‘ಪಂಚಮ ದಲಿತ ಸಮುದಾಯದ ಅಂತಸಾಕ್ಷಿಯಾದ ಪತ್ರಿಕೆ’: ಎಚ್. ಗೋವಿಂದಯ್ಯ

(ಜುಲೈ 14, 2026ರಂದು ನಡೆದ ಪಂಚಮ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ  ಗೋವಿಂದಯ್ಯ ಅವರ ಮಾತಿನ ಪೂರ್ಣ ಪಠ್ಯ)
ನನ್ನ ವ್ಯಕ್ತಿತ್ವದ ಭಾಗವೇ ಆದಂತ ಪಂಚಮ ಪತ್ರಿಕೆ. ಈಗ ತಾನೇ ಬಿಡುಗಡೆಯಾಗಿದೆ ಅಪೂರ್ವವಾದಂತಹ ಸಂದರ್ಭ. ಇದು ಪ್ರಾಜ್ಞ ಸಭಿಕರಿರುವಂತಹ ಸಭೆ. ನನ್ನ ದೃಷ್ಟಿಯಲ್ಲಿ ಕನ್ನಡದ ನೆಲದಲ್ಲಿ ನಡೆದಂತ ಎಲ್ಲ ಚಳುವಳಿಗಳು ಕೂಡ ಈ ಸಭೆಯಲ್ಲಿ ಆಸೀನವಾಗಿದ್ದಾವೆ. ಎಲ್ಲ ಚಳುವಳಿಗಳು – ದಲಿತ ಚಳುವಳಿ, ರೈತ ಚಳುವಳಿ, ಬಂಡಾಯ ಚಳುವಳಿ, ಬಂಡಾಯ ಸಾಹಿತ್ಯ ಚಳುವಳಿ, ಸಮುದಾಯ ಸಾಂಸ್ಕೃತಿಕ ಚಳುವಳಿ – ಏನೆಲ್ಲ ಚಳುವಳಿಗಳು ಕರ್ನಾಟಕದಲ್ಲಿ ನಡೆದಿದೆಯೋ, ಆ ಎಲ್ಲ ಚಳುವಳಿಗಳು ಕೂಡ ಇಲ್ಲಿ ಆಗಮಿಸಿವೆ.. ನನ್ನ ಜೀವನದ ಸಾರ್ಥಕದ ದಿನ ಅಂತ ಕೂಡ ನನಗೆ ಅನ್ನಿಸ್ತಾ ಇದೆ. ಬಹುಶಃ 70-80ರ ದಶಕದ ನಂತರ ಮೊಟ್ಟಮೊದಲ ಈತರದ ಅದ್ಭುತವಾದ ಸಭೆ ನಡೀತಾ ಇದೆ ಅಂತನೆ ನನಗೆ ಅನಿಸ್ತಾ ಇದೆ. ಇಂತ ಸಭೆಯ ಅಧ್ಯಕ್ಷತೆಯನ್ನು ವಹಿಸಿರುವಂತ ಪ್ರಾಜ್ಞರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದಂತ ಮುಕುಂದರಾಜ್, ಅವರೇ ಮುಖ್ಯ ಅತಿಥಿಗಳಾದಂತ ಮಂಜುನಾಥ್ ಸ್ವಾಮಿಯವರೇ, ಮತ್ತು ಎಲ್ಲ ಪ್ರಾಜ್ಞರೆ. ಸಮುದಾಯ

ಬಿಡುಗಡೆಯಾಗಿರುವ ಪಂಚಮ ಸಂಪುಟಗಳು ಕನ್ನಡದ ಅಪೂರ್ವ, ಅಮೂಲ್ಯ, ಚಾರಿತ್ರಿಕ ಸಾಂಸ್ಕೃತಿಕ ದಾಖಲೆಯಾಗಿ ಉಳಿತಾವೆ ಅಂತ ನನಗೆ ಗಟ್ಟಿಯಾಗಿ ಅನ್ನಿಸ್ತಾ ಇದೆ. ಬಹಳ ದೊಡ್ಡ ದಾಖಲೆ. ನಾಡಿನಾದ್ಯಂತ ಜನರ ಮನೆ ಮನಗಳಲ್ಲಿ ಚದುರು ಹೋಗಿದ್ದಂತ ಪಂಚಮಗಳನ್ನ ಅಪಾರ ಶ್ರದ್ಧೆ ತಾಳ್ಮೆಯಿಂದ ಸಂಗ್ರಹಿಸಿಕೊಟ್ಟು ಇಂತ ಸಭೆ ನಡೆಯಲಿಕ್ಕೆ ಕಾರಣಕರ್ತರಾದಂತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದಂತ ಮುಕುಂದರಾಜ್ ಅವರಿಗೆ ಹಾಗೂ ಅವರ ಜೊತೆ ಜೊತೆಯಲ್ಲಿ ಅವರ ಅನಾರೋಗ್ಯವನ್ನು ಗಮನಿಸಿದೆ ಕೆಲಸ ಮಾಡಿದಂತ ನನ್ನ ಪ್ರೀತಿಯ ಗೆಳೆಯ ರಾಮದೇವ್ ರಾಕೆ ಅವರಿಗೆ ನಾವು ವಿಶೇಷವಾದಂತ ಅಭಿನಂದನೆಯನ್ನ ಈ ಕಾರಣಕ್ಕೆ ಸಲ್ಲಿಸಬೇಕಾಗಿದೆ. ಸಮುದಾಯ

1970-80ರ ದಶಕಗಳಲ್ಲಿ ಕನ್ನಡ ನಾಡು ನುಡಿಗಳನ್ನ ಇನ್ನಿಲ್ಲದಂತೆ ಪ್ರಭಾವಿಸಿದ ದಲಿತ ಸಂಘರ್ಷ ಸಮಿತಿ ಹೆಸರಿನ ಚಾರಿತ್ರಿಕವಾದ ದಲಿತ ಚಳವಳಿಯನ್ನ ಪ್ರೇರೇಪಿಸಿದ ಶೋಷಿತ ದಲಿತ ಸಮುದಾಯದ ಅಂತಸಾಕ್ಷಿಯ ಪತ್ರಿಕೆಯಾಗಿತ್ತು ಪಂಚಮ. ಅಂತಃಸಾಕ್ಷಿ ಪತ್ರಿಕೆ – ಬೇರೆ ತರದ ಮಾಮೂಲಿ ಪತ್ರಿಕೆ ಅಲ್ಲ. ನಮ್ಮ ರವಿ ಬಾಗಿ ಮಾತಾಡ್ತಾ ಆರಂಭದಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಇದು ನಿಂತೋಯ್ತು ಅಂತ ಹೇಳಿದ್ರು – ಅದು ತಪ್ಪು. ದಲಿತ್ ಚಳುವಳಿ ಸಭೆ ಅಂತ ಮರೆತುಬಿಡಿ. ಇದು ಅಂತ ಅಂತಸಾಕ್ಷಿ ಪತ್ರಿಕೆ. ಇದು ಆರ್ಥಿಕ ಮುಗ್ಗಟ್ಟಲ್ಲ, ಪರಸ್ಪರ ಪ್ರೀತಿಯ ಮುಗ್ಗಟ್ಟಿನಿಂದಾಗಿ ನಿಂತು ಹೋಗಿದ್ದು. ಅದು ನಾವು ಅದನ್ನ ಮರಿಬಾರದು.

ಇದನ್ನೂ ಓದಿ: ಜುಲೈ 22 ರಂದು ಎಫ್‌ಟಿಎ ವಿರುದ್ಧ ರೈತರ ಪ್ರತಿಜ್ಞೆ: ಟ್ರಂಪ್ ಮತ್ತು ಮೋದಿ ಪ್ರತಿಕೃತಿಗಳ ದಹನ- ಸಂಯುಕ್ತ ಕಿಸಾನ್‌ ಮೋರ್ಚಾ ಕರೆ

ಸ್ನೇಹಿತರೆ, ಪಂಚಮ ಪತ್ರಿಕೆ ದಲಿತ ಚಳುವಳಿಯ ಮುಖವಾಣಿಯಾಗಿತ್ತು ಎನ್ನುವ ಬದಲಾಗಿ ದಲಿತ ಚಳುವಳಿಯೇ ಪಂಚಮದ ಮುಖವಾಣಿಯಾಗಿತ್ತು. ಅರ್ಥಾತ್ ಅದರ ಕ್ರಿಯಾವಾಣಿ ಆಗಿತ್ತು ಎಂದರೆ ಸರಿ ಎಂದು ಕಾಣುತ್ತದೆ. ಯಾಕೆ ಅಂತ ಅಂದ್ರೆ ಗಮನಿಸಬೇಕು ನಾವು. ಬಿ. ಬಸಲಿಂಗಪ್ಪನವರ ಬೂಸಾ ಹಗರಣಕ್ಕೆ ಪ್ರತಿಕ್ಷಯಿಸಿದ ದಲಿತ ಲೇಖಕ ಕಲಾವಿದರೇ ಮೊದಲು ಪಂಚಮ ಪತ್ರಿಕೆ ಆರಂಭಿಸಿ, ಅವರಿಂದಲೇ ದಲಿತ ಲೇಖಕ ಕಲಾವಿದರ ಯುವ ಸಂಘಟನೆ ದಲೇಕಯುಸಂ ಆರಂಭವಾಗಿ, ಆ ಮೂಲಕವೇ ರಾಜ್ಯಾದ್ಯಂತ ಕಲಾಮೇಳಗಳು ನಡೆದು, ಕ್ರಮೇಣ ಅದೇ ದಲಿತ ಸಂಘರ್ಷ ಸಮಿತಿಯಾಗಿ ಸ್ವರೂಪಗೊಂಡಿದ್ದು ವಾಸ್ತವ ಸಂಗತಿ.  ಪಂಚಮವೇ ಮೂಲ. ಸಮುದಾಯ

ಬಂಧುಗಳೇ, ದಲಿತ ಚಳುವಳಿಯ ಪಂಚಮ ಎಂಬ ಇಂತ ಅಂತಸಾಕ್ಷಿಗೆ ಅಂಬೇಡ್ಕರ್ ಅವರ ಸಾಂಸ್ಕೃತಿಕ ತಾತ್ವಿಕತೆಯ ಸೌಂದರ್ಯ ಇತ್ತು. ಪ್ರಜಾಸತ್ತಾತ್ಮಕತೆಯ ಕಸುವು ಇತ್ತು. ಎಂತ ಅಂತ ಸಮಾಜ ವಿರೋಧಿ ಕರಾಳ ದುರುಳರನ್ನು ಎದುರಿಸಬಲ್ಲ ಶೌರ್ಯ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ, ಈ ಎಲ್ಲಕ್ಕಿಂತ ಹೆಚ್ಚಾಗಿ ಜಾತಿ, ಮತ, ಸ್ವಜನ, ಪಕ್ಷಪಾತಗಳ ಭ್ರಷ್ಟತೆಯನ್ನ ಮೀರುವ ಸಾಮುದಾಯಿಕ ಬಂಧುತ್ವದ ಮೆರಗಿತ್ತು. ಅದು ಬಹಳ ಮುಖ್ಯವಾದದ್ದು. ಸಮುದಾಯ

ಹೀಗೆ ಅಸ್ಪೃಶ್ಯ, ಅವಮಾನಿತ, ಅಸಹಾಯಕ ದಲಿತ ಸಮುದಾಯದ ನಿಷ್ಕಲ್ಮಶ ಅಭಿವ್ಯಕ್ತಿಯಾದ ಕಾರಣಕ್ಕೋ ಏನೋ ಪಂಚಮ ಮತ್ತು ದಲಿತ ಚಳುವಳಿ ಮೂಲಕ ಅನೇಕ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಸೋಜಿಗಗಳು – ಅರ್ಥಾತ್ ವಿಸ್ಮಯಗಳು – ಘಟಿಸ ತೊಡಗಿದವು. ಅವುಗಳಲ್ಲಿ ಪ್ರಮುಖವಾದ ಸೋಜಿಗಗಳೆಂದರೆ – ಅನೇಕ ಸೋಜಿಗಗಳಿಗೆ ಪಂಚಮ ಮತ್ತು ದಲಿತ ಚಳುವಳಿ ಕಾರಣ ಆಗುತ್ತೆ. ಸಮುದಾಯ

ಆ ಸೋಜಿಗಗಳೆಂದರೆ – 1970ರ ದಶಕದ ಕರಾಳ ತುರ್ತು ಪರಿಸ್ಥಿತಿಯನ್ನು ಲೆಕ್ಕಿಸದೆ, ಕೊಂಚವೂ ತನ್ನ ಧೋರಣೆಯಲ್ಲಿ ರಾಜಿ ಮಾಡಿಕೊಳ್ಳದೆ ಪಂಚಮ ಪತ್ರಿಕೆ ಪ್ರಕಟಗೊಂಡದ್ದು ಮೊಟ್ಟಮೊದಲ ಸೋಜಿಗ. ಕರಾಳ ತುರ್ತು ಪರಿಸ್ಥಿತಿ ಇತ್ತು. ನಾವು ಇನ್ನು ಆವಾಗ ಎಂತದು ವಿದ್ಯಾರ್ಥಿಗಳು. ನಾವು ನಡೆಸ್ತಾ ಇದ್ದಂತ ಪತ್ರಿಕೆ ಅದು. ಕಿಂಚಿತ್ತು ನಾವು ರಾಜಿ ಮಾಡಿಕೊಳ್ಳದೆ, ಪತ್ರಿಕೆಯನ್ನ ನಿಲ್ಲಿಸದೆ ನಾವು ನಡೆಸಿದಂತದ್ದು ಬಹಳ ದೊಡ್ಡ ಸೋಜಿಗ. ಮೊದಲ ಸೋಜಿಗ ಅಂತ ನಾನು ತಿಳಿದಿದ್ದೇನೆ.

ಸಮಾಜದ ಹಿಂದುಳಿದ ಸಮುದಾಯಗಳಿಗೆ ರಾಜಕೀಯ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಾಗಲೂ ದೇವರಾಜ ಅರಸರನ್ನ ಭ್ರಷ್ಟಾಚಾರವನ್ನ ಸಾಂಸ್ಕೀಕರಿಸಿದ ರಾಜಕೀಯ ಖಳನಾಯಕನನ್ನಾಗಿ ಮಾಡಿ ದೂಷಿಸಿದ ದಲಿತ ಚಳುವಳಿಯ ನೈತಿಕ ಅಂತಸ್ಥೈರ್ಯ –ಎಂಬುದು ಮತ್ತೊಂದು ಸೋಜಿಗ ಅಥವಾ ವಿಸ್ಮಯ ಅಂತ ನಾನು ಕರೀತೇನೆ. ಸಮುದಾಯ

1980ರ ದಶಕದಲ್ಲಿ ಇನ್ನೊಂದು ಸೋಜಿಗ ಹೇಳ್ತೇನೆ. 1980ರ ದಶಕದಲ್ಲಿ ದಲಿತ ಚಳುವಳಿಯ ಪ್ರಮುಖ ಒತ್ತಾಸೆಯಿಂದಾಗಿ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ಬರಲು ಕಾರಣವಾಗಿ ಇತಿಹಾಸ ನಿರ್ಮಿಸಿದ್ದು ಮಗದೊಂದು ಸೋಜಿಗ. ಇಮ್ಯಾಜಿನ್ ಕೂಡ ಮಾಡಿಕೊಳ್ಳಲಿಕ್ಕೆ ಸಾಧ್ಯ ಇರಲಿಲ್ಲ ಆವಾಗ. ದಲಿತರು ಸಂಪೂರ್ಣವಾಗಿ ಕಾಂಗ್ರೆಸ್ ಮಯವಾಗಿದ್ದರು.  ಅಂತ ಸಂದರ್ಭದಲ್ಲಿ ಮೊಟ್ಟಮೊದಲಿಗೆ ಕಾಂಗ್ರೆಸ್ಸೇತರ ಸರ್ಕಾರ ಬರಲಿಕ್ಕೆ ಕಾರಣವಾಯಿತಲ್ಲ – ದಲಿತ ಚಳುವಳಿ, ಪಂಚಮ – ಅದು ಮಹಾ ದೊಡ್ಡ ಸೋಜಿಗ ಅಂತ ನಾನು ತಿಳಿದಿದ್ದೇನೆ. ಸಮುದಾಯ

ಮಾರಿಕೊಂಡ ಮಾಧ್ಯಮಗಳ ಹಾಗೂ ಮಾರಿಕೊಂಡ ಚಳುವಳಿಗಾರರ ಇಂದಿನ ನತದೃಷ್ಟ ಕಾಲದಲ್ಲಿ ನಿಂತು ನೋಡಿದರೆ, ಪಂಚಮ ಮತ್ತು ದಲಿತ ಚಳುವಳಿ ಒಗ್ಗೂಡಿ ಘಟಿಸುವಂತೆ ಮಾಡಿದ ಈ ಸೋಜಿಗಗಳು ಈಗ ಮಹಾ ಸೋಜಿಗಗಳಂತೆ ನಮಗೆ ಕಾಣಿಸ್ತಾ ಇದಾವೆ. ನಾವು ಅದನ್ನ ಮರಿಬಾರದು. ಸ್ವತಂತ್ರವಾಗಿ ಬರೆಯುವ ಯೋಗ್ಯತೆ ಇಲ್ಲದ ಪತ್ರಿಕೆಗಳು ಇವತ್ತಿದ್ದಾವೆ ಅಂತದ್ರಲ್ಲಿ ಪಂಚಮ ಇಷ್ಟೆಲ್ಲ ಮಾಡಿದೆಯಲ್ಲ – ಇದು ಮಹಾಸೋಜಿಗ ಅಲ್ಲವೇ ಅಂತ ನಾವು ತಿಳಿಬೇಕಾಗಿದೆ.

ಪಂಚಮ ಪತ್ರಿಕೆಯ ನೈತಿಕ ಪರಿಭಾಷೆ ಹಾಗೂ ಅಭಿಲಾಷೆಯಂತೆ ನಡೆದ ಡಿಎಸ್ಎಸ್ ಚಳುವಳಿ 1970 ಮತ್ತು 80ರ ದಶಕಗಳಲ್ಲಿ ಈ ಕಾರಣಕ್ಕಾಗಿಯೇ ಕ್ರಾಂತಿಕಾರಕವಾಗಿದ್ದದ್ದು. ನಂತರ ಈ ಪಂಚಮ ಪರಿಭಾಷೆ ಅಭಿಲಾಷೆಗಳಿಂದ ವಿಮುಖಗೊಂಡದ್ದೇ ಡಿಎಸ್ಎಸ್ ತನ್ನ ಕ್ರಾಂತಿಕಾರಕತೆಯನ್ನ ಕಳೆದುಕೊಳ್ಳಲು ಕಾರಣ ವಾಯಿತು. ಎಂಬುದು ದಲಿತ ಚಳುವಳಿಯಲ್ಲಿ ಪಂಚಮ ಪತ್ರಿಕೆಯ ಮಹತ್ವವನ್ನ ಸಾರಿ ಸಾರಿ ಹೇಳ್ತಾ ಇದೆ. ಪಂಚಮ ಪತ್ರಿಕೆ ಇರುವರಿಗೆ ದಲಿತ ಚಳುವಳಿ ಕ್ರಾಂತಿಕಾರಕವಾಗಿ, ಆನಂತರ ಅಲ್ಲ. ಅಂದರೆ ಪಂಚಮ ಪತ್ರಿಕೆಯ ಮಹತ್ವವನ್ನ ಇದೇ ಸಾರಿ ಸಾರಿ ಹೇಳ್ತಾ ಇದೆ ಅಂತ ನನಗೆ ಅನ್ನಿಸ್ತಾ ಇದೆ. ಸಮುದಾಯ

ಮನುಷ್ಯನ ಅಂತಸಾಕ್ಷಿ ಸತ್ತರೆ ನಿಧಾನಕ್ಕೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಆ ಮನುಷ್ಯ ಸಾಯ ತೊಡಗುತ್ತಾನೆ. ಸಮುದಾಯ ಮತ್ತು ಸಂಘಟನೆ ಕೂಡ ಹಾಗೆ ಸಾಯ ತೊಡಗುತ್ತವೆ. ಅದರಂತೆಯೇ 1970 ಮತ್ತು 80ರ ದಶಕಗಳಲ್ಲಿ ಜ್ವಲಂತವಾಗಿದ್ದ ಡಿಎಸ್ಎಸ್ ನ ಪಂಚಮ ಅಂತಸಾಕ್ಷಿ 1980ರ ದಶಕದ ಕೊನೆಯ ವೇಳೆಗೆ ಆ ಅಂತಸಾಕ್ಷಿ ಸಾಯ ತೊಡಗಿತ್ತು. ಇದನ್ನ ನಿಖರವಾಗಿ ಹೇಳಬೇಕು ಅಂತ ಹೇಳಿದ್ರೆ – ಡಿಎಸ್ಎಸ್ ಒಳಗೆ ಜಾತಿವಾದ ಮೊಳಕೆ ಯೊಡೆಯುತ್ತಿದ್ದಂತೆ ಪಂಚಮ ಎಂಬ ಸಮುದಾಯದ ಅಂತಸಾಕ್ಷಿ ಸಾಯ ತೊಡಗಿತ್ತು ಅನ್ನೋದನ್ನ ನಾವು ಗಮನಿಸಬೇಕು. ಕೊನೆಗೆ 1985ರ ವೇಳೆಗೆ ಪಂಚಮ ತನ್ನ ಉಸಿರನ್ನ ನಿಲ್ಲಿಸಿತು. 1985. ರವಿ, ಆರ್ಥಿಕ ಮುಗ್ಗಟ್ಟಿಂದ ಅಲ್ಲ ಅನ್ನೋದನ್ನ ನಾನು ಈ ಮೂಲಕ ಹೇಳ್ತಾ ಇದ್ದೇನೆ. ಸಮುದಾಯ

ಪಂಚಮ ಉಸಿರು ಚೆಲ್ಲಿದ ಪರಿಣಾಮವಾಗಿ ಸಮುದಾಯದ ಅಂತಸಾಕ್ಷಿ ಅಂತಿದ್ದ ಕ್ರಾಂತಿಕಾರಿಕ ದಲಿತ ಚಳುವಳಿಯು 1987ರ ವೇಳೆಗೆ ಉಸಿರು ಚೆಲ್ಲಿತ್ತು. 1987ಕ್ಕೆ ನಾನು ಗುರುತಿಸುವಂತದ್ದು. ನಂತರ ದಲಿತ ಚಳುವಳಿಯ ಹೆಣದ ಮೈಮೇಲೆ ಹುಟ್ಟಿದ ಅಣಬೆಗಳಂತೆ ಡಿಎಸ್ಎಸ್ ಬಣಗಳು ಹುಟ್ಟಿಕೊಂಡವು. ಇದು ಎಷ್ಟೇ ಕಠೋರವಾದ ಅನಿಸಿಕೆ ಎಂದೆನಿಸಿದರೂ ಕೂಡ, ವಾಸ್ತವ ಇದಕ್ಕಿಂತಲೂ ಕಠೋರವಾಗಿದೆ ಎಂಬುದು ನನ್ನ ಅಂತಸಾಕ್ಷಿಯ ಅನಿಸಿಕೆ. ಪಂಚಮ ಪತ್ರಿಕೆ ಈವರೆಗೆ ಬದುಕಿದ್ರೆ ಅದರಲ್ಲಿ ಇದನ್ನ ಯಥಾವತ್ತಾಗಿ ಬರೆಯುತ್ತಿದ್ದೇವೋ – ನಾವು ಐದು ಜನ ಎಂಬುದು ಕೂಡ ನನ್ನ ದೃಢವಾದಂತ ಅನಿಸಿಕೆ. ಖಂಡಿತ ಬರೀತಿದ್ದೋ ಇದನ್ನ.

ನಾವು ಪಂಚಮದ ಅಂತಸಾಕ್ಷಿಯಂತೆ ನಡೆದುಕೊಂಡಿದ್ದರೆ ಅಧಿಕಾರದ ಗದ್ದಿಗೆಯ ಮೇಲೆ ಕೂತಿರಬೇಕಾಗಿದ್ದ ಡಿಎಸ್ಎಸ್ ಬಣ ಚಳುವಳಿಗಾರರು ಜಾತಿವಾದದ ಸಂಸ್ಥಾಪಕರು ದಲಿತರ ಸರ್ವನಾಶವನ್ನೇ ಗುರಿ ಮಾಡಿಕೊಂಡ ಆರ್.ಎಸ್.ಎಸ್ ಧೂರ್ತರಿಗೆ ದೇಶದ ಅಧಿಕಾರ ಗದ್ದಿಗೆಯನ್ನ ಒಪ್ಪಿಸಿ ಭ್ರಷ್ಟ ರಾಜಕಾರಣಿಗಳ ಬಾಲಬಡುಕರಾಗುತ್ತಿರುವುದು ಪ್ರಜ್ಞಾವಂತರ ಎಲ್ಲರನ್ನು ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲದೆ ಸಂಘಟನೆಯ ದಲಿತ ಸಂಘರ್ಷ ಸಮಿತಿಯ ವಿಘಟನೆಯಿಂದ ತಮ್ಮ ಕೈಯಲ್ಲೇ ಇದ್ದ ರಾಜಕೀಯ ಅಧಿಕಾರ ಗದ್ದಿಗೆಯ ಕೀಲಿ ಕೈಯನ್ನೇ ಕಳೆದುಕೊಂಡು, ದಲಿತ ರಾಜಕಾರಣ ಮಕಾಡೆ ಮಲಗಿರುವಾಗ ಡಿಎಸ್ಎಸ್ ಬಣಗಳು ದಲಿತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಆಪಾಪಿಸುತ್ತಿರುವುದು ಬಹು ದೊಡ್ಡ ನಗೆಪಾಟಲಿನ ಕೃತ್ಯವಾಗಿದೆ. ಆ ಕೃತ್ಯದಂತೆ ನನಗೆ ಕಾಣಿಸ್ತಾ ಇದೆ.

ಮೀಸಲಾತಿಯ ಸಾಮಾಜಿಕ ನ್ಯಾಯವನ್ನೇ ಮೂಲೋತ್ಪಾಟನೆ ಮಾಡಲು ಬ್ರಾಹ್ಮಣ ಮತ್ತು ಬ್ರಾಹ್ಮಣ ಸಂಬಂಧಿತ ಜಾತಿಗಳಿಗೆ ಶೇಕಡ ಹತ್ತರಷ್ಟು ಇಡಬ್ಲ್ಯೂಎಸ್ ಮೀಸಲಾತಿ ನೀಡಿದಾಗ ಚಕಾರವನ್ನು ಎತ್ತದ ಈ ಬಣ ಚಳುವಳಿಗಾರರು, ದಲಿತರೊಳಗೆ ಒಳಮೀಸಲಾತಿ ನೀಡುವಾಗ ಯುದ್ಧೋಪವಾದಿ ಷಡ್ಯಂತ್ರಗಳನ್ನ ಸದ್ಯ ಷಡ್ಯಂತ್ರಗಳಿಂದ ಅದನ್ನ ವಿರೋಧಿಸುವ ನಾಚಿಗೆ ಗೇಡಿನ ಕೃತ್ಯ ನಡೆಸಿದ್ದು ಇವರ ಶಿಖಂಡಿ ಶೌರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಅಂತನೆ ನನಗೆ ಅನಿಸ್ತಾ ಇದೆ.

ಇಷ್ಟಾಗಿಯೂ ಪಂಚಮ ಪತ್ರಿಕೆಯ ತಾತ್ವಿಕತೆಯು ಒಂದು ನಿರ್ದಿಷ್ಟ ಜಾತಿಯ ಜನರ ಮೂಲಕ ಮಾತ್ರ ದಲಿತರ ಬಿಡುಗಡೆ ಸಾಧ್ಯ ಎಂದು ನಂಬುವುದಿಲ್ಲ. ಶೋಷಣೆಗೆ ತುತ್ತಾದ ಅಸ್ಪೃಶ್ಯ ದಲಿತರು, ಅವಮಾನಿತ ಜಾತಿಗಳ ದಲಿತರು, ಹಿಂದುಳಿದ ಜಾತಿಗಳ ದಲಿತರು, ಹಾಗೂ ಎಲ್ಲಾ ಜಾತಿಗಳ ಬಡ ಅಸಹಾಯಕ ರೈತರು, ಕಾರ್ಮಿಕರು, ಕೂಲಿಕಾರರು ಪರಸ್ಪರ ಕೈ ಕೈ ಹಿಡಿದು ಒಗ್ಗೂಡಿ ಶ್ರೇಣಿಕೃತ ಜಾತಿ ಮತ್ತು ವರ್ಗವಿನಾಶದ ಚಳುವಳಿಯನ್ನ ಸಂಘಟಿಸಿ ಶೋಷಿತರೆಲ್ಲರ ಸಾಮೂಹಿಕ ಬಿಡುಗಡೆಯನ್ನ ಸಾಧ್ಯವಾಗಿಸಬೇಕೆಂಬುದನ್ನು ಪಂಚಮ ನಂಬುತ್ತೆ, ನಂಬಿತ್ತು, ನಂಬುತ್ತೆ ಕೂಡ.

ಇಂತ ಬೃಹತ್ ವಿಮೋಚನಾ ಚಳುವಳಿಯಲ್ಲಿ ಸಮಾಜದ ಕಟ್ಟಕಡೆಯ ಸಮುದಾಯವಾದ ಅಸ್ಪೃಶ್ಯ ದಲಿತರು ಮುಂಚೂಣಿಯಲ್ಲಿರಬೇಕೆಂದು ಪಂಚಮ ಆಗ್ರಹಿಸುತ್ತೆ. ಯಾಕೆ ಅಂತ ಅಂದ್ರೆ – ಅಸಮಾನತೆಯ ಜಾತಿ ವ್ಯವಸ್ಥೆಯ ಅಡಿಪಾಯವಾದ ಈ ಸಮುದಾಯದ ಭಾಗವಹಿಸುವಿಕೆ ಇಲ್ಲದೆ ಜಾತಿ ವಿನಾಶ ಆಶಯದ ಯಾವ ಚಳುವಳಿಯು ಯಶಸ್ವಿಯಾಗಿಲ್ಲ, ಯಶಸ್ವಿಯಾಗುವುದಿಲ್ಲ. ಎಂಬುದು ಪಂಚಮದ ತಾತ್ವಿಕತೆಯಾಗಿದೆ. ಆದ್ದರಿಂದನೇ ಅಸ್ಪೃಶ ದಲಿತರು ಮುಂಚೂಣಿಯಲ್ಲಿ ಇರಬೇಕು ಅಂತನೆ ಬಯಸಿದ್ದು ಪಂಚಮ.

ಆದರೆ ಈ ಆಶಯ ದಲಿತ ಸಂಘರ್ಷ ಸಮಿತಿಯ ವಿಘಟನೆಯಿಂದಾಗಿ ಕೇವಲ ಆಶಯ ಮಾತ್ರವಾಗಿ ಉಳಿಯಿತ್ತಲ್ಲ ಎಂಬ ಕೊರಗು. ಹಾಗೂ ಈ ಕಾರಣದಿಂದಾಗಿಯೇ ಪ್ರಶ್ನೆ ಸೃಷ್ಟಿಸುವವರನ್ನೆಲ್ಲ ಕೊಲ್ಲಬಯಸುವ ಹಾಗೂ ಅಸಮಾನತೆ ಮತ್ತು ಸಾಮಾಜಿಕ ಅನ್ಯಾಯವನ್ನೇ ಉಸಿರಾಡುವ ಪರಮ ಭ್ರಷ್ಟ ಆರ್.ಎಸ್.ಎಸ್ ಪ್ರಭುತ್ವಕ್ಕೆ ದೇಶದ ಹೆಬ್ಬಾಗಿಲು ತೆರೆದಂತೆ ಆಗಿದೆಯಲ್ಲ ಎಂಬ ಗಾಢ ವಿಷಾದ ಪಂಚಮ ಪತ್ರಿಕಾಭಿಮಾನಿಗಳೆಲ್ಲರ ತೀವ್ರ ವಿಷಾದವಾಗಿ ಕಾಡತೊಡಗಿದೆ.

ಆದ್ದರಿಂದ ಅಂತಿಮವಾಗಿ, ಅಳಿದುಳಿದ ಪ್ರಜ್ಞಾವಂತ ದಲಿತ ಚಳುವಳಿಗಾರರಲ್ಲಿ ಪಂಚಮದ ಅಂತಸಾಕ್ಷಿ ವಿನಂತಿಸುವುದು ಏನು ಅಂದ್ರೆ – 1975ರ ದಶಕದ ಕಾಂಗ್ರೆಸ್ ಪಕ್ಷದ ಕರಾಳ ತುರ್ತು ಪರಿಸ್ಥಿತಿಯನ್ನ ಕರ್ನಾಟಕದ ದಲಿತರು ಯಶಸ್ವಿಯಾಗಿ ಎದುರಿಸಲು ಸಾಧ್ಯ ಆಗಿದೆ. ಯಶಸ್ವಿಯಾಗಿ ಎದುರಿಸುತ್ತ ನಾವು – ಪಂಚಮದ ಹುಡುಗರು – ಯಶಸ್ವಿಯಾಗಿ ಎದುರಿಸಲು ಸಾಧ್ಯ ಆಯಿತು ಆವಾಗ. ಆದರೆ 2020ರ ದಶಕದಲ್ಲಿ ಎದುರಾಗುತ್ತಿರುವ ಆರ್.ಎಸ್.ಎಸ್ ನ ವಿಷಕಾರಿ ವಿನಾಶಕಾರಿ ತುರ್ತು ಪರಿಸ್ಥಿತಿಯನ್ನ ಸರ್ವ ಸನ್ನದ್ಧರಾಗಿ ಎದುರಿಸಲಾಗದಿದ್ದರೆ ದೇಶದ ದಲಿತರೆಲ್ಲರ ಸರ್ವನಾಶ ನಿಶ್ಚಿತವಾಗಿದೆ. ಹಾಗೂ ಈ ಸರ್ವನಾಶ ವೇಗವಾಗಿ ಸನ್ನಿಹಿತವಾಗ ತೊಡಗಿದೆ ಎಂಬುದು ನಮ್ಮೆಲ್ಲರ ದೃಢವಾದ ನಂಬಿಕೆ ಅಂತ ನಾನು ತಿಳಿದಿದ್ದೇನೆ. ನಿಜ, ನಾವೆಲ್ಲ ಕಣ್ಣಾರೆ ನೋಡ್ತಾ ಇದ್ದೇನೆ.

ಆದ್ದರಿಂದ – ಆದ್ದರಿಂದ ಎಲ್ಲ ಬಂಧುಗಳೇ, ಎಲ್ಲ ಚಳುವಳಿಗಾರ ಬಂಧುಗಳೇ – ಆದ್ದರಿಂದ ಈಗಲೂ ಕಾಲ ಮಿಂಚಿಲ್ಲ. ಈಗಾದರೂ ದಲಿತ ಚಳುವಳಿಗಾರರು ಈವರೆಗಿನ ತಮ್ಮೆಲ್ಲಾ ತಪ್ಪುಗಳನ್ನ ತಾವೇ ಕ್ಷಮಿಸಿಕೊಂಡು, ದಲಿತ ಸಮುದಾಯದ ಅಂತಸಾಕ್ಷಿಯ ಆರ್ತ ಮೊರೆಗೆ ಓಗೊಟ್ಟು ಮೈ ಕೊಡವಿ ಮತ್ತೊಮ್ಮೆ ಒಗ್ಗೂಡುವುದಕ್ಕೆ ದೃಢ ನಿಶ್ಚಯ ಮಾಡಬೇಕೆಂದು ಪಂಚಮ ವಿನಂತಿಸುತ್ತಾ ಇದೆ.

ಈಗ ಬಿಡುಗಡೆಯಾಗಿರುವ ಪಂಚಮ ಪತ್ರಿಕೆಗಳ ಸಂಪುಟಗಳು ದಲಿತರ ಬಿಡುಗಡೆಯ ದಾರಿ ಮತ್ತು ಗುರಿಯ ಬಗ್ಗೆ ಸಮಗ್ರ ಒಳನೋಟಗಳನ್ನ ನೀಡಬಲ್ಲ ಮಾರ್ಗದರ್ಶಿ ಕೈಪಿಡಿಗಳಾಗಿ ಕಂಗೊಳಿಸುತ್ತಾ ಇದ್ದಾವೆ ಅಂತ ನಾನು ಘೋಷಣೆ ಮಾಡುತ್ತೇನೆ. ಇದನ್ನ ಆಗುಮಾಡಿದಂತ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮತ್ತು ಎಲ್ಲ ಗೆಳೆಯರಿಗೆ ನಾನು ವಿನಂತಿಸುತ್ತಾ ಇದ್ದೇನೆ.

ಮತ್ತೆ ಕೊನೆಯದಾಗಿ, ಪಂಚಮ ಪತ್ರಿಕೆಯ ವಿವರಗಳ ಬಗ್ಗೆ ನನ್ನ ಸ್ನೇಹಿತರು ಅನೇಕ ಜನರು ಮಾತಾಡ್ತಾರೆ. ಆ ವಿವರಗಳಿಗೆ ನಾನು ಹೋಗಿಲ್ಲ. ಅದರಲ್ಲಿ ಒಂದೇ ಒಂದು ವಿಷಯವನ್ನ ನಿಮ್ಮ ಮುಂದೆ ನಾನು ಹೇಳಬೇಕು. ಅದೇನು ಅಂದ್ರೆ – ಜಿ. ಮಾದೇಗೌಡರು ಮಂತ್ರಿಗಳಾಗಿ – ಅವರು ಗೊತ್ತಲ್ಲ, ಕೆಂಡ ಬೆಂಕಿ ಅವರು. ಬಹಳ ಪ್ರಭಾವಿ ಮಂತ್ರಿಯಾಗಿದ್ದಂತ ಕಾಲ ಅವರು ಒಬ್ಬ ದಲಿತ ನೌಕರನಿಗೆ ಚೆನ್ನಾಗಿ ಬೈದು ಅವನಿಗೆ ಏಟನ್ನು ಕೂಡ ಹೊಡಿತಾರೆ. ಜಿ. ಮಾದೇಗೌಡರು. ಆವಾಗ ಪಂಚಮ ಪತ್ರಿಕೆ ಮುಖಪಟದಲ್ಲಿ ಹಾಕುತ್ತೆ ‘- ಈ ಮಾದೇವಗೌಡನಿಗೆ – ಯಾವುದರಿಂದ ಹೊಡೆಯಬೇಕು ಅಂತ ಕ್ವಶ್ಚನ್ ಮಾರ್ಕ್ ಹಾಕಿ ಮೊದಲ ಪುಟದಲ್ಲಿ ಪ್ರಕಟಿಸುತ್ತೇವೆ. ಅಂತ ನೈತಿಕ ಅಂತಸ್ಥೈರ್ಯ ಈ ಪಂಚಮಕ್ಕೆ ಇತ್ತು. ಅನ್ನೋದನ್ನ ನಾನು ವಿನಂತಿ ಮಾಡ್ತಾ ಇದ್ದೇನೆ.

ಇವತ್ತು ಬಹಳ ವಿಶೇಷವಾದಂತ ಸಭೆ. ಈ ಸಭೆಯ ಮುಂದೆ ನಾನು ಒಂದು ನಿರ್ಣಯವನ್ನು ಕೂಡ ಮಂಡಿಸ್ತಾ ಇದ್ದೇನೆ. ದಯಮಾಡಿ ಸಭೆ ಅದನ್ನ ಅನುಮೋದಿಸಬೇಕು. ಅದರ ಬಗ್ಗೆ ಸಾಧ್ಯವಾದರೆ ಚರ್ಚೆ ಮಾಡಬೇಕು ಅಂತ ಕೂಡ ನಾನು ವಿನಂತಿಸುತ್ತೇನೆ. ಅದು ಏನು ಅಂತ ಹೇಳಿದ್ರೆ – ಪ್ರಿಯಾಂಕ್ ಖರ್ಗೆ ಗೃಹಮಂತ್ರಿ ಅವರು ಸರ್ಕಾರ. ಅವರು ಆರ್.ಎಸ್.ಎಸ್ ನ ನೋಂದಾವಣೆ ಕುರಿತು ಅಷ್ಟು ರಿಸ್ಕ್ ತಗೊಂಡು ಅದನ್ನ ಎದುರಿಸ್ತಾ ಇರುವಾಗ ಒಬ್ಬನೇ ಒಬ್ಬ ದಲಿತ ಚಳುವಳಿಗಾರರು, ರೈತ ಚಳುವಳಿಗಾರರು, ಪ್ರಗತಿಪರ ಚಳುವಳಿಗಾರರು  ಚಕಾರವನ್ನೇ ಎತ್ತುತ್ತಾ ಇಲ್ವಲ್ಲ. ನಾವೇನು ಇಡೀ ಕರ್ನಾಟಕದ ನಾವು ಬದುಕಿದ್ದೇವಾ ಅಂತ ಕೇಳ್ಕೊಬೇಕಾಗಿದೆ.

ಈ ನತದೃಷ್ಟತೆಯ ಕಾರಣಕ್ಕೋಸ್ಕರನೇ ಕಲ್ಬುರ್ಗಿಯವರನ್ನ ಬಹಿರಂಗವಾಗಿ ಬಂದು ಹೊಡೆದು ಸಾಯಿಸಿದಾಗ ಕೂಡ ನಮ್ಮ ಬಂಡಾಯ ಸಾಹಿತಿಗಳು, ಉಗ್ರ ಭಾಷಣ ಮಾಡುವ ಸಾಹಿತಿಗಳು ಎಲ್ಲಿ ಹೋಗಿದ್ರು? ಸತ್ತಹೋಗಿದ್ರ? ಒಬ್ಬನೇ ಒಬ್ಬ ಕೂಡ ಅದರ ಬಗ್ಗೆ ಮಾತಾಡಲಿಲ್ಲ. ಆ ಕಾರಣಕ್ಕೋಸ್ಕರವೇ ಒಬ್ಬೊಬ್ಬರನ್ನ ಹೊಡೆದಹಾಕಲಿಕ್ಕೆ ಶುರು ಮಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರನ್ನ ನಾವು ಒಬ್ಬಂಟಿಯಾಗಿ ನಾವು ಬಿಟ್ಟಿದ್ದಾದರೆ ಪ್ರಿಯಾಂಕ್ ಖರ್ಗೆಯನ್ನು ಕೂಡ ಕಳೆಕೊಳ್ತೇವೆ. ಅವು ವ್ಯಕ್ತಿಯಾಗಿ ಅಲ್ಲ. ಆರ್.ಎಸ್.ಎಸ್ ನ ವಿರುದ್ಧ ಧ್ವನಿ ಎತ್ತಿದಂತ ಆ ಧ್ವನಿಯನ್ನ ನಾವು ಎತ್ತಲಿಕ್ಕೆ ಮುಂದೆ ಸಾಧ್ಯ ಇಲ್ಲದ ರೀತಿಯಲ್ಲಿ ನಾವು ಅಂತ ಶಕ್ತಿಗಳನ್ನೇ ಕಳೆಕೊಳ್ಳುತ್ತೇವೆ.

ಆರ್.ಎಸ್.ಎಸ್ ಸ್ವಾತಂತ್ರ್ಯದ ನಂತರ ಗಾಂಧಿಯನ್ನ ಕೊಂದು ಇಡೀ ದೇಶವನ್ನ ಭಯಭೀತರನ್ನಾಗಿ ಗೊಳಿಸಿ ಇದೇ ಕೆಲಸವನ್ನ ಮಾಡ್ತಾ ಬರ್ತಾ ಇದೆ. ಅದು ನೋಡುತ್ತೆ – ಒಬ್ಬರನ್ನು ಹೊಡೆದಾಕುತ್ತೆ – ಇಂಪಾರ್ಟೆಂಟ್ ಆಗಿರೋರು – ಅದಕ್ಕೆ ಯಾವ ಪ್ರತಿಕ್ರಿಯೆನು ಬರಲಿಲ್ಲ ಅಂದ್ರೆ ಆ ಕ್ಯೂ ನಲ್ಲಿರುವಂತ ಇನ್ನೊಬ್ಬ ಮುಖ್ಯಸ್ಥನನ್ನ ಹೊಡೆದಾಗ ಇದು ಸರಣಿ. ಈ ಬಗ್ಗೆ ದಲಿತ ಅಂತ ಇರಬಹುದು, ರೈತ ಅಂತ ಇರಬಹುದು, ಪ್ರಗತಿಪರ ಅಂತ ಇರಬಹುದು, ಬಂಡಾಯ ಅಂತ ಇರಬಹುದು – ನಾವು ನಾಚಿ ತಲೆ ತಗ್ಗಿಸಬೇಕು.

ಏನು ಆ ಕಾರಣಕ್ಕೋಸ್ಕರ ಬಹಳ ದೊಡ್ಡ ರಿಸ್ಕ್ನ್ನ ಪ್ರಿಯಾಂಕ್ ಖರ್ಗೆ ಅವರು ತಗೊಂಡಿದ್ದಾರೆ. ಇವತ್ತಿನ ಸಭೆ – ನನಗೆ ಗೊತ್ತಿಲ್ಲ ತಾಂತ್ರಿಕವಾಗಿ ಇದು ಸಾಹಿತ್ಯ ಅಕಾಡೆಮಿಯ ಸಭೆ ಆಗಿದ್ರೂ ಕೂಡ – ಈ ಸಭಿಕರೆಲ್ಲರೂ ನಾವು ಈ ನಿರ್ಣಯವನ್ನ ಅನುಮೋದಿಸಬೇಕು ಅಂತ ನಾನು ಕೋರುತ್ತೇನೆ. ಪ್ರಿಯಾಂಕ್ ಖರ್ಗೆ ಅವರನ್ನ ಇಡೀ ಕರ್ನಾಟಕದ ಎಲ್ಲಾ ದಲಿತ ಸಾಹಿತಿಗಳು, ಚಳುವಳಿಗಾರರು, ಎಲ್ಲ ಪ್ರಜ್ಞಾವಂತರು ನಿಮ್ಮ ಜೊತೆಗಿದ್ದೇವೆ, ಹೆದರದೆ ನೀವು ಮುನ್ನಡೆಯಿರಿ ಅಂತ ನಾವು ಒಂದು ಒಂದೇ ವಾಕ್ಯದ ನಿರ್ಣಯವನ್ನ ದಯಮಾಡಿ ಪಾಸ್ ಮಾಡಬೇಕು, ಅನುಮೋದಿಸಬೇಕು ಅಂತ ವಿನಂತಿ ಮಾಡಿ ನನ್ನ ಮಾತನ್ನ ಮುಗಿಸುತ್ತೇನೆ.

ಬಂಧುಗಳೇ, ಕೊನೆಯದಾಗಿ ಒಂದೇ ಒಂದು ಮಾತು – ನಮ್ಮ ಅಧ್ಯಕ್ಷರನ್ನ ಕುರಿತು. ಅಧ್ಯಕ್ಷರು ಕೂಡ ಪಂಚಮ ಪತ್ರಿಕೆಯ ಸಂಪುಟಗಳು ಬಿಡುಗಡೆ ಆಗ್ತಾ ಇರುವ ಸಂದರ್ಭದಲ್ಲಿ ಅನೇಕ ಫೋನ್ ಕಾಲ್ಗಳು ಬರ್ತಾ ಇದ್ದಾವೆ ಅಂತ ಕೂಡ ಅವರು ಹೇಳಿದ್ದಾರೆ. ಇದು ಬಹಳ ಮಹತ್ವಪೂರ್ಣವಾದಂತ ಒಂದು ಘಟನೆ – ಪಂಚಮ ಅನ್ನುವಂತದ್ದು. ಆ ಕಾರಣಕ್ಕೋಸ್ಕರ ನಾನು ವಿನಂತಿ ಮಾಡುತ್ತೇನೆ – ಇವತ್ತು ಎಲ್ಲರಿಗೂ ಮಾತಾಡಲಿಕ್ಕೆ ಅವಕಾಶ ಇಲ್ಲ. ಅರ್ಧ ದಿನದ, ಒಂದುವರೆ ಗಂಟೆ, ಎರಡು ಗಂಟೆ ಕಾರ್ಯಕ್ರಮ. ಅದಕ್ಕೋಸ್ಕರ ನಾನು ವಿನಂತಿ ಮಾಡುತ್ತೇನೆ – ಎರಡು ದಿನಗಳ ವಿಚಾರ ಸಂಕೀರ್ಣವನ್ನ – ಪಂಚಮ, ಪಂಚಮದ ತಾತ್ವಿಕತೆ ಮತ್ತು ಮರುಹುಟ್ಟು ಪಡೆಯಬೇಕಾದ ದಲಿತ ಚಳುವಳಿ – ಅಂತ ಹೇಳಿ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕೀರ್ಣವನ್ನ ನಡೆಸಿ.

ಈ ಪಂಚಮ ಪತ್ರಿಕೆಯ ಜೊತೆ ಗುರುತಿಸಿಕೊಂಡಿದ್ದಂತ ಎಲ್ಲರನ್ನ ಆಹ್ವಾನಿಸಿ, ಬೆಳಿಗ್ಗೆಯಿಂದ ಸಂಜೆಯ ತನಕ ಎರಡು ದಿನಗಳ ಕಾಲ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿಕ್ಕೆ ಅವಕಾಶ ಕೊಟ್ಟು, ಅವುಗಳನ್ನ ದಾಖಲೀಕರಣ ಮಾಡಿ, ನಿಮ್ಮ ಎರಡನೇ ಮುದ್ರಣದಲ್ಲಿ – ಮರುಮುದ್ರಣದಲ್ಲಿ –ಎಲ್ಲವನ್ನು ಸೇರಿಸಬೇಕು. ಮತ್ತೆ ಆ ಮೂಲಕ ಪಂಚಮದ ಅಂತಸಾಕ್ಷಿ ಇಡೀ ಕರ್ನಾಟಕದ ಅಂತಸಾಕ್ಷಿಯಾಗಿ ಮತ್ತೆ ಹೊಸ ಚಳುವಳಿಗೆ ದಾರಿಯನ್ನ ತೋರಬೇಕು. ಅದು ಸಾಧ್ಯವಾಗಲಿ ಅಂತ ವಿನಂತಿ ಮಾಡಿ ನನ್ನ ಮಾತನ್ನು ಮುಗಿಸುತ್ತೇನೆ. ನಮಸ್ಕಾರ.

ಇದನ್ನೂ ನೋಡಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್‌ | ಕೆ ಎಸ್ ವಿಮಲಾ

Donate Janashakthi Media

Leave a Reply

Your email address will not be published. Required fields are marked *