ಬೆಂಗಳೂರು: ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಜುಲೈ 1ರಂದು ರದ್ದುಪಡಿಸಿದೆ.
ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಹಾಗೂ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಸರ್ಫರಾಜ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಪುರಸ್ಕರಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಕರಣದ ಹಿನ್ನೆಲೆ
ತೆರಿಗೆ ವಂಚನೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸಚಿವ ಜಮೀರ್ ಅಹಮ್ಮದ್ ಖಾನ್ ನಿವಾಸದಲ್ಲಿ ಶೋಧ ನಡೆಸಿದ್ದರು. ಆ ವೇಳೆ ಪತ್ತೆಯಾದ ಹಣಕಾಸು ವ್ಯವಹಾರಗಳ ದಾಖಲೆಗಳನ್ನು ಇಡಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಿಸಿ ಮುಂದಿನ ತನಿಖೆಗೆ ಸೂಚಿಸಿದ್ದರು.
ಇದನ್ನೂ ಓದಿ: ಬರದ ಛಾಯೆ, ನೀರಿನ ಸಂಕಷ್ಟ: ಬೆಳಗಾವಿ ಸಮಸ್ಯೆಗಳ ಪರಿಶೀಲನೆಗೆ ಕ್ರಮ – ಜಿ ಪರಮೇಶ್ವರ್ ಭರವಸೆ
ಅದರ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು 2025ರ ಡಿಸೆಂಬರ್ 23ರಂದು ಸರ್ಫರಾಜ್ ಖಾನ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 13(1)(ಬಿ) ಮತ್ತು 13(2) ಅಡಿಯಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದರು. ಬಳಿಕ ಬೆಂಗಳೂರಿನ ಹಲಸೂರು ಪ್ರದೇಶದಲ್ಲಿರುವ ಅವರ ನಿವಾಸ ಸೇರಿದಂತೆ ಸಂಬಂಧಿಕರ ಮನೆಗಳು, ಕೊಡಗು ಜಿಲ್ಲೆಯ ಕಾಫಿ ತೋಟಗಳು ಮತ್ತು ಎಚ್.ಡಿ. ಕೋಟೆ ಭಾಗದ ರೆಸಾರ್ಟ್ ಸೇರಿ ಒಟ್ಟು 13 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.
ತನಿಖೆಯಲ್ಲಿ ಸರ್ಫರಾಜ್ ಖಾನ್ 38 ಎಕರೆ ಭೂಮಿ ಸೇರಿದಂತೆ ಸುಮಾರು ₹14.38 ಕೋಟಿ ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಸಂಪಾದಿಸಿರುವುದು ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದರು. ಈ ಪ್ರಕರಣ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.
ಇದನ್ನೆಲ್ಲ ಪ್ರಶ್ನಿಸಿ ಎಫ್ಐಆರ್ ಮತ್ತು ವಿಚಾರಣೆಯನ್ನು ರದ್ದುಪಡಿಸುವಂತೆ ಸರ್ಫರಾಜ್ ಖಾನ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಅರ್ಜಿಯನ್ನು ಅಂಗೀಕರಿಸಿ ಪ್ರಕರಣವನ್ನು ರದ್ದುಪಡಿಸಿದೆ.
ಇದನ್ನೂ ನೋಡಿ: ‘ಅರ್ಬುದನ ಡೈರಿ’ | ಕ್ಯಾನ್ಸರ್ ಪೀಡಿತರಿಗೆ ವಿಶ್ವಾಸ ತುಂಬುವ ಅನುಭವ ಕಥನ Janashakthi Media
