ಬೆಂಗಳೂರು: ಬೆಂಗಳೂರಿನ ಸರ್ಕಾರಿ ಆಹಾರ ಗೋದಾಮುಗಳಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಲೋಕಾಯುಕ್ತ ದಾಳಿಯಲ್ಲಿ ಬಹಿರಂಗವಾಗಿದೆ. ನಗರ ಮತ್ತು ಗ್ರಾಮಾಂತರ ಭಾಗಗಳ ಒಟ್ಟು 27 ಗೋದಾಮುಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು, ಪಡಿತರ ಅಕ್ಕಿ ಹಾಗೂ ಆಹಾರ ಧಾನ್ಯಗಳ ವಿತರಣೆಯಲ್ಲಿ ದೊಡ್ಡ ಮಟ್ಟದ ಗೊಂದಲ ಮತ್ತು ಕಳ್ಳಾಟವನ್ನು ಪತ್ತೆಹಚ್ಚಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಹಾಗೂ ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರು ನಗರದ 22 ಹಾಗೂ ಗ್ರಾಮಾಂತರದ 5 ಗೋದಾಮುಗಳಲ್ಲಿ ಪರಿಶೀಲನೆ ನಡೆಯಿತು.
ಶಾಂತಿನಗರದ ಗೋದಾಮಿನಲ್ಲಿ ದಾಖಲೆಗಳು ಮತ್ತು ವಾಸ್ತವ ದಾಸ್ತಾನಿನ ನಡುವೆ ಭಾರೀ ವ್ಯತ್ಯಾಸ ಕಂಡುಬಂದಿದ್ದು, ಸುಮಾರು 1,130 ಅಕ್ಕಿ ಮೂಟೆಗಳ ಲೆಕ್ಕ ಸರಿ ಕಾಣಿಸಲಿಲ್ಲ. ಸಂಬಂಧಿತ ಅಧಿಕಾರಿಗಳು ಸ್ಪಷ್ಟ ಉತ್ತರ ನೀಡಲು ವಿಫಲರಾದರು. ಅಲ್ಲದೆ, ಅಪಾಯಕರ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಜೀವ ವಿಮೆ ಸೌಲಭ್ಯವೂ ಕಲ್ಪಿಸದಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಮಧ್ಯರಾತ್ರಿ ದಾಳಿ – ಕಾರ್ಯದರ್ಶಿಗಾಗಿ ಶೋಧ
ಬೆಂಗಳೂರು ದಕ್ಷಿಣದ ಬೊಬ್ಬನಹಳ್ಳಿ ಗೋದಾಮಿನಲ್ಲಿ ದಾಳಿಯ ವೇಳೆ ಉಸ್ತುವಾರಿ ಅಧಿಕಾರಿ ಗೈರುಹಾಜರಾಗಿದ್ದು, ಸ್ಥಳದಲ್ಲಿದ್ದ ಸಿಬ್ಬಂದಿ ಸರಿಯಾದ ಮಾಹಿತಿ ನೀಡಲು ವಿಫಲರಾದರು. ಇದೇ ವೇಳೆ ನಿಯಮ ಉಲ್ಲಂಘನೆ ಮಾಡಿ ಲಾರಿಗೆ 25 ಟನ್ ಅಕ್ಕಿ ಲೋಡ್ ಮಾಡಲಾಗುತ್ತಿದ್ದುದೂ ಪತ್ತೆಯಾಗಿದೆ.
ಬಸವನಗುಡಿ ಹಾಗೂ ಹನುಮಂತನಗರದ ಗೋದಾಮುಗಳಲ್ಲಿಯೂ ದಾಖಲೆಗಳಿಗಿಂತ ಕಡಿಮೆ ಪ್ರಮಾಣದ ಧಾನ್ಯ ಸಂಗ್ರಹ ಪತ್ತೆಯಾಗಿದ್ದು, ದುರಪಯೋಗ ನಡೆದಿರುವ ಅನುಮಾನ ಗಟ್ಟಿಯಾಗಿದೆ. ಅಧಿಕಾರಿಗಳ ಬಳಿ ಇದ್ದ ನಗದಿಗೆ ಸರಿಯಾದ ದಾಖಲೆಗಳಿಲ್ಲದಿರುವುದು ಮತ್ತಷ್ಟು ಅನುಮಾನ ಹುಟ್ಟಿಸಿದೆ.
ಇದಲ್ಲದೆ, ಹಲವೆಡೆ ಹಮಾಲಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳಾದ ಜೀವ ವಿಮೆ, ಇಎಸ್ಐ ಹಾಗೂ ಪಿಎಫ್ ನೀಡದೇ ಕಾರ್ಮಿಕ ಕಾನೂನು ಉಲ್ಲಂಘನೆ ನಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ನೋಡಿ: “ಅನ್ನದಾತನ ಬೆನ್ನಿಗೆ ಚೂರಿ? ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಒಂದೇ ನಿಲುವೇ?” | ಬಸವರಾಜ | ಗುರುರಾಜ ದೇಸಾಯಿ
