ಬಿಜಿವಿಎಸ್ ರಾಜ್ಯ ಸಮ್ಮೇಳನ: ಶಿಕ್ಷಣ – ವಿಜ್ಞಾನ ಕ್ಷೇತ್ರಕ್ಕೆ 15 ಪ್ರಮುಖ ನಿರ್ಣಯಗಳು

ಬೆಂಗಳೂರು: ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಕರ್ನಾಟಕ ರಾಜ್ಯದ 2026–27ನೇ ಸಾಲಿನ ರಾಜ್ಯ ಸಮ್ಮೇಳನವು ಆಗಸ್ಟ್ 8 ಮತ್ತು 9ರಂದು ಬೆಂಗಳೂರಿನ ಸಚಿವಾಲಯದ ಚೆನ್ನಬಸವಣ್ಣ ಸಭಾಂಗಣದಲ್ಲಿ ನಡೆಯಿತು. ಬಿಜಿವಿಎಸ್

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಆಯ್ದ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿ, ಪ್ರಸ್ತುತ ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಹಾಗೂ ಪರಿಸರ ಕ್ಷೇತ್ರಗಳ ಪ್ರಮುಖ ಸವಾಲುಗಳ ಕುರಿತು ಸಮಗ್ರವಾಗಿ ಚರ್ಚಿಸಿದರು. ಬಿಜಿವಿಎಸ್

ಸಮ್ಮೇಳನದ ಪ್ರಮುಖ ನಿರ್ಣಯಗಳು

ಸಮ್ಮೇಳನದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಒಟ್ಟು 15 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅವುಗಳಲ್ಲಿ ಪ್ರಮುಖವಾದವುಗಳು:

1. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ವಿಶೇಷ ಕಾರ್ಯಕ್ರಮಗಳು

ಭಾರತವು ವೈಜ್ಞಾನಿಕವಾಗಿ ಸಧೃಢವಾದಾಗ ಮಾತ್ರ ಜಾಗತಿಕ ಮಟ್ಟದಲ್ಲಿ ಪ್ರಧಾನ ಪಾತ್ರ ವಹಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಈ ಕುರಿತು ಸಮಗ್ರ ಕೈಪಿಡಿ ಸಿದ್ಧಪಡಿಸಿ, ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿ: ವಿದ್ಯಾರ್ಥಿಗಳ ವಿರುದ್ಧ ಪ್ರಭುತ್ವ – ಕಲಿಯಬೇಕಾದ ಪಾಠಗಳು

2. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಒತ್ತು

ಸರ್ಕಾರಿ ಶಾಲೆಗಳನ್ನು ಬಲಪಡಿಸಿದಾಗ ಮಾತ್ರ ದೇಶವು ಶೈಕ್ಷಣಿಕವಾಗಿ ಹಾಗೂ ವೈಚಾರಿಕವಾಗಿ ಬಲಿಷ್ಠವಾಗಲು ಸಾಧ್ಯ. ಆದ್ದರಿಂದ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸಮ್ಮೇಳನ ಒತ್ತಾಯಿಸಿತು.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಅಧ್ಯಯನ ನಡೆಸಿ, ಸಮಗ್ರ ವರದಿ ಸಿದ್ಧಪಡಿಸಿ, ಅದರ ಆಧಾರದ ಮೇಲೆ ಸರ್ಕಾರದ ಗಮನ ಸೆಳೆಯಲು ಹಾಗೂ ಅಗತ್ಯ ಕ್ರಮಕ್ಕಾಗಿ ಒತ್ತಡ ತರಲು ನಿರ್ಧರಿಸಲಾಯಿತು.

3. ಶಾಲಾ ಇಕೋಕ್ಲಬ್‌ಗಳ ಮೂಲಕ ಪರಿಸರ ಜಾಗೃತಿ

ಪರಿಸರ ಸಂರಕ್ಷಣೆ ಇಂದಿನ ಜಾಗತಿಕ ಸವಾಲಾಗಿರುವ ಹಿನ್ನೆಲೆಯಲ್ಲಿ ಶಾಲೆಗಳ ಇಕೋಕ್ಲಬ್‌ಗಳನ್ನು ಮತ್ತಷ್ಟು ಸಕ್ರಿಯಗೊಳಿಸಿ, ಪರಿಸರ ಸಾಕ್ಷರತೆ, ಪರಿಸರ ಮಾದರಿ ನಿರ್ಮಾಣ, ವೃಕ್ಷ ಸಂರಕ್ಷಣೆ ಹಾಗೂ ಜನಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

4. ‘ಓದಿನ ಮಜ’ ಚಟುವಟಿಕೆಗೆ ಉತ್ತೇಜನ

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವ ಉದ್ದೇಶದಿಂದ ಶಾಲೆಗಳಲ್ಲಿ ವಾರಕ್ಕೆ ಒಂದು ದಿನ ವಿಜ್ಞಾನ ಮತ್ತು ಜ್ಞಾನವರ್ಧಕ ಪುಸ್ತಕಗಳ ಓದಿಗೆ ಅವಕಾಶ ಕಲ್ಪಿಸುವ ‘ಓದಿನ ಮಜ’ ಚಟುವಟಿಕೆಯನ್ನು ವ್ಯವಸ್ಥಿತವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

5. ಮಹಿಳಾ ಅಧ್ಯಯನ ಮತ್ತು ಮಹಿಳಾ ಬಲವರ್ಧನೆ

ಮಹಿಳಾ ಅಧ್ಯಯನವನ್ನು ವೈಜ್ಞಾನಿಕ ಹಾಗೂ ವಸ್ತುನಿಷ್ಠ ನೆಲೆಯಲ್ಲಿ ಕೈಗೊಳ್ಳುವ ಮೂಲಕ ಮಹಿಳೆಯರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಬಲವರ್ಧನೆಗೆ ಪೂರಕವಾಗುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

6. ಸರ್ಕಾರಿ ಶಾಲೆಗಳ ವಿಲೀನ ಮತ್ತು ಮುಚ್ಚುವಿಕೆಗೆ ವಿರೋಧ

ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಅಥವಾ ಮುಚ್ಚುವ ಪ್ರಕ್ರಿಯೆಯನ್ನು ಸಮ್ಮೇಳನ ತೀವ್ರವಾಗಿ ವಿರೋಧಿಸಿತು. ಶಾಲೆಗಳ ವಿಲೀನ ಅಥವಾ ಮುಚ್ಚುವಿಕೆಯಿಂದ ಉಂಟಾಗಬಹುದಾದ ಶೈಕ್ಷಣಿಕ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

7. ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರ ನೇಮಕಕ್ಕೆ ಒತ್ತಾಯ

ಅತಿಥಿ ಶಿಕ್ಷಕರ ನೇಮಕಾತಿ ವ್ಯವಸ್ಥೆಯ ಬದಲಾಗಿ, ಶಿಕ್ಷಣ ಕ್ಷೇತ್ರದಲ್ಲಿ ಖಾಯಂ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಪಾರದರ್ಶಕ ಹಾಗೂ ನಿಯಮಬದ್ಧ ರೀತಿಯಲ್ಲಿ ನೇಮಕ ಮಾಡಬೇಕು ಎಂದು ಸಮ್ಮೇಳನ ಒತ್ತಾಯಿಸಿತು. ಈ ಹಿನ್ನೆಲೆಯಲ್ಲಿ ಯುವಜನರಲ್ಲಿ ಸಂವಿಧಾನ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ಅವರ ಉದ್ಯೋಗದ ಹಕ್ಕು ಮತ್ತು ಅವಕಾಶಗಳ ಕುರಿತು ಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.

ಇವುಗಳ ಜೊತೆಗೆ ಶಿಕ್ಷಣ, ವಿಜ್ಞಾನ, ಪರಿಸರ, ಮಹಿಳಾ ಸಬಲೀಕರಣ, ಯುವಜನತೆ ಹಾಗೂ ಸಾಮಾಜಿಕ ಜಾಗೃತಿಗೆ ಸಂಬಂಧಿಸಿದಂತೆ ಒಟ್ಟು 15 ನಿರ್ಣಯಗಳನ್ನು ಸಮ್ಮೇಳನ ಅಂಗೀಕರಿಸಿತು.

ಬಿಜಿವಿಎಸ್‌ನ ಚಟುವಟಿಕೆಗಳನ್ನು ರಾಜ್ಯದ ಪ್ರತಿಯೊಂದು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟಕ್ಕೆ ವಿಸ್ತರಿಸುವ ಮೂಲಕ ವೈಜ್ಞಾನಿಕ ಮನೋಭಾವ, ಸಂವಿಧಾನಿಕ ಮೌಲ್ಯಗಳು, ಪರಿಸರ ಪ್ರಜ್ಞೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಜನರಲ್ಲಿ ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲು ಸಮ್ಮೇಳನ ಕರೆ ನೀಡಿತು.

ಇದನ್ನೂ ನೋಡಿ: ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *