ನವದೆಹಲಿ: ನ್ಯೂಸ್ಕ್ಲಿಕ್ ಮತ್ತು ಅದರ ಪ್ರಧಾನ ಸಂಪಾದಕರಾದ ಪ್ರಬೀರ್ ಪುರ್ಕಾಯಸ್ಥ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (EOW) ದಾಖಲಿಸಿದ್ದ ಎಫ್ಐಆರ್ ಹಾಗೂ ಅದರ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ED) ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಭಾರತದ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಸ್ವಾಗತಿಸುತ್ತದೆ. ಈ ತೀರ್ಪು ರಾಜಕೀಯ ದ್ವೇಷ ಸಾಧನೆಗಾಗಿ ಸರ್ಕಾರಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವವರ ವಿರುದ್ಧದ ಕಠಿಣ ಎಚ್ಚರಿಕೆಯಾಗಿದೆ.
ದೇಶದ ಬಹುಪಾಲು ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್–ರಾಜಕೀಯ ಹಿತಾಸಕ್ತಿಗಳಿಗೆ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅಧಿಕಾರದಲ್ಲಿರುವವರನ್ನೂ ಹಾಗೂ ಅವರಿಗೆ ಬೆಂಬಲವಾಗಿರುವ ಕಾರ್ಪೊರೇಟ್ ಮನೆತನಗಳನ್ನೂ ಪ್ರಶ್ನಿಸುವ ನ್ಯೂಸ್ಕ್ಲಿಕ್ನಂತಹ ಧ್ವನಿಗಳು ತೀವ್ರ ದಾಳಿಗೆ ಒಳಗಾಗಿವೆ. ಜನರ ಹೋರಾಟಗಳನ್ನು ನಿರ್ಭೀತಿಯಾಗಿ ವರದಿ ಮಾಡಿದ್ದುದೇ ಈಗ ನ್ಯಾಯಾಲಯದಿಂದ ರದ್ದುಗೊಂಡಿರುವ ಈ ಸುಳ್ಳು ಆರೋಪಗಳಿಗೆ ಕಾರಣವಾಗಿತ್ತು.
ಇದನ್ನೂ ಓದಿ: FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್ಗೆ AI ಎಂಟ್ರಿ!
ವರ್ಷಪೂರ್ತಿ ನಡೆದ ರೈತರ ಐತಿಹಾಸಿಕ ಹೋರಾಟವನ್ನು ಸುದ್ದಿ, ವಿಶ್ಲೇಷಣೆ ಮತ್ತು ವೀಡಿಯೊಗಳ ಮೂಲಕ ನಿರಂತರವಾಗಿ ವರದಿ ಮಾಡಿದ ಕಾರಣದಿಂದ ನ್ಯೂಸ್ಕ್ಲಿಕ್ ಬಿಜೆಪಿಯ ನೇತೃತ್ವದ ಕೇಂದ್ರ ಸರ್ಕಾರದ ಕಣ್ಣಿಗೆ ಮುಳ್ಳಾಯಿತು. ಇದರ ಪರಿಣಾಮವಾಗಿ ಸುದ್ದಿ ಪೋರ್ಟಲ್ ವಿರುದ್ಧದ ದಾಳಿ ತೀವ್ರಗೊಂಡಿತು. ಜೊತೆಗೆ, ಪ್ರಬೀರ್ ಪುರ್ಕಾಯಸ್ಥ ಅವರ ಮೇಲೆ ದಮನಕಾರಿ ಯುಎಪಿಎ (UAPA) ಕಾಯ್ದೆಯನ್ನು ಹೇರಲಾಗಿದ್ದು, ಅವರನ್ನು ದೀರ್ಘಕಾಲ ಜೈಲಿನಲ್ಲಿರಿಸಲಾಯಿತು.
ಆರಂಭದಿಂದಲೇ ನ್ಯೂಸ್ಕ್ಲಿಕ್ ಮತ್ತು ಪ್ರಬೀರ್ ಪುರ್ಕಾಯಸ್ಥ ವಿರುದ್ಧ ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳು ಕೈಗೊಂಡ ಕ್ರಮಗಳು ವಿಮರ್ಶಾತ್ಮಕ ಪತ್ರಿಕೋದ್ಯಮವನ್ನು ಗುರಿಯಾಗಿಸಿ ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಂಚು ಎಂಬುದು ಸ್ಪಷ್ಟವಾಗಿತ್ತು. ಆದ್ದರಿಂದ, ಈ ತೀರ್ಪು ಪತ್ರಿಕಾ ಸ್ವಾತಂತ್ರ್ಯ ಮತ್ತು ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕುಗಳ ವಿಜಯವಾಗಿದೆ.
ಜಾರಿ ನಿರ್ದೇಶನಾಲಯದ ಪ್ರಕರಣವು “ಕಾನೂನಿನ ಪ್ರಕ್ರಿಯೆಯ ಘೋರ ದುರುಪಯೋಗ” ಎಂದು ದೆಹಲಿ ಹೈಕೋರ್ಟ್ ಸ್ಪಷ್ಟವಾಗಿ ಹೇಳಿರುವ ಹಿನ್ನೆಲೆಯಲ್ಲಿ, ನ್ಯೂಸ್ಕ್ಲಿಕ್ ಮತ್ತು ಪ್ರಬೀರ್ ಪುರ್ಕಾಯಸ್ಥ ವಿರುದ್ಧ ಕೇಂದ್ರ ಸರ್ಕಾರ ಹಾಗೂ ಅದರ ಅಧೀನದಲ್ಲಿರುವ ಸಂಸ್ಥೆಗಳು ದಾಖಲಿಸಿರುವ ಉಳಿದ ಎಲ್ಲಾ ಸುಳ್ಳು ಪ್ರಕರಣಗಳನ್ನು ಕೂಡ ತಕ್ಷಣವೇ ಹಿಂಪಡೆಯಬೇಕು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಇದನ್ನೂ ನೋಡಿ: FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್ಗೆ AI ಎಂಟ್ರಿ!
