ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಡ್ರಾಪ್‌ಔಟ್‌ ಮಾಹಿತಿ ಇಲ್ಲ: ಕೇಂದ್ರ ಸರ್ಕಾರದ ಉತ್ತರಕ್ಕೆ ಸಿಪಿಐ(ಎಂ) ಸಂಸದ ಸಚ್ಚಿದಾನಂದಂ ಟೀಕೆ

ನವದೆಹಲಿ: ದೇಶದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಾಲೆ ತೊರೆಯುವಿಕೆ (ಡ್ರಾಪ್‌ಔಟ್) ಕುರಿತು ಧರ್ಮವಾರು ನಿಖರವಾದ ದತ್ತಾಂಶವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಮತ್ತು ಡ್ರಾಪ್‌ಔಟ್‌ ಕುರಿತು ಸಿಪಿಐ(ಎಂ) ದಿಂಡಿಗಲ್ ಸಂಸದ ಆರ್. ಸಚ್ಚಿದಾನಂದಂ ಅವರು ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಜುಲೈ 29ರಂದು ನೀಡಿದ ಉತ್ತರದಲ್ಲಿ ಈ ಮಾಹಿತಿ ಹೊರಬಿದ್ದಿದೆ. ಅಲ್ಪಸಂಖ್ಯಾತ

ಕಳೆದ ಐದು ಶೈಕ್ಷಣಿಕ ವರ್ಷಗಳಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶಾಲೆ ತೊರೆಯುವವರ ಪ್ರಮಾಣವನ್ನು ಧರ್ಮವಾರು ನೀಡುವಂತೆ ಸಚ್ಚಿದಾನಂದಂ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಯುಡಿಐಎಸ್‌ಇ+ ದತ್ತಾಂಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ಒಟ್ಟಾಗಿ ದಾಖಲಿಸಲಾಗುತ್ತಿದೆಯೇ ಹೊರತು ಧರ್ಮವಾರು ಪ್ರತ್ಯೇಕವಾಗಿ ದಾಖಲಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇದೇ ರೀತಿ ಡ್ರಾಪ್‌ಔಟ್ ಪ್ರಮಾಣವನ್ನೂ ಅಲ್ಪಸಂಖ್ಯಾತ ಸಮುದಾಯ ಅಥವಾ ಧರ್ಮದ ಆಧಾರದ ಮೇಲೆ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಾಥಮಿಕದಿಂದ ಉನ್ನತ ಮಾಧ್ಯಮಿಕದವರೆಗೆ ದಾಖಲಾತಿ

ಕೇಂದ್ರ ಸರ್ಕಾರ ನೀಡಿರುವ ಯುಡಿಐಎಸ್‌ಇ+ ದತ್ತಾಂಶದ ಪ್ರಕಾರ, 2025-26ನೇ ಸಾಲಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಒಟ್ಟು 10.19 ಕೋಟಿ ವಿದ್ಯಾರ್ಥಿಗಳು ದಾಖಲಾಗಿದ್ದು, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಂಖ್ಯೆ 2.21 ಕೋಟಿ ಅಥವಾ 21.8% ಆಗಿದೆ.

ಹಿರಿಯ ಪ್ರಾಥಮಿಕ ಹಂತದಲ್ಲಿ ಒಟ್ಟು 6.32 ಕೋಟಿ ದಾಖಲಾತಿಯಲ್ಲಿ 1.23 ಕೋಟಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದು, ಅವರ ಪ್ರಮಾಣ 19.6% ಆಗಿದೆ. ಮಾಧ್ಯಮಿಕ ಶಿಕ್ಷಣದಲ್ಲಿ 3.82 ಕೋಟಿ ದಾಖಲಾತಿಯಲ್ಲಿ 71.49 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದು, ಪ್ರಮಾಣ 18.7% ಆಗಿದೆ. ಉನ್ನತ ಮಾಧ್ಯಮಿಕ ಹಂತದಲ್ಲಿ 2.88 ಕೋಟಿ ದಾಖಲಾತಿಯಲ್ಲಿ 49.23 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿದ್ದು, ಅವರ ಪ್ರಮಾಣ 17.1% ಆಗಿದೆ.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ 2023-24ರ ಎಐಎಸ್‌ಹೆಚ್‌ಇ (AISHE) ಸಮೀಕ್ಷೆ ಪ್ರಕಾರ ಒಟ್ಟು 4.50 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ದಾಖಲಾಗಿದ್ದಾರೆ. ಈ ಪೈಕಿ 22.52 ಲಕ್ಷ ಮುಸ್ಲಿಂ ವಿದ್ಯಾರ್ಥಿಗಳಿದ್ದು, ಅವರಲ್ಲಿ 11.65 ಲಕ್ಷ ಮಹಿಳೆಯರಾಗಿದ್ದಾರೆ. ಇತರ ಅಲ್ಪಸಂಖ್ಯಾತ ಸಮುದಾಯಗಳಿಂದ 10.79 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಲ್ಲಿ 5.71 ಲಕ್ಷ ಮಹಿಳೆಯರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೋರ್ಸ್‌ಗಳನ್ನು ಬದಲಾಯಿಸುವ ಸಾಧ್ಯತೆ ಇರುವುದರಿಂದ, ಶಾಲಾ ಶಿಕ್ಷಣದಂತೆ ‘ಡ್ರಾಪ್‌ಔಟ್’ ಎಂಬ ಪರಿಕಲ್ಪನೆಯನ್ನು ಇಲ್ಲಿ ಅನ್ವಯಿಸಲಾಗುವುದಿಲ್ಲ ಎಂದೂ ಸರ್ಕಾರ ತನ್ನ ಉತ್ತರದಲ್ಲಿ ಹೇಳಿದೆ. ಅಲ್ಪಸಂಖ್ಯಾತ

ಇದನ್ನೂ ಓದಿ : ‘ಫ್ರೀಡಮ್ ಫ್ರಂ ವೇಸ್ಟ್’ ವೇಗಕ್ಕೆ ಮಂತ್ರಿ ತಾಕೀತು: ಸ್ವಚ್ಛತೆಗೆ ನಿರ್ಲಕ್ಷ್ಯ ಮಾಡಿದ ಇಲಾಖೆಗಳಿಗೆ ನೋಟಿಸ್

‘ದತ್ತಾಂಶವಿಲ್ಲದೆ ಯೋಜನೆಗಳ ಫಲಿತಾಂಶ ಅಳೆಯುವುದು ಹೇಗೆ?’

ಕೇಂದ್ರ ಸರ್ಕಾರದ ಉತ್ತರದ ಕುರಿತು ಪ್ರತಿಕ್ರಿಯಿಸಿರುವ ಸಂಸದ ಆರ್. ಸಚ್ಚಿದಾನಂದಂ, ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿವಿಧ ವಿದ್ಯಾರ್ಥಿವೇತನ ಮತ್ತು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿಕೊಳ್ಳುವ ಸರ್ಕಾರ, ಅವರ ಶಾಲೆ ತೊರೆಯುವಿಕೆಯ ಮೂಲಭೂತ ಮಾಹಿತಿಯನ್ನೇ ನಿರ್ವಹಿಸದಿರುವುದು ನಿರ್ಲಕ್ಷ್ಯದ ಸಂಕೇತ ಎಂದು ಟೀಕಿಸಿದ್ದಾರೆ.

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಡ್ರಾಪ್‌ಔಟ್‌ಗೆ ಸಂಬಂಧಿಸಿದ ನಿಖರವಾದ ಧರ್ಮವಾರು ದತ್ತಾಂಶ ಇಲ್ಲದಿರುವಾಗ, ಸರ್ಕಾರದ ಯೋಜನೆಗಳ ಪ್ರಯೋಜನಗಳು ನಿಜವಾಗಿಯೂ ಅಗತ್ಯವಿರುವ ವಿದ್ಯಾರ್ಥಿಗಳನ್ನು ತಲುಪುತ್ತಿವೆಯೇ ಎಂಬುದನ್ನು ಹೇಗೆ ನಿರ್ಣಯಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಾಥಮಿಕ ಶಿಕ್ಷಣದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದಾಖಲಾತಿ 21.8% ಇದ್ದು, ಉನ್ನತ ಮಾಧ್ಯಮಿಕ ಹಂತಕ್ಕೆ ಬರುವ ವೇಳೆಗೆ ಅದು 17.1%ಕ್ಕೆ ಇಳಿಯುತ್ತಿರುವುದು ಗಮನಾರ್ಹ ಎಂದು ಸಚ್ಚಿದಾನಂದಂ ಹೇಳಿದ್ದಾರೆ. ಆದ್ದರಿಂದ ಒಟ್ಟಾರೆ ಅಂಕಿ-ಅಂಶಗಳ ಬದಲಿಗೆ ಧರ್ಮವಾರು ನಿಖರವಾದ ದತ್ತಾಂಶ ಸಂಗ್ರಹಿಸಬೇಕು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ವಿದ್ಯಾರ್ಥಿವೇತನ ಸೇರಿದಂತೆ ಅಗತ್ಯ ಶೈಕ್ಷಣಿಕ ನೆರವು ಒದಗಿಸಿ, ಅವರ ಉನ್ನತ ಶಿಕ್ಷಣ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಡ್ರಾಪ್‌ಔಟ್ ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ನೋಡಿ : ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media

Donate Janashakthi Media

Leave a Reply

Your email address will not be published. Required fields are marked *