ಬಜಪೆ: ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಜಪೆ – ಕೆಂಜಾರು ರಾಜ್ಯ ಹೆದ್ದಾರಿ 67ರಲ್ಲಿ ಭಾರೀ ಹೊಂಡಗಳು ಕಾಣಿಸಿಕೊಂಡಿದ್ದು, ವಾಹನ ಸಂಚಾರ ಸಂಕಷ್ಟಮಯವಾಗಿದೆ. ಬಜಪೆ
ಕೆಂಜಾರು ಭಾಗದಲ್ಲಿರುವ ಈ ಪ್ರಮುಖ ರಸ್ತೆಯಲ್ಲಿ ಹಗಲು–ರಾತ್ರಿ ವಾಹನ ಸಂಚಾರ ಹೆಚ್ಚಾಗಿದ್ದು, ಕಳೆದ ಮಳೆಗಾಲದಲ್ಲಿ ಹೊಂಡ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ಡಾಮರು ಕಾಮಗಾರಿ ನಡೆಸಲಾಗಿತ್ತು. ಇದರಿಂದ ತಾತ್ಕಾಲಿಕವಾಗಿ ಸಂಚಾರ ಸುಗಮವಾಗಿತ್ತು.
ಆದರೆ, ಈ ಬಾರಿ ಹೆಚ್ಚಿನ ಮಳೆ ಇಲ್ಲದಿದ್ದರೂ ಮೊದಲ ಮಳೆಯಲ್ಲೇ ರಸ್ತೆಯಲ್ಲಿ ದೊಡ್ಡ ಹೊಂಡಗಳು ಉಂಟಾಗಿವೆ. ಕರಂಬಾರು ಶಾಲೆ ಸಮೀಪ, ರೇಗೋ ಪೆಟ್ರೋಲ್ ಪಂಪ್ ಬಳಿ, ಸಣ್ಣ ಸೇತುವೆ ಹಾಗೂ ಕರಂಬಾರು ಮಸೀದಿ ಸುತ್ತಮುತ್ತ ಸುಮಾರು 300 ಮೀಟರ್ ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಕೆಲವು ಕಡೆಗಳಲ್ಲಿ ನೀರು ನಿಂತು ಕೆರೆಯಂತಾಗಿದೆ.
ಇದನ್ನೂ ಓದಿ: ಸೆ.1ರಿಂದ ಬಂಡೀಪುರ–ನಾಗರಹೊಳೆಯಲ್ಲಿ ಸಫಾರಿ ದರ ದ್ವಿಗುಣ: ಪ್ರವಾಸಿಗರಿಗೆ ಶಾಕ್
ಚರಂಡಿ ಸಮಸ್ಯೆ ಪ್ರಮುಖ ಕಾರಣ
ಈ ಹೆದ್ದಾರಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆನೀರು ರಸ್ತೆಯಲ್ಲೇ ಹರಿದು ಡಾಮರು ಕೊಚ್ಚಿ ಹೋಗುತ್ತಿದೆ. ತಿರುವುಗಳಿಂದ ಕೂಡಿದ ಕಿರಿದಾದ ರಸ್ತೆ ಹಾಗೂ ಗುಡ್ಡ ಪ್ರದೇಶ ಇರುವುದರಿಂದ ವಾಹನಗಳಿಗೆ ಓವರ್‌ಟೇಕ್ ಮಾಡುವುದು ಕಷ್ಟಕರವಾಗಿದೆ. ಹೊಂಡಗಳಿರುವ ಭಾಗದಲ್ಲಿ ಸಂಚಾರ ನಿಧಾನಗತಿಯಾಗಿದ್ದು, ವಾಹನಗಳ ಸಾಲು ಸಾಮಾನ್ಯ ದೃಶ್ಯವಾಗಿದೆ.
ದ್ವಿಚಕ್ರ ವಾಹನ ಸವಾರರಿಗೆ ಇದು ಹೆಚ್ಚು ಅಪಾಯಕಾರಿಯಾಗಿದ್ದು, ಹೊಂಡಗಳಲ್ಲಿ ಬಿದ್ದರೆ ಗಂಭೀರ ಗಾಯಗಳ ಸಂಭವ ಇದೆ.
ಬಸ್ ಸಂಚಾರಕ್ಕೂ ತೊಂದರೆ
ಈ ಮಾರ್ಗದಲ್ಲಿ ಬಸ್‌ಗಳ ಸಮಯ ಪಾಲನೆ ಕಷ್ಟವಾಗುತ್ತಿದೆ. ಲಘು ವಾಹನಗಳು ನಿಧಾನವಾಗಿ ಸಾಗುವುದರಿಂದ ಬಸ್‌ಗಳು ಕೂಡ ಹಿಂಬಾಲಿಸಬೇಕಾಗಿ ಬರುತ್ತಿದೆ. ಹೊಂಡಗಳ ಕಾರಣದಿಂದ ಬಸ್ಸಿನ ಹಿಂದಿನ ಸೀಟುಗಳಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವುದನ್ನು ತಪ್ಪಿಸುತ್ತಿದ್ದಾರೆ.
ಶಾಶ್ವತ ಪರಿಹಾರಕ್ಕೆ ಬೇಡಿಕೆ
ಸ್ಥಳೀಯರು ತಾತ್ಕಾಲಿಕ ತೇಪೆ ಕಾಮಗಾರಿಯ ಬದಲು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದಾರೆ. ಕೆಂಜಾರು–ಕರಂಬಾರುದಿಂದ ಪೆರ್ಮುದೆ ಭಟ್ರಕೆರೆವರೆಗೆ ₹20 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಯೋಜನೆಯನ್ನು ಶೀಘ್ರ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಇದರ ಜೊತೆಗೆ, ತಿರುವುಗಳನ್ನು ಸರಿಪಡಿಸುವುದು, ಸಮರ್ಪಕ ಚರಂಡಿ ನಿರ್ಮಾಣ ಮತ್ತು ಗುಡ್ಡ ಪ್ರದೇಶದಲ್ಲಿ ಮಣ್ಣು ಜರಿತ ತಡೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಇದನ್ನೂ ನೋಡಿ: ನೀಟ್ ಹೋರಾಟಕ್ಕೆ ಕಲೆಯ ಧ್ವನಿ! ಸೋನಂ ವಾಂಗ್‌ಚುಕ್ ಬೆಂಬಲಕ್ಕೆ ಚಿತ್ರ ಬಿಡಿಸಿದ ಬಿ.ಎಸ್. ದೇಸಾಯಿ Janashakthi Media
