ಬೆಂಗಳೂರು-ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಬಹುದೊಡ್ಡ ಹಗರಣ, ರೈತರ ಭೂಮಿ ದರೋಡೆ: ಹೈಕೋರ್ಟ್‌

ಬೆಂಗಳೂರು: ನಂದಿ ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಕೈಗೊಂಡಿರುವ ಬೆಂಗಳೂರು – ಮೈಸೂರು ಇನ್ಪ್ರಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆ (ಬಿಎಂಐಸಿಪಿ) ರಾಜ್ಯದ ಬಹುದೊಡ್ಡ ಹಗರಣವೆಂದು ಭಾಸವಾಗುತ್ತಿದೆ ಎಂದು ಕರ್ನಾಟಕ ಹೈಕೋರ್ಟ್‌ ಕಟುವಾಗಿ ಅಭಿಪ್ರಾಯಪಟ್ಟಿದೆ. ಬೆಂಗಳೂರು

ನೈಸ್‌ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್‌ ಹಾಗೂ ಟಿ.ಎಂ. ನದಾಫ್‌ ಅವರ ವಿಭಾಗೀಯ ಪೀಠವು ವಜಾಗೊಳಿಸಿ, ಭೂಸ್ವಾಧೀನ ರದ್ದುಪಡಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಕಾಯಂಗೊಳಿಸಿದೆ.

ಎರಡು ದಶಕಗಳಾದರೂ ಭೂಮಾಲೀಕರಿಗೆ ಪರಿಹಾರ ನಿಗದಿಪಡಿಸದಿರುವುದು ಗಂಭೀರ ಅಕ್ರಮವೆಂದು ಪರಿಗಣಿಸಿದ ನ್ಯಾಯಾಲಯ, “ರೈತರ ಭೂಮಿ ಮತ್ತು ಜೀವನೋಪಾಯ ಕಸಿದುಕೊಂಡು ಪರಿಹಾರ ನೀಡದಿರುವುದು ಯೋಜನೆಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಸಂಪುಟ ವಿಸ್ತರಣೆಗೆ ಕ್ಷಣಗಣನೆ: ಗುರುವಾರವೇ ಸಚಿವರ ಪ್ರಮಾಣವಚನ ಸಾಧ್ಯತೆ?

“ಸರ್ಕಾರವು ಜನರ ಪರವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕಾದರೆ, ಇಲ್ಲಿ ಖಾಸಗಿ ಹಿತಾಸಕ್ತಿಗಳಿಗೆ ಅವಕಾಶ ಕಲ್ಪಿಸಿರುವುದು ಸಂವಿಧಾನದ ಉಲ್ಲಂಘನೆಯಾಗಿದೆ. ಇದು ಕಾನೂನು ಮತ್ತು ಸಂವಿಧಾನದ ಮೇಲಿನ ವಂಚನೆ” ಎಂದು ಪೀಠ ತೀವ್ರವಾಗಿ ಟೀಕಿಸಿದೆ.

1997ರಲ್ಲಿ ರಾಜ್ಯ ಸರ್ಕಾರ ಮತ್ತು ನೈಸ್‌ ನಡುವೆ ಒಪ್ಪಂದವಾಗಿ ಆರಂಭವಾದ ಬಿಎಂಐಸಿಪಿ ಯೋಜನೆ, 111 ಕಿಮೀ ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಒಳಗೊಂಡಿತ್ತು. ಈ ಯೋಜನೆಗಾಗಿ 1998ರಿಂದ 2009ರವರೆಗೆ ಸುಮಾರು 20,193 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ, 23 ವರ್ಷಗಳಾದರೂ ಭೂಮಾಲೀಕರಿಗೆ ಪರಿಹಾರ ನಿಗದಿ ಮಾಡಲಾಗಿಲ್ಲ.

“ಭೂಮಿ ಸ್ವಾಧೀನಪಡಿಸಿಕೊಂಡ ನಂತರ ಸರ್ಕಾರವು ಸಮಂಜಸವಾದ ಅವಧಿಯಲ್ಲಿ ಪರಿಹಾರ ನೀಡುವುದು ಕಡ್ಡಾಯ. ಸಮಯ ಮಿತಿಯಿಲ್ಲ ಎಂಬ ಕಾರಣಕ್ಕೆ ಪರಿಹಾರವನ್ನು ಅನಿರ್ದಿಷ್ಟವಾಗಿ ಮುಂದೂಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನೈಸ್‌ ಯೋಜನೆಯಡಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಂಡಿರುವುದನ್ನೂ ನ್ಯಾಯಾಲಯ ಗಮನಿಸಿದೆ. ಕೇವಲ 111 ಕಿಮೀ ಎಕ್ಸ್‌ಪ್ರೆಸ್‌ವೇಯಲ್ಲಿ 5 ಕಿಮೀ ಮಾತ್ರ ನಿರ್ಮಾಣಗೊಂಡಿರುವುದನ್ನು ಉಲ್ಲೇಖಿಸಿ, ಯೋಜನೆ ಜಾರಿಗೆ ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ಭೂಸ್ವಾಧೀನದಿಂದ ರೈತರು ತಮ್ಮ ಭೂಮಿಯನ್ನು ಬಳಸಿಕೊಳ್ಳಲು, ಮಾರಾಟ ಮಾಡಲು ಅಥವಾ ಅಭಿವೃದ್ಧಿಪಡಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಇದು ಸಂವಿಧಾನದ 300A ವಿಧಿಯ ಅಡಿಯಲ್ಲಿ ಆಸ್ತಿಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನೈಸ್‌ ಯೋಜನೆಯ ಹಣಕಾಸು ವ್ಯವಹಾರಗಳು ಹಾಗೂ ಒಪ್ಪಂದಗಳ ಕುರಿತು ಅನುಮಾನ ವ್ಯಕ್ತಪಡಿಸಿದ ಪೀಠ, ಸ್ವತಂತ್ರ ತನಿಖೆ ಮತ್ತು ವಿಧಿವಿಜ್ಞಾನ ಲೆಕ್ಕಪರಿಶೋಧನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರೂ, ಅದಕ್ಕೆ ನೇರ ನಿರ್ದೇಶನ ನೀಡಲು ಹಿಂದೆ ಸರಿದಿದೆ.

ಈ ತೀರ್ಪು ಮೂಲಕ ನೈಸ್‌ ಮತ್ತು ಕೆಐಎಡಿಬಿ ಮೇಲ್ಮನವಿಗಳು ಸಂಪೂರ್ಣವಾಗಿ ತಿರಸ್ಕೃತವಾಗಿದ್ದು, ಭೂಮಾಲೀಕರ ಪರವಾಗಿ ನೀಡಿದ್ದ ಹಿಂದಿನ ತೀರ್ಪು ಮುಂದುವರಿಯಲಿದೆ.

ಇದನ್ನೂ ನೋಡಿ: ಯುವಜನತೆ ಪ್ರತಿಭಟನೆ: ಜೆನ್ ಜಿಫಿಕೇಶನ್ Janashakthi Media

Donate Janashakthi Media

Leave a Reply

Your email address will not be published. Required fields are marked *