ಬೆಂಗಳೂರು: ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷಿಯ ಮೇಲೆ ಒತ್ತಡ ಹೇರಿ, ಸಾಕ್ಷ್ಯ ತಿರುಚಲು ಯತ್ನ ನಡೆದಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ. ಈ ವಿಷಯವನ್ನು ಸ್ವತಃ ಸಾಕ್ಷಿಯೇ ನ್ಯಾಯಾಲಯದ ಮುಂದೆ ಬಹಿರಂಗಪಡಿಸಿದ್ದಾನೆ. ರೇಣುಕಾಸ್ವಾಮಿ
ನಗರದ 58ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣಕ್ಕೆ ಸಂಬಂಧಿಸಿದವರಾಗಲಿ ಅಥವಾ ಸಂಬಂಧವಿಲ್ಲದವರಾಗಲಿ ಸಾಕ್ಷ್ಯ ತಿರುಚಲು ಪ್ರಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಕಠಿಣ ಎಚ್ಚರಿಕೆ ನೀಡಿದೆ.
ಇದೇ ವೇಳೆ, ಸಾಕ್ಷಿಗೆ ವಿಚಾರಣೆಯ ಅವಧಿಯಲ್ಲೂ ಅಗತ್ಯ ಭದ್ರತೆ ಒದಗಿಸಲು ತನಿಖಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಶಿವಸೇನೆಗೆ ಮತ್ತೊಂದು ಶಾಕ್: ಸಚಿನ್ ಅಹಿರ್ ಮಹಾಯುತಿ ಅಭ್ಯರ್ಥಿಯಾಗಿ ನಾಮಪತ್ರ
ಮಂಗಳವಾರ ನಡೆದ ವಿಚಾರಣೆಯಲ್ಲಿ 49ನೇ ಸಾಕ್ಷಿಯಾಗಿರುವ ಚಿತ್ರದುರ್ಗದ ದುರ್ಗಾ ಬಾರ್ & ರೆಸ್ಟೋರೆಂಟ್ನ ಕ್ಯಾಷಿಯರ್ ಸಂದೀಪ್ ಹಾಜರಾಗಿ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಹತ್ವದ ಹೇಳಿಕೆಯನ್ನು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಕೆಲ ಅಪರಿಚಿತರು ಸಂಪರ್ಕಿಸಿ, ತಮ್ಮ ಹೇಳಿಕೆಯನ್ನು ಬದಲಾಯಿಸುವಂತೆ ಸೂಚನೆ ನೀಡಿದರು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಈ ಕುರಿತು ನ್ಯಾಯಾಧೀಶೆ ಸುಜಾತಾ ಅವರು, ಆಕರ್ಷ್ ಎಂಬ ವ್ಯಕ್ತಿಯ ಮೂಲಕ ಸಾಕ್ಷಿಯ ಮೇಲೆ ಪ್ರಭಾವ ಬೀರುವ ಯತ್ನ ನಡೆದಿದೆ ಎಂಬುದು ಗೋಚರಿಸುತ್ತಿದೆ ಎಂದು ಗಮನಿಸಿ, ಸಂದೀಪ್ ಅವರಿಂದ ಪ್ರತ್ಯೇಕ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದರು. ಆ ಪ್ರಮಾಣಪತ್ರದ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಲ್ಲದೆ, ಯಾವುದೇ ರೀತಿಯ ಸಾಕ್ಷ್ಯ ತಿರುಚುವ ಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಪುನರುಚ್ಚರಿಸಿದ ನ್ಯಾಯಾಲಯವು, ಮುಂದಿನ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.
ಇದನ್ನೂ ನೋಡಿ: ಆರೋಗ್ಯ ಸೇವೆ ವ್ಯಾಪಾರವಲ್ಲ, ಜನರ ಹಕ್ಕು Janashakthi Media
