ಹಂಪಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ಮಹಿಳೆಯರ ಬದುಕು, ಬವಣೆ, ಶ್ರಮ, ಹೋರಾಟ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಒನಕೆ ಓಬವ್ವೆ ಅಧ್ಯಯನ ಪೀಠ ಪ್ರಕಟಿಸಿರುವ “ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ” ಶೀರ್ಷಿಕೆಯಡಿ ಹೊರತಂದ 12 ಕೃತಿಗಳನ್ನು ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಬಿಡುಗಡೆ ಮಾಡಿದರು.
ಕೃತಿಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್, “ಈ ಪುಸ್ತಕಗಳು ಬಡವರು ಮತ್ತು ಶ್ರಮಿಕ ಮಹಿಳೆಯರ ಬದುಕಿನ ನೈಜ ಚಿತ್ರಣವನ್ನು ತೆರೆದಿಡುವ ಮಹತ್ವದ ಕೃತಿಗಳಾಗಿವೆ. ನಾನು ಈ 12 ಪುಸ್ತಕಗಳನ್ನು ಓದುತ್ತೇನೆ. ಅವುಗಳಲ್ಲಿ ದಾಖಲಾದ ಸಮಸ್ಯೆಗಳು, ಸಂಕಷ್ಟಗಳು ಮತ್ತು ಸವಾಲುಗಳಿಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ. ಅಗತ್ಯವಿರುವ ಕಡೆ ಅವರ ಮಕ್ಕಳ ಶಿಕ್ಷಣ ಹಾಗೂ ಅಭಿವೃದ್ಧಿಗೆ ನೆರವು ನೀಡಲು ಮುಂದಾಗುತ್ತೇನೆ” ಎಂದು ಹೇಳಿದರು.
“ಈ ಕೃತಿಗಳ ಕುರಿತು ವ್ಯಾಪಕ ಚರ್ಚೆ ನಡೆಯಬೇಕು. ಸಮಾಜದಲ್ಲಿ ಹೆಚ್ಚಿನ ಪ್ರಚಾರ ದೊರೆಯಬೇಕು. ದುಡಿಯುವ ಮಹಿಳೆಯರ ಬದುಕನ್ನು ದಾಖಲಿಸಿರುವ ಇಂತಹ ಮಹತ್ವದ ಕೃತಿಗಳಿಗೆ ಸರ್ಕಾರದಿಂದ ಅಗತ್ಯ ನೆರವು ಮತ್ತು ಪ್ರೋತ್ಸಾಹ ದೊರೆಯುವಂತೆ ಪ್ರಯತ್ನಿಸುತ್ತೇನೆ” ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಪ್ರಸಾರಾಂಗದ ನಿರ್ದೇಶಕ ಡಾ. ಪಿ. ಮಹಾದೇವಯ್ಯ ಹಾಗೂ ಒನಕೆ ಓಬವ್ವೆ ಅಧ್ಯಯನ ಪೀಠದ ಸಂಚಾಲಕ ಡಾ. ಎನ್. ಚಿನ್ನಸ್ವಾಮಿ ಸೋಸಲೆ, ಹಾಗೂ ಕೃತಿಯ ಲೇಖಕರು ಉಪಸ್ಥಿತರಿದ್ದರು.
ಬಿಡುಗಡೆಗೊಂಡ ಕೃತಿಗಳಲ್ಲಿ ಬೀದಿಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ಕಾರ್ಮಿಕರು, ಮೀನುಗಾರಿಕಾ ಕ್ಷೇತ್ರದ ಮಹಿಳೆಯರು, ಕೃಷಿಕೂಲಿ ಕಾರ್ಮಿಕರು, ಬುಡಕಟ್ಟು ಮಹಿಳೆಯರು, ಪೌರಕಾರ್ಮಿಕರು, ಮನೆ ಮತ್ತು ಮಾಲ್ಗಳಲ್ಲಿ ದುಡಿಯುವ ಮಹಿಳೆಯರು, ಪತ್ರಿಕೋದ್ಯಮ ಕ್ಷೇತ್ರದ ಮಹಿಳೆಯರು ಸೇರಿದಂತೆ ವಿವಿಧ ವಲಯಗಳ ಮಹಿಳೆಯರ ಬದುಕಿನ ಚಿತ್ರಣವನ್ನು ದಾಖಲಿಸಲಾಗಿದೆ. ದುಡಿಯುವ ಮಹಿಳೆಯರ ಧ್ವನಿ, ಅನುಭವ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಅರಿವನ್ನು ಸಮಾಜದ ಮುಂದೆ ತರುವ ಪ್ರಯತ್ನ ಈ ಕೃತಿಗಳ ಮೂಲಕ ಮಾಡಲಾಗಿದೆ.
ಪ್ರಕಟಗೊಂಡ 12 ಕೃತಿಗಳು:
1. ಬೀದಿಬದಿ ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆಯರು* – ಡಾ. ಬಿ.ವಿ. ಸುನೀತಾ
2. ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮಹಿಳೆಯರು– ಡಾ. ಆರ್. ಪ್ರತಿಭಾ
3. ಮೀನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರು – ಕೆ. ಸತ್ಯವತಿ
4. ಅಲೆಮಾರಿ ಮಹಿಳೆಯರು – ಡಾ. ಅಮ್ಮಸಂದ್ರ ಸುರೇಶ್
5. ದುಡಿಯುವ ಮಹಿಳೆಯರು: ವಸ್ತುನಿಷ್ಠ ಚಿಂತನೆ – ಯಮುನಾ ಗಾಂವ್ಕರ್
6. ಕೃಷಿಕೂಲಿ ಕಾರ್ಮಿಕ ಮಹಿಳೆಯರು – ಎಸ್.ಸಿ. ಶೈಲಜಾ ಅಶ್ವಥ್ (ಕೋಲಾರ)
7. ಗುಡಿ ಕೈಗಾರಿಕೆಯಲ್ಲಿ ಮಹಿಳೆಯರು – ಕೆ. ಶಾಂತಕುಮಾರಿ
8. ಬುಡಕಟ್ಟು ಸಮುದಾಯದ ಮಹಿಳೆಯರು – ಡಾ. ರಾಧಿಕಾ ಕುಟ್ಟಪ್ಪ
9.ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರು – ಸಿ.ಜಿ. ಮಂಜುಳಾ
10. ಪೌರಕಾರ್ಮಿಕ ಮಹಿಳೆಯರು – ಡಾ. ಮಣಿಕಂಠ ಹಂಗಳ
11. ಕೊರಗ ಸಮುದಾಯದ ಮಹಿಳೆಯರು – ಡಾ. ಕೃಷ್ಣಪ್ಪ ಕೊಂಚಾಡಿ
12. ಮನೆ-ಮಾಲ್ಗಳಲ್ಲಿ ದುಡಿಯುವ ಮಹಿಳೆಯರು – ಗುರುರಾಜ ದೇಸಾಯಿ
