ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ಕಾರ್ಯಸೂಚಿಯನ್ನು ಬಯಲಿಗೆಳೆಯುತ್ತೇವೆ- ರೈತ-ಕಾರ್ಮಿಕ ಸಂಘಟನೆಗಳ ಎಚ್ಚರಿಕೆ

ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳ ಚಳುವಳಿಯ ಗಮನಾರ್ಹ ಯಶಸ್ಸಿನ ಬೆನ್ನಲ್ಲೇ ರಾಷ್ಟ್ರದ ರಾಜಧಾನಿಯಲ್ಲಿ ರೈತರ ಮತ್ತು ಕಾರ್ಮಿಕರ ರಾಷ್ಟ್ರೀಯ ಸಮಾವೇಶಗಳು ನಡೆದು ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ಕಾರ್ಯಸೂಚಿಯನ್ನು ಬಯಲಿಗೆಳೆಯುತ್ತೇವೆ ಎಂದು ಎಚ್ಚರಿಸಿವೆ. ಸರ್ಕಾರ

 

ಆಗಸ್ಟ್ 10 ರಂದು 1000 ಸ್ಥಳಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದʼ-ವಿರೋಧಿ ಸಾಮೂಹಿಕ ಪ್ರತಿಭಟನೆ : ಸಂಯುಕ್ತ ಕಿಸಾನ್‌ ಮೋರ್ಚಾ ಕರೆ

ಜುಲೈ ೨೮ರಂದು ನವದೆಹಲಿಯಲ್ಲಿ ನಡೆದ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ)ದ  ಅಖಿಲ ಭಾರತ ಸಮಾವೇಶವು ʼಮುಕ್ತ ವ್ಯಾಪಾರ ಒಪ್ಪಂದʼಗಳು(ಎಫ್‌ಟಿಎ),  ಸಿ೨+೫೦% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‌ಪಿ), ಸಮಗ್ರ ಸಾಲ ಮನ್ನಾ, ಕೃಷಿ ಆತ್ಮಹತ್ಯೆ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ಪರಿಹಾರ ಮತ್ತು ವಿದ್ಯುತ್ ಖಾಸಗೀಕರಣ ನಿಷೇಧ ಬೇಡಿಕೆಗಳನ್ನು ಅಂಗೀಕರಿಸಿದೆ.

ಆಗಸ್ಟ್ 17, 2026 ರಂದು ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ಸಂಸದರು ಮತ್ತು ಶಾಸಕರಿಗೆ ಹಕ್ಕೊತ್ತಾಯಗಳ ಪಟ್ಟಿಯನ್ನು  ಸಲ್ಲಿಸಲಾಗುವುದು. ಮತ್ತು 26 ನವೆಂಬರ್ 2026 ರಿಂದ ನವದೆಹಲಿ ಸೇರಿದಂತೆ 100 ಸ್ಥಳಗಳಲ್ಲಿ ಕಿಸಾನ್ ಮಾರ್ಚ್, ಬಹು ದಿನಗಳ ಸಾಮೂಹಿಕ ಕಾರ್ಯಾಚರಣೆಗಳು ನಡೆಯಲಿವೆ ಎಂದು ಎಸ್‌ಕೆಎಂ ಪತ್ರಿಕಾ ಹೇಳಿಕೆ ತಿಳಿಸಿದೆ.

ಸಮಾವೇಶವು ಭಾರತ-ಯುಎಸ್ ಮುಕ್ತ ವ್ಯಾಪಾರ ಒಪ್ಪಂದ ಬೇಡ, ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು, ಎಲ್ಲಾ ಬೆಳೆಗಳಿಗೆ ಖಾತರಿ  ಸಂಗ್ರಹಣೆಯೊಂದಿಗೆ  ಸಿ೨+೫೦% ಸೂತ್ರದ ಪ್ರಕಾರ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ)ಗಾಗಿ ಕಾನೂನನ್ನು ತರಬೇಕು, ಗ್ರಾಮೀಣ ಸಾಲಗ್ರಸ್ತತೆ ಮತ್ತು ರೈತ ಮತ್ತು ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳನ್ನು  ಕೊನೆಗೊಳಿಸಲು ಸಮಗ್ರ ಸಾಲ ಮನ್ನಾ ಮತ್ತು ಆತ್ಮಹತ್ಯೆ ಮಾಡಿಕೊಂಡ ಪ್ರತಿ ರೈತರ ಕುಟುಂಬಗಳಿಗೆ ರೂ. 25 ಲಕ್ಷ ಪರಿಹಾರವನ್ನು ಒದಗಿಸಬೇಕು,  4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು, ಎಲ್ಲಾ ಕಾರ್ಮಿಕರಿಗೆ ರೂ. 26,000 ಕನಿಷ್ಠ ವೇತನ, 200 ದಿನಗಳ ಕೆಲಸ ಮತ್ತು ರೂ. 700 ಕೂಲಿಯನ್ನು ಖಾತ್ರಿಪಡಿಸುವಂತೆ ಮನರೆಗ ಮರುಸ್ಥಾಪನೆ, ವಿದ್ಯುತ್ ಖಾಸಗೀಕರಣ ಮಸೂದೆ 2025 , ಬೀಜ ಮಸೂದೆ 2025, NFSA ತಿದ್ದುಪಡಿ ಮಸೂದೆ ವಾಪಾಸ್, ಬಲವಂತದ ಭೂಸ್ವಾಧೀನ ಬೇಡ,  ಕಾರ್ಪೊರೇಟ್ ಪರ ಭೂ ಸಂಚಯನ ಬೇಡ, ಮತ್ತು ಬುಡಕಟ್ಟು ಜನಾಂಗದವರು ಮತ್ತು ಬುಡಕಟ್ಟು ಜನಾಂಗದವರಲ್ಲದ ಅರಣ್ಯವಾಸಿಗಳಿಗೆ LARR ಕಾಯ್ದೆ 2013 ಮತ್ತು FRA 2006 ರ ಆಧಾರದ ಮೇಲೆ ಭೂ ಹಕ್ಕುಗಳ ರಕ್ಷಣೆಯಾಗಬೇಕು ಎಂದು ಆಗ್ರಹಿಸಿದೆ. ಸರ್ಕಾರ

ಇದನ್ನೂ ಓದಿ : ಮೊದಲು ಮೊಟ್ಟೆಯಾ, ಬಾಳೆಹಣ್ಣಾ? ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಹೊಸ ಸಂಕಷ್ಟ

ರೈತರು ಕ್ವಿಟ್ ಇಂಡಿಯಾ ದಿನದ 84 ನೇ ವಾರ್ಷಿಕೋತ್ಸವದ ದಿನವಾದ  ಆಗಸ್ಟ್ ೧೦, ೨೦೨೬ ನ್ನು– ದೇಶ ವಿರೋಧಿ ಮುಕ್ತ ವ್ಯಾಪಾರ ಒಪ್ಪಂದ” ಗಳ  ವಿರುದ್ಧ ದೇಶಾದ್ಯಂತ 1,000 ಸ್ಥಳಗಳಲ್ಲಿ ಜೈಲ್ ಭರೋ, ರೈಲು ರೋಕೋ ಮತ್ತು ರಸ್ತೆ ರೋಕೋ ಮುಂತಾದ ವಿವಿಧ ಕ್ರಮಗಳೊಂದಿಗೆ ಬೃಹತ್ ಪ್ರತಿಭಟನಾ ದಿನವಾಗಿ ಆಚರಿಸಲಿದ್ದಾರೆ. ಹಲವಾರು ಸಂಘಟನೆಗಳು ಮತ್ತು ವೇದಿಕೆಗಳು ಎಸ್‌ಕೆಎಂ ಅನ್ನು ಬೆಂಬಲಿಸಲು ಮತ್ತು ಪ್ರತಿಭಟನೆಗಳನ್ನು ಸಂಘಟಿಸಲು ನಿರ್ಧರಿಸಿವೆ.

ಆಗಸ್ಟ್ 17 ರಂದು, ಎಸ್‌ಕೆಎಂನಿಯೋಗಗಳು ಪ್ರಧಾನ ಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರು, ಸಂಸದರು ಮತ್ತು ಶಾಸಕರಿಗೆ ಹಕ್ಕೊತ್ತಾಯಗಳ ಪಟ್ಟಿಯನ್ನು ಸಲ್ಲಿಸಲಿವೆ.

ಮುಂದಿನ ಎರಡು ತಿಂಗಳಲ್ಲಿ ಎಸ್‌ಕೆಎಂ ದೀರ್ಘಾವಧಿಯ ಸ್ವತಂತ್ರ ಮತ್ತು ಸಂಘಟಿತ ಹೋರಾಟಗಳಿಗೆ ಸಿದ್ಧತೆ ನಡೆಸಲು ರಾಜ್ಯ ಸಮಾವೇಶಗಳನ್ನು ನಡೆಸಲಿದೆ. ಎಲ್ಲಾ ಸದಸ್ಯ ಸಂಘಟನೆಗಳು ಸಾಮೂಹಿಕ ಪಾದಯಾತ್ರೆ, ವಾಹನ ಜಾಥಾಗಳು ಮತ್ತು ಟ್ರ್ಯಾಕ್ಟರ್ ಮೆರವಣಿಗೆಗಳಂತಹ ಸ್ವತಂತ್ರ ಮತ್ತು ಸಂಘಟಿತ ಅಭಿಯಾನಗಳನ್ನು ಪ್ರಾರಂಭಿಸುತ್ತವೆ, ಇವು ಸಾರ್ವಜನಿಕ ಸಭೆಗಳು, ಮಹಾಪಂಚಾಯತ್‌ಗಳು ಮತ್ತು ರಾಜ್ಯ ರ್ಯಾಲಿಗಳಲ್ಲಿ ಕೊನೆಗೊಳ್ಳುತ್ತವೆ.

ಅಕ್ಟೋಬರ್ 3 ರಂದು ಲಖಿಂಪುರ ಖೇರಿ ಹುತಾತ್ಮರ ದಿನದಂದು ಗ್ರಾಮ ಮಹಾಪಂಚಾಯತ್ ನಡೆಯಲಿದೆ ಮತ್ತು ಸದಸ್ಯ ಸಂಘಟನೆಗಳು 2026 ನವೆಂಬರ್ 26 ರಿಂದ ನಿರ್ಣಾಯಕ ಬೇಡಿಕೆಗಳನ್ನು ಸಾಧಿಸುವ ವರೆಗೆ ದೀರ್ಘಾವಧಿಯ ಹೋರಾಟಕ್ಕಾಗಿ ಸ್ವಯಂಸೇವಕರ ಪಟ್ಟಿಯನ್ನು ಸಿದ್ಧಪಡಿಸುತ್ತವೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಎಂಎಸ್‌ಪಿ ಮತ್ತು ಸಾಲ ಮನ್ನಾ ಸೇರಿದಂತೆ ಡಿಸೆಂಬರ್ 9, 2021 ರ ತನ್ನದೇ ಆದ ಲಿಖಿತ ಭರವಸೆಯನ್ನು ಉಲ್ಲಂಘಿಸುವುದನ್ನು ಮುಂದುವರೆಸಿದರೆ ಮತ್ತು ಹಕ್ಕೊತ್ತಾಯ ಪಟ್ಟಿಯನ್ನು ಸ್ವೀಕರಿಸದಿದ್ದರೆ, ಎಸ್‌ಕೆಎಂ ಹೋರಾಟಗಳನ್ನು ತೀವ್ರಗೊಳಿಸುತ್ತದೆ. 2026 ರ ನವೆಂಬರ್ 26 ರಿಂದ ನವದೆಹಲಿ ಮತ್ತು ಭಾರತದಾದ್ಯಂತ 100 ಸ್ಥಳಗಳಲ್ಲಿ ಪ್ರಾರಂಭವಾಗುವ ಕಿಸಾನ್ ಮೆರವಣಿಗೆಗಳು ಮತ್ತು ಬಹು ದಿನಗಳ ಸಾಮೂಹಿಕ ಚಳವಳಿಗಳಿಗೆ ಸಿದ್ಧರಾಗುವಂತೆ ಸಮಾವೇಶವು ರೈತರಿಗೆ ಕರೆ ನೀಡಿದೆ. ಹೋರಾಟಗಳ ರೂಪ, ತಾಣಗಳು ಮತ್ತು ದಿನಾಂಕವನ್ನು ಸಂದರ್ಭಾನುಸಾರ ನಿರ್ಧರಿಸಲಾಗುವುದು.

ಕೊಕ್ರೊಚ್‌ ಜನತಾ ಪಕ್ಷದ ನಾಯಕರಲ್ಲಿ ಒಬ್ಬರಾದ ಅಶುತೋಷ್ ರಂಕಾ ಸಮಾವೇಶವನ್ನು ಅಭಿನಂದಿಸಿದರು ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ ಯಶಸ್ವಿ ವಿದ್ಯಾರ್ಥಿಗಳ ಹೋರಾಟದ ಅನುಭವವನ್ನು ಹಂಚಿಕೊಂಡರು. ಮುಂಬರುವ ಹೋರಾಟಗಳಲ್ಲಿ ವಿದ್ಯಾರ್ಥಿಗಳು ಮತ್ತು ರೈತರ ದೊಡ್ಡ ಒಗ್ಗಟ್ಟಿಗೆ ಅವರು ಮನವಿ ಮಾಡಿದರು.

ಸಮಾವೇಶವು ಎರಡು ನಿರ್ಣಯಗಳನ್ನು ಅಂಗೀಕರಿಸಿತು. ಒಂದು ದೆಹಲಿ ಗಡಿಗಳಲ್ಲಿ ಒಂದು ವರ್ಷದ ಐತಿಹಾಸಿಕ ರೈತ ಹೋರಾಟದ 736 ರೈತ ಹುತಾತ್ಮರನ್ನು ಗೌರವಿಸಲು ಹುತಾತ್ಮರ ಸ್ಮಾರಕವನ್ನು ಸ್ಥಾಪಿಸಲು ಸಿಂಘು ಗಡಿಯಲ್ಲಿ ಸಾಕಷ್ಟು ಭೂಮಿಯನ್ನು ಒದಗಿಸಬೇಕೆಂದು ದೆಹಲಿ ಸರ್ಕಾರವನ್ನು ಒತ್ತಾಯಿಸಿತು. ಎರಡನೆಯದು ತೀವ್ರ ಬರ, ಪ್ರವಾಹ ಮತ್ತು ಪರಿಸರ ಬಿಕ್ಕಟ್ಟು ಮತ್ತು ಬೆಳೆಗಳು, ಜಾನುವಾರುಗಳು, ವಸತಿ ಮತ್ತು ಜೀವನೋಪಾಯದ ನಷ್ಟವನ್ನು ಸರಿದೂಗಿಸಲು ಸಾರ್ವಜನಿಕ ವಲಯದ ವಿಮಾ ನಿಗಮಗಳೊಂದಿಗೆ ಪರಿಣಾಮಕಾರಿ ವಿಪತ್ತು ನಿರ್ವಹಣಾ ವ್ಯವಸ್ಥೆಯ ಅಗತ್ಯತೆಯ ಕುರಿತಾಗಿತ್ತು.

ಜಿಲ್ಲಾ ಮಟ್ಟದ ರ್ಯಾಲಿಗಳು ಮತ್ತು ರಾಜ್ಯಾದ್ಯಂತ ಧರಣಿಗಳನ್ನು ನಡೆಸಲು ರೈತ-ಕಾರ್ಮಿಕರ ರಾಷ್ಟ್ರೀಯ  ಸಮಾವೇಶದ ನಿರ್ಧಾರ

 

ಇದರ ಮರುದಿನ, ಜುಲೈ ೨೯ರಂದು ಕಾರ್ಮಿಕರು ಮತ್ತು ರೈತರ ರಾಷ್ಟ್ರೀಯ ಸಮಾವೇಶವು ಜುಲೈ 29, 2026 ರಂದು ಅದೇ ನಗರದ ಟಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿಯಾಗಿ ಆಯೋಜಿಸಿದ್ದ ಈ ಬೃಹತ್‌ ಸಭೆಯಲ್ಲಿ  ಒಂದು ಜಂಟಿ  ಘೋಷಣೆಯನ್ನು ಅಂಗೀಕರಿಸಲಾಯಿತು.

ಕಾರ್ಮಿಕ-ರೈತ ಜಂಟಿ ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದಿರುವ ಜಂಟಿ ಘೋಷಣೆ, ಪ್ರತಿ ಹಳ್ಳಿಯಲ್ಲಿ ಬೃಹತ್ ಗ್ರಾಮ ಸಭೆಗಳು ಮತ್ತು ಕಿಸಾನ್ ಪಂಚಾಯತ್‌ಗಳ ಮೂಲಕ ರೈತರನ್ನು ಸಜ್ಜುಗೊಳಿಸಲಾಗುವುದು ಮತ್ತು ತಳಮಟ್ಟದ ಐಕ್ಯತೆಯನ್ನು ನಿರ್ಮಿಸಲಾಗವುದು ಎಂದಿದೆ. ಜೊತೆಗೆ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ಕಾರ್ಯಸೂಚಿಯನ್ನು ಬಯಲಿಗೆ ಎಳೆಯಲು  ಜಿಲ್ಲಾ ಮಟ್ಟದ ರ್ಯಾಲಿಗಳು ಮತ್ತು ರಾಜ್ಯಾದ್ಯಂತ ಧರಣಿಗಳನ್ನು ನಡೆಸಲಾಗುತ್ತದೆ. ಇದು ಲೂಟಿಕೋರ ಸಾಲ ವಸೂಲಾತಿಯಲ್ಲಿ ತೊಡಗಿರುವ ಹಣಕಾಸು ಸಂಸ್ಥೆಗಳ ವಿರುದ್ಧ ಸಾಂಕೇತಿಕ ಮತ್ತು ಸಾಮೂಹಿಕ ನಾಗರಿಕ ಅಸಹಕಾರ ಕ್ರಮಗಳನ್ನು ಸಹ ಕೈಗೊಳ್ಳಲು ಕೂಡ ಸಮಾವೇಶ ನಿರ್ಧರಿಸಿತು. ಸರ್ಕಾರವು ನಿಗದಿತ ಸಮಯದೊಳಗೆ ಸ್ಪಂದಿಸಲು ವಿಫಲವಾದರೆ, ರಾಷ್ಟ್ರವ್ಯಾಪಿ ಭಾರತ್ ಬಂದ್‌ಗೆ ಕರೆ ನೀಡಲಾಗುವುದು, ನಂತರ ಕಾರ್ಮಿಕರು ಮತ್ತು ರೈತರ ಬೇಡಿಕೆಗಳನ್ನು ಲಿಖಿತವಾಗಿ ಅಂಗೀಕರಿಸುವವರೆಗೆ ಸರ್ಕಾರಿ ಕಚೇರಿಗಳು ಮತ್ತು ಹಣಕಾಸು ಸಂಸ್ಥೆಗಳ ನಿರಂತರ ಮುತ್ತಿಗೆ ನಡೆಸಲಾಗುವುದು ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕೊಸಾನ್‌ ಮೋರ್ಚಾ ಜಂಟಿಯಾಗಿ ಎಚ್ಚರಿಸಿವೆ.

 

ಇದನ್ನೂ ನೋಡಿ : NEET ಹೋರಾಟದ ಒಳನೋಟ | ಗೋದಿ ಮೀಡಿಯಾ ನ್ಯೂಸ್‌ರೂಮ್‌ನಲ್ಲಿ ಸ್ಕ್ರಿಪ್ಟ್‌ ಹೇಗೆ ರೂಪುಗೊಳ್ಳುತ್ತಿತ್ತು? | ಗುರುರಾಜ

Donate Janashakthi Media

Leave a Reply

Your email address will not be published. Required fields are marked *