ಹಂಪಿ: ಕನ್ನಡ ವಿಶ್ವವಿದ್ಯಾಲಯದ ಒನಕೆ ಓಬವ್ವೆ ಅಧ್ಯಯನ ಪೀಠದ ವತಿಯಿಂದ ಪ್ರಕಟಿಸಲಾಗಿರುವ ‘ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ’ ಶೀರ್ಷಿಕೆಯ 12 ಕೃತಿಗಳ ಬಿಡುಗಡೆ ಸಮಾರಂಭ ಜೂನ್ 23ರಂದು ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ನಡೆಯಲಿದೆ. ‘ಬದುಕಿನ
ಬೆಳಿಗ್ಗೆ 11 ಗಂಟೆಗೆ ಆರಂಭವಾಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ವಹಿಸಲಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಹಾಗೂ ಪ್ರಸಾರಾಂಗದ ನಿರ್ದೇಶಕ ಡಾ. ಪಿ. ಮಹಾದೇವಯ್ಯ ಉಪಸ್ಥಿತರಿರುವರು. ಒನಕೆ ಓಬವ್ವೆ ಅಧ್ಯಯನ ಪೀಠದ ಸಂಚಾಲಕ ಡಾ. ಎನ್. ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದಲ್ಲಿ ಒಂದು ದಶಕದ ಹಿಂದೆ ಸ್ಥಾಪನೆಯಾದ ಒನಕೆ ಓಬವ್ವೆ ಅಧ್ಯಯನ ಪೀಠವು ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ಮಹಿಳೆಯರ ಬದುಕು, ಬವಣೆ, ಸಾಂಸ್ಕೃತಿಕ ಸವಾಲುಗಳು ಮತ್ತು ಅವರ ಹಕ್ಕುಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳು, ಕಮ್ಮಟಗಳು ಮತ್ತು ಕ್ಷೇತ್ರ ಅಧ್ಯಯನಗಳ ಮೂಲಕ ದುಡಿಯುವ ಮಹಿಳೆಯರಲ್ಲಿ ಸಂವಿಧಾನಾತ್ಮಕ ಪ್ರಜ್ಞೆ ಮೂಡಿಸುವ ಕೆಲಸವನ್ನು ಪೀಠ ನಿರಂತರವಾಗಿ ಕೈಗೊಂಡಿದೆ.
ಇದನ್ನೂ ಓದಿ : ಆರ್‌ಎಸ್‌ಎಸ್ ನೋಂದಣಿ, ಹಣಕಾಸು ವಿವರ ಬಹಿರಂಗಪಡಿಸುವಂತೆ ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ
ಈ ಹಿನ್ನೆಲೆಯಲ್ಲಿ ವಿವಿಧ ವೃತ್ತಿ ಮತ್ತು ಸಮುದಾಯಗಳಲ್ಲಿ ದುಡಿಯುತ್ತಿರುವ ಮಹಿಳೆಯರ ಬದುಕಿನ ಹೋರಾಟ, ಶ್ರಮ, ಸಮಸ್ಯೆಗಳು ಹಾಗೂ ಸವಾಲುಗಳನ್ನು ದಾಖಲಿಸುವ ಉದ್ದೇಶದಿಂದ 12 ಕೃತಿಗಳನ್ನು ಪ್ರಕಟಿಸಲಾಗಿದೆ. ಆಯಾ ಕ್ಷೇತ್ರಗಳ ಪರಿಣಿತರು ಈ ಕೃತಿಗಳನ್ನು ರಚಿಸಿದ್ದಾರೆ.
ಬಿಡುಗಡೆಯಾಗಲಿರುವ ಕೃತಿಗಳು ಮತ್ತು ಲೇಖಕರು ಹೀಗಿದ್ದಾರೆ:
- ಬೀದಿಬದಿ ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆಯರು – ಡಾ. ಬಿ.ವಿ. ಸುನೀತಾ
- ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮಹಿಳೆಯರು – ಡಾ. ಆರ್. ಪ್ರತಿಭಾ
- ಮೀನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರು – ಕೆ. ಸತ್ಯವತಿ
- ಅಲೆಮಾರಿ ಮಹಿಳೆಯರು – ಡಾ. ಅಮ್ಮಸಂದ್ರ ಸುರೇಶ್
- ದುಡಿಯುವ ಮಹಿಳೆಯರು: ವಸ್ತುನಿಷ್ಠ ಚಿಂತನ – ಯಮುನಾ ಗಾಂವ್ಕರ್
- ಕೃಷಿಕೂಲಿ ಕಾರ್ಮಿಕ ಮಹಿಳೆಯರು – ಎಸ್.ಸಿ. ಶೈಲಜಾ ಅಶ್ವಥ್, ಕೋಲಾರ
- ಗುಡಿ ಕೈಗಾರಿಕೆಯಲ್ಲಿ ಮಹಿಳೆಯರು – ಕೆ. ಶಾಂತಕುಮಾರಿ
- ಬುಡಕಟ್ಟು ಸಮುದಾಯದ ಮಹಿಳೆಯರು – ಡಾ. ರಾಧಿಕಾ ಕುಟ್ಟಪ್ಪ
- ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಿಳೆಯರು – ಸಿ.ಜಿ. ಮಂಜುಳಾ
- ಪೌರಕಾರ್ಮಿಕ ಮಹಿಳೆಯರು – ಡಾ. ಮಣಿಕಂಠ ಹಂಗಳ
- ಕೊರಗ ಸಮುದಾಯದ ಮಹಿಳೆಯರು – ಡಾ. ಕೃಷ್ಣಪ್ಪ ಕೊಂಚಾಡಿ
- ಮನೆ-ಮಾಲ್‌ಗಳಲ್ಲಿ ದುಡಿಯುವ ಮಹಿಳೆಯರು – ಗುರುರಾಜ ದೇಸಾಯಿ
ದುಡಿಯುವ ಮಹಿಳೆಯರ ಜೀವನಾನುಭವಗಳು, ಉದ್ಯೋಗ ಕ್ಷೇತ್ರದಲ್ಲಿನ ಶೋಷಣೆ, ಸಾಮಾಜಿಕ ಅಸಮಾನತೆ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಈ ಕೃತಿಗಳು ಬೆಳಕು ಚೆಲ್ಲಲಿದ್ದು, ಮಹಿಳಾ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಲಿವೆ ಎಂದು ಡಾ. ಚಿನ್ನಸ್ವಾಮಿ ಸೋಸಲೆ ತಿಳಿಸಿದ್ದಾರೆ.
ಇದನ್ನೂ ನೋಡಿ : ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ
