ಇಸ್ರೋ ವಿಜ್ಞಾನಿಗಳ ರಾಜಿನಾಮೆ ಹುಟ್ಟಿಸಿದ ತಲ್ಲಣ !

ಕಳೆದ ಎರಡು ದಿನಗಳಿಂದ ದೇಶದ ಪ್ರತಿಷ್ಟಿತ ಸಂಸ್ಥೆ ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಯ ವಿಜ್ಞಾನಿಗಳು ಸಾಲು ಸಾಲಾಗಿ ರಾಜಿನಾಮೆ ಸಲ್ಲಿಸಿ ಖಾಸಗಿ ಕಂಪನಿಗಳಿಗೆ ಕೆಲಸ ಸೇರುತ್ತಿರುವುದು ಸಾರ್ವಜನಿಕರಿಗೆ ಕಳವಳ ತಂದ ಸಂಗತಿ. ಇಸ್ರೋ ಸಂಸ್ಥೆ ಸ್ವತ: ಪ್ರಧಾನ ಮಂತ್ರಿಗಳಿಂದ ಪ್ರಶಂಸೆಗೆ ಒಳಗಾದ ಸಂಸ್ಥೆ. ಚಂದ್ರಯಾನದಂತ ಅನೇಕ ಮಹತ್ವಾಕಾಂಕ್ಷಿ ಯೋಜನೆಗಳನ್ನು ನಡೆಸಿ ಜನರ ಗಮನ ಸೆಳೆದು ಭರವಸೆ ಮೂಡಿಸಿದ ಸಂಸ್ಥೆ. ಇಂತಹ ಸಂಸ್ಥೆಯ ಪ್ರಮುಖ ಯೋಜನೆಗಳ ನಿರ್ದೇಶಕರೇ ರಾಜಿನಾಮೆ ಬಿಸಾಕಿ ಹೋಗುತ್ತಿರುವುದು ಈಗಲಾದರೂ ಸಾರ್ವಜನಿಕರ ಗಮನ ಸೆಳೆಯುತ್ತಿರುವುದು ಉತ್ತಮ ವಿಷಯ. ಆದರೆ ಇಂತಹದೇ ಅನೇಕ ಸಂಸ್ಥೆಗಳಿಂದ ಸಹಾ ವಿಜ್ಞಾನಿಗಳ ಪ್ರತಿಭಾ ನಿರ್ಗಮನ (ಪ್ರತಿಭಾ ಪಲಾಯನ ಇದು ತಪ್ಪು ಶಬ್ಧ) ವಾಗುತ್ತಿರುವುದು ಖೇದಕರ ವಿಷಯ. ಇಸ್ರೋ

– ಡಾ| ಎನ್. ಬಿ. ಶ್ರೀಧರ

ವಿಜ್ಞಾನಿಗಳನ್ನು ಉಳಿಸಿಕೊಳ್ಳಲಾಗದ ದೇಶ ವೈಜ್ಞಾನಿಕ ಮಹಾಶಕ್ತಿಯಾಗಬಹುದೇ?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ — ಇಸ್ರೋದಿಂದ ನೂರಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಇತ್ತೀಚಿನ ತಿಂಗಳುಗಳಲ್ಲಿ ರಾಜೀನಾಮೆ ನೀಡಿರುವುದು ಅಥವಾ ಸ್ವಯಂ ನಿವೃತ್ತಿ ಪಡೆದಿರುವುದು ವರದಿಯಾಗಿದೆ. ಗಗನಯಾನ ಸೇರಿದಂತೆ ಪ್ರಮುಖ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನಿಗಳ ನಿರ್ಗಮನವನ್ನು ನಿಯಂತ್ರಿಸಲು ಬಾಹ್ಯಾಕಾಶ ಇಲಾಖೆ ರಾಜೀನಾಮೆ ಮತ್ತು ಸ್ವಯಂ ನಿವೃತ್ತಿಯ ಅನುಮೋದನಾ ಕ್ರಮವನ್ನು ಬಿಗಿಗೊಳಿಸಿದೆ.

ಆದರೆ ಇಲ್ಲಿ ಕೇಳಬೇಕಾದ ಪ್ರಶ್ನೆ ವಿಜ್ಞಾನಿಗಳು ಏಕೆ ರಾಜೀನಾಮೆ ಕೊಡುತ್ತಿದ್ದಾರೆ ಎಂಬುದಕ್ಕಿಂತ, ಅವರು ಉಳಿಯಲು ಅನುಕೂಲವಾದ ವಾತಾವರಣವನ್ನು ನಾವು ಏಕೆ ನಿರ್ಮಿಸಿಲ್ಲ? ಇಸ್ರೋ

ಇದನ್ನೂ ಓದಿ: ಪ್ರಶಾಂತ್ ಕಿಶೋರ್: ರಾಜಕೀಯ ತಂತ್ರಜ್ಞರಿಂದ ಚುನಾವಣಾ ಅಖಾಡಕ್ಕೆ

ಇಸ್ರೋ ಸಾಮಾನ್ಯ ಸರ್ಕಾರಿ ಸಂಸ್ಥೆಯಲ್ಲ. ಅದು ಭಾರತದ ವೈಜ್ಞಾನಿಕ ಸಾಮರ್ಥ್ಯದ ಸಂಕೇತ. ಚಂದ್ರಯಾನ, ಮಂಗಳಯಾನ, ಆದಿತ್ಯ–ಎಲ್‌1 ಮತ್ತು ಗಗನಯಾನದಂತಹ ಕಾರ್ಯಕ್ರಮಗಳಿಂದ ಜಗತ್ತಿನ ಗಮನ ಸೆಳೆದ ಸಂಸ್ಥೆ. ಪ್ರಧಾನಮಂತ್ರಿಯಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಇಸ್ರೋದ ಸಾಧನೆಗಳನ್ನು ಹೆಮ್ಮೆಯಿಂದ ಆಚರಿಸುತ್ತಾರೆ. ಅದಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ, ರಾಜಕೀಯ ಗಮನ ಮತ್ತು ಇತರ ಅನೇಕ ಸಂಶೋಧನಾ ಸಂಸ್ಥೆಗಳಿಗಿಂತ ಹೆಚ್ಚಿನ ಸಾರ್ವಜನಿಕ ಮಾನ್ಯತೆಯೂ ಇದೆ. ಇಸ್ರೋ

ಆದರೂ ಅಲ್ಲಿಯೇ ಪ್ರತಿಭಾವಂತ ವಿಜ್ಞಾನಿಗಳು ಹೊರಹೋಗುತ್ತಿದ್ದಾರೆ ಎಂದರೆ, ಉಳಿದ ವಿಶ್ವವಿದ್ಯಾಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು, ಪಶುವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ಸರ್ಕಾರಿ ಪ್ರಯೋಗಾಲಯಗಳ ಸ್ಥಿತಿ ಹೇಗಿರಬಹುದು? ಇಸ್ರೋ

ಕೇವಲ ಹೆಚ್ಚಿನ ಸಂಬಳವೇ ಕಾರಣವಲ್ಲ

ಖಾಸಗಿ ಬಾಹ್ಯಾಕಾಶ ಸಂಸ್ಥೆಗಳು ಉತ್ತಮ ಸಂಬಳ, ಷೇರು ಪಾಲು, ವೇಗವಾದ ವೃತ್ತಿ ಪ್ರಗತಿ, ಕೆಲಸದ ಸ್ವಾತಂತ್ರ್ಯ ಮತ್ತು ಹೊಸ ತಂತ್ರಜ್ಞಾನಗಳನ್ನು ನಿರ್ಮಿಸುವ ಅವಕಾಶಗಳನ್ನು ನೀಡುತ್ತಿವೆ. ಸರ್ಕಾರಿ ಸಂಸ್ಥೆಗಳಲ್ಲಿ ತಿಂಗಳುಗಟ್ಟಲೆ ಕಡತಗಳಲ್ಲಿ ಸಿಲುಕುವ ನಿರ್ಧಾರಗಳು ಖಾಸಗಿ ಸಂಸ್ಥೆಗಳಲ್ಲಿ ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಬಹುದು. ಕೆಲವು ವರದಿಗಳು ಇಸ್ರೋದಲ್ಲಿನ ಕೇಂದ್ರೀಕೃತ ನಿರ್ಧಾರ ಪದ್ಧತಿ, ಯೋಜನೆಗಳ ವಿಳಂಬ ಮತ್ತು ಆಡಳಿತಾತ್ಮಕ ಅಡಚಣೆಗಳನ್ನೂ ವಿಜ್ಞಾನಿಗಳ ಅಸಮಾಧಾನಕ್ಕೆ ಸಂಬಂಧಿಸಿದ ಅಂಶಗಳಾಗಿ ಗುರುತಿಸಿವೆ. ಇಸ್ರೋ

ವಿಜ್ಞಾನಿಯೊಬ್ಬನಿಗೆ ಸಂಬಳ ಅಗತ್ಯ. ಆದರೆ ಅದಕ್ಕಿಂತಲೂ ಮುಖ್ಯವಾದವು ಸಂಶೋಧನಾ ಸ್ವಾತಂತ್ರ್ಯ, ಸಾಧನೆಗೆ ಮಾನ್ಯತೆ, ಸಮಯಕ್ಕೆ ಸರಿಯಾದ ಬಡ್ತಿ, ನ್ಯಾಯಸಮ್ಮತ ಮೌಲ್ಯಮಾಪನ, ಅಗತ್ಯ ಸಾಧನಗಳು, ನಿರ್ಧಾರ ಕೈಗೊಳ್ಳುವ ಅಧಿಕಾರ ಮತ್ತು ತನ್ನ ಆಲೋಚನೆಯನ್ನು ಪ್ರಯೋಗಿಸಲು ಅವಕಾಶ.

ನಮ್ಮ ಅನೇಕ ಸಂಸ್ಥೆಗಳಲ್ಲಿ ವಿಜ್ಞಾನಿಯನ್ನು ಜ್ಞಾನ ಸೃಷ್ಟಿಕರ್ತನಂತೆ ಕಾಣದೆ, ಕಡತಗಳನ್ನು ಮುಂದಕ್ಕೆ ಕಳುಹಿಸುವ ಸರ್ಕಾರಿ ನೌಕರನಂತೆ ನಡೆಸಿಕೊಳ್ಳಲಾಗುತ್ತದೆ. ಪ್ರಯೋಗಾಲಯಕ್ಕೆ ಬೇಕಾದ ಸಣ್ಣ ಉಪಕರಣ ಖರೀದಿಸಲು ಹಲವು ಹಂತಗಳ ಅನುಮೋದನೆ ಬೇಕು. ಸಂಶೋಧನಾ ಅನುದಾನ ಬಿಡುಗಡೆಯಾಗುವಷ್ಟರಲ್ಲಿ ಯೋಜನೆಯ ಅರ್ಧ ಅವಧಿಯೇ ಮುಗಿದಿರುತ್ತದೆ. ಪ್ರವಾಸ, ಮಾದರಿ ಸಂಗ್ರಹಣೆ, ರಾಸಾಯನಿಕಗಳ ಖರೀದಿ, ತಾಂತ್ರಿಕ ಸಿಬ್ಬಂದಿಯ ನೇಮಕ—ಪ್ರತಿಯೊಂದಕ್ಕೂ ನಿಯಮ, ಉಪನಿಯಮ, ಸಮಿತಿ, ಟಿಪ್ಪಣಿ ಮತ್ತು ಪುನಃ ಅನುಮೋದನೆ! ಅದರಲ್ಲೂ ಸಹ ಐಎ ಎಸ್ ಅಧಿಕಾರಿಗಳು ಆಡಳಿತ ಚುಕ್ಕಾಣಿ ಹಿಡಿದಿರುವುದರಿಂದ ಅವರಿಗಿಂತ ನೂರಾರು ಪಟ್ಟು ಜ್ಞಾನ ಇರುವ ವಿಜ್ಞಾನಿಗಳು ಅವರ ಮುಂದೆ ದಯನೀಯವಾಗಿ ಕೈಕಟ್ಟಿ ನಿಲ್ಲುವ ಸ್ಥಿತಿ ಇದೆ.

ವಿಜ್ಞಾನದಲ್ಲಿ ವಿಫಲ ಪ್ರಯೋಗವೂ ಹೊಸ ಜ್ಞಾನವನ್ನು ನೀಡಬಹುದು. ಆದರೆ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಪ್ರಯೋಗದ ವಿಫಲತೆಯನ್ನು ಸಂಶೋಧನಾ ಪ್ರಕ್ರಿಯೆಯ ಭಾಗವೆಂದು ಪರಿಗಣಿಸದೆ, ಹಣಕಾಸಿನ ತಪ್ಪು ಅಥವಾ ಆಡಳಿತಾತ್ಮಕ ಅಪರಾಧದಂತೆ ನೋಡಲಾಗುತ್ತದೆ. ಪರಿಣಾಮವಾಗಿ ವಿಜ್ಞಾನಿಗಳು ಹೊಸ ಪ್ರಯತ್ನಗಳನ್ನು ಮಾಡುವುದಕ್ಕಿಂತ ಸುರಕ್ಷಿತವಾದ, ಸಾಮಾನ್ಯವಾದ ಮತ್ತು ಪ್ರಶ್ನೆ ಕೇಳದ ಸಂಶೋಧನೆಗಳತ್ತ ತಿರುಗುತ್ತಾರೆ.

ವಿಜ್ಞಾನದ ಮೇಲೂ ಹುದ್ದೆಯ ಶ್ರೇಣೀಕರಣದ ಕರಿನೆರಳು

ಸಂಶೋಧನಾ ಸಂಸ್ಥೆಗಳಲ್ಲಿ ಆಲೋಚನೆಯ ಗುಣಮಟ್ಟಕ್ಕಿಂತ ಹುದ್ದೆ, ಸೇವಾ ಜ್ಯೇಷ್ಠತೆ ಮತ್ತು ಆಡಳಿತಾತ್ಮಕ ಸ್ಥಾನಮಾನ ಪ್ರಭಾವಶಾಲಿಯಾಗಬಾರದು. ಆದರೆ ಅನೇಕ ಕಡೆ ಯುವ ವಿಜ್ಞಾನಿಯ ಹೊಸ ಆಲೋಚನೆ ಅವನ ವಯಸ್ಸು ಅಥವಾ ಕಿರಿಯ ಹುದ್ದೆಯ ಕಾರಣಕ್ಕೆ ನಿರ್ಲಕ್ಷ್ಯಗೊಳ್ಳುತ್ತದೆ. ಮೇಲಧಿಕಾರಿಯನ್ನು ಪ್ರಶ್ನಿಸುವುದು ಅಶಿಸ್ತಾಗಿ ಕಾಣುತ್ತದೆ. ಸ್ಥಾಪಿತ ಅಭಿಪ್ರಾಯಕ್ಕೆ ವಿರುದ್ಧವಾದ ವೈಜ್ಞಾನಿಕ ಪ್ರಶ್ನೆಯನ್ನು ವೈಯಕ್ತಿಕ ವಿರೋಧವೆಂದು ಪರಿಗಣಿಸಲಾಗುತ್ತದೆ.

ಪ್ರಶಸ್ತಿ, ಯೋಜನೆ, ವಿದೇಶ ಪ್ರವಾಸ, ಸಮಿತಿ ಸದಸ್ಯತ್ವ ಮತ್ತು ಬಡ್ತಿಗಳಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಪ್ರತಿಭಾವಂತರು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ. ಅದರಲ್ಲೂ ವಿಜ್ಞಾನವನ್ನೇ ತಿಳಿಯದ ಐ ಎ ಎಸ್ ಬಾಬುಗಳು ವಿಜ್ಞಾನಿಗಳ ಜೀವನವನ್ನೇ ಸಣ್ಣ ಪುಟ್ಟ ವೈಯಕ್ತಿಕ ಕಾರಣಕ್ಕೆ ನರಕ ಮಾಡಿದ ಅನೇಕ ಘಟನೆಗಳು ವರದಿಯಾಗಿವೆ.

ಹಾಗೆಂದ ಮಾತ್ರಕ್ಕೆ ವಿಜ್ಞಾಅನಿಗಳೇ ಅಡಳಿತಗಾರಾಗಿರುವ ಸಂಸ್ಥೆಗಳೂ ಸಹ ಉದ್ಧಾರವಾಗಿಲ್ಲ. ಆಗ ಅವರ ಮುಂದೆ ಎರಡು ದಾರಿಗಳು ಉಳಿಯುತ್ತವೆ. ವಿದೇಶಕ್ಕೆ ತೆರಳುವುದು ಅಥವಾ ಉತ್ತಮ ಅವಕಾಶ ನೀಡುವ ಖಾಸಗಿ ಸಂಸ್ಥೆಯನ್ನು ಸೇರುವುದು.

ವಿಜ್ಞಾನಿಯ ರಾಜೀನಾಮೆಯನ್ನು ತಡೆಯುವ ಕಠಿಣ ನಿಯಮ ಪ್ರತಿಭೆಯನ್ನು ಉಳಿಸುವುದಿಲ್ಲ.

ಅದು ಕೆಲಕಾಲ ವ್ಯಕ್ತಿಯನ್ನು ಸಂಸ್ಥೆಯಲ್ಲಿ ಹಿಡಿದುಕೊಳ್ಳಬಹುದು. ಆದರೆ ಅವನ ಸೃಜನಶೀಲತೆ, ಉತ್ಸಾಹ ಮತ್ತು ಸಂಸ್ಥೆಯ ಮೇಲಿನ ನಿಷ್ಠೆಯನ್ನು ಬಲವಂತವಾಗಿ ಉಳಿಸಲಾಗುವುದಿಲ್ಲ. ವಿಶಾಲ ಪ್ರಪಂಚ ಈಗ ಪ್ರತಿಭೆಗೆ ತೆರೆದುಕೊಂಡಿದೆ.

ಸಂಶೋಧನೆಗೆ ನಾವು ಎಷ್ಟು ಖರ್ಚು ಮಾಡುತ್ತಿದ್ದೇವೆ?

ಭಾರತದ ಒಟ್ಟು ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ದೇಶದ ಒಟ್ಟು ಆಂತರಿಕ ಉತ್ಪನ್ನದ ಸುಮಾರು 0.6 ರಿಂದ 0.7 ಪ್ರತಿಶತದಷ್ಟಿದೆ ಎಂದು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ತಿಳಿಸಿದೆ. ನವೀನತೆಯನ್ನು ಆಧರಿಸಿದ ಅನೇಕ ಮುಂದುವರಿದ ರಾಷ್ಟ್ರಗಳು ಇದಕ್ಕಿಂತ ಬಹಳ ಹೆಚ್ಚಿನ ಪ್ರಮಾಣವನ್ನು ಸಂಶೋಧನೆಗೆ ಮೀಸಲಿಡುತ್ತವೆ. ನಮಗಿಂತ ಅತ್ಯಂತ ಪುಟ್ಟ ರಾಷ್ಟ್ರ ಇಸ್ರೇಲ್ ಯುದ್ಧದ ಬೇಗೆಯಲ್ಲಿಯೂ ಸಹ ತನ್ನ ಆರ್ಥಿಕತೆಯಲ್ಲಿ ಗಣನೀಯ ಕುಸಿತ ಕಾಣದಿರುವುದಕ್ಕೆ ಅಲ್ಲಿನ ಆವಿಷ್ಕಾರಗಳಿಗೆ ಎಲ್ಲಾ ದೇಶಗಳಿಂದ ಬೇಡಿಕೆ ಇರುವುದು ಸಾಕ್ಷಿ.

ಇಸ್ರೋಗೆ ಪ್ರಧಾನ ಮಂತ್ರಿಗಳ ಕಚೇರಿಯಿಂದ ನೇರ ಗಮನ ಮತ್ತು ತುಲನಾತ್ಮಕವಾಗಿ ಉತ್ತಮ ಬಜೆಟ್ ಲಭ್ಯವಿದೆ. ಆದರೆ ದೇಶದ ಇತರೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಪರಿಸ್ಥಿತಿ ಶೋಚನೀಯವಾಗಿದೆ. 2025-26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತ ತನ್ನ ಜಿಡಿಪಿಯ ಕೇವಲ 0.64% ರಷ್ಟನ್ನು ಮಾತ್ರ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡುತ್ತಿದೆ. ಅದೇ ಅಮೆರಿಕ, ಚೀನಾ ಮತ್ತು ಇಸ್ರೇಲ್‌ನಂತಹ ದೇಶಗಳು 2.5% ರಿಂದ 5% ರಷ್ಟು ಖರ್ಚು ಮಾಡುತ್ತವೆ. ಆರ್ಥಿಕ ಬೆಂಬಲವಿಲ್ಲದೆ, ಕೇವಲ ಉತ್ಸಾಹದಿಂದ ಜಾಗತಿಕ ಮಟ್ಟದ ಆವಿಷ್ಕಾರಗಳನ್ನು ಮಾಡಲು ಸಾಧ್ಯವಿಲ್ಲ

ಭಾರತದಲ್ಲಿ ಪ್ರತಿಭೆಯ ಕೊರತೆಯಿಲ್ಲ

ಭಾರತೀಯ ವಿಜ್ಞಾನಿಗಳು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳು, ಔಷಧ ಕಂಪನಿಗಳು, ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು, ಬಾಹ್ಯಾಕಾಶ ಕೇಂದ್ರಗಳು ಮತ್ತು ಜೈವಿಕ ತಂತ್ರಜ್ಞಾನ ಪ್ರಯೋಗಾಲಯಗಳನ್ನು ಮುನ್ನಡೆಸುತ್ತಿದ್ದಾರೆ.

ವಿಜ್ಞಾನಿಗಳನ್ನು ನಿಯಮಗಳ ಮೂಲಕ ತಡೆಯುವುದು ಪರಿಹಾರವಲ್ಲ. ವಿಜ್ಞಾನಿಗಳ ರಾಜೀನಾಮೆಯನ್ನು ತಡೆಯಲು ನಿಯಮಗಳನ್ನು ಬಿಗಿಗೊಳಿಸುವುದಕ್ಕಿಂತ, ಅವರು ರಾಜೀನಾಮೆ ನೀಡಲು ಕಾರಣವಾದ ಪರಿಸ್ಥಿತಿಯನ್ನು ಸರಿಪಡಿಸಬೇಕು. ಸಂಶೋಧನಾ ಸಂಸ್ಥೆಗಳಿಗೆ ಆಡಳಿತಾತ್ಮಕ ಸ್ವಾಯತ್ತತೆ ನೀಡಬೇಕು. ಅನುದಾನವನ್ನು ಸಮಯಕ್ಕೆ ಬಿಡುಗಡೆ ಮಾಡಬೇಕು. ಅನಗತ್ಯ ಅನುಮೋದನಾ ಹಂತಗಳನ್ನು ಕಡಿಮೆ ಮಾಡಬೇಕು.

ಯುವ ವಿಜ್ಞಾನಿಗಳಿಗೆ ಸ್ವತಂತ್ರ ಯೋಜನೆಗಳನ್ನು ನೀಡಬೇಕು. ಸಾಧನೆ ಆಧಾರಿತ ಬಡ್ತಿ ಮತ್ತು ಸಮರ್ಪಕ ವೇತನ ವ್ಯವಸ್ಥೆ ರೂಪಿಸಬೇಕು. ವಿಫಲ ಪ್ರಯೋಗವನ್ನು ಅಪರಾಧವೆಂದು ಪರಿಗಣಿಸಬಾರದು ಮತ್ತು ಹೀಗಳೆದು ಲೆಕ್ಕಪರಿಶೋಧನೆಗೆ ಒಳಪಡಿಸಿ ಮಾನಸಿಕ ಹಿಂಸೆ ನೀಡಬಾರದು. ವಿಜ್ಞಾನಿಗಳ ಸಮಯವನ್ನು ಕಡತ, ಲೆಕ್ಕಪತ್ರ ಮತ್ತು ಅನಗತ್ಯ ಸಭೆಗಳಲ್ಲಿ ವ್ಯರ್ಥ ಮಾಡಬಾರದು.

ಅತ್ಯಂತ ಮುಖ್ಯವಾಗಿ ವಿಜ್ಞಾನ ಸಂಸ್ಥೆಗಳನ್ನು ಸರಿಯಾದ ಆಡಳಿತದಲ್ಲಿ ಆಸಕ್ತಿ ಹೊಂದಿದ ಶುದ್ಧಹಸ್ತದ ಅರ್ಹತೆಯುಳ್ಳ ವಿಜ್ಞಾನಿಗಳೇ ಮುನ್ನಡೆಸಬೇಕು; ಕೇವಲ ಐಎಎಸ್ ಅಧಿಕಾರಶಾಹಿ ಮನೋಭಾವವಲ್ಲ. ಅನೇಕ ವಿಜ್ಞಾನಿಗಳು ಉತ್ತಮ ಸಂಶೋಧಕರಾಗಿದ್ದರೂ ಸಹ ಅಡಳಿತದ ನಡೆಸುವಲ್ಲಿ, ಹಣಕಾಸು ವ್ಯವಹಾರದಲ್ಲಿ ಇತರರ ಪ್ರಭಾವದಿಂದ ಸಂಪೂರ್ಣ ವಿಫಲರಾಗಿರುವ ಅನೇಕ ಉದಾಹರಣೆಗಳಿವೆ.

ಜನರ ನಿರ್ಲಿಪ್ತತೆ

ಇಂತಹ ಅನೇಕ ಘಟನೆಗಳು ನಡೆದಾಗ ಜನರು ತಮಗೂ ಇದಕ್ಕೂ ಏನೂ ಸಂಬಂಧವಿಲ್ಲ ಎಂದು ನಿರ್ಲಕ್ಷಿಸುತ್ತಾರೆ. ಮಾಧ್ಯಮಗಳೂ ಸಹ ಜಂತರ್ ಮಂತರ್ ನಲ್ಲಿ ನಡೆಯುವ ಬ್ರೆಕಿಂಗ್ ನ್ಯೂಸ್ ಗಾಗಿ ಕಾಯುತ್ತಾರೆಯೇ ವಿನ: ಇದೊಂದು ದೊಡ್ಡ ಸುದ್ಧಿಯೆನಿಸುವುದೇ ಇಲ್ಲ.

ಅಷ್ಟಕ್ಕೂ ಕೆಲವು ಡೋಂಗಿ ಬಾಬಾಗಳು, ದೇವ ಮಾನವರು ಜನರನ್ನು ಹಾಡು ಹಗಲೇ ಮೋಸಗೊಳಿಸಿದರೂ ಸಹ ಅವರನ್ನು ಆರಾಧಿಸುವವರ ಸಂಖ್ಯೆ ಕಿಂಚಿತ್ತೂ ಕಡೆಮೆಯಾಗದಿರುವುದು ಸೃಜನಶೀಲ ಜನರ ಶಕ್ತಿಯನ್ನೇ ಉಡುಗಿಸುತ್ತವೆ.

ಧಾರ್ಮಿಕ ವಿಜ್ರಂಭಣೆ; ವಿಜ್ಞಾನದ ಕಡೆಗಣನೆ

ನಮ್ಮ ದೇಶದಲ್ಲಿ ಧರ್ಮ ಮತ್ತು ಜಾತಿಗಳಿಗೆ ಅತ್ಯಂತ ಮಹತ್ವ ನೀಡಲಾಗುತ್ತಿದ್ದು ಧಾರ್ಮಿಕ ಗುರುಗಳೇ ವಿಜ್ಞಾನದ ವಕ್ತಾರರಾಗಿದ್ದಾರೆ. ದೇಶಿ ಗೋವುಗಳನ್ನು ಹೊಗಳುವ ಭರದಲ್ಲಿ ದೇಶಿ ಹಸುಗಳು ಬಾಲವನ್ನು 30 ಡಿಗ್ರೀ ಸುತ್ತಿಸಿದರೆ, ವಿದೇಶಿ ಹಸುಗಳು ೯೦ ಡಿಗ್ರೀ ಸುತ್ತುತ್ತವೆ, ಅವುಗಳ ಕುಂಭಸ್ಥಳದಲ್ಲಿ ಸೂರ್ಯಕೇತು ನಾಡಿಯಿದ್ದು ಅದು ಸೂರ್ಯನಿಂದ ನೇರವಾಗಿ ಶಕ್ತಿಯನ್ನು ಎಳೆದುಕೊಂಡು ಹಾಲು ಮತ್ತು ಸಗಣಿಯಲ್ಲಿ ಹರಿಯಬಿಡುತ್ತವೆ, ಜರ್ಸಿ ಹಸುಗಳು ಹಂದಿಯ ತಳಿ, ಮಿಶ್ರ ತಳಿಗಳ ಹಾಲು ಹಾಲಾಹಲ ಇತ್ಯಾದಿ ಅಸಂಬದ್ಧಗಳ ಸರಮಾಲೆಯನ್ನೇ ಸುವರ್ಣ ವಾಹಿನಿಯಂತ ಮಾಧ್ಯಮದ ಮೂಲಕ ಹರಿಯಬಿಡುತ್ತಿದ್ದರೂ ಅವರನ್ನು ಸಣ್ಣಗೆ ಪ್ರಶ್ನಿಸುವವರೂ ಸಹ ಇಲ್ಲವಾಗಿದ್ದಾರೆ.

ಇವರಿಗೆ ಈ ಕುರಿತು ಪಶು ತಜ್ಞರಿಂದ ವಿಷಯ ತಿಳಿದು ಅದನ್ನು ಸಮಾಜಕ್ಕೆ ತಿಳಿಸಬೇಕು ಎಂಬ ಸಾಮಾಜಿಕ ಬದ್ಧತೆ ಇರದಿರುವುದು ವಿಜ್ಞಾನವನ್ನು ಕಾಲ ಕಸಕ್ಕಿಂತ ಕಡೆಯಾಗಿ ಕಾಣುವ ಹಾಗೆ ಮಾಡಿದೆ. ಅವರ ಭಕ್ತರು ಸಹ ಅದನ್ನೇ ನಂಬಿ ಸತ್ಯ ಹೇಳುವ ವಿಜ್ಞಾನಿಗಳನ್ನೇ ಅಟ್ಟಾಡಿಸಿ ಬೆನ್ನಟ್ಟುವ ಪರಿಸ್ಥಿತಿ ಇದೆ.

ನಂಬಿಕೆಯ ಆಧಾರದ ಮೇಲೆ ಮೂಡಿದ ತಪ್ಪು ಕಲ್ಪನೆಗಳನ್ನು ವೈಜ್ಞಾನಿಕ ಪುರಾವೆಗಳೊಂದಿಗೆ ತಿದ್ದಲು ಪ್ರಯತ್ನಿಸುವ ವಿಜ್ಞಾನಿಗಳನ್ನು ಭಕ್ತರು ವಿರೋಧಿಸುವುದು ಅಥವಾ ಅಟ್ಟಾಡಿಸುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಇದು ಮುಕ್ತ ಚರ್ಚೆ ಮತ್ತು ಜ್ಞಾನದ ಹರಿವನ್ನು ತಡೆಯುತ್ತದೆ.

ಭಾರತದ ಸಂವಿಧಾನದ ವಿಧಿ 51 ಎ (ಹೆಚ್) ಪ್ರಕಾರ, ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವಾಗಿದೆ. ಆದರೆ, ತಾವು ಹೇಳಿದಂತೆ, ಧಾರ್ಮಿಕ ಗುರುಗಳು ಯಾವುದೇ ವೈಜ್ಞಾನಿಕ ಆಧಾರವಿಲ್ಲದ ವಿಷಯಗಳನ್ನು ಸಾರಿದಾಗ, ಜನರು ಅದನ್ನು ಪ್ರಶ್ನಿಸದೆ ನಂಬುವುದು ದೂರಗಾಮಿಯಾಗಿ ಬಹಳ ಆತಂಕಕಾರಿ. ಇದೊಂದು ಉದಾಹರಣೆ ಅಷ್ಟೆ. ಇಂತಹ ಸಾವಿರಾರು ನಿದರ್ಶನಗಳೂ ಲಂಗು ಲಗಾಮಿಲ್ಲದೇ ದಿನವೂ ನಡೆಯುತ್ತಿರುತ್ತವೆ.

ಪಶುಸಂಗೋಪನೆ ಅಥವಾ ಹಸುಗಳ ತಳಿಗಳ ಬಗ್ಗೆ ಮಾತನಾಡಲು ಆಯಾ ಕ್ಷೇತ್ರದ ವಿಜ್ಞಾನಿಗಳು ಮತ್ತು ಪಶುವೈದ್ಯರು ಅರ್ಹರಾಗಿರುತ್ತಾರೆ. ಧಾರ್ಮಿಕ ನಾಯಕರು ತಮ್ಮ ಕಾರ್ಯಕ್ಷೇತ್ರವಲ್ಲದ ವಿಷಯಗಳ ಬಗ್ಗೆ ತಪ್ಪು ಮಾಹಿತಿ ನೀಡಿದಾಗ, ಅದು ಕೃಷಿ ಮತ್ತು ಪಶುಸಂಗೋಪನಾ ವಲಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ದೇಶಿ ತಳಿಗಳ ಮಹತ್ವವನ್ನು ಎತ್ತಿ ಹಿಡಿಯುವ ಭರದಲ್ಲಿ ಮಿಶ್ರ ತಳಿಗಳ ಬಗ್ಗೆ ತಪ್ಪು ಕಲ್ಪನೆಗಳನ್ನು ಮೂಡಿಸುವುದು ಸರಿಯಲ್ಲ.

ಧರ್ಮ ಮತ್ತು ನಂಬಿಕೆಗಳು ವ್ಯಕ್ತಿಯ ವೈಯಕ್ತಿಕ ವಿಚಾರಗಳಾಗಬಹುದು, ಆದರೆ ಅವು ಲೌಕಿಕ ಮತ್ತು ವೈಜ್ಞಾನಿಕ ವಿಷಯಗಳಿಗೆ (ಆರೋಗ್ಯ, ಕೃಷಿ ಇತ್ಯಾದಿ) ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಲು ಸಾಧನವಾಗಬಾರದು. ಆರೋಗ್ಯಕರ ಮತ್ತು ಪ್ರಗತಿಪರ ಸಮಾಜಕ್ಕೆ ನಂಬಿಕೆಯ ಜೊತೆಗೆ ವೈಜ್ಞಾನಿಕ ಚಿಂತನೆ ಮತ್ತು ಪ್ರಶ್ನಿಸುವ ಮನೋಭಾವ ಅತ್ಯಗತ್ಯವಾಗಿದೆ.

ಮಾಧ್ಯಮಗಳು ಸಮಾಜದ ಕನ್ನಡಿಯಿದ್ದಂತೆ. ಪ್ರಮುಖ ವಾಹಿನಿಗಳು ಇಂತಹ ಹೇಳಿಕೆಗಳನ್ನು ಯಾವುದೇ ವಿಮರ್ಶೆ ಅಥವಾ ಸತ್ಯಾಸತ್ಯತೆಯ ಪರಿಶೀಲನೆ ಇಲ್ಲದೆ ಪ್ರಸಾರ ಮಾಡಿದಾಗ, ಮೂಢನಂಬಿಕೆಗಳು ಗಟ್ಟಿಯಾಗುತ್ತವೆ. ಮಾಧ್ಯಮಗಳು ಇಂತಹ ಸಂದರ್ಭಗಳಲ್ಲಿ ಮೂಢನಂಬಿಕೆಗಳನ್ನು ಪ್ರಶ್ನಿಸಿ, ವೈಜ್ಞಾನಿಕ ಸತ್ಯವನ್ನು ಸಮಾಜಕ್ಕೆ ತಲುಪಿಸುವ ‘ಸಾಮಾಜಿಕ ಬದ್ಧತೆ’ಯನ್ನು ತೋರಬೇಕಿದೆ.

ಇಸ್ರೇಲ್ ಏಕೆ ಪ್ರಗತಿ ಸಾಧಿಸಿದೆ?

ಅಮೇರಿಕಾ,ಚೀನಾ, ಜಪಾನ್ ಗಳಂತ ವೈಜ್ಞಾನಿಕವಾಗಿ ಅತ್ಯಂತ ಮುಂದುವರೆದ ದೇಶಗಳು ಸಂಶೋಧನೆಗೆ ಅತ್ಯಂತ ಜಾಸ್ತಿ ಮಹತ್ವ ನೀಡುತ್ತವೆ. ಆದರೆ ಇಸ್ರೇಲ್ ಹಾಗೂ ಕೆಲವು ಸಣ್ಣ ರಾಷ್ಟ್ರಗಳು ವಿಜ್ಞಾನದಲ್ಲಿ ದೊಡ್ಡ ಸಾಧನೆ ಮಾಡಿವೆ. ಇಸ್ರೇಲ್, ಸ್ವಿಟ್ಜರ್‌ಲ್ಯಾಂಡ್, ಸ್ವೀಡನ್, ಸಿಂಗಪುರ, ಫಿನ್‌ಲ್ಯಾಂಡ್, ಡೆನ್ಮಾರ್ಕ್ ಮತ್ತು ದಕ್ಷಿಣ ಕೊರಿಯಾದಂತಹ ಸಣ್ಣ ಅಥವಾ ಮಧ್ಯಮ ಗಾತ್ರದ ರಾಷ್ಟ್ರಗಳು ತಮ್ಮ ಜನಸಂಖ್ಯೆಗೆ ಹೋಲಿಸಿದರೆ ವಿಜ್ಞಾನ, ತಂತ್ರಜ್ಞಾನ, ಪೇಟೆಂಟ್ ಮತ್ತು ನವೋದ್ಯಮಗಳಲ್ಲಿ ಅತ್ಯಂತ ಹೆಚ್ಚಿನ ಕೊಡುಗೆ ನೀಡುತ್ತಿವೆ. 2025ರ ಜಾಗತಿಕ ನವೋದ್ಯಮ ಸೂಚ್ಯಂಕದಲ್ಲಿ ಸ್ವಿಟ್ಜರ್‌ಲ್ಯಾಂಡ್ ಮೊದಲ ಸ್ಥಾನ, ಸ್ವೀಡನ್ ಎರಡನೇ ಸ್ಥಾನ, ದಕ್ಷಿಣ ಕೊರಿಯಾ ನಾಲ್ಕನೇ ಸ್ಥಾನ ಮತ್ತು ಸಿಂಗಪುರ ಐದನೇ ಸ್ಥಾನದಲ್ಲಿವೆ.

ಇಸ್ರೇಲಿ ಸರ್ಕಾರ ಸಂಶೋಧನೆಯನ್ನು ವೆಚ್ಚವಲ್ಲ ಹೂಡಿಕೆ ಎಂದು ಪರಿಗಣಿಸುತ್ತದೆ. ಪ್ರತಿಭೆ ಎಲ್ಲಿದ್ದರೂ ಹುಡುಕಿ ಪ್ರೋತ್ಸಾಹಿಸುತ್ತದೆ. ಅವರ ದೇಶದ ಪ್ರತಿಭೆ ಯಾವುದೇ ಕಾರಣಕ್ಕೂ ಹೊರಗೆ ಹೋಗದಂತ ಪ್ರೋತ್ಸಾಹ ನೀಡುತ್ತದೆ.

ಇಸ್ರೇಲ್ ತನ್ನ ಒಟ್ಟು ಆಂತರಿಕ ಉತ್ಪನ್ನದ ಸುಮಾರು 6.8 ಪ್ರತಿಶತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ. ಇದು ಇತರ ಎಲ್ಲಾ ದೊಡ್ಡ ರಾಷ್ಟ್ರಗಳಲ್ಲಿಯೇ ಅತ್ಯಧಿಕ. ಭಾರತದ ಸಂಶೋಧನೆ ಮತ್ತು ಅಭಿವೃದ್ಧಿ ವೆಚ್ಚವು ಅದರ ಆಂತರಿಕ ಉತ್ಪನ್ನದ ಸುಮಾರು 0.64 ಪ್ರತಿಶತ ಮಾತ್ರವಾಗಿದೆ. ಇಷ್ಟು ದೊಡ್ದ ದೇಶ ಮತ್ತು 140 ಕೋಟಿ ಜನ ಸಂಖ್ಯೆಗೆ ಇದು ಏನೇನೂ ಅಲ್ಲ. ಭಾರತವು ಸಂಶೋಧನೆಗೆ ಹತ್ತು ಪೈಸೆ ಖರ್ಚು ಮಾಡಿದರೆ ಇಸ್ರೇಲ್ ಸುಮಾರು ಹತ್ತು ರೂಪಾಯಿಯಷ್ಟು ಹೂಡುತ್ತಿದೆ.

 

ಇಸ್ರೇಲ್‌ ಜನಸಂಖ್ಯೆ ಕಡಿಮೆ, ನೈಸರ್ಗಿಕ ಸಂಪನ್ಮೂಲಗಳು ಸೀಮಿತ ಮತ್ತು ಭೌಗೋಳಿಕ–ಭದ್ರತಾ ಸವಾಲುಗಳು ಅಧಿಕ. ಆದ್ದರಿಂದ ಕೃಷಿ, ನೀರು, ವೈದ್ಯಕೀಯ, ರಕ್ಷಣಾ ತಂತ್ರಜ್ಞಾನ, ಸೈಬರ್ ಭದ್ರತೆ ಮತ್ತು ಸಂಪರ್ಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯು ಅವರಿಗೆ ಆಯ್ಕೆಯ ಬದಲಾಗಿ ಜೀವಿಸಲು ಅಗತ್ಯವಾಗಿದೆ. ಇದರಿಂದ ವಿಜ್ಞಾನವನ್ನು ಕೇವಲ ವಿಶ್ವವಿದ್ಯಾಲಯದ ಚಟುವಟಿಕೆಯಾಗಿರಿಸದೆ, ರಾಷ್ಟ್ರೀಯ ಬದುಕುಳಿಯುವ ಕಾರ್ಯತಂತ್ರವಾಗಿ ಪರಿವರ್ತಿಸಿದೆ.
ಖಾಸಗಿ ಕಂಪನಿಗಳು ಸಂಶೋಧನೆಗೆ ದೊಡ್ಡ ಮೊತ್ತ ಹೂಡುತ್ತವೆ.

ಭಾರತದಲ್ಲಿ ಸಂಶೋಧನೆಯ ಬಹುಪಾಲು ಹೊಣೆಗಾರಿಕೆ ಸರ್ಕಾರದ ಸಂಸ್ಥೆಗಳ ಮೇಲಿದೆ. ಅನೇಕ ಖಾಸಗಿ ಉದ್ಯಮಗಳು ಸ್ವತಂತ್ರ ಮೂಲ ಸಂಶೋಧನೆ ನಡೆಸುವುದಕ್ಕಿಂತ ವಿದೇಶಿ ತಂತ್ರಜ್ಞಾನವನ್ನು ಖರೀದಿಸುವುದು ಅಥವಾ ಅಳವಡಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ.

ನವೋದ್ಯಮಶೀಲ ರಾಷ್ಟ್ರಗಳಲ್ಲಿ ಸರ್ಕಾರ ಮಾತ್ರವಲ್ಲದೆ ಔಷಧ, ಜೈವಿಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಎಂಜಿನಿಯರಿಂಗ್ ಕಂಪನಿಗಳೂ ತಮ್ಮ ಆದಾಯದ ದೊಡ್ಡ ಭಾಗವನ್ನು ಸಂಶೋಧನೆಗೆ ಮೀಸಲಿಡುತ್ತವೆ. ಜಾಗತಿಕ ನವೋದ್ಯಮ ಸೂಚ್ಯಂಕವು ಉನ್ನತ ಸ್ಥಾನದಲ್ಲಿರುವ ರಾಷ್ಟ್ರಗಳ ಸಾಮಾನ್ಯ ಗುಣಗಳಾಗಿ ಹೆಚ್ಚಿನ ಸಮ್ಶೋಧನಾ ಹೂಡಿಕೆ, ವಿಶ್ವಮಟ್ಟದ ಸಂಸ್ಥೆಗಳು, ಉತ್ತಮ ಶಿಕ್ಷಣ ವ್ಯವಸ್ಥೆ ಮತ್ತು ನವೀನತೆಯಲ್ಲಿ ಸಕ್ರಿಯ ಖಾಸಗಿ ವಲಯವನ್ನು ಗುರುತಿಸಿದೆ.

ಪ್ರತಿಭೆಗೆ ಕೊರತೆಯಿಲ್ಲ, ವ್ಯವಸ್ಥೆಯ ಬೆಂಬಲ ಬೇಕು

ಕಳೆದ ಸಾವಿರ ವರ್ಷಗಳಲ್ಲಿ ಭಾರತದಲ್ಲಿ ಮಾನವ ಸಂಕುಲಕ್ಕೆ ಅನುಕೂಲವಾಗುವ ಯಾವುದೇ ಹೊಸ ಆವಿಷ್ಕಾರಗಳಾಗಿಲ್ಲ ಎಂಬುದು ಸಂಪೂರ್ಣ ತಪ್ಪು ಮಾಹಿತಿ ಅಲ್ಲ. . ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಮತ್ತು ಶ್ರೀನಿವಾಸ ರಾಮಾನುಜನ್ ಅವರಂತಹ ಜಾಗತಿಕ ಮಟ್ಟದ ದಿಗ್ಗಜರನ್ನು ಈ ಮಣ್ಣು ನೀಡಿದೆ. ವಾಸ್ತವವೇನೆಂದರೆ, ಭಾರತೀಯರಲ್ಲಿ ಬೌದ್ಧಿಕ ಸಾಮರ್ಥ್ಯದ ಕೊರತೆಯಿಲ್ಲ. ಇವರೆಲ್ಲಾ ಸಂಶೋಧನೆ ಮಾಡಿದ್ದು ಮಾತ್ರದ ವಿದೇಶಿ ಪ್ರಯೋಗಾಲಯಗಳಲ್ಲಿ ಎಂಬುದು ನೆನಪಿನಲ್ಲಿದ್ದರೆ ಸಾಕು. ಪ್ರಸ್ತುತ ನಮ್ಮಲ್ಲಿರುವ ವ್ಯವಸ್ಥೆಯು ಪ್ರತಿಭೆಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲವಾಗುತ್ತಿದೆ. ವಿಜ್ಞಾನಿಗಳಿಗೆ ಕೇವಲ ದೇಶಪ್ರೇಮದ ಪಾಠ ಸಾಲದು; ಅವರಿಗೆ ಜಾಗತಿಕ ಮಟ್ಟದ ಮೂಲಸೌಕರ್ಯ, ಸ್ವಾತಂತ್ರ್ಯ ಮತ್ತು ಆರ್ಥಿಕ ಭದ್ರತೆ ಬೇಕು.

ಸಂಶೋಧನಾ ವಲಯದಿಂದ ಆಗುತ್ತಿರುವ ಈ ಮೆದುಳು ಪ್ರತಿಭಾ ನಿರ್ಗಮನ (ಬ್ರೈನ್ ಡ್ರೈನ್) ತಡೆಯಲು, ಕೇವಲ ರಾಜೀನಾಮೆ ನಿಯಮಗಳನ್ನು ಬಿಗಿಗೊಳಿಸುವ ಬದಲು, ಸಂಶೋಧನಾ ಸಂಸ್ಥೆಗಳಲ್ಲಿರುವ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಬೇಕು. ವಿಜ್ಞಾನಿಗಳಿಗೆ ಮುಕ್ತ ವಾತಾವರಣ ನಿರ್ಮಿಸದಿದ್ದರೆ, ನಮ್ಮ ಅತ್ಯುತ್ತಮ ಮೆದುಳುಗಳು ವಿದೇಶಿ ಪ್ರಯೋಗಶಾಲೆಗಳಾನ್ನು ಸೇರುವುದನ್ನು ತಡೆಯಲು ಸಾಧ್ಯವಿಲ್ಲ.

ದೇಶವು ಕ್ಷಿಪಣಿ, ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಗಳನ್ನು ನಿರ್ಮಿಸಬಹುದು. ಆದರೆ ಪ್ರತಿಭಾವಂತ ವಿಜ್ಞಾನಿಗೆ ಸ್ವಾತಂತ್ರ್ಯ, ಗೌರವ ಮತ್ತು ಅವಕಾಶ ನೀಡದಿದ್ದರೆ ವೈಜ್ಞಾನಿಕ ಮಹಾಶಕ್ತಿಯಾಗಲು ಸಾಧ್ಯವಿಲ್ಲ. ಇಸ್ರೋ ವಿಜ್ಞಾನಿಗಳ ನಿರ್ಗಮನ ಒಂದು ಸಂಸ್ಥೆಯ ಆಂತರಿಕ ಸಮಸ್ಯೆಯಷ್ಟೇ ಅಲ್ಲ. ಅದು ಭಾರತದ ಸಂಪೂರ್ಣ ಸಂಶೋಧನಾ ವ್ಯವಸ್ಥೆಗೆ ಕೇಳಿಬಂದಿರುವ ಎಚ್ಚರಿಕೆಯ ಗಂಟೆ.

ವಿಜ್ಞಾನಿಗಳನ್ನು ದೇಶಭಕ್ತಿಯ ಹೆಸರಿನಲ್ಲಿ ಉಳಿಯುವಂತೆ ಒತ್ತಾಯಿಸುವ ಮೊದಲು, ಅವರು ದೇಶದಲ್ಲಿಯೇ ಉಳಿದು ಸಾಧನೆ ಮಾಡಲು ಯೋಗ್ಯವಾದ ವ್ಯವಸ್ಥೆಯನ್ನು ನಿರ್ಮಿಸೋಣ.

ಇಸ್ರೋ ವಿಜ್ಞಾನಿಗಳ ಸಾಮೂಹಿಕ ರಾಜಿನಾಮೆ ಎಚ್ಚರಿಕೆಯ ಕೊನೆಯ ಕರೆಗಂಟೆಯಾಗಬೇಕು. ಇಸ್ರೋದಂತ ಇತರ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳು ಹಣಕಾಸಿನ ಅಲಭ್ಯತೆಯಿಂದ ಬಾಗಿಲು ಮುಚ್ಚುವ ಸಾಧ್ಯತೆ ಇದೆ. ಈಗಲಾದರೂ ಸಹ ಎಚ್ಚತ್ತುಕೊಂಡು ಸಂಶೋಧನೆಗೆ ಮಹತ್ವ ನೀಡದಿದ್ದರೆ ಇದು ನಿರಂತರವಾಗುವ ಅಪಾಯವಿದೆ.

ಇದನ್ನೂ ನೋಡಿ: ಜಂತರ್ ಮಂತರ್ ಪೋಲೀಸ್ ಅತಿರೇಕ-ಕಾನೂನು ಪಾಲನೆ- ಉಲ್ಲಂಘನೆ!!!! Janashakthi Media

Donate Janashakthi Media

Leave a Reply

Your email address will not be published. Required fields are marked *