ಜಾರ್ಖಂಡ್‌| 2ನೇ ವಾರಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ: ಪರೀಕ್ಷೆ ರದ್ದುಪಡಿಸಲು ಒತ್ತಾಯ

ರಾಂಚಿ: ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸೇವಾ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಎರಡನೇ ವಾರಕ್ಕೆ ಕಾಲಿಟ್ಟಿದೆ. ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ JPSC-JSSC ರಿಫಾರ್ಮ್ಸ್ ಮರ್ಚ್ ಹೆಸರಿನಲ್ಲಿ ಈ ಆಂದೋಲನ ನಡೆಯುತ್ತಿದೆ.

ಪ್ರತಿಭಟನಾಕಾರರು 14ನೇ JPSC ಸಿವಿಲ್ ಸರ್ವೀಸ್ ಪ್ರಿಲಿಮಿನರಿ ಪರೀಕ್ಷೆಯನ್ನು ರದ್ದುಪಡಿಸುವಂತೆ, ಅಕ್ರಮಗಳ ಕುರಿತು ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ (JPSC) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (JSSC) ಕಾರ್ಯವೈಖರಿಯಲ್ಲಿ ಸಮಗ್ರ ಸುಧಾರಣೆ ತರಲು ಆಗ್ರಹಿಸುತ್ತಿದ್ದಾರೆ.

ಆಗಸ್ಟ್‌ 7ರಂದು ಸರ್ಕಾರ ಮತ್ತು ವಿದ್ಯಾರ್ಥಿಗಳ ನಡುವೆ ನಡೆದ ಮೊದಲ ಅಧಿಕೃತ ಮಾತುಕತೆ ಸ್ನೇಹಪೂರ್ಣವಾಗಿ ಮುಗಿದರೂ ಯಾವುದೇ ಸ್ಪಷ್ಟ ಪರಿಹಾರ ದೊರಕಲಿಲ್ಲ. ಪ್ರತಿಭಟನಾಕಾರರು ಆಗಸ್ಟ್ 10ರವರೆಗೆ ಗಡುವು ನೀಡಿದ್ದು, ಬೇಡಿಕೆಗಳು ಈಡೇರದಿದ್ದರೆ ವಿಧಾನಸಭೆ ಕಡೆ ಮರ್ಚ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಂದೇ ಆಧಾರ್‌ಗೆ ಎರಡು ಸಂಬಳ: ತೆಲಂಗಾಣದಲ್ಲಿ ಬೃಹತ್ ಹಗರಣ ಬಯಲು

ರಾಜ್ಯದ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾರ್ ನೇತೃತ್ವದ ಸಚಿವರ ತಂಡ ಮತ್ತು JPSC/JSSC ರಿಫಾರ್ಮ್ಸ್ ಮಂಚ್‌ನ 10 ಸದಸ್ಯರ ಪ್ರತಿನಿಧಿ ಮಂಡಳಿ ಭಾಗವಹಿಸಿತು. ಅಧಿಕಾರಿಗಳು ವಿದ್ಯಾರ್ಥಿಗಳ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಗಣಿಸುವುದಾಗಿ ಭರವಸೆ ನೀಡಿದರೂ, ಭಾನುವಾರದೊಳಗೆ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ ಮರ್ಚ್ ಮುಂದುವರಿಸುವುದಾಗಿ ವಿದ್ಯಾರ್ಥಿಗಳು ಸ್ಪಷ್ಟಪಡಿಸಿದ್ದಾರೆ.

ಇದಕ್ಕೂ ಮುನ್ನ, ಸರ್ಕಾರದ ಆಕ್ಷೇಪಣೆ ಹಿನ್ನೆಲೆಯಲ್ಲಿ ಮೂಲ 11 ಸದಸ್ಯರ ತಂಡದಲ್ಲಿ ಇದ್ದ ವಕೀಲ ಮತ್ತು ಇಬ್ಬರು ತಾಂತ್ರಿಕ ತಜ್ಞರನ್ನು ಹೊರಗಿಟ್ಟು ಪ್ರತಿನಿಧಿ ಮಂಡಳಿಯನ್ನು ಮರುರಚಿಸಲಾಯಿತು. ಹೊಸ ತಂಡದಲ್ಲಿ ರವೀಂದ್ರ ಪಾಸ್ವಾನ್, ಪಿಯೂಷ್ ಕುಮಾರ್, ರಾಜೇಶ್ ಪ್ರಸಾದ್, ನೀತು ಕುಜೂರ್, ಅಂಕಿತ್ ರಾಜ್, ಕಾರ್ತಿಕ್ ಸೋರೇನ್ ಮತ್ತು ಶಾಲು ಕುಮಾರಿ ಸೇರಿದ್ದಾರೆ.

ಇನ್ನೊಂದೆಡೆ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ AISA ಮತ್ತು AISF ಕೂಡ ಪ್ರತಿಭಟನೆಗೆ ಬೆಂಬಲ ಸೂಚಿಸಿ ವಿಧಾನಸಭೆ ಕಡೆ ಮೆರವಣಿಗೆ ನಡೆಸಿವೆ.

ಈ ನಡುವೆ, ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ವರದಿಗಳು ಹೊರಬಿದ್ದಿವೆ. ಈ ಸಂಘಟನೆ ಈಗಾಗಲೇ ವಿದ್ಯಾರ್ಥಿ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ದಿಪ್ಕೆ ಅವರ ಭೇಟಿ ಪ್ರತಿಭಟನೆಗೆ ರಾಜಕೀಯ ತಿರುವು ನೀಡುವ ಸಾಧ್ಯತೆಯಿದೆ. ವಿಶೇಷವಾಗಿ NEET ಪರೀಕ್ಷೆ ಅಕ್ರಮ ವಿರೋಧಿ ಆಂದೋಲನದಲ್ಲೂ CJP ಪಾತ್ರವಹಿಸಿದ್ದ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಚಳವಳಿಗಳಿಗೆ ಬೆಂಬಲ ನೀಡುವ ವೇದಿಕೆಯಾಗಿ ಈ ಸಂಘಟನೆ ತನ್ನನ್ನು ಪ್ರಸ್ತುತಪಡಿಸಲು ಯತ್ನಿಸುತ್ತಿದೆ.

ಒಟ್ಟಾರೆ, ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸುತ್ತಿದ್ದು, ನೇಮಕಾತಿ ಪರೀಕ್ಷೆಗಳ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತ ಬೇಡಿಕೆಗಳಿಗೆ ಸ್ಪಂದನೆ ನೀಡುವ ಅಗತ್ಯವನ್ನು ಎತ್ತಿಹಿಡಿಯುತ್ತಿದೆ.

ಇದನ್ನೂ ನೋಡಿ: ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *