ಮತದಾರರ ಪಟ್ಟಿಯಲ್ಲಿ ಹೆಸರು ತಪ್ಪಿದವರು ಆ.8ರೊಳಗೆ ಫಾರ್ಮ್ ಸಲ್ಲಿಸಿದರೆ ಕರಡು ಪಟ್ಟಿಯಲ್ಲಿ ಸೇರ್ಪಡೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ‘ಗೈರುಹಾಜರಿ’ ಅಥವಾ ತಪ್ಪಾಗಿ ‘ಸ್ಥಳಾಂತರ’ ಎಂದು ದಾಖಲಾಗಿರುವ ಮತದಾರರಿಗೆ ರಾಜ್ಯ ಚುನಾವಣಾ ಆಯೋಗ ಮಹತ್ವದ ಸಡಿಲಿಕೆ ನೀಡಿದೆ. ಹೆಸರು

ಈ ರೀತಿಯಾಗಿ ಹೆಸರು ತಪ್ಪಿಸಿಕೊಂಡಿರುವ ಮತದಾರರು ಆಗಸ್ಟ್ 8ರೊಳಗೆ ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಅವರನ್ನು ಸಂಪರ್ಕಿಸಿ ಎನ್ಯುಮರೇಷನ್ ಫಾರ್ಮ್ ಪಡೆದು ಸಲ್ಲಿಸಿದರೆ, ಆಗಸ್ಟ್ 17ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಲು ಅವಕಾಶ ದೊರೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್, “ಪ್ರತಿ ಮತದಾರರಿಗೂ ಎನ್ಯುಮರೇಷನ್ ಫಾರ್ಮ್ ಲಭ್ಯವಾಗುತ್ತದೆ. ಯಾರಾದರೂ ಗೈರಾಗಿದ್ದಾರೆ ಅಥವಾ ಸ್ಥಳಾಂತರಗೊಂಡಿದ್ದಾರೆ ಎಂದು ತಪ್ಪಾಗಿ ದಾಖಲಿಸಿದ್ದರೆ, ಅವರು ಆ.8ರೊಳಗೆ ಫಾರ್ಮ್ ಪಡೆದು ಮರುಸಲ್ಲಿಸಬಹುದು,” ಎಂದು ತಿಳಿಸಿದರು.

ಇದನ್ನೂ ಓದಿ: ಧಾರವಾಡ| ಮಹಿಳಾ ನ್ಯಾಯಪೀಠಗಳಿಗೆ ಮಹಿಳಾ ಕಾನೂನು ಅಧಿಕಾರಿಗಳ ತಂಡ

ಆಗಸ್ಟ್ 8ರವರೆಗೆ ಬಿಎಲ್‌ಒಗಳು ಮತ್ತು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ‘ರೋಲ್‌ಬ್ಯಾಕ್’ ಆಯ್ಕೆಯ ಮೂಲಕ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದ್ದು, ಈ ಗಡುವು ಮೀರಿ ಹೋದರೆ ಮತದಾರರು ‘ಫಾರ್ಮ್-6’ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಗಣತಿ ನಮೂನೆಗಳನ್ನು ತಕ್ಷಣ ಹಿಂದಿರುಗಿಸಿ:

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಂಬಂಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಮುಖ್ಯ ಆಯುಕ್ತ ಮಹೇಶ್ವರ ರಾವ್, ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳನ್ನು ವಿಳಂಬವಿಲ್ಲದೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ನಗರದ 1,03,88,363 ಮತದಾರರಿಗೆ ಮನೆಮನೆಗೆ ತೆರಳಿ ನಮೂನೆಗಳನ್ನು ವಿತರಿಸಲಾಗಿದ್ದು, ಇದರಲ್ಲಿ 50,19,442 (48.32%) ಮತದಾರರ ವಿವರಗಳು ಈಗಾಗಲೇ ಡಿಜಿಟಲೀಕರಣಗೊಂಡಿವೆ. ಉಳಿದವರು ಕೂಡ ತಕ್ಷಣ ಬಿಎಲ್‌ಒಗಳು ಅಥವಾ ಸೌಲಭ್ಯ ಕೇಂದ್ರಗಳಿಗೆ ನಮೂನೆಗಳನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

ಮತದಾರರ ಪಟ್ಟಿಯ ಶುದ್ಧತೆಗೆ ಜನರ ಪಾತ್ರ ಮಹತ್ವದ್ದಾಗಿದ್ದು, ತಮ್ಮ ಹಾಗೂ ಕುಟುಂಬದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ ನಮೂನೆಗಳನ್ನು ಆ.8ರೊಳಗೆ ಸಲ್ಲಿಸುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.

ಹೆಸರು ಕೈಬಿಡುವ ಎಚ್ಚರಿಕೆ:

ಗಣತಿ ನಮೂನೆಗಳನ್ನು ಹಿಂದಿರುಗಿಸದಿದ್ದರೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಮತದಾರರ ಅನುಕೂಲಕ್ಕಾಗಿ ಬೂತ್ ಮಟ್ಟದ ಕೇಂದ್ರಗಳು ಹಾಗೂ ಮತದಾರರ ಸೌಲಭ್ಯ ಕೇಂದ್ರಗಳನ್ನು ತೆರೆಯಲಾಗಿದೆ.

ಒಂದು ನಮೂನೆಯನ್ನು ಡಿಜಿಟಲೀಕರಣಗೊಳಿಸಲು ಸುಮಾರು 4–5 ನಿಮಿಷ ಸಮಯ ಬೇಕಾಗುತ್ತಿದ್ದು, ಕೆಲವು ಮತಗಟ್ಟೆಗಳಲ್ಲಿ ಕಡಿಮೆ ಪ್ರಮಾಣದ ನಮೂನೆಗಳು ಬಂದಿರುವುದರಿಂದ ಬಿಎಲ್‌ಒಗಳು ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಫಾರ್ಮ್-6 ಮೂಲಕ ಹೊಸ ಸೇರ್ಪಡೆ:

ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ತಮ್ಮ ಹೆಸರು ಇಲ್ಲದಿದ್ದರೆ, ಅಥವಾ ಸ್ಥಳಾಂತರಗೊಂಡಿದ್ದರೆ, ಮತದಾರರು ಫಾರ್ಮ್-6 ಮೂಲಕ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹೊಸ ವಿಳಾಸದಲ್ಲಿ ಹೆಸರು ಸೇರಿಸಿಕೊಳ್ಳಬಹುದು.

ಇದಲ್ಲದೆ, ಮತದಾರರಲ್ಲಿ ಜಾಗೃತಿ ಮೂಡಿಸಲು ನಗರ ಪಾಲಿಕೆಗಳು ಧ್ವನಿವರ್ಧಕ ಹೊಂದಿದ ವಾಹನಗಳ ಮೂಲಕ ಅಭಿಯಾನ ನಡೆಸುವಂತೆ ಸೂಚಿಸಲಾಗಿದೆ.

ಇದನ್ನೂ ನೋಡಿ: NEET ಹೋರಾಟದ ಒಳನೋಟ | ದಮನದ ಪ್ರತಿಯೊಂದು ಹೆಜ್ಜೆಗೂ ವಿದ್ಯಾರ್ಥಿಗಳ ಪ್ರತಿರೋಧ | ಗುರುರಾಜ ದೇಸಾಯಿ Janashakthi

Donate Janashakthi Media

Leave a Reply

Your email address will not be published. Required fields are marked *