ಬೆಂಗಳೂರು: ಜಿಲ್ಲಾ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಹೆಚ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಸೂಚನೆಗಳನ್ನು ನೀಡಿದ್ದಾರೆ. ಗಂಟೆ
ವಿಧಾನಸೌಧದಲ್ಲಿ ಹಿರಿಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ಎಲ್ಲಾ ಅಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅಧಿಕಾರಿಗಳು ಜಿಲ್ಲಾ ಕೇಂದ್ರ ಕಚೇರಿಗೆ ಹಾಜರಾಗಿರುವ ಮಾಹಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ತಕ್ಷಣ ತಿಳಿಯುವಂತೆ ವ್ಯವಸ್ಥೆ ಇರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಮಧ್ಯರಾತ್ರಿ ದಾಳಿ – ಕಾರ್ಯದರ್ಶಿಗಾಗಿ ಶೋಧ
ಇದಲ್ಲದೆ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳು ಅವರ ಕಚೇರಿಗಳಲ್ಲಿಯೂ ಹಾಗೂ ಸಂಬಂಧಿತ ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಬೇಕು ಎಂದು ಸೂಚಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ಒತ್ತು
ಒಂದೇ ಜಿಲ್ಲೆ ಅಥವಾ ಕಚೇರಿಯಲ್ಲಿನ ಪ್ರಮುಖ ಹುದ್ದೆಗಳಲ್ಲಿ ಒಂದೇ ಜಾತಿಯ ಅಧಿಕಾರಿಗಳು ಇರುವಂತಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿಯೂ ಸಾಮಾಜಿಕ ನ್ಯಾಯ ಪ್ರತಿಬಿಂಬಿಸಬೇಕು. ವಿವಿಧ ಜಾತಿ ಮತ್ತು ಧರ್ಮಗಳ ಪ್ರತಿನಿಧಿತ್ವ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಅಧಿಕಾರಿಗಳ ಮಟ್ಟದಲ್ಲಿ ಜಾತಿ ಆಧಾರಿತ ಲಾಬಿಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಜನಸಂಪರ್ಕ ಸಭೆಗಳು ಕಡ್ಡಾಯ
ಪ್ರತಿ ತಾಲೂಕಿನಲ್ಲಿಯೂ ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಪ್ರತಿ ಹೋಬಳಿ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಜನಸಂಪರ್ಕ ಸಭೆಗಳನ್ನು ನಿಯಮಿತವಾಗಿ ನಡೆಸುವಂತೆ ಸೂಚನೆ ನೀಡಿದ್ದಾರೆ.
ಜನರ ಸಮಸ್ಯೆಗಳು ಸ್ಥಳೀಯ ಮಟ್ಟದಲ್ಲಿಯೇ ಪರಿಹಾರವಾಗಬೇಕು. ಸಣ್ಣಸಣ್ಣ ವಿಷಯಗಳಿಗಾಗಿ ಮುಖ್ಯಮಂತ್ರಿಗಳ ಕಚೇರಿವರೆಗೆ ದೂರುಗಳು ಬರಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ, ಎಲ್ಲಾ ಜಿಲ್ಲೆಗಳಿಗೂ ಸ್ವತಃ ಭೇಟಿ ನೀಡಿ ಕಾರ್ಯಪದ್ಧತಿ ಪರಿಶೀಲನೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ.
ಇದನ್ನೂ ನೋಡಿ: ಪಿಟಿಸಿಎಲ್ ಕಾಯ್ದೆ ಜಾರಿಯಲ್ಲಿ ವೈಫಲ್ಯ? ದಲಿತ ಭೂಹಕ್ಕುಗಳ ಬಗ್ಗೆ ಹೆಚ್ಚಿದ ಆತಂಕ | ಜಸ್ಟೀಸ್ ವಿ.ಗೋಪಾಲಗೌಡ
