ಬಡವರ, ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್‌ಐಆರ್‌

ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಕೇವಲ 112 ದಿನಗಳ ಅವಧಿಯಲ್ಲಿ 5.52 ಕೋಟಿ ಮತದಾರರ ಎಸ್‌ಐಆರ್‌ ಪ್ರಕ್ರಿಯೆ ಮುಗಿಯುತ್ತದೆ! ಇಷ್ಟು ಕಡಿಮೆ ಸಮಯಾವಕಾಶ ಯಾಕಾಗಿ? ಇಷ್ಟಕ್ಕೂ ಎಸ್‌ಐಆರ್‌ ನ ಕಠಿಣ ನಿಯಮಗಳು ಯಾಕಾಗಿ? ನಾವು ಈ ದೇಶದ ಪ್ರಜೆಗಳು ಎಂಬುದಕ್ಕೆ ದಾಖಲೆಗಳನ್ನು ತೋರಿಸಬೇಕೆ? ನಾವಿಲ್ಲಿ ಜೀವನ ನಡೆಸುತ್ತಿರುವುದೇ ಸಾಕಲ್ಲವೇ? ನಮ್ಮ ತಂದೆ, ತಾಯಿ, ತಾತ, ಅಜ್ಜಿ ಭಾರತದಲ್ಲೇ ಜೀವನ ನಡೆಸಿರುವುದು ನಿಜವಲ್ಲವೇ? ಇದಕ್ಕೆ ದಾಖಲೆಗಳನ್ನು ತೋರಿಸಬೇಕೆ? ಇಷ್ಟಕ್ಕೂ ಯಾಕಾಗಿ ಇಷ್ಟೊಂದು ಅವಸರ? ಎಂಬ ಪ್ರಶ್ನೆಗಳನ್ನು ಮತದಾರರು ಕೇಳುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ಅರ್ಹ ಮತದಾರರು, ಅದರಲ್ಲೂ ಬಡ ವಲಸೆ ಕಾರ್ಮಿಕರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ.

– ಸಿ. ಸಿದ್ದಯ್ಯ

ಕರ್ನಾಟಕದಲ್ಲಿ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಜೂನ್‌ 30ರಂದು ಆರಂಭವಾಗಿದೆ. ಅಂದಿನಿಂದಲೇ ಗಣತಿ ಫಾರಂ ಅನ್ನು ಮನೆಮನೆಗೆ ತಲುಪಿಸುವ ಹೊಣೆಯನ್ನು ಬಿಎಲ್‌ಒ ಗಳಿಗೆ ವಹಿಸಲಾಗಿದೆ. ಮತದಾರರು ತಮ್ಮ ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ, ಆಗಸ್ಟ್‌ 8ರ ಒಳಗೆ ಬಿಎಲ್‌ಒ ಗಳಿಗೆ ತಲುಪಿಸಬೇಕು. ಈ ಮೊದಲು ಜುಲೈ 29ರ ವರೆಗೆ ಸಮಯಾವಕಾಶ ಇತ್ತು. ಅದನ್ನು ವಿಸ್ತರಣೆ ಮಾಡಿ ಜುಲೈ 15ರಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಆಗಸ್ಟ್‌ 8ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಆಗಸ್ಟ್‌ 17ರಿಂದ ಸೆಪ್ಟೆಂಬರ್ 16 ರವರೆಗೆ ಅವಕಾಶ ನೀಡಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳ ಸೂಚನೆ/ವಿಚಾರಣೆ/ವಿಲೇವಾರಿ: ಆಗಸ್ಟ್‌ 17ರಿಂದ ಅಕ್ಟೋಬರ್‌ 15ರ ವರೆಗೆ ನಡೆಯಲಿದೆ. ಅಕ್ಟೋಬರ್‌ 19, 2026 ರಂದು ಅಂತಿಮ ಪಟ್ಟಿ ಪ್ರಕಟಣೆ ಆಗಲಿದೆ.

ಇದನ್ನೂ ಓದಿ: ಬಜೆಟ್ ಅಧಿವೇಶನ ಹಾಜರಾತಿ ವರದಿ: ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ

ನಾನು ಬೆಂಗಳೂರು ನಗರದ ಒಂದಷ್ಟು ಮತದಾರರ ಜೊತೆ ಎಸ್‌ಐಆರ್ ಕುರಿತು ಮಾತನಾಡಿದೆ. ಅವರಲ್ಲಿ ಹಲವರಿಗೆ, ಗಣತಿ ಕಾರ್ಯ ಆರಂಭವಾಗಿ 20 ದಿನಗಳು ಕಳೆದರೂ ಎಸ್‌ಐಆರ್‌ ಬಗ್ಗೆ ಮತ್ತು ಗಣತಿ ನಮೂನೆ (ಎನ್ಯುಮರೇಷನ್ ಫಾರ್ಮ್ – Enumeration Form) ಬಗ್ಗೆ ಅಗತ್ಯ ಮಾಹಿತಿ ಇಲ್ಲದಿರುವುದು ಕಂಡುಬಂತು. ಫಾರಂ ಪಡೆದು, ಅದನ್ನು ಭರ್ತಿ ಮಾಡಿಕೊಡದೆ ಇದ್ದರೆ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಬಗ್ಗೆ, ನಂತರ ಎದುರಾಗುವ ಪರಿಣಾಮದ ಬಗ್ಗೆ ಹೇಳುವ ಪ್ರಯತ್ನ ಮಾಡಿದೆ. ಅದನ್ನು ಕೇಳಿದ ಬಹಳಷ್ಟು ಮತದಾರರಿಂದ ಬಂದ ಪ್ರತಿಕ್ರಿಯೆ: “ಇದೆಲ್ಲಾ ಯಾಕೆ? ನಾವು, ನಮ್ಮ ತಂದೆ, ತಾಯಿ, ನಮ್ಮ ಪೂರ್ವಜರು ಈ ದೇಶದಲ್ಲೇ ಬಾಳಿ ಬದುಕಿದವರು.

ನಾವು ಭಾರತದ ನಾಗರೀಕರು ಎಂದು ದಾಖಲೆಗಳ ಮೂಲಕ ಸಾಭೀತುಪಡಿಸಬೇಕೆ? ನೂರಕ್ಕೆ ಒಂದರಷ್ಟು ಇರಬಹುದಾದ (ಈ ಸಂಖ್ಯೆ ಕೂಡ ಅತಿಯಾದ ಉತ್ಪೇಕ್ಷೆಯಿಂದ ಕೂಡಿದೆ) ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ನೂರಾ ನಲವತ್ತು ಕೋಟಿ ಜನರು ʻನಾವು ಭಾರತದ ನಾಗರೀಕರುʼ ಎಂಬುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸಬೇಕೆ? ಅವರು ಕೇಳುವ ದಾಖಲೆಗಳನ್ನು ಎಲ್ಲಿಂದ ತರುವುದು? ಇಂತಹ ಹಲವು ಆತಂಕದ ಪ್ರಶ್ನೆಗಳು ಜನರಿಂದ ಕೇಳಿಬರುತ್ತಿವೆ.

ಇಂದಿನ ಎಸ್‌ ಐಆರ್‌ ಪ್ರಕ್ರಿಯೆಯು, ವಲಸೆ ಮತ್ತು ದಿನಗೂಲಿ ಕಾರ್ಮಿಕರ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪದೇ ಪದೆ ತಮ್ಮ ವಾಸಸ್ಥಳ ಬದಲಾಯಿಸುವ ಬಹಳಷ್ಟು ಮತದಾರರಿಗೆ, ಅವರು ಇದಕ್ಕೂ ಮೊದಲು ಇದ್ದ ಪ್ರದೇಶದ ಮನೆಗೆ ಅಂದರೆ, 2025ರ ಮತದಾರರ ಪಟ್ಟಿಯಲ್ಲಿರುವ ವಿಳಾಸ ಇದ್ದ ಮನೆಗೆ ಅವರ ಗಣತಿ ಫಾರಂ ಬರುತ್ತದೆ ಎಂಬ ಮಾಹಿತಿಯೂ ಬಹಳಷ್ಟು ಜನರಿಗೆ ಇಲ್ಲ. ತಾವು ಇದಕ್ಕೂ ಮೊದಲು ಇದ್ದ ಮನೆಯ ಬಳಿ ಹೋಗಿಯೋ, ಅಲ್ಲಿನ ಬಿಎಲ್‌ಒಗಳನ್ನು ಪತ್ತೆಹಚ್ಚಿಯೋ ಫಾರಂ ಪಡೆಯಬೇಕು. ಇದರ ಬಗ್ಗೆ ಕನಿಷ್ಟ ಮಾಹಿತಿಯೂ ಹಲವರಿಗೆ ಇಲ್ಲ. ಅದು ತಿಳಿದ ನಂತರವೂ ಫಾರಂ ಪಡೆಯಲು ಮತ್ತು ಭರ್ತಿ ಮಾಡಿದ ಫಾರಂ ತಲುಪಿಸಲು ತಮ್ಮ ದಿನದ ಕೂಲಿ ಕಳೆದುಕೊಂಡು ಅಲ್ಲಿಗೆ ಅಲೆದಾಡಬೇಕು. ಜುಲೈ 15ರ ವರೆಗೆ ಅಂದರೆ 16 ದಿನಗಳ ನಂತರವೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇನ್ನೂ ಶೇ. 20 ರಷ್ಟು ಮತದಾರರಿಗೆ ಗಣತಿ ಫಾರಂ ತಲುಪಿಸಿಲ್ಲ.

“ಶಾಶ್ವತವಾಗಿ ಸ್ಥಳಾಂತರಗೊಂಡವರು/ಕಂಡುಬಂದಿಲ್ಲ”!!

SIR ಸಮಯದಲ್ಲಿ, ಬಿಎಲ್‌ಒ ಗಳು ಮತದಾರರ ಪಟ್ಟಿಯಲ್ಲಿ ಇರುವ ವಿಳಾಸದ ಮನಗೆ ಗಣತಿ ಫಾರಂ ತೆಗೆದುಕೊಂಡು ಹೋಗುತ್ತಾರೆ. ಆ ಮನೆಯಲ್ಲಿ ಸಂಬಂಧಿಸಿದ ಮತದಾರರು ಇಲ್ಲದಿದ್ದಲ್ಲಿ ಅಥವಾ ಪ್ರತಿಕ್ರಿಯಿಸದೇ ಇರುವವರನ್ನು “ಶಾಶ್ವತವಾಗಿ ಸ್ಥಳಾಂತರಗೊಂಡವರು/ಕಂಡುಬಂದಿಲ್ಲ” ಎಂದು ವರ್ಗೀಕರಿಸಲಾಗುತ್ತದೆ ಮತ್ತು ಅವರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಇದು ನಿಯತಕಾಲಿಕವಾಗಿ ತಮ್ಮ ಸ್ವಂತ ಊರುಗಳಿಗೆ ಹಿಂದಿರುಗುವ ವಲಸೆ ಕಾರ್ಮಿಕರ ಮೇಲೆ, ಮತ್ತು ಬೇರೆಡೆ ವಲಸೆ ಹೋದ ಅಥವಾ ಸ್ಥಳಾಂತಗೊಂಡ ಮತದಾರರ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಜುಲೈ 15, 2026ರಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ ಮಾಹಿತಿಯಂತೆ, ಅದಾಗಲೇ ಬೆಂಗಳೂರು ನಗರ ಜಿಲ್ಲೆ, ಬಿಬಿಎಂಪಿ ಉತ್ತರ, ಬಿಬಿಎಂಪಿ ದಕ್ಷಿಣ ಮತ್ತು ಬಿಬಿಎಂಪಿ ಕೇಂದ್ರ ಈ ವ್ಯಾಪ್ತಿಗಳಲ್ಲಿ 5,68,815 ʻಶಾಸ್ವತವಾಗಿ ಸ್ಥಳಾಂತರಗೊಂಡ ಮತದಾರರುʼ ಮತ್ತು 1,06,707 ʼಹಾಜರಾಗದವರುʼ ಎಂದು ಹೇಳಲಾಗಿದೆ. ಇವರಲ್ಲಿ ಬಹುತೇಕ ಮತದಾರರು ವಲಸೆ ಕಾರ್ಮಿಕರು ಎಂಬುದು ನಿರ್ವಿವಾದ. ಈ ಸಂಖ್ಯೆಯೇ ಎಸ್‌ ಐಆರ್‌ ಬಡ ವಲಸೆ ಕಾರ್ಮಿಕ ಮಾತದಾರರನ್ನು ಬೃಹತ್‌ ಪ್ರಮಾಣದಲ್ಲಿ ಹೊರ ತಳ್ಳಲಾಗುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಈ ನಾಲ್ಕು ವ್ಯಾಪ್ತಿ ಪ್ರದೇಶಗಳಲ್ಲಿ ಒಟ್ಟು ಮತದಾರರ ಸಂಖ್ಯೆ 1,03,88,363.

ದೇಶದಲ್ಲಿ ಇಂದು ಅಂದಾಜು 15 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. (2011ರ ಜನಗಣತಿ ಪ್ರಕಾರ 13.9 ಕೋಟಿ ವಲಸೆ ಕಾರ್ಮಿಕರಿದ್ದರು)

2002 ರಲ್ಲಿ ಮತದಾರರ ಪಟ್ಟಿಯಲ್ಲಿ ಹುಡುಕಾಟ

ಗಣತಿ ಫಾರಂ ಪಡೆಯುವುದೇ ಇಷ್ಟು ಶ್ರಮವಾದರೆ, ಫಾರಂ ಭರ್ತಿ ಮಾಡುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. 2002 ರಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾದ ಮತದಾರರ ಅಥವಾ ಅವರ ಕುಟುಂಬ ಸದಸ್ಯರ ವಿವರಗಳನ್ನು ನಮೂದಿಸಬೇಕು. ಅದಕ್ಕಾಗಿ 2002ರ ಮತದಾರರ ಪಟ್ಟಿ ಹುಡುಕುವುದು, 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಮತ ಇಲ್ಲದಿದ್ದರೆ, 2002ರ ಮತದಾರರ ಪಟ್ಟಿಯಲ್ಲಿ ತಮ್ಮ ತಂದೆ/ತಾಯಿ ಕುರಿತಾಗಿ ಮಾಹಿತಿ ಸಂಗ್ರಹಿಸುವುದು ಬಹುತೇಕರಿಗೆ ಹರಸಹಾಸವಾಗಿದೆ. ಇದಕ್ಕಾಗಿ ʻತಿಳಿದವರʼ ಬಳಿ ಹೋಗಿ ಆನ್ಲೈನ್‌ ಮೂಲಕ 2002ರ ಮಾಹಿತಿ ಹುಡುಕಿಕೊಡುವಂತೆ ಕೇಳಿಕೊಳ್ಳುವ ಪರಿಸ್ಥಿತಿ ಬಂದಿದೆ.

ಇನ್ನು ಗ್ರಾಮೀಣ ಪ್ರದೇಶದಲ್ಲಿ ತಮ್ಮ ಮತಗಳಿದ್ದು, ಬೆಂಗಳೂರಿಗೆ ವಲಸೆ ಬಂದಿರುವ ಕಾರ್ಮಿಕರದು ಮತ್ತೊಂದು ಸಮಸ್ಯೆ. ಆ ಕಾರ್ಮಿಕರ ಕುಟುಂಬದ ಯಾರಾದರೂ ಸದಸ್ಯರು ಸ್ವಂತ ಗ್ರಾಮದಲ್ಲಿ ಇದ್ದರೆ, ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಮರಳಿಸಲು ಅಷ್ಟೇನೂ ತೊಂದರೆ ಇಲ್ಲ ಎಂಬುದು ಅಂತಹ ಕಾರ್ಮಿಕರ ಬಳಿ ಮಾತನಾಡಿದಾಗ ತಿಳಿಯಿತು.

ಭೌತಿಕ ಅರ್ಜಿ ನಮೂನೆಗಳನ್ನು ಮತದಾರರು ಸ್ವತಃ ಅಥವಾ “ಯಾವುದೇ ವಯಸ್ಕ ಕುಟುಂಬದ ಸದಸ್ಯರು” ಮತದಾರರೊಂದಿಗಿನ ತಮ್ಮ ಸಂಬಂಧವನ್ನು ನಮೂದಿಸುವ ಮೂಲಕ ಭರ್ತಿ ಮಾಡಿ ಬೂತ್ ಮಟ್ಟದ ಅಧಿಕಾರಿಗಳಿಗೆ ಹಸ್ತಾಂತರಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ. ಅದೇ ಗ್ರಾಮದ 2002 ರ ಮತದಾರ ಪಟ್ಟಿಯ ಮಾಹಿತಿ ಪಡೆಯಲು ಗ್ರಾಮದಲ್ಲೇ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಲಾ ಶಿಕ್ಷಕರು ಸಹಾಯ ಮಾಡುತ್ತಾರೆ.

ತಮ್ಮ ಮತ ತಮ್ಮದೇ ಸ್ವಂತ ಗ್ರಾಮದಲ್ಲಿ ಇದ್ದು, ಇಡೀ ಕುಟುಂಬ ದೂರದ ನಗರ ಪಟ್ಟಣಗಳಿಗೆ ವಲಸೆ ಹೋದವರು ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು, ತಮ್ಮ ದುಡಿಮೆ ಬಿಟ್ಟು, ಪ್ರಯಾಣದ ವೆಚ್ಚ ಬರಿಸಿ, ತಮ್ಮ ಸ್ವಂತ ಗ್ರಾಮಗಳಿಗೆ ಹೋಗಿ ಬರಬೇಕಾದ ಅನಿವಾರ್ಯತೆ ಇದೆ. ಇದು ಅವರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳುತ್ತದೆ.

ಫಾರಂ ಭರ್ತಿ ಮಾಡಲು ಪರದಾಟ:

2002ರ ಮತದಾರರ ಪಟ್ಟಿಯಲ್ಲಿ ಎಸ್‌ಐಆರ್‌ ಗೆ ಬೇಕಾದ ಮಾಹಿತಿ ಸಿಕ್ಕ ನಂತರವೂ, ಗಣತಿ ಫಾರಂ ತುಂಬುವ ಅರಿವು ಬಹಳಷ್ಟು ಮತದಾರರಿಗೆ ಇಲ್ಲ. ಅನಕ್ಷರಸ್ತರು ಮಾತ್ರವಲ್ಲ, ವಿದ್ಯಾವಂತರೂ ಸರಿಯಾಗಿ ಭರ್ತಿ ಮಾಡಲು ತಿಣುಕಾಡುತ್ತಿರುವ ದೃಶ್ಯಗಳು ಎಲ್ಲೆಡೆ ಕಾಣುತ್ತವೆ. ಹಲವರಿಗೆ ತಮ್ಮ ಹೆಸರಿಗೆ ಎರಡು ಗಣತಿ ಫಾರಂ ಮಾತ್ರವೇ ಸಿಗುತ್ತದೆ ಎಂಬ ಮಾಹಿತಿಯೂ ಇಲ್ಲ. ತಮಗೆ ತಿಳಿದಂತೆ, ಅಥವಾ ತಮ್ಮ ಕುಟುಂಬದ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಫಾರಂ ತುಂಬಿಸಿ, ಅದು ತಪ್ಪಾಗಿದೆ ಎಂದು ಗೊತ್ತಾದ ನಂತರ, ಅದನ್ನು ಮತ್ತೆ ಮತ್ತೆ ವೈಟ್ನರ್‌ ನಿಂದ ಅಳಿಸಿ ಮತ್ತೆ ಮತ್ತೆ ಬರೆಯುತ್ತಿರುವುದನ್ನೂ ನಾನು ಕಂಡೆ.

ಕೆಲವರಂತೂ, ಇದರ ಬಗ್ಗೆ ಅರಿವಿಲ್ಲದೆ, ಯಾರೋ ಭರ್ತಿ ಮಾಡಿಕೊಟ್ಟ ಅಥವಾ ತಾವೇ ಸ್ವತಃ ಭರ್ತಿ ಮಾಡಿದ ಫಾರಂ ಅನ್ನು ಬಿಎಲ್‌ಒ ಗಳಿಗೆ ಒಪ್ಪಿಸಲು ಮುಂದಾಗುತ್ತಾರೆ. ಅದನ್ನು ಸರಿಯಾಗಿ ಭರ್ತಿ ಮಾಡಿ ಕೊಡಿ ಎಂದು ಬಿಎಲ್‌ಒ ಗಳು ಫಾರಂ ಅನ್ನು ಹಿಂತಿರುಗಿಸುತ್ತಿದ್ದ ದೃಶ್ಯಗಳು ಕಾಣುತ್ತಿವೆ. ಬಿಎಲ್‌ಒ ಗಳ ಬಳಿಯೇ 2002ರ ಮಾಹಿತಿ ಹುಡುಕಿಕೊಡಿ ಎಂದು ಬೇಡಿಕೊಳ್ಳುತ್ತಾರೆ, ಫಾರಂ ತಪ್ಪಾಗಿ ಭರ್ತಿಯಾದ ಸಂದರ್ಭದಲ್ಲಿ ಅದನ್ನು ನೀವೇ ಸರಿಪಡಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತಾರೆ.

ವಿಪರೀತ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ಬಿಎಲ್‌ಒಗಳು ಇದನ್ನು ನಯವಾಗಿಯೇ ತಿರಸ್ಕರಿಸಿ, ನೀವೇ ಹುಡುಕಿ, ಸರಿಯಾಗಿ ಭರ್ತಿ ಮಾಡಿಕೊಡಿ ಎಂದು ಹೇಳುವ ಪ್ರಸಂಗಗಳೂ ನಡೆಯುತ್ತಿವೆ. ಇದು ನಗರ ಪ್ರದೇಶಗಳಲ್ಲೇ ಹೆಚ್ಚು ಎಂಬುದು ಎದ್ದು ಕಾಣುತ್ತದೆ.

ಎದ್ದುಕಾಣುವ ಬಿಎಲ್‌ಎ ಗಳ ಕೊರತೆ

ಭಾರತದ ಸಂವಿಧಾನವು ಪ್ರತಿಯೊಬ್ಬ ವಯಸ್ಕ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡಬೇಕು ಎಂದು ಹೇಳುತ್ತದೆ. ಯಾವುದೇ ಅರ್ಹ ಮತದಾರರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಮತದಾರರಿಗೆ ಸಹಾಯ ಮಾಡಲು, 2002ರ ಮತದಾರರ ಪಟ್ಟಿಯಲ್ಲಿನ ಮಾಹಿತಿಗಳನ್ನು ಹುಡುಕಿ ಕೊಡಲು, ಗಣತಿ ಫಾರಂ ಭರ್ತಿ ಮಾಡಲು ಸಹಾಯ ಮಾಡುತ್ತಾರೆ ಎಂಬ ಉದ್ದೇಶದಿಂದ ರಾಜಕೀಯ ಪಕ್ಷಗಳಿಂದ ಭೂತ್‌ ಮಟ್ಟದ ಏಜೆಂಟ್‌ ಗಳ (ಬಿಎಲ್‌ಎ) ನೇಮಕ ಮಾಡಲಾಗಿದೆ.

ಕಾಂಗ್ರೆಸ್‌, ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬಿಎಲ್‌ಎ ಗಳನ್ನು ನೇಮಕ ಮಾಡಿವೆ. ಈ ಬಿಎಲ್‌ಎ ಗಳು ತಮ್ಮ ಪಕ್ಷದ ಪರವಾಗಿರುವ ಮತದಾರರನ್ನಷ್ಟೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಇಂದು ಇಲ್ಲಿದ್ದು, ನಾಳೆ ಮತ್ತೆಲ್ಲೋ ಇರುವ ವಲಸೆ ಕಾರ್ಮಿಕರ, ಸ್ಥಳಾಂತರಗೊಂಡವರ ಕಡೆಗೆ ಬಿಎಲ್‌ಎಗಳು ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂಬುದು ಎದ್ದು ಕಾಣುತ್ತಿದೆ.

ಕಬ್ಬಿಣದ ಕಡಲೆಯಾಗಿರುವ ಆನ್‌ಲೈನ್ ಪೋರ್ಟಲ್

ಪ್ರಸ್ತುತ ತಮ್ಮ ವಾಸಸ್ಥಳದಲ್ಲಿ ಇಲ್ಲದ ಮತದಾರರ ಅನುಕೂಲಕ್ಕಾಗಿ ಆನ್‌ಲೈನ್ ಪರಿಶೀಲನೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಚುನಾವಣಾ ಆಯೋಗವು ಹೇಳುತ್ತದೆ. ವಲಸೆ ಕಾರ್ಮಿಕರಿಗೆ ಅಥವಾ ಬಹಳಷ್ಟು ಮತದಾರರಿಗೆ ʻSIRʼ ಆನ್‌ಲೈನ್ ಪೋರ್ಟಲ್ ಅಥವಾ ಈ ಪ್ರಕ್ರಿಯೆಯ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ ಎಂಬುದನ್ನು ಹಲವು ವಲಸೆ ಕಾರ್ಮಿಕ ಕುಟುಂಬಗಳನ್ನು ಭೇಟಿ ಮಾಡಿದಾಗ ನಾನು ಸ್ವತಃ ಕಂಡುಕೊಂಡೆ.

ಜುಲೈ 15ರಂದು ಚುನಾವಣಾ ಆಯೋಗ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 2,11,138 (ಶೇ.0.38) ಮತದಾರರು ಮಾತ್ರ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಇದು ವಿದ್ಯಾವಂತರಿಗೂ ಕಬ್ಬಿಣದ ಕಡಲೆಯಂತಿದೆ ಎಂಬುದಕ್ಕೆ ಆಯೋಗದ ಈ ಮಾಹಿತಿಯೇ ಸಾಕ್ಷಿ.

ಗಣತಿ ನಮೂನೆ ತುಂಬಿ ಸಹಿ ಮಾಡಿಕೊಟ್ಟರೆ ಮುಗಿಯಿತೇ?

ಗಣತಿ ಹಂತದಲ್ಲಿ ಮತದಾರರಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಬಾರದು, ಅವರು ಗಣತಿ ನಮೂನೆ ತುಂಬಿ ಸಹಿ ಮಾಡಿಕೊಟ್ಟರೆ ಸಾಕು ಎಂದು ಚುನಾವಣಾ ಆಯೋಗ ಹೇಳಿದೆ. ಆದರೆ, ಕೊನೆಯ ಎಸ್‌ಐಆರ್‌ ನಡೆದ 2002ರ ಪಟ್ಟಿಗಳಲ್ಲಿ ಹೆಸರುಗಳಿಲ್ಲದ ಅಥವಾ 2002ರ ಮಾಹಿತಿಯನ್ನು ಒದಗಿಸದ ಮತದಾರರನ್ನು ಕರಡು ಪಟ್ಟಿಯಲ್ಲಿ ಸೇರಿಸಿದರೂ ಸಹ, ಅವರನ್ನು ʻಅನುಮಾನಾಸ್ಪದʼ (Suspicious/Doubtful) (ಮತದಾರರೊಬ್ಬರ ಅರ್ಜಿಯನ್ನು ಅಥವಾ ಹೆಸರನ್ನು ʻಅನುಮಾನಾಸ್ಪದʼ ವರ್ಗಕ್ಕೆ ಸೇರಿಸಿದೆ ಎಂದರೆ, ಅವರ ಮತದಾರರ ವಿವರಗಳಲ್ಲಿ ಅಥವಾ ಅರ್ಹತೆಯಲ್ಲಿ ಸ್ಪಷ್ಟತೆ ಇಲ್ಲ ಮತ್ತು ಅದು ಮರುಪರಿಶೀಲನೆಗೆ ಒಳಪಟ್ಟಿದೆ ಎಂದರ್ಥ.) ಎಂದು ಪರಿಗಣಿಸಲಾಗುತ್ತದೆ.

ನಂತರ ಅಗತ್ಯ ಮಾಹಿತಿಯನ್ನು ಒದಗಿಸದವರಿಗೆ ಚುನಾವಣಾ ಆಯೋಗವು ನೋಟಿಸ್ ಕಳುಹಿಸುತ್ತದೆ. ನಂತರ ಆಗಸ್ಟ್‌ 17ರಿಂದ ಸೆಪ್ಟೆಂಬರ್ 16 ರ ಒಳಗಾಗಿ, ಚುನಾವಣಾ ಆಯೋಗವು ಅನುಮೋದಿಸಿದ 13 ದಾಖಲೆಗಳಲ್ಲಿ ಯಾವುದಾದರೂ ಒಂದರೊಂದಿಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಬೇಕು. ಜಿಲ್ಲಾ ಚುನಾವಣಾ ಅಧಿಕಾರಿಗಳು ಈ ಮಾಹಿತಿಯನ್ನು ಪರಿಶೀಲಿಸಿ ಪಟ್ಟಿಗೆ ತಮ್ಮ ಹೆಸರುಗಳನ್ನು ಸೇರಿಸುತ್ತಾರೆ.

ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು

ಆಯೋಗವು ಕೇಳುವ 2002ರ ಹಿಂದಿನ ಹಳೆಯ ದಾಖಲೆಗಳು, ಜನನ ಪ್ರಮಾಣಪತ್ರ ಅಥವಾ ಜಾತಿ ಪ್ರಮಾಣಪತ್ರಗಳು, ಪಾಸ್‌ಪೋರ್ಟ್‌ಗಳು, ಶಾಲಾ ದಾಖಲೆಗಳು, ಅಂಚೆ ಕಚೇರಿ ಪತ್ರಗಳು ಮತ್ತು ಬ್ಯಾಂಕ್ ದಾಖಲೆಗಳು ಹೆಚ್ಚಿನ ಬಡ ಮತ್ತು ಅನಕ್ಷರಸ್ಥ ವಲಸೆ ಕಾರ್ಮಿಕರ ಬಳಿ ಇಲ್ಲ. ಅವರ ಬಳಿ ಆಧಾರ್ ಕಾರ್ಡ್, ಪಡಿತರ ಚೀಟಿ ಇದ್ದರೂ, ಅದನ್ನು SIR ಪರಿಷ್ಕರಣೆಗೆ ಪ್ರಮುಖ ದಾಖಲೆಯಾಗಿ ಪರಿಗಣಿಸುತ್ತಿಲ್ಲ.

ಅರ್ಹ ಮತದಾರರಾದವರು ಅಥವಾ ಉಲ್ಲೇಖಿತ ವರ್ಷದ ನಂತರ ಜನಿಸಿದವರು ತಮ್ಮ ಒಬ್ಬರು ಅಥವಾ ಇಬ್ಬರೂ ಪೋಷಕರ ಪೋಷಕ ದಾಖಲೆಗಳನ್ನು ಸಹ ತೋರಿಸಬೇಕು. ಇವುಗಳಲ್ಲಿ ಯಾವೊಂದು ದಾಖಲೆಗಳೂ ಇಲ್ಲದವರು, ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕು. ಅಥವಾ ಮತದಾನದ ಹಕ್ಕನ್ನು ಕಳೆದುಕೊಳ್ಳಬೇಕು. ನಂತರ ಸರ್ಕಾರದ ಸೌಲಭ್ಯಗಳೇ ಇಲ್ಲದಂತೆ ಮಾಡುವ ಆಳುವವರ ಬೆದರಿಕೆ ಮತ್ತೊಂದೆಡೆ.

ಈ ಅನಿಯಂತ್ರಿತ ಅಗತ್ಯತೆಯು ಲಕ್ಷಾಂತರ ಮೊದಲ ಬಾರಿಯ ಮತದಾರರು, ವಲಸಿಗರು, ದತ್ತು ಪಡೆದ ಮಕ್ಕಳು, ಅನಾಥರು ಮತ್ತು ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯಂದಿರ ದಶಕಗಳಷ್ಟು ಹಳೆಯದಾದ ಚುನಾವಣಾ ದಾಖಲೆಗಳನ್ನು ಹೊಂದಿರದ ಅಸಂಖ್ಯಾತ ನಾಗರಿಕರ ಮೇಲೆ ಅನಗತ್ಯ ಹೊರೆಯನ್ನು ಸೃಷ್ಟಿಸುತ್ತದೆ.

ʻವಾಸಸ್ಥಳದ ತಕ್ಷಣದ ಪುರಾವೆʼ

ಚುನಾವಣಾ ಆಯೋಗ ಕೇಳಿರುವ ಯಾವ ದಾಖಲೆಗಳೂ ಇಲ್ಲದವರ ತೊಂದರೆಗಳನ್ನು ನಿವಾರಿಸಲು ʼನಿವಾಸ ಪ್ರಮಾಣಪತ್ರʼ ಪಡೆಯುವುದು ಅವಶ್ಯಕ. ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣ ಪತ್ರಕ್ಕೆ (Permanent Residence Certificate) ಚಾಲನೆ ಕೊಟ್ಟಿದೆ. (ಇದನ್ನೂ ರಾಜ್ಯದ ಬಿಜೆಪಿ ನಾಯಕರು ವಿರೋಧಿಸಿ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.) ಸೇವಾ ಸಿಂಧು, ನಾಡಕಚೇರಿ, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಗಳಲ್ಲಿ ಅರ್ಜಿ ಸಲ್ಲಿಸಿ ತಹಶೀಲ್ದಾರ್‌ರಿಂದ ಶಾಶ್ವತ ನಿವಾಸ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಪೂರಕ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಸರ್ಕಾರಿ ಸೌಲಭ್ಯಗಳ ಆತಂಕ: ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಭವಿಷ್ಯದಲ್ಲಿ ರೇಷನ್ ಕಾರ್ಡ್ (ಪಡಿತರ), ಗೃಹಲಕ್ಷ್ಮಿ, ಗೃಹಜ್ಯೋತಿ ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನಗಳು ಸಿಗದೇ ಹೋಗಬಹುದು ಎಂಬ ತೀವ್ರ ಆತಂಕ ವಲಸೆ ಕಾರ್ಮಿಕರಲ್ಲಿ ಮತ್ತು ಕಡು ಬಡವರಲ್ಲಿ ಮನೆಮಾಡಿದೆ. ಇಷ್ಟೇ ಅಲ್ಲ, ಮಹಿಳೆಯರು ಈಗ ಆಧಾರ್‌ ಕಾರ್ಡ್‌ ಅಥವಾ ಹಳೆಯ ಮತದಾರರ ಚೀಟಿ ತೋರಿಸಿ ಉಚಿತ ಬಸ್‌ ಪ್ರಯಾಣದ ಟಿಕೆಟ್‌ ಪಡೆಯುವುದಕ್ಕೂ, ಎಸ್‌ಐಆರ್‌ ನಂತರದ ಮತದಾರರ ಗುರುತಿನ ಚೀಟಿಯನ್ನು ಪರಿಗಣಿಸುವಂತೆ ನಿಯಮ ರೂಪಿಸುವ ಸಾಧ್ಯತೆಗಳೂ ಇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಆಳುವವರ ಈ ಎಲ್ಲಾ ಕಠಿಣ ನಿಯಮಗಳಿಂದ ಸಂಕಷ್ಟಗಳಿಗೆ ಒಳಗಾಗುವವರು ಬಡ ಶ್ರಮಿಕರು ಎಂಬುದಂತೂ ಸತ್ಯ. ಜನತೆ ಎಚ್ಚೆತ್ತುಕೊಳ್ಳಬೇಕಿದೆ.

ಇದನ್ನೂ ನೋಡಿ: ಬಿಎಲ್‌ಒ ಕಾರ್ಯದಿಂದ ಮುಕ್ತಗೊಳಿಸಿ: ಜಿಲ್ಲಾಧಿಕಾರಿ ಕಚೇರಿಗೆ ಅಂಗನವಾಡಿ ನೌಕರರ ಮುತ್ತಿಗೆ Janashakthi Media

Donate Janashakthi Media

Leave a Reply

Your email address will not be published. Required fields are marked *