ಜನಚಳವಳಿಯಾಗಿ ವಿಸ್ತರಿಸಿದ ಎಸ್‌ಐಆರ್‌ ವಿರೋಧಿ ಹೋರಾಟ; ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ

  • ಬೆಂಗಳೂರಿನಲ್ಲಿ ಗಮನ ಸೆಳೆದ ತಿರಂಗ ಮೆರವಣಿಗೆ; ಕರ್ನಾಟಕದಲ್ಲಿ 72 ಸಂಘಟನೆಗಳ ಸಕ್ರಿಯ ಪಾಲ್ಗೊಳ್ಳುವಿಕೆ
  • ಅಕ್ಟೋಬರ್‌ 27ರಂದು ಮುಂದಿನ ಹಂತದ ಹೋರಾಟದ ಘೋಷಣೆ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ವಜಾಗೊಳಿಸಬೇಕು ಹಾಗೂ ದೆಹಲಿಯ ಜಂತರ್‌ ಮಂತರ್‌ ಅನ್ನು ಜನಹೋರಾಟಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿ ನಡೆದ ಎಸ್‌ಐಆರ್‌ ವಿರೋಧಿ ಹೋರಾಟ ದೇಶಾದ್ಯಂತ ಜನಚಳವಳಿಯಾಗಿ ವಿಸ್ತರಿಸುತ್ತಿದೆ. ಅಕ್ಟೋಬರ್‌ 23ರಂದು ದೇಶದ ವಿವಿಧೆಡೆ ತಿರಂಗ ಮೆರವಣಿಗೆಗಳು ಮತ್ತು ಪ್ರತಿಭಟನೆಗಳು ನಡೆದಿದ್ದು, ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹೋರಾಟಗಳು ನಡೆದಿವೆ ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ಕರ್ನಾಟಕ ತಿಳಿಸಿದೆ. ಜನಚಳವಳಿ

ಅಕ್ಟೋಬರ್‌ 14ರಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ರೂಪುಗೊಂಡಿದ್ದ 300ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಸಂಘಟನೆಗಳ ಮಹಾ ಒಕ್ಕೂಟವಾದ ‘ಎಸ್‌ಐಆರ್‌ ವಿರುದ್ಧ ಜನತೆ’ ವೇದಿಕೆ ಈ ಪ್ರತಿಭಟನೆಗಳಿಗೆ ಕರೆ ನೀಡಿತ್ತು. ದೇಶಾದ್ಯಂತ 300ಕ್ಕೂ ಹೆಚ್ಚು ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದು, ಕರ್ನಾಟಕದಲ್ಲಿ 72 ಸಂಘಟನೆಗಳು ಸಕ್ರಿಯವಾಗಿ ಕೈಜೋಡಿಸಿವೆ. ಒಂದು ಸಂಘಟನೆ ಅಥವಾ ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗದೆ ವಿವಿಧ ಸಾಮಾಜಿಕ, ರಾಜಕೀಯ ಮತ್ತು ಜನಪರ ಸಂಘಟನೆಗಳು ಒಗ್ಗೂಡಿ ಬೀದಿಗಿಳಿದಿರುವುದು ಈ ಹೋರಾಟದ ವಿಶೇಷತೆಯಾಗಿದೆ ಎಂದು ಒಕ್ಕೂಟ ಹೇಳಿದೆ.

ಅಕ್ಟೋಬರ್‌ 23ರಂದು ಬೆಂಗಳೂರು, ಮೈಸೂರು, ರಾಯಚೂರು, ತುಮಕೂರು, ಕಲಬುರಗಿ, ಶಿವಮೊಗ್ಗ, ಕುಶಾಲನಗರ, ಹಾಸನ, ಪುತ್ತೂರು, ಚಿಕ್ಕಮಗಳೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಅಕ್ಟೋಬರ್‌ 24ರಂದು ಹುಬ್ಬಳ್ಳಿ ಸೇರಿದಂತೆ ಮತ್ತಷ್ಟು ಕಡೆಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ.

ಬೆಂಗಳೂರಿನಲ್ಲಿ ನಡೆದ ಬೃಹತ್‌ ತಿರಂಗ ಮೆರವಣಿಗೆ ಜನರ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಆಶಯಗಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಹೊಸ ಉತ್ಸಾಹ ತುಂಬಿದೆ. ದಲಿತ ಮತ್ತು ರೈತ ಸಂಘಟನೆಗಳ ಜೊತೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಚಳವಳಿಗೆ ಹೊಸ ಚೈತನ್ಯ ನೀಡಿದೆ ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟ ತಿಳಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಮತ್ತು ನಡೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಜನರ ಆತಂಕಗಳು, ಆಕ್ಷೇಪಗಳು ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಸ್ಪಂದಿಸಬೇಕು. ಜನರ ಧ್ವನಿಯನ್ನು ನಿರ್ಲಕ್ಷಿಸದೆ, ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ. ಜನಚಳವಳಿ

ಇದನ್ನೂ ಓದಿ : ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಅ. 27ರಂದು ಪ್ರಕಟ

ಹೋರಾಟದ ಮುಂದಿನ ಹಂತ ಅಕ್ಟೋಬರ್‌ 27ರಂದು ಪ್ರಕಟ

ಅಕ್ಟೋಬರ್‌ 23ರ ತಿರಂಗ ಮೆರವಣಿಗೆಗಳು ಮತ್ತು ಜಂತರ್‌ ಮಂತರ್‌ ಪ್ರತಿಭಟನೆಗಳು ಅಂತಿಮ ಹೋರಾಟವಲ್ಲ; ಬದಲಾಗಿ, ವಿವಿಧ ಜನಪರ ಶಕ್ತಿಗಳು ಒಗ್ಗೂಡಿ ಮುನ್ನಡೆಯುವ ವಿಶಾಲ ಜನಚಳವಳಿಯ ಆರಂಭ ಎಂದು ಒಕ್ಕೂಟ ಹೇಳಿದೆ. ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಹೋರಾಟವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ. ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, ಪ್ರತಿಭಟನೆಯ ಹಕ್ಕಿನ ಗೌರವ ಮತ್ತು ಎಸ್‌ಐಆರ್‌ ಕುರಿತ ಆಕ್ಷೇಪಗಳ ಪರಿಹಾರಕ್ಕಾಗಿ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

ಮುಂದಿನ ಹಂತದ ಹೋರಾಟದ ಕಾರ್ಯಕ್ರಮಗಳು ಮತ್ತು ರೂಪುರೇಷೆಗಳನ್ನು ಅಂತಿಮಗೊಳಿಸಲು ಅಕ್ಟೋಬರ್‌ 26ರಂದು ಅಖಿಲ ಭಾರತ ಸಮನ್ವಯ ಸಭೆ ನಡೆಯಲಿದೆ. ಸಭೆಯ ತೀರ್ಮಾನಗಳನ್ನು ಅಕ್ಟೋಬರ್‌ 27ರಂದು ಪ್ರಕಟಿಸಲಾಗುವುದು ಎಂದು ಒಕ್ಕೂಟ ತಿಳಿಸಿದೆ.

ರೈತರು, ದಲಿತರು, ಯುವಜನರು, ಕಾರ್ಮಿಕರು, ವಿದ್ಯಾರ್ಥಿಗಳು, ವಿವಿಧ ಜನಪರ ಸಂಘಟನೆಗಳು ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆ ಹೊಂದಿರುವ ನಾಗರಿಕರು ಒಗ್ಗಟ್ಟಿನಿಂದ ಇನ್ನಷ್ಟು ವಿಶಾಲವಾದ ಹೋರಾಟಗಳನ್ನು ನಡೆಸಲು ಸಜ್ಜಾಗಬೇಕು ಎಂದು ಎಸ್‌ಐಆರ್‌ ವಿರೋಧಿ ಒಕ್ಕೂಟದ ಪರವಾಗಿ, ವಿ. ನಾಗರಾಜ್‌, ಯೂಸೂಫ್‌ ಕನ್ನಿ, ವೀರಸಂಗಯ್ಯ,  ಕೆ.ಮಹಂತೇಶ್‌ ಮತ್ತು ಸೀತಾರಾಂ ಗುಂಡಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ : ಎಸ್‌ಐಆರ್‌ | ತಿರಂಗ ಹಿಡಿದು ರಸ್ತೆಗಿಳಿದ ಹೋರಾಟಗಾರರು: ಹತ್ತಿಕ್ಕಿದಷ್ಟೂ ಹುಟ್ಟಲಿವೆ ಸಾವಿರಾರು ಜಂತರ್ ಮಂತರ್!

 

Donate Janashakthi Media

Leave a Reply

Your email address will not be published. Required fields are marked *