ಸಚಿವ ಸ್ಥಾನ ಯಾರಿಗೆ? ಇಂದು ರಾಹುಲ್‌ ಜೊತೆ ರಾಜ್ಯ ಕಾಂಗ್ರೆಸ್‌ ನಾಯಕರ ನಿರ್ಣಾಯಕ ಸಭೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಹಲವು ದಿನಗಳ ಕುತೂಹಲಕ್ಕೆ ಮಂಗಳವಾರ ತೆರೆ ಬೀಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರು ನವದೆಹಲಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ ಕುರಿತು ಅಂತಿಮ ಚರ್ಚೆ ನಡೆಸಲಿದ್ದಾರೆ. ಸಚಿವ

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಸಚಿವ ಸಂಪುಟದಲ್ಲಿ ಭರ್ತಿ ಮಾಡಬೇಕಿರುವ ಸ್ಥಾನಗಳು 20 ಮಾತ್ರ ಇದ್ದರೂ, 40ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಟ್ಟಿಯಲ್ಲಿ ಎಚ್‌.ಸಿ. ಬಾಲಕೃಷ್ಣ, ಲಕ್ಷ್ಮಣ ಸವದಿ, ಮಧು ಬಂಗಾರಪ್ಪ, ಶರತ್ ಬಚ್ಚೇಗೌಡ, ತನ್ವೀರ್ ಸೇಠ್ ಅಥವಾ ರಿಜ್ವಾನ್ ಅರ್ಷದ್, ಯಶವಂತರಾಯ ಗೌಡ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶ್ರೀನಿವಾಸ್ ಮಾನೆ ಅವರ ಹೆಸರುಗಳಿವೆ. ಸಚಿವ

ಇದನ್ನೂ ಓದಿ : ಮಹಿಳಾ ಮೀಸಲಾತಿ ತಕ್ಷಣ ಜಾರಿ ಮಾಡಿ: ಫ್ರೀಡಂಪಾರ್ಕ್‌ನಲ್ಲಿ ಮಹಿಳಾ ಸಂಘಟನೆಗಳ ಪ್ರತಿಭಟನೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಟ್ಟಿಯಲ್ಲಿ ಸಂತೋಷ್ ಲಾಡ್, ಪುಟ್ಟರಂಗ ಶೆಟ್ಟಿ, ಲೇಔಟ್ ಕೃಷ್ಣಪ್ಪ, ಕೆ. ಶಿವಲಿಂಗೇಗೌಡ, ಎ.ಎಸ್. ಪೊನ್ನಣ್ಣ, ಜಮೀರ್ ಅಹ್ಮದ್ ಖಾನ್, ರಘುಮೂರ್ತಿ ಚಳ್ಳಕೆರೆ, ಪ್ರಸಾದ್ ಅಬ್ಬಯ್ಯ, ವಿಜಯಾನಂದ ಕಾಶಪ್ಪನವರ್ ಹಾಗೂ ಅಶೋಕ್ ಪಟ್ಟಣ ಅವರ ಹೆಸರುಗಳಿದ್ದು, ಶಿವಾನಂದ ಪಾಟೀಲ್ ಅಥವಾ ಬಸವರಾಜ ರಾಯರೆಡ್ಡಿ ಅವರಲ್ಲಿ ಒಬ್ಬರಿಗೆ ಅವಕಾಶ ದೊರೆಯುವ ಸಾಧ್ಯತೆಯಿದೆ.

ಇನ್ನೊಂದೆಡೆ ಪಕ್ಷದ ಹೈಕಮಾಂಡ್ ಪರಿಗಣನೆಯಲ್ಲಿರುವ ಪಟ್ಟಿಯಲ್ಲಿ ದಿನೇಶ್ ಗುಂಡೂರಾವ್, ಜಿ.ಎಸ್. ಪಾಟೀಲ್, ಅಜಯ್ ಸಿಂಗ್ ಹಾಗೂ ಬಿ.ಆರ್. ಪಾಟೀಲ್ ಅವರ ಹೆಸರುಗಳೂ ಕೇಳಿಬರುತ್ತಿವೆ.

ಸಚಿವ ಸಂಪುಟ ರಚನೆಯಲ್ಲಿ ಜಾತಿ ಸಮೀಕರಣ, ಪ್ರಾದೇಶಿಕ ಸಮತೋಲನ, ಸಮುದಾಯಗಳಿಗೆ ಪ್ರಾತಿನಿಧ್ಯ, ಮಹಿಳೆಯರಿಗೆ ಅವಕಾಶ ಹಾಗೂ ಪಕ್ಷದ ಸಂಘಟನೆಗೆ ನೀಡಿದ ಕೊಡುಗೆಯನ್ನು ಪ್ರಮುಖ ಮಾನದಂಡಗಳಾಗಿ ಪರಿಗಣಿಸುವ ಸಾಧ್ಯತೆ ಇದೆ. ನಾಲ್ಕೈದು ಬಾರಿ ಶಾಸಕರಾಗಿರುವ ಹಿರಿಯ ನಾಯಕರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ, ಮೊದಲ ಬಾರಿಗೆ ಶಾಸಕರಾದ ಕೆಲವರು ಕೂಡ ಸಂಪುಟ ಸೇರುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಹೊಸ ಮುಖಗಳಿಗೆ ಅವಕಾಶ ಸಿಗುತ್ತದೆಯೇ ಅಥವಾ ಅನುಭವಿಗಳಿಗೆ ಮಣೆ ಹಾಕಲಾಗುತ್ತದೆಯೇ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕಳೆದ ಕೆಲವು ವಾರಗಳಿಂದ ಸಚಿವ ಸಂಪುಟ ವಿಸ್ತರಣೆ ಹಲವು ಬಾರಿ ಮುಂದೂಡಲ್ಪಟ್ಟಿತ್ತು. ಇದೀಗ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ನಡೆಯಲಿರುವ ಸಭೆಯಲ್ಲೇ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸಭೆಯ ಬಳಿಕ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಕಳುಹಿಸುವ ಹಾಗೂ ಶೀಘ್ರದಲ್ಲೇ ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಸಚಿವ

ಇದನ್ನೂ ನೋಡಿ : ನೀಟ್ ಹಗರಣಕ್ಕೆ ದೇಶಾದ್ಯಂತ ಆಕ್ರೋಶ! ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *