ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: 17 ಮಂದಿ ಗಾಯ

ನವದೆಹಲಿ: ಆಗಸ್ಟ್ 4ರಂದು ದೆಹಲಿಯಿಂದ ಫುಕೆಟ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸಂಭವಿಸಿದ ಘಟನೆಗೆ ಪ್ರಮುಖ ತಾಂತ್ರಿಕ ದೋಷವೇ ಕಾರಣವಾಗಿದ್ದು, ಈ ಘಟನೆಯಲ್ಲಿ 17 ಮಂದಿ ಗಾಯಗೊಂಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಪೈಲಟ್‌ಗಳ ತಕ್ಷಣದ ಕ್ರಮದಿಂದ ವಿಮಾನದಲ್ಲಿದ್ದ 145 ಜನರ ಜೀವ ಉಳಿದಿರುವುದಾಗಿ ತಿಳಿದುಬಂದಿದೆ.

ಆರಂಭದಲ್ಲಿ ಹವಾಮಾನ ಅಸ್ಥಿರತೆಯನ್ನು ಕಾರಣವೆಂದು ಹೇಳಲಾಗಿದ್ದರೂ, ಬಳಿಕ ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯೇ 137 ಪ್ರಯಾಣಿಕರು ಹಾಗೂ ಎಂಟು ಸಿಬ್ಬಂದಿಯ ಜೀವಕ್ಕೆ ಅಪಾಯ ತಂದಿತ್ತು ಎಂಬುದು ಸ್ಪಷ್ಟವಾಗಿದೆ. ಏರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ಮಧ್ಯಾಹ್ನ ಮತ್ತು ಸಂಜೆ ನಡುವೆ ‘ಟರ್ಬ್ಯುಲೆನ್ಸ್’ ಎಂಬ ಪದವನ್ನು ಕೈಬಿಟ್ಟಿರುವುದೂ ಇದಕ್ಕೆ ಸೂಚಕವಾಗಿದೆ.

ಎರ್‌ಲೈನ್ ಪೈಲಟ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಕ್ಯಾಪ್ಟನ್ ಸ್ಯಾಮ್ ಥಾಮಸ್ ವಿವರಿಸುವಂತೆ, ರಾತ್ರಿ ಸುಮಾರು 10.30ರ ವೇಳೆಗೆ ಒಡಿಶಾದ ಝಾರ್ಸುಗುಡಾ ವಲಯಕ್ಕೆ ಪ್ರವೇಶಿಸುತ್ತಿದ್ದಾಗ ವಿಮಾನದಲ್ಲಿ ತ್ರಿವಳಿ ಹೈಡ್ರಾಲಿಕ್ ವ್ಯವಸ್ಥೆಯ ವೈಫಲ್ಯ ಕಂಡುಬಂದಿತು. ಈ ವ್ಯವಸ್ಥೆಗಳು ವಿಮಾನದ ನಿಯಂತ್ರಣ ಮತ್ತು ಕಾರ್ಯನಿರ್ವಹಣೆಗೆ ಅತ್ಯಂತ ಪ್ರಮುಖವಾಗಿವೆ.

ಇದನ್ನೂ ಓದಿ: ಒಂದು ತಿಂಗಳಿನಿಂದ ಹಿಂಬಾಲನೆ, ಕಿರುಕುಳ: ಕೂರಿಯರ್ ಬಾಯ್ ವಿರುದ್ಧ ಪ್ರಕರಣ

ಪೂರ್ಣ ಹೈಡ್ರಾಲಿಕ್ ವೈಫಲ್ಯ ಕಂಡುಬಂದ ಕೂಡಲೇ ಪೈಲಟ್ ಸಹಪೈಲಟ್‌ಗೆ ವಿಮಾನದ ಮುಂಭಾಗವನ್ನು ಕೆಳಕ್ಕೆ ತಳ್ಳಲು ಸೂಚಿಸಿದರು. ಇದರ ಪರಿಣಾಮವಾಗಿ ವಿಮಾನವು ಸುಮಾರು 300 ಮೀಟರ್ ಎತ್ತರದಿಂದ ಕುಸಿದಿದ್ದು, ನೆಗೆಟಿವ್ ಜಿ ಪರಿಣಾಮದಿಂದ ಪ್ರಯಾಣಿಕರು ಒಳಗೆ ಎಸೆಯಲ್ಪಟ್ಟರು.

ಈ ತ್ವರಿತ ಕ್ರಮವೇ ದೊಡ್ಡ ದುರಂತವನ್ನು ತಪ್ಪಿಸಿದೆ ಎಂದು ಥಾಮಸ್ ಹೇಳಿದ್ದಾರೆ. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ವಿಮಾನವನ್ನು 800 ಅಡಿ ತನಕ ಕೆಳಗೆ ಇಳಿಸಿ ಸ್ಥಿರಗೊಳಿಸಲಾಗುತ್ತದೆ. ಆದರೆ ಕೇವಲ 300 ಮೀಟರ್ ಇಳಿಸಿ ಸ್ಥಿರಗೊಳಿಸಿರುವುದು ಗಮನಾರ್ಹ ಸಾಧನೆ ಎಂದು ಅವರು ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಒಬ್ಬ ಪೈಲಟ್ ಕೂಡ ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿದ ಅನುಭವ ಎದುರಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕರಿಗೆ ಮುಂಚಿತವಾಗಿ ಸೀಟ್‌ಬೆಲ್ಟ್ ಧರಿಸಲು ಸೂಚನೆ ನೀಡಬಹುದಿತ್ತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಅಂತಹ ಸಂದರ್ಭಗಳಲ್ಲಿ ಕ್ಷಣಾರ್ಧದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ‘Aviate, Navigate, Communicate’ ಎಂಬುದೇ ಪ್ರಾಥಮಿಕ ನಿಯಮ” ಎಂದು ಹೇಳಿದ್ದಾರೆ.

ಪೈಲಟ್‌ಗೆ ಲಖ್ನೋ ಅಥವಾ ದೆಹಲಿಯಲ್ಲಿ ಲ್ಯಾಂಡ್ ಮಾಡುವ ಆಯ್ಕೆಯಿದ್ದರೂ, ಉತ್ತಮ ವೈದ್ಯಕೀಯ ಸೌಲಭ್ಯಗಳಿಗಾಗಿ ದೆಹಲಿಯನ್ನು ಆಯ್ಕೆ ಮಾಡಿದರು. ಅವರು ಕೇವಲ ಏಳು ನಿಮಿಷಗಳಲ್ಲಿ ದೆಹಲಿಗೆ ವಿಮಾನವನ್ನು ತಲುಪಿಸಿದರು ಎಂದು ತಿಳಿದುಬಂದಿದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಡೇಟಾವನ್ನು ವಿಶ್ಲೇಷಿಸಿದ ಬಳಿಕ ಘಟನೆಯ ನಿಖರ ವಿವರಗಳು ಇನ್ನಷ್ಟು ಸ್ಪಷ್ಟವಾಗಲಿವೆ.

ಏರ್ ಇಂಡಿಯಾ ಹೇಳಿಕೆಯಲ್ಲಿ ಬದಲಾವಣೆ

ಘಟನೆ ಬಳಿಕ ಮಧ್ಯಾಹ್ನ ನೀಡಿದ ಹೇಳಿಕೆಯಲ್ಲಿ ಏರ್ ಇಂಡಿಯಾ “ಸ್ವಲ್ಪ ಸಮಯದ ಟರ್ಬ್ಯುಲೆನ್ಸ್‌ನಿಂದ ಎತ್ತರದಲ್ಲಿ ಬದಲಾವಣೆ ಉಂಟಾಯಿತು” ಎಂದು ಹೇಳಿತ್ತು. ಆದರೆ ಸಂಜೆ ಹೊರಡಿಸಿದ ಹೊಸ ಹೇಳಿಕೆಯಲ್ಲಿ “ಕ್ರೂಸ್ ಹಂತದಲ್ಲಿ ಏಕಾಏಕಿ ಎತ್ತರ ಕುಸಿತ” ಎಂದು ಹೇಳಿ ‘ಟರ್ಬ್ಯುಲೆನ್ಸ್’ ಪದವನ್ನು ಕೈಬಿಟ್ಟಿದೆ.

ಈ ಬದಲಾವಣೆಯ ಕುರಿತು ಪ್ರಶ್ನಿಸಿದಾಗ, ಸಂಸ್ಥೆಯ ಮೂಲಗಳು ತಾಜಾ ಹೇಳಿಕೆಯನ್ನು ಅನುಸರಿಸಲು ಸೂಚಿಸಿವೆ.

ಇದೇ ವೇಳೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಕೂಡ ಪ್ರಾಥಮಿಕವಾಗಿ “ತಾತ್ಕಾಲಿಕ ತಾಂತ್ರಿಕ ದೋಷ”ವೇ ಸುಮಾರು 300 ಅಡಿ ಎತ್ತರ ಕುಸಿತಕ್ಕೆ ಕಾರಣವಾಗಿರಬಹುದು ಎಂದು ತಿಳಿಸಿದೆ.

ಇದನ್ನೂ ನೋಡಿ: ಕುಡತಿನಿ ಭೂ ಹೋರಾಟ | “ಭೂಮಿ ಕಿತ್ತುಕೊಂಡು ಬದುಕು ಕಸಿದವರನ್ನು ಸೋಲಿಸಿ” – ಜಸ್ಟೀಸ್ ವಿ. ಗೋಪಾಲಗೌಡ

Donate Janashakthi Media

Leave a Reply

Your email address will not be published. Required fields are marked *