ಹಾಸನ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಕೋಟ್ಯಂತರ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದ್ದು, ಪ್ರತಿಯೊಬ್ಬ ನಾಗರಿಕರ ಸಂವಿಧಾನಬದ್ಧ ಮತದಾನದ ಹಕ್ಕು ರಕ್ಷಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಸಿಪಿಐ(ಎಂ) ಹಾಗೂ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಒತ್ತಾಯಿಸಿವೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಗಳು, ದೇಶಾದ್ಯಂತ “ವಿಶೇಷ ತೀವ್ರ ಪರಿಷ್ಕರಣೆ” ಹೆಸರಿನಲ್ಲಿ ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಹೊಸದಾಗಿ ರೂಪಿಸಲು ಚುನಾವಣಾ ಆಯೋಗ ಮುಂದಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿವೆ.
ಪೌರತ್ವವನ್ನು ಮತದಾರರೇ ದಾಖಲೆಗಳ ಮೂಲಕ ಸಾಬೀತುಪಡಿಸಬೇಕೆಂಬ ರೀತಿಯಲ್ಲಿ ಪ್ರಕ್ರಿಯೆ ರೂಪಿಸಲಾಗಿದ್ದು, ಮ್ಯಾಚಿಂಗ್ ಮತ್ತು ಮ್ಯಾಪಿಂಗ್ ಹಂತದಲ್ಲಿಯೇ ದೊಡ್ಡ ಸಂಖ್ಯೆಯ ಮತದಾರರು ಹೊರಗುಳಿಯುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ರಾಜ್ಯದಲ್ಲಿ ಜೂನ್ 30ರಿಂದ ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಲಿದ್ದು, ಇದರಿಂದ ಬಡವರು, ಕೂಲಿಕಾರರು, ವಲಸೆ ಕಾರ್ಮಿಕರು, ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಜನರು ಹೆಚ್ಚು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಲಾಗಿದೆ.
ಇದನ್ನೂ ಓದಿ: ವಿದೇಶಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಬೇಡಿಕೆ: ಕರ್ನಾಟಕಕ್ಕೆ ‘NRI ಸಚಿವಾಲಯ’ ಸ್ಥಾಪನೆಗೆ ಒತ್ತಾಯ
ಜನತಾ ಪ್ರಾತಿನಿಧ್ಯ ಕಾಯ್ದೆ-1950 ಹಾಗೂ ಮತದಾರರ ನೋಂದಣಿ ನಿಯಮಗಳು-1960ರ ಅಡಿಯಲ್ಲಿ “ವಿಶೇಷ ತೀವ್ರ ಪರಿಷ್ಕರಣೆ”ಗೆ ಅವಕಾಶವಿಲ್ಲ ಎಂಬುದು ಸಂಘಟನೆಗಳ ಅಭಿಪ್ರಾಯವಾಗಿದೆ. ಚುನಾವಣಾ ಆಯೋಗ ಕೇಳುತ್ತಿರುವ ದಾಖಲೆಗಳನ್ನು ಪೌರತ್ವದ ದಾಖಲೆಗಳೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿಲ್ಲ. ಆದರೂ ಲಕ್ಷಾಂತರ ಜನರಿಗೆ ಅವುಗಳನ್ನು ಒದಗಿಸುವುದು ಕಷ್ಟಕರವಾಗಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ “ತಾರ್ಕಿಕ ವ್ಯತ್ಯಾಸ” (Logical Discrepancies) ಎಂಬ ಹೊಸ ಮಾನದಂಡವನ್ನು ಅಳವಡಿಸಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಹೆಸರುಗಳಲ್ಲಿನ ಅಕ್ಷರದೋಷ, ವಯಸ್ಸಿನ ವ್ಯತ್ಯಾಸ, ಅಂತರ್ಜಾತಿ ಅಥವಾ ಅಂತರ್ಧರ್ಮೀಯ ವಿವಾಹಗಳು ಸೇರಿದಂತೆ ವಿವಿಧ ಕಾರಣಗಳಿಂದ ಮತದಾರರು ಪಟ್ಟಿಯಿಂದ ಕೈಬಿಡಲ್ಪಡುವ ಅಪಾಯವಿದೆ ಎಂದು ಸಂಘಟನೆಗಳು ಆರೋಪಿಸಿವೆ.

ರಾಜ್ಯ ಸರ್ಕಾರವು ಮತದಾನದ ಹಕ್ಕು ರಕ್ಷಿಸುವ ನಿಟ್ಟಿನಲ್ಲಿ ಯಾರ ಹೆಸರನ್ನೂ ದಾಖಲೆಗಳ ಕೊರತೆಯ ನೆಪದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡದಂತೆ ಕ್ರಮವಹಿಸಬೇಕು, ಅಗತ್ಯ ದಾಖಲೆಗಳನ್ನು ಪಡೆಯಲು ನಿಯಮಗಳನ್ನು ಸರಳಗೊಳಿಸಬೇಕು, “ತಾರ್ಕಿಕ ವ್ಯತ್ಯಾಸ” ಮಾನದಂಡವನ್ನು ಕೈಬಿಡುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಬೇಕು, ಮತದಾರರ ಸೇವಾ ಕೇಂದ್ರಗಳನ್ನು ಆರಂಭಿಸಬೇಕು ಹಾಗೂ ಎಸ್‌ಐಆರ್ ಪ್ರಕ್ರಿಯೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್‌ಕುಮಾರ್, ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ದಲಿತ ಮುಖಂಡ ರಾಜಶೇಖರ ಹುಲಿಕಲ್, ಸಿಪಿಐ ಮುಖಂಡ ಎಂ.ಸಿ. ಡೋಂಗ್ರ, ಡಿಹೆಚ್‌ಎಸ್ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ, ಪತ್ರಕರ್ತ ಅತಿಕ್ ಉರ್ ರೆಹಮಾನ್, ಸಂವಿಧಾನ ಓದು ರಾಜು ಗೊರೂರು, ಟಿಪ್ಪು ಸಂಘರ್ಷ ಸಮಿತಿಯ ಮುಬಷಿರ್ ಅಹಮದ್, ಅನ್ಸರ್, ಪರಮಶಿವಯ್ಯ, ಮಂಜು, ಸಮೀರ್, ಮುನಿಸ್ವಾಮಿ, ಉಮೇಶ್ ಹಾಗೂ ರಾಮು ನರಸಿನಕುಪ್ಪೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ನೋಡಿ: SIR ತೀರ್ಪಿನ ಒಳನೋಟ: ಸಂವಿಧಾನ, ನಾಗರಿಕತ್ವ ಮತ್ತು ಮತದಾನದ ಹಕ್ಕು |ಜಸ್ಟೀಸ್ ಗೋಪಾಲಗೌಡ
