“ಮೋದಿ ಸರ್ಕಾರ ಭಾರತ-ಯುಎಸ್ ಎಫ್‌ಟಿಎಗೆ ಸಹಿ ಹಾಕಿದರೆ ದೇಶಾದ್ಯಂತ ರೈತರು ಸುದೀರ್ಘ ಹೋರಾಟಗಳಿಗೆ ಸಿದ್ಧರಾಗಬೇಕು“
ಕೇಂದ್ರ ಸರ್ಕಾರವು ಜುಲೈ 24 ರ ಮೊದಲು ಭಾರತ-ಯುಎಸ್‌ಎ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ದೃಢನಿಶ್ಚಯ ಮಾಡಿದಂತಿರುವುದರಿಂದ, ಜುಲೈ 22 ರಂದು ಭಾರತದಾದ್ಯಂತ “ಎಫ್‌ಟಿಎ ವಿರುದ್ಧ ರೈತರ ಪ್ರತಿಜ್ಞೆ ದಿನ” ವನ್ನು ಆಚರಿಸಲು ಮತ್ತು ಅಂದು ಪ್ರತಿಭಟನೆಗಳನ್ನು ಆಯೋಜಿಸಲು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನಿರ್ಧರಿಸಿದೆ. ಈ ಕುರಿತು ಅದು ಜುಲೈ ೭ರಂದು ನೀಡಿರುವ ಹೇಳಿಕೆಯಲ್ಲಿ, ಮೋದಿ ಸರ್ಕಾರ ಭಾರತ-ಯುಎಸ್ ʼಮುಕ್ತ ವ್ಯಾಪಾರ ಒಪ್ಪಂದʼ(ಎಫ್‌ಟಿಎ)ಗೆ ಸಹಿ ಹಾಕಿದರೆ, 2020-21 ರ ಐತಿಹಾಸಿಕ ರೈತರ ಹೋರಾಟದಂತೆಯೇ, ಎಲ್ಲಾ ಎಫ್‌ಟಿಎಗಳನ್ನು ರದ್ದುಗೊಳಿಸುವ ವರೆಗೆ ರೈತರು ಬೃಹತ್,ಅವಿರತ ದೇಶವ್ಯಾಪಿ ಹೋರಾಟಗಳನ್ನು ಆರಂಭಿಸುವುದಾಗಿ ರೈತರು ಹಳ್ಳಿಗಳಲ್ಲಿ ಪ್ರತಿಜ್ಞೆ ಮಾಡುತ್ತಾರೆ ಎಂದು ಪ್ರಕಟಿಸಿದೆ.
ಆ ದಿನದಂದು ವಿವಿಧ ರೀತಿಯ ಪ್ರತಿಭಟನೆಗಳನ್ನು ನಡೆಸಲು ಅಖಿಲ ಭಾರತ ಅಭಿಯಾನವನ್ನು ಕೈಗೊಳ್ಳಲಾಗುವುದು. ಪ್ರತಿ ಹಳ್ಳಿಯ ರೈತರು ಸಹಿ ಮಾಡಿದ ಪತ್ರವನ್ನು ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಲಾಗುವುದು, ಇದರಲ್ಲಿ, ಈ ಒಪ್ಪಂದ ಸಣ್ಣ ಉತ್ಪಾದಕರನ್ನು ನಾಶಪಡಿಸುತ್ತದೆಯಾದ್ದರಿಂದ ಮತ್ತು ದೇಶೀಯ ಮಾರುಕಟ್ಟೆಯನ್ನು ಜಾಗತಿಕ ಕಾರ್ಪೊರೇಟ್ ದೈತ್ಯರಿಂದ ಲೂಟಿಗೆ ತೆರೆದು ಕೊಡುತ್ತದೆಯಾದ್ದರಿಂದ ಇದಕ್ಕೆ ಸಹಿ ಹಾಕಬಾದು ಎಂದು ಪ್ರಧಾನ ಮಂತ್ರಿಗಳಿಗೆ ಸೂಚಿಸಬೇಕು ಎಂದು ತ್ತಾಯಿಸಲಾಗುವುದು, ಬಿಜೆಪಿ-ಎನ್‌ಡಿಎ ಸಂಸತ್ ಸದಸ್ಯರ ಕಚೇರಿಗಳ ಮುಂದೆ ಸಾಮೂಹಿಕ ಪ್ರದರ್ಶನಗಳನ್ನು ಆಯೋಜಿಸಲಾಗುವುದು. ರೈತರು ಸಬ್-ಡಿವಿಷನ್ ಮಟ್ಟದಲ್ಲಿ ಪ್ರತಿಭಟನಾ ಪ್ರದರ್ಶನಗಳು ಮತ್ತು 3 ಗಂಟೆಗಳ ಸಾಮೂಹಿಕ ಧರಣಿ ನಡೆಸಲಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಗಳನ್ನು ಸುಡಲಾಗುವುದು. ಟೋಲ್ ಪ್ಲಾಜಾ ಹೋರಾಟವು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ಇರುತ್ತದೆ. ಪ್ರತಿಭಟನಾ ಕ್ರಮಗಳ ರೂಪ ಮತ್ತು ಸ್ಥಳವನ್ನು ಆಯಾ ರಾಜ್ಯ ಸಮನ್ವಯ ಸಮಿತಿಗಳು ಮತ್ತು ಸದಸ್ಯ ಸಂಘಟನೆಗಳು ನಿರ್ಧರಿಸುತ್ತವೆ ಎಂದು ಎಸ್‌ಕೆಎಂ ಹೇಳಿದೆ.
ಇದನ್ನೂ ಓದಿ : ನೀಟ್, ಯುಜಿಸಿ-ನೆಟ್ ಅಕ್ರಮ ಖಂಡನೆ: ಎನ್‌ಟಿಎ ರದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಎಸ್‌ಎಫ್‌ಐ ಆಗ್ರಹ
ಭಾರತದ ಜನರ ಸ್ವಾವಲಂಬನೆ ಮತ್ತು ಸಾರ್ವಭೌಮತ್ವವನ್ನು ನಾಶಮಾಡುವ ಜಾಗತಿಕ ಕಾರ್ಪೊರೇಟ್‌ಗಳು ಮತ್ತು ಅಮೆರಿಕ ಸಾಮ್ರಾಜ್ಯಶಾಹಿಯ ಆಣತಿಗಳಿಗೆ ಶರಣಾಗಬಾರದು ಎಂದು ಆಡಳಿತಾರೂಢ ಬಿಜೆಪಿ-ಆರ್‌ಎಸ್‌ಎಸ್ ಕೂಟದ ನಾಯಕತ್ವವನ್ನು ಎಸ್‌ಕೆಎಂ ಬಲವಾಗಿ ಎಚ್ಚರಿಸಿದೆ.
ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಎಫ್‌ಟಿಎ ಗಳನ್ನು ಬಲವಾಗಿ ವಿರೋಧಿಸುವಂತೆ ಮತ್ತು ಪ್ರಸ್ತುತ ನಡೆಯುತ್ತಿರುವ ತೀವ್ರ ಕೃಷಿ ಬಿಕ್ಕಟ್ಟನ್ನು ಕೊನೆಗೊಳಿಸಲು, ಎಡೆಬಿಡದೆ ನಡೆಯುತ್ತಿರುವ ರೈತರು ಮತ್ತು ದಿನಗೂಲಿಗಳ ಆತ್ಮಹತ್ಯೆಗಳನ್ನು ಕೊನೆಗೊಳಿಸಲು ಮತ್ತು ಎಲ್ಲಾ ಬೆಳೆಗಳ ಸಂಗ್ರಹಣೆ ಮತ್ತು ಸಮಗ್ರ ಸಾಲ ಮನ್ನಾದೊಂದಿಗೆ C2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆ(ಎಂ ಎಸ್ ಪಿ) ಖಾತರಿಪಡಿಸಲು ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರದಿಂದ ನೀತಿಗಳನ್ನು ಒತ್ತಾಯಿಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಕೂಡ, ಇದಕ್ಕೆ ಮೊದಲು ಜುಲೈ ೨ರಂದು ನೀಡಿದ ಪತ್ರಿಕಾಹೇಳಿಕೆಯಲ್ಲಿ ಭಾರತೀಯ ರೈತರು ಮತ್ತು ಸಾರ್ವಭೌಮತ್ವವನ್ನು ಅಪಾಯಕ್ಕೆ ಸಿಲುಕಿಸುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಯೋಜನೆಯನ್ನು ವಿರೋಧಿಸಿ, ಜುಲೈ೨೨ರಂದು ಸಂಜೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರತಿಕೃತಿಗಳ ದಹನ ನಡೆಸಬೇಕು ಎಂದು ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿತ್ತು. ಆರ್‌ಎಸ್‌ಎಸ್-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಯುಎಸ್ ಸಾಮ್ರಾಜ್ಯಶಾಹಿಗೆ ಶರಣಾಗುತ್ತಿರುವುದು ಭಾರತದ ಇತಿಹಾಸದಲ್ಲೇ ಅಭೂತಪೂರ್ವವಾಗಿದೆ ಎಂದು ಅದು ತೀವ್ರವಾಗಿ ಟೀಕಿಸಿತ್ತು.
ಎಲ್ಲಾ ದುಡಿಮೆಗಾರರು ಮತ್ತು ದೇಶಪ್ರೇಮಿ ವಿಭಾಗಗಳು ಸಾಮ್ರಾಜ್ಯಶಾಹಿಗೆ ಶರಣಾಗುವುದರ ವಿರುದ್ಧದ ಚಳುವಳಿಯಲ್ಲಿ ಸೇರಲು ವಿನಂತಿಸುತ್ತ, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರೆ, ತೀವ್ರವಾದ ಹೋರಾಟವನ್ನು ಪ್ರಾರಂಭಿಸಲಾಗುವುದು ಎಂದು ಎಐಕೆಎಸ್ ಒಕ್ಕೂಟ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಅದರ ವಿರುದ್ಧ ಉಗ್ರಗಾಮಿ ಹೋರಾಟವಲ್ಲದೆ, ಶ್ರಮಜೀವಿ ರೈತರ ಮುಂದೆ ಬೇರೆ ದಾರಿಯಿಲ್ಲ ಎಂದು ಅದು ಹೇಳಿದೆ.
ಇದನ್ನೂ ನೋಡಿ : ಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ; ಜನಗಣತಿ–ಡಿಲಿಮಿಟೇಶನ್ ಹೆಸರಲ್ಲಿ ವಿಳಂಬ ಬೇಡ: ನಾಗಮೋಹನ ದಾಸ್
