ಚಂಪಾ ಜೈಪ್ರಕಾಶ್ ರವರ ಈ ಕೃತಿ ‘ಅರ್ಬುದನ ಡೈರಿ‘ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿಯು, ಈ ರೋಗದಿಂದ ಮುಕ್ತಿ ಪಡೆದು ಸಂಪೂರ್ಣ ಆರೋಗ್ಯವಂತಳಾದ ಕಥೆ. ಅದು ಸ್ವತಃ ಲೇಖಕಿಯ ಅನುಭವದ ಕಥನ. ಈ ಕೃತಿ ಇದೇ ಭಾನುವಾರ ಜೂನ್ 28 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಸೌಹಾರ್ದ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಪುಸ್ತಕ ಪ್ರಕಟಿಸಿದ ಚಿಂತನ ಪುಸ್ತಕ ಮತ್ತು ಜನಶಿಕ್ಷಣ ಟ್ರಸ್ಟ್ ಜಂಟಿಯಾಗಿ ಈ ಸಮಾರಂಭ ವನ್ನು ಸಂಘಟಿಸುತ್ತಿವೆ. ‘ವಿಶೇಷ ‘ ಮಕ್ಕಳು ಮತ್ತು ಅವರ ಪೋಷಕರ ನಡುವೆ ಕೆಲಸ ಮಾಡುತ್ತಿರುವ ಮನೋಶಾಸ್ತ್ರಜ್ಞೆ ಚಂಪಾ ಜೈಪ್ರಕಾಶ್ ಆ ಅನುಭವಗಳ ಮೇಲೆ ಆಧಾರಿತ ಅವರ ಹಿಂದಿನ ಮೂರು ಪುಸ್ತಕಗಳಿಗಿಂತ ಭಿನ್ನವಾದ ಪುಸ್ತಕವಿದು. ಈ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ರೆಡಿಯೊಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಕೆ ಸರೋಜ ಅವರು ಪುಸ್ತಕಕ್ಕೆ ಬರೆದ ಮುನ್ನುಡಿ ಇಲ್ಲಿದೆ.
ಈ ಜೀವ ಜಗತ್ತಿನಲ್ಲಿ ಅನುಗಾಲವೂ ಜೀವವಿರೋಧಿ ವ್ಯಾಪಾರ ನಡೆಯುತ್ತಲೇ ಇರುತ್ತದೆ. ಅದು ಪರಿಸರ ಮಾಲಿನ್ಯ, ವಾಯುಮಾಲಿನ್ಯ ಅಥವಾ ಜಲ ಮಾಲಿನ್ಯ ಏನೇ ಆಗಿರಬಹುದು, ಇವುಗಳ ಜೊತೆಗೆ ನಾಗಾಲೋಟದಲ್ಲಿ ಸಾಗುತ್ತಿರುವ ಬದುಕಿನ ಶೈಲಿ, ಆಹಾರ ಪದ್ಧತಿ, ದೈಹಿಕ ಹಾಗೂ ಮಾನಸಿಕ ಒತ್ತಡಗಳು ಇತ್ಯಾದಿಗಳಿಂದ ದಿನೇ ದಿನೇ ಕಾಯಿಲೆಗಳು ಹೆಚ್ಚುತ್ತಿವೆ.
ಸ್ವಂತ ದೇಹದ ಜೀವಕಣಗಳೇ ಪರಕೀಯ ವಸ್ತುಗಳಾಗಿ ಮಾರ್ಪಡುತ್ತಿವೆ, ಪರಿಚಿತ ‘ಜೀನುಗಳೆ’ ಮ್ಯುಟೇಶನ್ ಗೊಂಡು ಮತ್ತೊಂದು ಆಕಾರ ತಳೆಯುತ್ತಿದೆ.
ಚಂಪಾ ಜೈಪ್ರಕಾಶ್ ರವರ ಈ ಕೃತಿ ‘ಅರ್ಬುದನ ಡೈರಿ’ ಒಬ್ಬ ಕ್ಯಾನ್ಸರ್ ಪೀಡಿತ ವ್ಯಕ್ತಿಯು, ಈ ರೋಗದಿಂದ ಮುಕ್ತಿ ಪಡೆದು ಸಂಪೂರ್ಣ ಆರೋಗ್ಯವಂತಳಾದ ಕಥೆ. ಅದು ಸ್ವತಃ ಲೇಖಕಿಯ ಅನುಭವದ ಕಥನ.
ಕ್ಯಾನ್ಸರ್ ಎಂಬ ಹೆಸರು ಕೇಳಿದರೇನೆ ಜಂಘಾಬಲವೇ ಉಡುಗಿ ಹೋಗುವಂತಹ ಪರಿಸ್ಥಿತಿ ಹಿಂದೆ ಇತ್ತು. ಅರ್ಬುದ, ಕ್ಯಾನ್ಸರ್, ಏಡಿಗಂತಿ ಎಂದೂ ಕರೆಯಲ್ಪಡುವ ಈ ಕಾಯಿಲೆ ಸುಲಭವಾಗಿ ಹತೋಟಿಗೆ ಸಿಗಲಾರದು. ಇದು ಒಂದು ಅಂಗಕ್ಕೆ ಮಾತ್ರ ಸೀಮಿತಗೊಳ್ಳದೆ ದೇಹದ ಇತರ ಅಂಗಗಳಿಗೂ ವ್ಯಾಪಿಸುತ್ತದೆ, ಕಳ್ಳನಂತೆ ಸದ್ದಿಲ್ಲದೆ ಪ್ರವೇಶಿಸಿ ಬೇರು ಬಿಟ್ಟು ನಿಧಾನವಾಗಿ ಶರೀರವನ್ನೆಲ್ಲ ಆಕ್ರಮಿಸಿ ಎಷ್ಟೋ ಕಾಲದ ನಂತರ ತನ್ನ ಇರುವನ್ನು ಪ್ರಕಟಗೊಳಿಸುತ್ತದೆ.
ಪ್ರಾರಂಭಿಕ ಹಂತದಲ್ಲೇ ರೋಗವನ್ನು ಗುರುತಿಸಿ ತಕ್ಕ ಚಿಕಿತ್ಸೆ ನಡೆಸಿದಲ್ಲಿ ರೋಗಿ ಸಂಪೂರ್ಣ ಗುಣಮುಖನಾಗಬಲ್ಲ. ಕ್ಯಾನ್ಸರ್ ಕಾಯಿಲೆಗೆ ನಿರ್ದಿಷ್ಟ ಕಾರಣಗಳಿಲ್ಲ, ಪ್ರಾರಂಭಿಕ ಹಂತದಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ಮತ್ತು ಸತತವಾಗಿ ಬೆಳವಣಿಗೆ ಆಗುತ್ತವೆ. ಪ್ರತಿಯೊಂದು ಜೀವಕಣದಲ್ಲೂ ಒಂದು ವಂಶವಾಹಿ ಇರುತ್ತದೆ. ಅದು ಒಂದು ಉಪಧ್ಯಾಯನಂತೆ ಆ ಜೀವ ಕಣ ಏನು ಮಾಡಬೇಕು ಹೇಗೆ ವರ್ತಿಸಬೇಕು ಎಂಬ ಸೂಚನೆ ಕೊಡುತ್ತಿರುತ್ತದೆ. ಆದರೆ ಕ್ಯಾನ್ಸರ್ ಕಣ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ವಿಭಜನೆಯಾಗಿ ಯದ್ವಾತದ್ವಾ ಬೆಳೆಯಲು ಉಪಕ್ರಮಿಸುತ್ತದೆ. ಅದು ಬೆಳವಣಿಗೆಯನ್ನು ನಿಲ್ಲಿಸಬೇಕೆಂಬ ಸೂಚನೆಯನ್ನೂ ಪಾಲಿಸುವುದಿಲ್ಲ.
ಬೆಳೆದು ದೊಡ್ಡವಾಗಿ ಜೀವಕೋಶಗಳು ಒಂದು ಗಡ್ಡೆಯಂತಾಗುತ್ತವೆ. ದ್ವಿತೀಯ ಹಂತದಲ್ಲಿ ಈ ಜೀವಕೋಶಗಳು ನೆರೆಹೊರೆ ಹಾಗೂ ದೂರದ ಅಂಗಗಳಿಗೂ ವ್ಯಾಪಿಸುತ್ತದೆ. ರೋಗಗ್ರಸ್ತ ಜೀವ ಕಣಗಳು ರಕ್ತ ಮತ್ತು ಹಾಲ್ರಸ(ಲಿಂಫ್) ಶರೀರದ ಇತರೆಡೆಗೆ ತಲುಪಿ ಅಲ್ಲಿಯೇ ನೆಲೆಸಿ ಬೆಳೆಯತೊಡಗುತ್ತದೆ. ಈ ಕ್ರಿಯೆಯನ್ನು ಸ್ಥಳಾಂತರ ಅಥವಾ ಮೆಟಾಸ್ಟಾಟಿಸ್ ಎಂದು ಕರೆಯುತ್ತಾರೆ.

ಇದನ್ನೂ ಓದಿ : ಟಾಟಾ ಪವರ್ಗೆ ವಿದ್ಯುತ್ ವಿತರಣಾ ಹಕ್ಕು ನೀಡಬೇಡಿ: ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಕರೆ
ಕ್ಯಾನ್ಸರ್ ರೋಗಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಸಂಭವನೀಯ ಕಾರಣಗಳನ್ನು ಪರಿಸರ ಸಂಬಂಧಿ ಹಾಗೂ ಅನುವಂಶಿಕ ಕಾರಣಗಳೆಂದು ವಿಂಗಡಿಸಬಹುದು. ಪರಿಸರ ಸಂಬಂಧಿತವೆಂದರೆ ವೈಯುಕ್ತಿಕ ಅಭ್ಯಾಸಗಳು, ಆಹಾರ, ನಿರ್ದಿಷ್ಟ ಉದ್ಯೋಗ ಇತ್ಯಾದಿ. ಅನುವಂಶಿಕ ಕಾರಣಗಳು ವಂಶವಾಹಿನಿಯನ್ನು ಆಧರಿಸಿರುತ್ತವೆ.
ಕ್ಯಾನ್ಸರ್ ಚಿಕಿತ್ಸೆಯ ನಿರ್ಧಾರಕ ಪರೀಕ್ಷೆಗಳಾದ ರಕ್ತ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳು, ಅನುಮಾನ ಬಂದ ಅಂಗದ ಒಂದು ಭಾಗ ಅಥವಾ ಇಡೀ ಗಡ್ಡೆಯ ಜೀವಕೋಶಗಳ ಪರೀಕ್ಷೆ, ಎಕ್ಸ್-ರೇ ಗೆ ಸಂಬಂಧಿಸಿದ ಸಿಟಿ, ಎಂಆರ್ಐ, ಪೆಟ್ ಸ್ಕ್ಯಾನ್ ಗಳು ಹಾಗೂ ಇತರೆ ಪರೀಕ್ಷೆಗಳು ರೋಗದ ವ್ಯಾಪ್ತಿಯನ್ನು ಅಂದಾಜಿಸುತ್ತವೆ. ರೋಗ ಖಚಿತಗೊಂಡು ಅದರ ವ್ಯಾಪ್ತಿಯನ್ನು ನಿರ್ಧರಿಸಿದ ಮೇಲೆ ಚಿಕಿತ್ಸೆ ಪ್ರಾರಂಭವಾಗುತ್ತದೆ, ಶಸ್ತ್ರಚಿಕಿತ್ಸೆ ,ವಿಕಿರಣ ಚಿಕಿತ್ಸೆ ಹಾಗೂ ಕೀಮೋ ಔಷಧಿ ಚಿಕಿತ್ಸೆ ಇತ್ಯಾದಿ. ಬಹುಪಾಲು ಸಂದರ್ಭದಲ್ಲಿ ಈ ಮೂರೂ ವಿಧಾನಗಳನ್ನು ಒಳಗೊಂಡು ಒಂದು ಕ್ರಮದಲ್ಲಿ ಮಾಡಲಾಗುತ್ತದೆ,
ಇದನ್ನು ಬಹು ವಿಧಾನ ಚಿಕಿತ್ಸೆ ಎಂದು ಕರೆಯಲಾಗುತ್ತದೆ. ಚಿಕಿತ್ಸೆ ಮುಗಿದ ಮೇಲೆ ಪ್ರತಿಯೊಬ್ಬ ರೋಗಿಯು ನಿಯಮಿತವಾಗಿ ತಪಾಸಣೆಗೆ ಕಡ್ಡಾಯವಾಗಿ ಹೋಗಬೇಕು. ರೋಗವು ಮತ್ತೆ ಕಾಣಿಸಿಕೊಂಡರೆ ಅಥವಾ ಯಾವುದಾದರೂ ಪರಿಣಾಮಗಳು ತಡವಾಗಿ ಕಂಡುಬಂದಲ್ಲಿ ಮತ್ತೆ ಚಿಕಿತ್ಸೆಗೆ ಒಳಪಡಿಸಬೇಕಾಗುತ್ತದೆ.

ಶ್ರೀಮತಿ ಚಂಪಾ ಅವರು ಈ ಕೃತಿಯಲ್ಲಿ ಮೊದಲ ಅರ್ಧಭಾಗ ಕ್ಯಾನ್ಸರ್ ಜೀವಕಣಗಳೆ ಮಾತನಾಡಿ ಕಥೆ ಹೇಳುವಂತೆ ಕಥಾ ಹಂದರದಲ್ಲಿ ಕಟ್ಟಿಕೊಟ್ಟಿದ್ದಾರೆ. ಕ್ಯಾನ್ಸರ್ನಿಂದ ಸಂಪೂರ್ಣ ಗುಣಮುಖರಾದವರು ಹಲವಾರು ಜನ ತಮ್ಮ ವೈಯುಕ್ತಿಕ ಅನುಭವಗಳನ್ನು ದಾಖಲಿಸಿದ್ದಾರೆ, ಅಂತಹ ಕೃತಿಗಳಲ್ಲಿ ‘ಅರ್ಬುದನ ಡೈರಿ’ ಕೂಡ ಒಂದು.
ಈ ಕೃತಿಯಲ್ಲಿ ಎರಡು ಭಾಗಗಳಿವೆ, ಮೊದಲನೆಯ ಭಾಗದಲ್ಲಿ ಕ್ಯಾನ್ಸರ್ ಕಣಗಳ ಹರಡುವಿಕೆ, ಬೆಳವಣಿಗೆ ಹಾಗೂ ಇತರ ಅಂಗಗಳಿಗೆ ವ್ಯಾಪಿಸುವಿಕೆ ಬಗ್ಗೆ ಕ್ಯಾನ್ಸರ್ ಜೀವಕೋಶಗಳೇ ವಿವರಣೆ ನೀಡುತ್ತಿರುವಂತೆ ಗ್ರಾಮ್ಯ ಶೈಲಿಯಲ್ಲಿ ಬರೆದಿದ್ದಾರೆ. ಈ ಶೈಲಿಯಲ್ಲಿ ಹೇರಳ ಒತ್ತಕ್ಷರಗಳು ಇರುವುದರಿಂದಲೂ ಹಾಗೂ ಹೆಚ್ಚು ಬಳಸದೆ ಇರುವ ಪದಗಳು ಇರುವುದರಿಂದ ಓದಿನ ಓಘಕ್ಕೆ ಸ್ವಲ್ಪಮಟ್ಟಿಗೆ ತಡೆಯಾಗಿದೆ. ಅಲ್ಲಲ್ಲಿ ನಿಲ್ಲಿಸಿ ಏನು ಹೇಳುತ್ತಿದ್ದಾರೆ ಎಂದು ಗಮನಿಸಿ ಮತ್ತೊಮ್ಮೆ ಓದಿ ಮುಂದುವರೆಯಬೇಕಾಗುತ್ತದೆ.
ಆದರೂ ಲೇಖಕರು ಜೀವಕೋಶಗಳಲ್ಲಿ ನಡೆಯುವ ಬೆಳವಣಿಗೆಯನ್ನು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಎನ್ನುವ ಹಾಗೆ ಕಟ್ಟಿಕೊಟ್ಟಿದ್ದಾರೆ.
ಇನ್ನು ಅರ್ಧ ಭಾಗ ಚಿಕಿತ್ಸೆಯ ಪರಿಣಾಮಗಳನ್ನು ಎದುರಿಸಿದ ಪರಿ, ಔಷಧಿಗಳ ಪರಿಣಾಮ, ಅದನ್ನು ದೇಹ ಸ್ವೀಕರಿಸಿದ ರೀತಿ, ಅಡ್ಡ ಪರಿಣಾಮಗಳು ಹೀಗೆ ಒಂದೇ ಎರಡೇ? ಎಲ್ಲವನ್ನೂ ವಿಶದವಾಗಿ, ಸವಿವರವಾಗಿ ದಾಖಲಿಸಿದ್ದಾರೆ.
ಶಸ್ತ್ರಕ್ರಿಯಾ ನಂತರ ರೋಗಿ ಚೇತರಿಸಿಕೊಂಡ ಕಥೆ, ಕುಟುಂಬದವರ ನಿರಂತರ ಬೆಂಬಲ, ಅಪಾರ ಆತ್ಮವಿಶ್ವಾಸದಿಂದ ಏನನ್ನು ಬೇಕಾದರೂ ಎದುರಿಸಿ ಜಯಿಸಿಕೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿಯಂತಿದ್ದಾರೆ ಚಂಪಾ.
ಈ ರೋಗದಿಂದ ನರಳುತ್ತಿರುವ ಇತರೆ ರೋಗಿಗಳಿಗೂ ಒಂದು ಒತ್ತಾಸೆಯಂತೆ ಧೈರ್ಯ ಕೊಡುತ್ತದೆ. ಇಡೀ ಕಥೆ ವರದಿಯಂತೆ ಮೊದಲಿನ ದಿನದಿಂದ ಕೊನೆಯವರೆಗೆ ಏನಾಯಿತು ಎನ್ನುವುದನ್ನು ಒಂದು ಕಥನದಂತೆ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ.
ಅವರಿಂದ ಇನ್ನೂ ಉತ್ತಮ ಕೃತಿಗಳು ಬರಲಿ ಎಂದು ಹಾರೈಸುತ್ತೇನೆ.
ಡಾ.ಆರ್.ಕೆ.ಸರೋಜ
ನಿವೃತ್ತ ರೇಡಿಯಾಲಜಿ ಪ್ರೊಫೆಸರ್ ಹಾಗೂ ವಿಭಾಗದ ಮುಖ್ಯಸ್ಥರು,
ನ್ಯೂಕ್ಲಿಯರ್ ಮೆಡಿಸಿನ್ ವಿಭಾಗ, ವಿಕ್ಟೋರಿಯಾ ಆಸ್ಪತ್ರೆ
ಬೆಂಗಳೂರು ಮೆಡಿಕಲ್ ಕಾಲೇಜು
ಪುಸ್ತಕ ಬಿಡುಗಡೆ ವಿವರಗಳು
ಪುಸ್ತಕ ಬಿಡುಗಡೆ – ಡಾ ಆರ್. ಕೆ ಸರೋಜ, ಪುಸ್ತಕ ಪರಿಚಯ – ಕೆ.ಎಸ್.ಪ್ರಭಾ, ಉಪಸ್ಥಿತಿ – ಡಾ. ಇಂದಿರಾ
ದಿನಾಂಕ/ಸಮಯ – ಜೂನ್ 28 ಭಾನುವಾರ ಬೆಳಿಗ್ಗೆ 10 ಗಂಟೆಗೆ
ಸ್ಥಳ ಸೌಹಾರ್ದ ಸಭಾಂಗಣ (ವಿಮಾ ಕಾರ್ಪೊರೇಷನ್ ನೌಕರರ ಸಂಘ), 1ನೇ ಕ್ರಾಸ್, CSI ಕಾಂಪೌಂಡ್, ಸುದಾಮ ನಗರ, ಬೆಂಗಳೂರು-27 (ಸುಬ್ಬಯ್ಯ ಸರ್ಕಲ್ ಬಳಿ)
ಇದನ್ನೂ ನೋಡಿ : ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
