ಖಾಸಗಿ ಶಾಲೆಗಳ ಶಿಕ್ಷಕರಿಗೆ ತರಬೇತಿ ಸುಲಭವಾಗಿ ದೊರೆಯುವಂತೆ ಶುಲ್ಕ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಸಮಿತಿ ಸೂಚಿಸಿದೆ. ಪ್ರೌಢಶಾಲೆ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಮೂಲಸೌಕರ್ಯ ಕೊರತೆ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕೂಲವಾಗುವ ಮೂಲಸೌಕರ್ಯಗಳ ಕೊರತೆಯನ್ನೂ ಸಮಿತಿ ಗಂಭೀರವಾಗಿ ಪರಿಗಣಿಸಿದೆ.

2024-25ರ ಅಂಕಿಅಂಶಗಳ ಪ್ರಕಾರ ದೇಶದ ಸುಮಾರು 14.71 ಲಕ್ಷ ಶಾಲೆಗಳಲ್ಲಿ ಕೇವಲ 5.23 ಲಕ್ಷ ಶಾಲೆಗಳಲ್ಲಿ ಮಾತ್ರ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅನುಕೂಲವಾಗುವ ಶೌಚಾಲಯಗಳಿವೆ. ಸುಮಾರು 8.08 ಲಕ್ಷ ಶಾಲೆಗಳಲ್ಲಿ ಮಾತ್ರ ಕೈಹಿಡಿಕೆ ವ್ಯವಸ್ಥೆಯಿರುವ ಇಳಿಜಾರು ಮಾರ್ಗಗಳಿವೆ.

ಇಂತಹ ಮೂಲಸೌಕರ್ಯಗಳ ಕೊರತೆಯಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣದ ಅವಕಾಶ ಸಮಾನವಾಗಿ ದೊರೆಯುತ್ತಿಲ್ಲ ಎಂದು ಸಮಿತಿ ಹೇಳಿದೆ. ವಿಶೇಷ ಶಿಕ್ಷಕರ ನೇಮಕಾತಿ ಹಾಗೂ ಅವರ ಲಭ್ಯತೆಯಲ್ಲಿಯೂ ಇನ್ನಷ್ಟು ಸುಧಾರಣೆ ಅಗತ್ಯವಿದೆ ಎಂದು ಅದು ತಿಳಿಸಿದೆ.

ಶಿಕ್ಷಣ ವೆಚ್ಚ ಹೆಚ್ಚಿಸಲು ಶಿಫಾರಸು

ರಾಷ್ಟ್ರೀಯ ಶಿಕ್ಷಣ ನೀತಿ 2020ರ ಗುರಿಯಂತೆ ಶಿಕ್ಷಣ ಕ್ಷೇತ್ರಕ್ಕೆ ಸಾರ್ವಜನಿಕ ವೆಚ್ಚವನ್ನು ದೇಶದ ಒಟ್ಟು ದೇಶೀಯ ಉತ್ಪನ್ನದ ಶೇ.6ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ಸಮಿತಿ ಒತ್ತಿಹೇಳಿದೆ.

ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಶಿಕ್ಷಣ ವೆಚ್ಚ ಜಿಡಿಪಿಯ ಸುಮಾರು ಶೇ.4.1ರಷ್ಟಿದೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹಂತಹಂತವಾಗಿ ಹೆಚ್ಚಿನ ಅನುದಾನ ಒದಗಿಸುವ ಸ್ಪಷ್ಟ ಹಣಕಾಸು ಯೋಜನೆ ರೂಪಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಶಿಕ್ಷಣ ಸಚಿವಾಲಯಕ್ಕೆ 1.39 ಲಕ್ಷ ಕೋಟಿ ರೂ. ಅನುದಾನ ಒದಗಿಸಿರುವುದನ್ನು ವರದಿ ಉಲ್ಲೇಖಿಸಿದೆ. ಶಿಕ್ಷಣದ ಮೇಲಿನ ವೆಚ್ಚವನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಶಾಲಾ ಮೂಲಸೌಕರ್ಯ, ಡಿಜಿಟಲ್ ಸೌಲಭ್ಯ, ಶಿಕ್ಷಕರ ತರಬೇತಿ ಮತ್ತು ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುವತ್ತ ಗಮನಹರಿಸಬೇಕು ಎಂದು ಸಮಿತಿ ತಿಳಿಸಿದೆ. ಪ್ರೌಢಶಾಲೆ

ಇದನ್ನೂ ನೋಡಿ : ಕ್ಯಾಸ್ಟ್ರೊ 100 | ಕ್ಯೂಬಾದ ಮೇಲೆ 66 ವರ್ಷಗಳ ಯುಎಸ್‌ ಕ್ರೂರ ದಿಗ್ಬಂಧನ! ಪುಟ್ಟ ರಾಷ್ಟ್ರದ ಮೇಲೆ ಯಾಕಿಷ್ಟು ದ್ವೇಷ?

Donate Janashakthi Media

Leave a Reply

Your email address will not be published. Required fields are marked *