ಪರೀಕ್ಷಾ ಅಕ್ರಮ ವಿರೋಧಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ: ‘ಎಕ್ಸಾಮ್ ಮ್ಯಾನಿಫೆಸ್ಟೋ’ ಬಿಡುಗಡೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (CJP) ಜೂನ್‌ 11ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ಆರಂಭಿಸಿದೆ. ಜೊತೆಗೆ ವಿದ್ಯಾರ್ಥಿಗಳ ರಕ್ಷಣೆಗೆ ಐದು ಅಂಶಗಳ ‘ಎಕ್ಸಾಮ್ ಮ್ಯಾನಿಫೆಸ್ಟೋ’ವನ್ನು ಪ್ರಕಟಿಸಿದೆ.

ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ ಪ್ರತಿಭಟನೆಗೆ ನೇತೃತ್ವ ವಹಿಸಿದ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ, NEET, CBSE ಮತ್ತು CUET ಮುಂತಾದ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸರ್ಕಾರ ಹೊಣೆಗಾರಿಕೆಯನ್ನು ಖಚಿತಪಡಿಸಲು ವಿಫಲವಾಗಿದೆ ಎಂದು ಆರೋಪಿಸಿದರು.

“ಈ ಚಳುವಳಿ ಆರಂಭವಾದ ದಿನದಿಂದಲೂ ನಮ್ಮ ಏಕೈಕ ಬೇಡಿಕೆ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ. ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗಿದ್ದಾರೆ, ಆದರೆ ಯಾರೂ ಹೊಣೆ ಹೊತ್ತು ರಾಜೀನಾಮೆ ನೀಡಲು ಸಿದ್ಧರಾಗಿಲ್ಲ,” ಎಂದು ದೀಪ್ಕೆ ಹೇಳಿದರು.

ಇದನ್ನೂ ಓದಿ: ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಅತಿಥಿ ಶಿಕ್ಷಕಿ ಅಮಾನತು

ಸಚಿವರು ರಾಜೀನಾಮೆ ನೀಡದಿದ್ದರೆ ಜೂನ್ 20ರಂದು ನವದೆಹಲಿ ಜಂತರ್ ಮಂತರ್‌ನಲ್ಲಿ ಮಹಾ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಐದು ಅಂಶಗಳ ಮ್ಯಾನಿಫೆಸ್ಟೋ ಪ್ರಕಟಣೆ

ಪ್ರತಿಭಟನೆಯ ಭಾಗವಾಗಿ, ವಿದ್ಯಾರ್ಥಿಗಳನ್ನು ಪರೀಕ್ಷಾ ಅಕ್ರಮಗಳಿಂದ ರಕ್ಷಿಸಲು ಅಗತ್ಯವಿರುವ ಸುಧಾರಣೆಗಳನ್ನು ಒಳಗೊಂಡ ಐದು ಅಂಶಗಳ ಮ್ಯಾನಿಫೆಸ್ಟೋವನ್ನು ಸಿಜೆಪಿ ಬಿಡುಗಡೆ ಮಾಡಿದೆ.

ಅವುಗಳೆಂದರೆ:

1. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ ಅಥವಾ ಫಲಿತಾಂಶ ವಿಳಂಬದಿಂದ ಬಾಧಿತರಾದ ವಿದ್ಯಾರ್ಥಿಗಳಿಗೆ ₹10,000 ಪರಿಹಾರ

2. ಪರೀಕ್ಷೆ ರದ್ದುಪಡಿಸಿದರೆ 72 ಗಂಟೆಗಳ ಒಳಗೆ ಪರ್ಯಾಯ ಪರೀಕ್ಷಾ ದಿನಾಂಕ ಕಡ್ಡಾಯ

3. ಪೇಪರ್ ಆಧಾರಿತ ಪರೀಕ್ಷೆಗಳಿಗೆ ಆನ್‌ಲೈನ್ ಮೌಲ್ಯಮಾಪನ ಬದಲು ಭೌತಿಕ ಮೌಲ್ಯಮಾಪನ

4. ವಿಳಂಬದಿಂದ ಬಾಧಿತರಾದ ಅಭ್ಯರ್ಥಿಗಳಿಗೆ ಸ್ವಯಂಚಾಲಿತ ವಯೋಮಿತಿ ಸಡಿಲಿಕೆ

5. ವಿಶೇಷವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳಿಗೆ ತಂತ್ರಜ್ಞಾನ ಮತ್ತು ಟೆಂಡರ್ ಪರಿಶೀಲನೆ ಕಡ್ಡಾಯ

ದೀಪ್ಕೆ ಅವರು ಪರೀಕ್ಷೆ ನಡೆಸುವ ಒಪ್ಪಂದಗಳನ್ನು ಕಡ್ಡಾಯವಾಗಿ ಅರ್ಹತೆಯ ಆಧಾರದ ಮೇಲೆ ನೀಡಬೇಕು ಮತ್ತು ಭವಿಷ್ಯದಲ್ಲಿ ಅಕ್ರಮಗಳನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅವರು ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆ ಮುಂದೂಡಿಕೆ ಹಾಗೂ ಫಲಿತಾಂಶ ವಿಳಂಬದಿಂದ ಮರುಮರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಅಕ್ರಮಗಳ ವಿರುದ್ಧ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆ ಅಗತ್ಯವಿರಲಿಲ್ಲ ಎಂದು ಹೇಳಿದರು.

ಜಂತರ್ ಮಂತರ್‌ನಲ್ಲಿ ಪರೀಕ್ಷಾ ಸಮಸ್ಯೆಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಕೂಡ ಅವರು ಆರೋಪಿಸಿದರು.

ಈ ಚಳುವಳಿಯನ್ನು ಜೈಪುರ, ಲಖನೌ, ಅಮೃತಸರ ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳಿಗೆ ವಿಸ್ತರಿಸುವ ಯೋಜನೆ ಹೊಂದಿದ್ದು, ತಿಂಗಳ ಕೊನೆಯಲ್ಲಿ ನವದೆಹಲಿಯಲ್ಲಿ ಮಹಾ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಯುತ್ತಿದೆ.

ಪುಣೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್, ಈ ಚಳುವಳಿಗೆ ಬೆಂಬಲ ವ್ಯಕ್ತಪಡಿಸಿ, ಶಿಕ್ಷಣ ಕ್ಷೇತ್ರದ ಪ್ರಮುಖ ಸಮಸ್ಯೆಗಳತ್ತ ಇದು ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ಪ್ರತಿಭಟನೆಗಳು ಶಾಂತಿಯುತವಾಗಿದ್ದು ಸಂವಿಧಾನದ ಚೌಕಟ್ಟಿನೊಳಗೆ ನಡೆಯಲಿವೆ ಎಂದು ದೀಪ್ಕೆ ತಿಳಿಸಿದ್ದಾರೆ.

ಇದೇ ವೇಳೆ, ಸರ್ಕಾರ ಈ ಚಳುವಳಿಯನ್ನು ಕುಗ್ಗಿಸಲು ಅದರ ಸಾಮಾಜಿಕ ಜಾಲತಾಣ ಖಾತೆಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ ಅವರು, ಸಂವಾದಕ್ಕೆ ನಾವು ಸದಾ ಸಿದ್ಧ ಎಂದು ಹೇಳಿದರು.

“CJP ದೇಶಕ್ಕೆ ಒಂದು ದೊಡ್ಡ ಸಂದೇಶವಾಗಿದೆ. ಸರ್ಕಾರ ಯುವಕರನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ. ನಮ್ಮನ್ನು ನಕಲಿ ಎಂದು ಕರೆಯುವುದಕ್ಕಿಂತ, ಯುವಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಿ,” ಎಂದು ಅವರು ಹೇಳಿದರು.

ಪಕ್ಷದ ವಿಚಿತ್ರ ಹೆಸರಿನ ಕುರಿತು ವಿವರಿಸಿದ ದೀಪ್ಕೆ, ‘ಕಾಕ್ರೋಚ್’ ಎಂಬುದು ಪ್ರಸ್ತುತ ವ್ಯವಸ್ಥೆಯ ವಿರುದ್ಧ ಯುವಕರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ಶಿಕ್ಷಣ-ಉದ್ಯೋಗ ಕ್ಷೇತ್ರದ ಸವಾಲುಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದರು.

ಇದನ್ನೂ ನೋಡಿ: ದೇಶದ ಆರ್ಥಿಕತೆ‌ ಮತ್ತು ಹಣದುಬ್ಬರ: ನಿಜ ಹೇಳಿ ಮೋದಿಜೀ.. nation wants to know #JanashakthiMedia

Donate Janashakthi Media