ಬಿಡದಿ ಟೌನ್‌ಶಿಪ್‌ ಯೋಜನೆ : ಬಲವಂತದ ಭೂಸ್ವಾಧೀನ ಇಲ್ಲ, ಡಿಕೆಶಿ ಮಹತ್ವದ ಘೋಷಣೆ – ರೈತರ ಹೋರಾಟಕ್ಕೆ ಜಯ!

ಬೆಂಗಳೂರು ತೀವ್ರ ರೈತ ಹೋರಾಟದ ಬೆನ್ನಲ್ಲೇ ಬೆಂಗಳೂರು ಸಮೀಪದ ಬಿಡದಿ ಸಮಗ್ರ ಟೌನ್‌ಶಿಪ್‌ (ಜಿಬಿಐಟಿ) ಯೋಜನೆಯನ್ನು ಮರುಪರಿಶೀಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಯೋಜನೆ ಕುರಿತು ರೈತರ ಆಕ್ಷೇಪಣೆಗಳು ಮತ್ತು ವಿವಿಧ ಅಭಿಪ್ರಾಯಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಬಿಡದಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗೆ ಹಲವು ತಿಂಗಳುಗಳಿಂದ ರೈತರು, ರೈತ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿದ್ದರು. ಭೂಮಿ ಕಳೆದುಕೊಂಡರೆ ಜೀವನಾಧಾರವೇ ಕಸಿದುಕೊಳ್ಳಲಾಗುತ್ತದೆ ಎಂದು ಆರೋಪಿಸಿ ಪ್ರತಿಭಟನೆಗಳನ್ನು ತೀವ್ರಗೊಳಿಸಿದ್ದರು. ಇತ್ತೀಚೆಗೆ ಭೂಸ್ವಾಧೀನ ಪ್ರಕ್ರಿಯೆಗಾಗಿ ಅಧಿಕಾರಿಗಳು ಸರ್ವೆ ನಡೆಸಲು ತೆರಳಿದ ವೇಳೆ ಗ್ರಾಮಸ್ಥರು ಹಾಗೂ ರೈತರು, ವಿಶೇಷವಾಗಿ ಮಹಿಳೆಯರು, ಪೊರಕೆ ಹಿಡಿದು ಪ್ರತಿಭಟಿಸಿ ಸರ್ವೆ ನಡೆಸದಂತೆ ತಡೆದು ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದ್ದರು. ಈ ಘಟನೆ ರಾಜ್ಯದಾದ್ಯಂತ ಗಮನ ಸೆಳೆದಿತ್ತು.

ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಯೋಜನೆಯನ್ನು ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ. ಸಮಿತಿಯು ರೈತರ ಅಭಿಪ್ರಾಯ, ಭೂಸ್ವಾಧೀನದ ಪರಿಣಾಮ, ಪರಿಸರದ ಮೇಲೆ ಉಂಟಾಗುವ ಪರಿಣಾಮ ಸೇರಿದಂತೆ ವಿವಿಧ ಆಯಾಮಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ವರದಿಯ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ತೋರಣಗಲ್ಲು| “ಉದ್ಯೋಗ ಖಾತ್ರಿ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಿ: ಡಿವೈಎಫ್‌ಐ ಪ್ರತಿಭಟನೆ

ಇದೇ ವೇಳೆ, ಯೋಜನೆಗೆ ಸಂಬಂಧಿಸಿದ ರಾಜಕೀಯ ಚರ್ಚೆಯೂ ತೀವ್ರಗೊಂಡಿದೆ. ರೈತರ ಬದುಕಿಗೆ ಧಕ್ಕೆಯಾಗದಂತೆ ಯೋಜನೆಯನ್ನು ಕೈಬಿಡಬೇಕು ಹಾಗೂ ಪ್ರತಿಭಟನಾನಿರತ ರೈತರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಬಿಡದಿ ಸಮಗ್ರ ಟೌನ್‌ಶಿಪ್‌ ಯೋಜನೆಯು ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ರೂಪುಗೊಂಡಿದ್ದರೂ, ಕೃಷಿ ಭೂಮಿ ಸ್ವಾಧೀನ, ರೈತರ ಜೀವನೋಪಾಯ ಹಾಗೂ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಆರಂಭದಿಂದಲೇ ಸ್ಥಳೀಯ ರೈತರು ಮತ್ತು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಮರುಪರಿಶೀಲನೆ ನಿರ್ಧಾರದಿಂದ ಹೋರಾಟಕ್ಕೆ ತಾತ್ಕಾಲಿಕವಾಗಿ ಒಂದು ಹಂತದ ಯಶಸ್ಸು ಸಿಕ್ಕಂತಾಗಿದೆ.

ಇದನ್ನೂ ನೋಡಿ : ಬಿಡದಿ ಟೌನ್‌ಶಿಪ್‌ | ಜೆಎಂಸಿ ಸರ್ವೆ ಅಧಿಕಾರಿಗಳನ್ನು ಹಿಮ್ಮೆಟ್ಟಿಸಿದ ರೈತರು Janashakthi Media

Donate Janashakthi Media

Leave a Reply

Your email address will not be published. Required fields are marked *