ಕರ್ನಾಟಕದಲ್ಲಿ ಗುಟ್ಕಾ, ಪಾನ್‌ ಮಸಾಲಾ ತಯಾರಿಕೆ ಮತ್ತು ಮಾರಾಟಕ್ಕೆ ಒಂದು ವರ್ಷ ನಿಷೇಧ

ಬೆಂಗಳೂರು: ತಂಬಾಕು ಅಥವಾ ನಿಕೋಟಿನ್‌ ಹೊಂದಿರುವ ಗುಟ್ಕಾ ಹಾಗೂ ಪಾನ್‌ ಮಸಾಲಾ ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟಕ್ಕೆ ಕರ್ನಾಟಕದಲ್ಲಿ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತರ ಕಚೇರಿ ಈ ಕುರಿತು ಆದೇಶ ಹೊರಡಿಸಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗಿದೆ. ಈ ನಿಷೇಧವು ಅಧಿಸೂಚನೆ ಹೊರಡಿಸಿದ ದಿನದಿಂದಲೇ ಜಾರಿಗೆ ಬಂದಿದೆ.

ತಂಬಾಕು ಅಥವಾ ನಿಕೋಟಿನ್‌ ಹೊಂದಿರುವ ಗುಟ್ಕಾ ಮತ್ತು ಪಾನ್‌ ಮಸಾಲಾ ಮಾತ್ರವಲ್ಲದೆ, ಅಂತಿಮ ಉತ್ಪನ್ನದಲ್ಲಿ ತಂಬಾಕು ಅಥವಾ ನಿಕೋಟಿನ್‌ ಹೊಂದಿರುವ ಇತರ ಉತ್ಪನ್ನಗಳಿಗೂ ಆದೇಶ ಅನ್ವಯಿಸುತ್ತದೆ.

ಉತ್ಪನ್ನದ ಹೆಸರೇನೇ ಇರಲಿ, ಪ್ಯಾಕೆಟ್‌ನಲ್ಲಿ ಅಥವಾ ಪ್ಯಾಕೆಟ್‌ ಇಲ್ಲದೆ ಮಾರಾಟವಾಗುತ್ತಿದ್ದರೂ ನಿಷೇಧದಿಂದ ವಿನಾಯಿತಿ ಇರುವುದಿಲ್ಲ ಎಂದು ಆಹಾರ ಸುರಕ್ಷತಾ ಇಲಾಖೆ ಸ್ಪಷ್ಟಪಡಿಸಿದೆ.

ಇದಲ್ಲದೆ, ತಂಬಾಕು ಮತ್ತು ನಿಕೋಟಿನ್‌ ಹೊಂದಿರುವ ವಸ್ತುಗಳನ್ನು ಪ್ರತ್ಯೇಕವಾಗಿ ಪ್ಯಾಕ್‌ ಮಾಡಿ ಮಾರಾಟ ಮಾಡಿದರೂ, ಅವುಗಳನ್ನು ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿಕೊಂಡು ಬಳಸುವ ರೀತಿಯಲ್ಲಿ ಮಾರಾಟ ಅಥವಾ ವಿತರಣೆ ಮಾಡುವುದಕ್ಕೂ ನಿಷೇಧ ಅನ್ವಯವಾಗಲಿದೆ.

ಇದನ್ನೂ ಓದಿ : ಪ್ರವೇಶ ಶುಲ್ಕದ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹ: ಎಸ್‌ಎಫ್‌ಐ ದಿಢೀರ್ ಪ್ರತಿಭಟನೆ

ಒಂದು ವರ್ಷ ಜಾರಿ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನುಗಳ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ 2011ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಾವಳಿಗಳ ಅಡಿಯಲ್ಲಿ ನಿಷೇಧ ವಿಧಿಸಲಾಗಿದೆ.

ನಿಷೇಧದ ಅವಧಿಯಲ್ಲಿ ಗುಟ್ಕಾ ಮತ್ತು ನಿಕೋಟಿನ್‌ಯುಕ್ತ ಪಾನ್‌ ಮಸಾಲಾಗಳ ತಯಾರಿಕೆ, ದಾಸ್ತಾನು, ಸಾಗಣೆ, ವಿತರಣೆ ಮತ್ತು ಮಾರಾಟದ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತರ ಕಚೇರಿ ತಿಳಿಸಿದೆ.

ಇದನ್ನೂ ನೋಡಿ : ‘ಬಂಡವಾಳಶಾಹಿಯ ಬಿಕ್ಕಟ್ಟು ತೀವ್ರ ಹಂತ ತಲುಪಿದೆ’: ಕ್ಯೂಬಾ ಅಧ್ಯಕ್ಷ ಡಿಯಾಜ್-ಕ್ಯಾನೆಲ್ Janashakthi Media

Donate Janashakthi Media

Leave a Reply

Your email address will not be published. Required fields are marked *