ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು, ರೈತರು, ಕಾರ್ಮಿಕರು, ಗ್ರಾಹಕ ಸಂಘಟನೆಗಳು ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಆಕ್ಷೇಪಣೆ ಸಲ್ಲಿಸಬೇಕು ಎಂದು ರಾಜ್ಯ ಮಟ್ಟದ ಸಮಾವೇಶ ಕರೆ ನೀಡಿದೆ. ಟಾಟಾ
ಜೂನ್ 21ರಂದು ಎಡಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ(ಎಲ್), ಆಮ್ ಆದ್ಮಿ ಪಕ್ಷ (ಎಎಪಿ), ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಹಾಗೂ ವಿದ್ಯುತ್ ನೌಕರರ ಸಂಘಟನೆಗಳು ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಟಾಟಾ ಪವರ್ಗೆ ಪರವಾನಗಿ ನೀಡಿದರೆ ರಾಜ್ಯದ ಸಾರ್ವಜನಿಕ ವಿದ್ಯುತ್ ವಿತರಣಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಸಮಾವೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಖಾಸಗಿ ಕಂಪನಿಗಳ ಪ್ರವೇಶದಿಂದ ಕ್ರಾಸ್ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಂಡು ರೈತರು, ಗೃಹ ಬಳಕೆದಾರರು, ಸಣ್ಣ ಕೈಗಾರಿಕೆಗಳು ಹಾಗೂ ಮಧ್ಯಮ ವರ್ಗದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಆತಂಕ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ: KPCC ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ
ಪ್ರಸ್ತುತ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಗಂಭೀರ ಕೊರತೆ ಇಲ್ಲದಿರುವಾಗ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವ ಅಗತ್ಯವಿಲ್ಲ ಎಂದು ಸಮಾವೇಶ ಅಭಿಪ್ರಾಯಪಟ್ಟಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ವಿದ್ಯುತ್ ಮೂಲಸೌಕರ್ಯವನ್ನು ಖಾಸಗಿ ಕಂಪನಿಗಳು ಬಳಸಿಕೊಂಡು ಲಾಭ ಗಳಿಸುವ ಅವಕಾಶ ಸೃಷ್ಟಿಯಾಗಲಿದೆ ಎಂಬ ಆಕ್ಷೇಪಣೆಯೂ ವ್ಯಕ್ತವಾಗಿದೆ.
ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಖಾಸಗೀಕರಣ ಹೆಚ್ಚಾದರೆ ಭವಿಷ್ಯದಲ್ಲಿ ವಿದ್ಯುತ್ ದರ ಏರಿಕೆ, ಕೃಷಿ ಪಂಪ್ಸೆಟ್ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ವ್ಯವಸ್ಥೆಯ ಮೇಲೆ ಪರಿಣಾಮ, ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಗುಣಮಟ್ಟ ಕುಸಿತ ಹಾಗೂ ಸಾರ್ವಜನಿಕ ವಿತರಣಾ ಸಂಸ್ಥೆಗಳ ಹಣಕಾಸು ಸ್ಥಿರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಸಮಾವೇಶದಲ್ಲಿ ಎಚ್ಚರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಮಾದರಿ ತಕರಾರು ಅರ್ಜಿಯೊಂದನ್ನು ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ತಮ್ಮ ಹೆಸರು ಮತ್ತು ವಿವರಗಳನ್ನು ಸೇರಿಸಿ ಕೆಇಆರ್ಸಿಗೆ ಸಲ್ಲಿಸಬಹುದಾಗಿದೆ.
ತಕರಾರು ಅರ್ಜಿ ಸಲ್ಲಿಸಲು ಜೂನ್ 23ರ ಸಂಜೆ 5 ಗಂಟೆಯವರೆಗೆ ಅವಕಾಶವಿದೆ.
ಅರ್ಜಿಗಳನ್ನು ಕೆಳಗಿನ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ಕಳುಹಿಸಬಹುದು:
ಕಾರ್ಯದರ್ಶಿಗಳು,
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ),
ನಂ.16ಸಿ-1, ಮಿಲ್ಲರ್ಸ್ ರಸ್ತೆ,
ಕಾವೇರಪ್ಪ ಲೇಔಟ್, ವಸಂತನಗರ,
ಬೆಂಗಳೂರು – 560052
ಅಥವಾ ಇ-ಮೇಲ್ ಮೂಲಕವೂ ಸಲ್ಲಿಸಬಹುದು.
ಇ-ಮೇಲ್: [email protected]
ವಿದ್ಯುತ್ ವಿತರಣಾ ವ್ಯವಸ್ಥೆ, ಗ್ರಾಹಕರ ಹಿತಾಸಕ್ತಿ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿರುವುದರಿಂದ ಸಾರ್ವಜನಿಕರು ತಮ್ಮ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸಬೇಕು ಎಂದು ಸಮಾವೇಶ ಮನವಿ ಮಾಡಿದೆ.
ಇದನ್ನೂ ನೋಡಿ: “ಟಾಟಾ ಕಂಪನಿಗೆ ವಿದ್ಯುತ್, ಜನತೆಗೆ ಕಾದಿದೆ ಆಪತ್ತು? | ವಿದ್ಯುತ್ ಖಾಸಗೀಕರಣ ವಿರುದ್ಧ ಸಮಾವೇಶ” Janashakthi Media
