‘ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದೀರಿ’: ರೋಹಿಣಿ–ರೂಪಾ ವಿವಾದಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್

ನವದೆಹಲಿ: ಕರ್ನಾಟಕದ ಇಬ್ಬರು ಹಿರಿಯ ಅಧಿಕಾರಿಗಳಾದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವೆ ನಡೆಯುತ್ತಿರುವ ಮಾನನಷ್ಟ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ತಾತ್ಕಾಲಿಕ ತಡೆ ನೀಡಿದೆ. ಜೊತೆಗೆ, ದೀರ್ಘಕಾಲದಿಂದ ಮುಂದುವರಿದಿರುವ ಈ ವಿವಾದವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವೃತ್ತಿಜೀವನ

ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ಸಚ್‌ದೇವ ಅವರಿದ್ದ ವಿಭಾಗೀಯ ಪೀಠ, “ಇಬ್ಬರೂ ಸಮರ್ಥ ಅಧಿಕಾರಿಗಳಾಗಿದ್ದರೂ, ನಿರಂತರ ಕಾನೂನು ಹೋರಾಟವು ಅವರ ವೃತ್ತಿಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ದೀರ್ಘಕಾಲದ ವಿಚಾರಣೆಗೆ ಬದಲು ಪರಸ್ಪರ ಮಾತುಕತೆ ಮೂಲಕ ವಿವಾದ ಪರಿಹಾರವೇ ಸೂಕ್ತ ಮಾರ್ಗ” ಎಂದು ಅಭಿಪ್ರಾಯಪಟ್ಟಿದೆ. ವೃತ್ತಿಜೀವನ

ಮಧ್ಯಸ್ಥಿಕೆಗೆ ನಿವೃತ್ತ ನ್ಯಾಯಮೂರ್ತಿ

ಈ ಪ್ರಕರಣವನ್ನು ಸೌಹಾರ್ದಯುತವಾಗಿ ಅಂತ್ಯಗೊಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ತನ್ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿದೆ.

ಇದನ್ನೂ ಓದಿ: ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ: ಅಖಿಲೇಶ್ ಯಾದವ್ ಬಿಜೆಪಿ ವಿರುದ್ಧ ವಾಗ್ದಾಳಿ

ಇಬ್ಬರೂ ಅಧಿಕಾರಿಗಳು ಅವರ ಮುಂದೆ ಹಾಜರಾಗಿ ಮಾತುಕತೆ ನಡೆಸಬೇಕೆಂದು ಕೋರ್ಟ್ ಸೂಚಿಸಿದ್ದು, ಅದುವರೆಗೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಮುಂದಿನ ಕ್ರಮಗಳಿಗೆ ಮಧ್ಯಂತರ ತಡೆ ನೀಡಲಾಗಿದೆ.

ವಿವಾದದ ಹಿನ್ನೆಲೆ

ಈ ವಿವಾದವು ಫೆಬ್ರವರಿ 2023ರಲ್ಲಿ ಆರಂಭವಾಗಿದ್ದು, ಡಿ. ರೂಪಾ ಮೌದ್ಗಿಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಆಸ್ತಿ ವಿವರ, ನಿಯಮ ಉಲ್ಲಂಘನೆ ಸೇರಿದಂತೆ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿ ಅವರು ಟೀಕೆ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ರೋಹಿಣಿ ಸಿಂಧೂರಿ ಅವರು ಆರೋಪಗಳನ್ನು ತಳ್ಳಿ ಹಾಕಿ, ಮಾನಹಾನಿ ಆಗಿದೆ ಎಂದು ಆರೋಪಿಸಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಜೊತೆಗೆ ಪರಿಹಾರವಾಗಿ 1 ಕೋಟಿ ರೂಪಾಯಿ ಹಾಗೂ ಕ್ಷಮೆಯಾಚನೆಗೆ ಆಗ್ರಹಿಸಿದ್ದರು.

ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಅವರು ಹೈಕೋರ್ಟ್ ಮೊರೆ ಹೋದರೂ, ಅವರ ಅರ್ಜಿ ತಿರಸ್ಕೃತವಾಗಿತ್ತು. ನಂತರ ಇಬ್ಬರೂ ಪರಸ್ಪರ ಪ್ರತಿದೂರುಗಳನ್ನು ದಾಖಲಿಸಿದ್ದರು.

ದಿನೇ ದಿನೇ ತೀವ್ರಗೊಳ್ಳುತ್ತಿದ್ದ ಈ ವಿವಾದಕ್ಕೆ ಈಗ ಸುಪ್ರೀಂ ಕೋರ್ಟ್ ತಾತ್ಕಾಲಿಕ ಬ್ರೇಕ್ ಹಾಕಿದ್ದು, ಮಾತುಕತೆ ಮೂಲಕ ಅಂತಿಮ ಪರಿಹಾರ ಕಂಡುಕೊಳ್ಳಲು ದಾರಿ ತೆರೆದಿದೆ.

ಇದನ್ನೂ ನೋಡಿ: ದೇವದಾಸಿ ಮಕ್ಕಳಿಗೂ ತಂದೆಯ ಹೆಸರಿನ ಹಕ್ಕು: ದಶಕಗಳ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯ | ಬಿ. ಮಾಳಮ್ಮ | ಗುರುರಾಜ ದೇಸಾಯಿ

Donate Janashakthi Media

Leave a Reply

Your email address will not be published. Required fields are marked *