ಉದ್ಘಾಟನೆಯ 18 ದಿನಗಳಲ್ಲೇ 84 ಕಡೆ ಭೂಮಿ ಕುಸಿತ; ಗುತ್ತಿಗೆದಾರ ಸಂಸ್ಥೆ ವಿರುದ್ಧ ಕ್ರಮ
ಲಕ್ನೋ: ಉತ್ತರ ಪ್ರದೇಶದ ಲಕ್ನೋ–ಕಾನ್ಪುರ ಎಕ್ಸ್‌ಪ್ರೆಸ್‌ವೇ ಉದ್ಘಾಟನೆಯಾದ ಕೇವಲ 18 ದಿನಗಳಲ್ಲೇ ಹಲವು ಕಡೆ ಭೂಮಿ ಕುಸಿತಗೊಂಡಿದ್ದು, ರಸ್ತೆ ನಿರ್ಮಾಣದ ಗುಣಮಟ್ಟದ ಕುರಿತು ಗಂಭೀರ ಪ್ರಶ್ನೆಗಳು ಎದುರಾಗಿವೆ. 63 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇಯಲ್ಲಿ ಒಟ್ಟು 84 ಕಡೆ ರಸ್ತೆ ಕುಸಿದಿರುವುದಾಗಿ ವರದಿಯಾಗಿದೆ.
ಕಾನ್ಪುರದತ್ತ ಸಾಗುವ ಮಾರ್ಗದಲ್ಲಿ 39 ಕಡೆ ಹಾಗೂ ಲಕ್ನೋ ಕಡೆ ಸಾಗುವ ಮಾರ್ಗದಲ್ಲಿ 45 ಕಡೆ ತಾತ್ಕಾಲಿಕ ದುರಸ್ತಿ ಕಾಮಗಾರಿ ನಡೆಸಲಾಗಿದೆ. ಲಕ್ನೋದಿಂದ ಉನ್ನಾವ್‌ಗೆ ಸಾಗುವ ಮಾರ್ಗದ ಇಸ್ರಾಯಿಲ್ ಖೇಡಾ ಬಳಿ ಸುಮಾರು 200 ಮೀಟರ್ ವ್ಯಾಪ್ತಿಯಲ್ಲಿ ಮತ್ತೆ ದುರಸ್ತಿ ಕಾರ್ಯ ಕೈಗೊಳ್ಳಲಾಗಿದ್ದು, ಇತ್ತೀಚಿನ ಮಳೆಯಿಂದಾಗಿ ಅಲ್ಲೊಂದು ಗುಂಡಿ ನಿರ್ಮಾಣವಾಗಿದೆ ಎಂದು ವರದಿ ತಿಳಿಸಿದೆ.
ಜುಲೈ 30ರಂದು ಕಲ್ಲು ತುಂಬಿಕೊಂಡು ತೆರಳುತ್ತಿದ್ದ ಟ್ರಕ್‌ವೊಂದು ರಸ್ತೆ ಕುಸಿತದಿಂದ ಸಿಲುಕಿಕೊಂಡಿದ್ದು, ಚಕ್ರವನ್ನು ಹೊರತೆಗೆಯುವ ಸಂದರ್ಭದಲ್ಲಿ ಟ್ರಕ್ ಉರುಳಿದೆ ಎಂದು ಅಲ್ಲಿನ ಕಾರ್ಮಿಕರು ತಿಳಿಸಿದ್ದಾರೆ. ಎಕ್ಸ್‌ಪ್ರೆಸ್‌ವೇ ಕುಸಿತದ ಕುರಿತು ಪ್ರತಿಕ್ರಿಯಿಸಿರುವ ಲಕ್ನೋ ವಿಭಾಗದ ಹಿರಿಯ ಎಂಜಿನಿಯರ್ ಶೈಲೇಂದ್ರ ಸಿಂಗ್, ಮಣ್ಣು ತುಂಬುವಿಕೆ ಹಾಗೂ ರಸ್ತೆ ಅಡಿಪಾಯ ನಿರ್ಮಾಣದ ಸಂದರ್ಭದಲ್ಲಿ ಅಕ್ರಮಗಳು ನಡೆದಿರುವ ಸಾಧ್ಯತೆ ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಸಂಸ್ಥೆ ವಿರುದ್ಧ ಕ್ರಮ
ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಗುತ್ತಿಗೆ ಪಡೆದಿದ್ದ ಪಿಎನ್‌ಸಿ ಇನ್‌ಫ್ರಾಟೆಕ್ ಲಿಮಿಟೆಡ್ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಸಂಸ್ಥೆಯನ್ನು ಕಳಪೆ ಕಾರ್ಯನಿರ್ವಹಣೆ ಮಾಡಿದ ಕಂಪನಿಯೆಂದು ಘೋಷಿಸಿ, ಸಂಸ್ಥೆಯ ಮೂವರು ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಅಲ್ಲದೆ, ಮುಂದಿನ ಎರಡು ವರ್ಷಗಳ ಕಾಲ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಸಂಸ್ಥೆಯನ್ನು ನಿಷೇಧಿಸಲಾಗಿದೆ ಎಂದು ವರದಿ ತಿಳಿಸಿದೆ.
ರಸ್ತೆ ಕುಸಿತಕ್ಕೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲು ಐಐಟಿ ಖರಗ್‌ಪುರದ ತಜ್ಞರ ತಂಡ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ : ‘ಫ್ರೀಡಮ್ ಫ್ರಂ ವೇಸ್ಟ್’ ವೇಗಕ್ಕೆ ಮಂತ್ರಿ ತಾಕೀತು: ಸ್ವಚ್ಛತೆಗೆ ನಿರ್ಲಕ್ಷ್ಯ ಮಾಡಿದ ಇಲಾಖೆಗಳಿಗೆ ನೋಟಿಸ್
ಬಿಜೆಪಿ ಸಂಸದನ ಸಹೋದರನ ಸಂಸ್ಥೆಗೆ ಗುತ್ತಿಗೆ
ವರದಿಯ ಪ್ರಕಾರ, ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಗುತ್ತಿಗೆಯನ್ನು ಪಿಎನ್‌ಸಿ ಇನ್‌ಫ್ರಾಟೆಕ್ ಸಂಸ್ಥೆ ಪಡೆದಿತ್ತು. ಸಂಸ್ಥೆಯ ಮಾಲೀಕ ಪ್ರദೀಪ್ ಜೈನ್ ಅವರು ಬಿಜೆಪಿ ರಾಜ್ಯಸಭಾ ಸದಸ್ಯ ನವೀನ್ ಜೈನ್ ಅವರ ಸಹೋದರ ಎಂದು ವರದಿ ಹೇಳಿದೆ. 2022ರ ಫೆಬ್ರವರಿ 23ರಂದು ನಿರ್ಮಾಣ ಗುತ್ತಿಗೆ ನೀಡಲಾಗಿತ್ತು.
ಇದಕ್ಕೂ ಮೊದಲು 2024ರ ಅಕ್ಟೋಬರ್‌ನಲ್ಲಿ ಹೊಸ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ಪಿಎನ್‌ಸಿ ಇನ್‌ಫ್ರಾಟೆಕ್ ಸಂಸ್ಥೆಗೆ ಸರ್ಕಾರ ನಿಷೇಧ ಹೇರಿತ್ತು. ಅದರ ಅಂಗಸಂಸ್ಥೆಗಳಾದ ಪಿಎನ್‌ಸಿ ಖಜುರಾಹೊ ಹೈವೇಸ್ ಮತ್ತು ಪಿಎನ್‌ಸಿ ಬುಂದೇಲ್‌ಖಂಡ್ ಹೈವೇಸ್‌ಗಳ ಮೇಲೂ ಇದೇ ಕ್ರಮ ಕೈಗೊಳ್ಳಲಾಗಿತ್ತು. ಸಿಬಿಐ ದಾಖಲಿಸಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿತ್ತು ಎಂದು ವರದಿ ತಿಳಿಸಿದೆ.
ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಎಕ್ಸ್‌ಪ್ರೆಸ್‌ವೇಯ ಹಲವು ಕಡೆ ರಸ್ತೆ ಕುಸಿತಗೊಂಡಿರುವುದು, ಕಾಮಗಾರಿಯ ಗುಣಮಟ್ಟ, ಗುತ್ತಿಗೆ ಪ್ರಕ್ರಿಯೆ ಮತ್ತು ಮೇಲ್ವಿಚಾರಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಸ್ತೆ ಕುಸಿತಕ್ಕೆ ನಿಖರ ಕಾರಣವನ್ನು ಐಐಟಿ ಖರಗ್‌ಪುರದ ತಜ್ಞರ ಪರಿಶೀಲನಾ ವರದಿ ಬಳಿಕವೇ ಸ್ಪಷ್ಟವಾಗಿ ತಿಳಿಯಬೇಕಿದೆ.
ಇದನ್ನೂ ನೋಡಿ : ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media
