18 ತಿಂಗಳೊಳಗೆ ಎಲ್ಲ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿ; ನೇಮಕಾತಿಯಲ್ಲಿ ವಿಳಂಬ ಮಾಡಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುದಾನ ಸ್ಥಗಿತಗೊಳಿಸುವ ಎಚ್ಚರಿಕೆ
ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಉಳಿದಿರುವ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಸರ್ಕಾರ ರಾಜ್ಯಾದ್ಯಂತ ಒಂದೇ ಅಧಿಸೂಚನೆ ಹೊರಡಿಸಲು ನಿರ್ಧರಿಸಿದೆ. ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯೊಂದಿಗೆ ಈ ಹುದ್ದೆಗಳನ್ನು ವಿಲೀನಗೊಳಿಸದೆ, ಪ್ರತ್ಯೇಕವಾಗಿ ನೇಮಕಾತಿ ನಡೆಸಲು ಸಂಪುಟ ಉಪಸಮಿತಿ ಸೂಚನೆ ನೀಡಿದೆ. ರಾಜ್ಯಾದ್ಯಂತ
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಗುರುವಾರ ವಿಕಾಸಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ. ಇಡೀ ರಾಜ್ಯಕ್ಕೆ ಒಂದೇ ಅಧಿಸೂಚನೆ ಹೊರಡಿಸಿದ ಬಳಿಕ ಜಿಲ್ಲಾವಾರು ಹುದ್ದೆಗಳ ಹಂಚಿಕೆ ನಿರ್ಧರಿಸಬಹುದು. ಪ್ರತಿ ಜಿಲ್ಲೆಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸುವ ಅಗತ್ಯವಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.
ವಿವಿಧ ಇಲಾಖೆಗಳಲ್ಲಿನ ಬ್ಯಾಕ್ಲಾಗ್ ಹುದ್ದೆಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲು ವಿಶೇಷ ಕಾರ್ಯಾಚರಣೆ ನಡೆಸಲು ಸಭೆ ತೀರ್ಮಾನಿಸಿದೆ. ಈ ಪ್ರಕ್ರಿಯೆಯ ಮೂಲಕ ಮುಂದಿನ 18 ತಿಂಗಳೊಳಗೆ ಎಲ್ಲ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿ ನಿಗದಿಪಡಿಸಲಾಗಿದೆ. ಬ್ಯಾಕ್ಲಾಗ್ ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯಿಂದ ಹೊಸದಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬ ವಿಚಾರವೂ ಸಭೆಯಲ್ಲಿ ಚರ್ಚೆಯಾಗಿದೆ. ನೇಮಕಾತಿಗೆ ಅರ್ಹತೆ ಮತ್ತು ವಯೋಮಾನದ ಮಾನದಂಡಗಳನ್ನು ಆಧರಿಸಿ ಪ್ರಕ್ರಿಯೆ ಮುಂದುವರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯಾದ್ಯಂತ
ಇದನ್ನೂ ಓದಿ : ಸಂಡೆ ಬಜಾರ್ ಹೋರಾಟಕ್ಕೆ CITU ಜಯ; 95 ವ್ಯಾಪಾರಿಗಳಿಗೆ ನಗರಪಾಲಿಕೆ ಅನುಮತಿ
ಅನುದಾನಿತ ಶಾಲಾ-ಕಾಲೇಜುಗಳ ವಿಳಂಬಕ್ಕೆ ಅಸಮಾಧಾನ
ಅನುದಾನಿತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಸ್ಸಿ, ಎಸ್ಟಿ ಬ್ಯಾಕ್ಲಾಗ್ ಹುದ್ದೆಗಳು ಖಾಲಿ ಉಳಿದಿರುವುದಕ್ಕೆ ಸಂಪುಟ ಉಪಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೇಮಕಾತಿ ನಡೆಸಲು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಸಿದ್ಧವಿದ್ದರೂ, ಸರ್ಕಾರದ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂಬ ಆರೋಪಗಳ ಕುರಿತು ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಲಾಗಿದೆ. ನೇಮಕಾತಿಗೆ ಅನಗತ್ಯವಾಗಿ ವಿಳಂಬ ಮಾಡದೆ, ಬಾಕಿ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ನಿರ್ಲಕ್ಷ್ಯ ತೋರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ನೀಡುವ ಅನುದಾನವನ್ನು ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ಸಮಿತಿ ನೀಡಿದೆ. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಸಭೆಗೆ ಗೈರಾಗಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ನೋಟಿಸ್ ನೀಡುವಂತೆ ಸೂಚಿಸಲಾಗಿದೆ.
ಎಸ್ಸಿ, ಎಸ್ಟಿ ಸಮುದಾಯಗಳ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದು ಸರ್ಕಾರಿ ಉದ್ಯೋಗಗಳಲ್ಲಿ ಈ ಸಮುದಾಯಗಳ ಪ್ರಾತಿನಿಧ್ಯವನ್ನು ಖಚಿತಪಡಿಸುವ ದೃಷ್ಟಿಯಿಂದ ಮಹತ್ವದ್ದಾಗಿದೆ. ದೀರ್ಘಕಾಲದಿಂದ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿದ್ದರೂ, ನೇಮಕಾತಿ ಅಧಿಸೂಚನೆ ಪ್ರಕಟವಾಗುವ ದಿನಾಂಕ, ಒಟ್ಟು ಹುದ್ದೆಗಳ ಸಂಖ್ಯೆ ಮತ್ತು ಇಲಾಖಾವಾರು ವಿವರಗಳನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಸತೀಶ್ ಜಾರಕಿಹೊಳಿ, ಟಿ. ರಘುಮೂರ್ತಿ ಮತ್ತು ಕೆ.ಎಸ್. ಬಸವಂತಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯಾದ್ಯಂತ
ಇದನ್ನೂ ನೋಡಿ : ಗುತ್ತಿಗೆ ಕಾರ್ಮಿಕರ ಶೋಷಣೆ: ಎಜೆನ್ಸಿ ಮಾಫೀಯಾಗೆ ಬಲಿಯಾಗುತ್ತಿರುವ ಕಾರ್ಮಿಕರ ಬದುಕು! Janashakthi Media
